ಚಾತುರ್ಮಾಸವು 29 ಜೂನ್ 2023ರಿಂದ ಪ್ರಾರಂಭವಾಗುತ್ತದೆ. ಅಧಿಕ ವರ್ಷದ ಕಾರಣ ಈ ವರ್ಷ ಚಾತುರ್ಮಾಸ 5 ತಿಂಗಳುಗಳಾಗಿರುತ್ತದೆ. ಈ ಸಮಯದಲ್ಲಿ, ಕೆಲವು ಅಪರೂಪದ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸಂತೋಷ, ಸಮೃದ್ಧಿ, ಶಾಂತಿ ಮತ್ತು ಉದ್ಯೋಗದಲ್ಲಿ ಪ್ರಗತಿಯನ್ನು ಪಡೆಯಬಹುದು.
ಚಾತುರ್ಮಾಸದ ಅವಧಿಯು 4 ತಿಂಗಳುಗಳು, ಇದು ಆಷಾಢ ಶುಕ್ಲ ಏಕಾದಶಿಯಿಂದ ಪ್ರಾರಂಭವಾಗಿ ಕಾರ್ತಿಕ ಶುಕ್ಲ ಏಕಾದಶಿಯವರೆಗೆ ಮುಂದುವರಿಯುತ್ತದೆ. ಶ್ರಾವಣ, ಭಾದ್ರಪದ, ಅಶ್ವಿಜ ಮತ್ತು ಕಾರ್ತಿಕ ಮಾಸಗಳನ್ನೊಳಗೊಂಡ ಈ ಸಮಯದಲ್ಲಿ ವಿಷ್ಣುವು ಯೋಗನಿದ್ರೆಯಲ್ಲಿರುತ್ತಾನೆ. ಹಾಗಾಗಿ, ಈ ಸಮಯದಲ್ಲಿ ಯಾವುದೇ ಮದುವೆ, ಮುಂಜಿ, ಗೃಹಪ್ರವೇಶದಂಥ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆದರೆ, ಈ ನಾಲ್ಕು ತಿಂಗಳಲ್ಲಿ ಭಗವಾನ್ ಶಿವನು ಭೂಲೋಕದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾನೆ. ಈ ಸಮಯದಲ್ಲಿ, ಭಗವಾನ್ ಶಿವನ ಆರಾಧನೆಯು ತುಂಬಾ ಪ್ರಯೋಜನಕಾರಿಯಾಗಿದೆ, ಧಾರ್ಮಿಕ ಕಾರ್ಯಗಳಿಗೆ ಚಾತುರ್ಮಾಸ ಬಹಳ ಮುಖ್ಯ. ಚಾತುರ್ಮಾಸದಲ್ಲಿ ಶಿವನನ್ನು ನಿಜವಾದ ಹೃದಯ ಮತ್ತು ಭಕ್ತಿಯಿಂದ ಪೂಜಿಸುವ ಮೂಲಕ, ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳಬಹುದು. ಚಾತುರ್ಮಾಸದಲ್ಲಿ ಏನು ಮಾಡಬೇಕು ಎಂದು ತಿಳಿದಿರುವುದು ಮುಖ್ಯ.
ಈ ವರ್ಷ ಚಾತುರ್ಮಾಸವು 29 ಜೂನ್ 2023 ರಿಂದ ಪ್ರಾರಂಭವಾಗುತ್ತದೆ. ಅಧಿಕ ಮಾಸದ ಕಾರಣದಿಂದ ಈ ವರ್ಷ ಚಾತುರ್ಮಾಸ 5 ತಿಂಗಳ ಅವಧಿ ಇರುತ್ತದೆ. ಈ ಸಮಯದಲ್ಲಿ, ಕೆಲವು ಅಪರೂಪದ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸಂತೋಷ, ಸಮೃದ್ಧಿ, ಶಾಂತಿ ಮತ್ತು ಉದ್ಯೋಗದಲ್ಲಿ ಪ್ರಗತಿಯನ್ನು ಪಡೆಯಬಹುದು.
ಚಾತುರ್ಮಾಸದ ಸಮಯದಲ್ಲಿ, ಸಂತರು ಮತ್ತು ಋಷಿಗಳು ತೀರ್ಥಯಾತ್ರೆಗೆ ಹೋಗುವುದಿಲ್ಲ. ಹೆಚ್ಚಿನ ಸಮಯ ಒಂದೇ ಸ್ಥಳದಲ್ಲಿ ಉಳಿಯುತ್ತಾರೆ ಮತ್ತು ಮೌನವಾಗಿದ್ದು ಉಪವಾಸವನ್ನು ಆಚರಿಸುತ್ತಾರೆ. ಈ ನಾಲ್ಕು ತಿಂಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ ಮತ್ತು ಪರಿಸರವು ಅಶುದ್ಧವಾಗಿರುತ್ತದೆ, ಆದ್ದರಿಂದ ಮೌನ ಉಪವಾಸ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಬಹುದು ಎಂದು ಹೇಳಲಾಗುತ್ತದೆ.
International Yoga Day 2023: ಇವರೇ ನೋಡಿ ಮೊದಲ ಯೋಗ ಗುರು
ಇವನ್ನು ದಾನ ಮಾಡಿ
ಕೆಲಸದಲ್ಲಿ ಅಡೆತಡೆಗಳಿದ್ದರೆ ಚಾತುರ್ಮಾಸದಲ್ಲಿ ಚಪ್ಪಲಿ, ಛತ್ರಿ, ವಸ್ತ್ರ, ಅನ್ನ, ಕರ್ಪೂರ ದಾನ ಮಾಡಿ. ಇದರಿಂದ ಶಿವನಿಗೆ ತುಂಬಾ ಸಂತೋಷವಾಗುತ್ತದೆ ಮತ್ತು ಉದ್ಯೋಗ, ವ್ಯವಹಾರಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯೂ ಬಗೆಹರಿಯುತ್ತದೆ. ನಿಮಗೆ ಋಣಭಾರದಿಂದ ಮುಕ್ತಿ ಸಿಗದಿದ್ದರೆ ಚಾತುರ್ಮಾಸದಲ್ಲಿ ಅನ್ನದಾನ ಹಾಗೂ ಹಸುವನ್ನು ದಾನ ಮಾಡಿ. ಇದು ಹಣವನ್ನು ಪಡೆಯುವ ಮಾರ್ಗವನ್ನು ತೆರೆಯುತ್ತದೆ ಮತ್ತು ಸಿಲುಕಿದ ಹಣವನ್ನು ಕೈ ಸೇರುವಂತೆ ಮಾಡುತ್ತದೆ.
ಒಂದೇ ಬಾರಿ ಆಹಾರ ಸೇವನೆ
ಈ ತಿಂಗಳುಗಳಲ್ಲಿ ಒಂದೇ ಬಾರಿಗೆ ಆಹಾರವನ್ನು ಸೇವಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ. ಏಕೆಂದರೆ ಶ್ರಾವಣ, ಭಾದ್ರಪದ, ಅಶ್ವಿಜ ಮತ್ತು ಕಾರ್ತಿಕ ಮಾಸದಲ್ಲಿ ವ್ಯಕ್ತಿಯ ಜೀರ್ಣಶಕ್ತಿ ದುರ್ಬಲವಾಗಿರುತ್ತದೆ ಎಂದು ಹೇಳಲಾಗುತ್ತದೆ. ಚಾತುರ್ಮಾಸದ ಸಮಯದಲ್ಲಿ ಉದ್ದಿನಬೇಳೆ, ಮಾಂಸ, ಗೋವಿನ ಜೋಳ, ಉಪ್ಪಿನಕಾಯಿ, ಬದನೆ, ಹಲಸು, ಮೂಲಂಗಿ, ಅಮೃತಬಳ್ಳಿ, ಹುಣಸೆಹಣ್ಣು, ಈರುಳ್ಳಿ ಮತ್ತು ಬೆಳ್ಳುಳ್ಳಿ ಇತ್ಯಾದಿಗಳನ್ನು ಸೇವಿಸಬೇಡಿ.
ದೇವರ ಧ್ಯಾನ
ಚಾತುರ್ಮಾಸದಲ್ಲಿ ಮಂತ್ರ, ಧ್ಯಾನವು ಹೆಚ್ಚು ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ. ಈ ನಾಲ್ಕು ತಿಂಗಳಲ್ಲಿ ಯಾವುದೇ ಧಾರ್ಮಿಕ ಪುಸ್ತಕ ಅಥವಾ ನಿಮ್ಮ ನೆಚ್ಚಿನ ದೇವರ ಮಂತ್ರಗಳನ್ನು ಪಠಿಸಿ. ಈ ಪರಿಹಾರವು ಗ್ರಹಗಳು, ಶತ್ರುಗಳು ಮತ್ತು ಅಡೆತಡೆಗಳನ್ನು ತೊಡೆದು ಹಾಕುತ್ತದೆ ಮತ್ತು ಆರೋಗ್ಯವೂ ಉತ್ತಮವಾಗಿರುತ್ತದೆ.
Weird Wedding Ritual: ಇಲ್ಲಿ ವಧುವಿಗೆ ಬಿಳಿ ಸೀರೆ ಉಡಿಸಿ ಗಂಡನ ಮನೆಗೆ ಕಳಿಸಲಾಗುತ್ತೆ!
ಸೂರ್ಯಾರಾಧನೆ
ಚಾತುರ್ಮಾಸದ ಸಮಯದಲ್ಲಿ, ಬ್ರಹ್ಮ ಮುಹೂರ್ತದಲ್ಲಿ ಏಳುವುದು ಮತ್ತು ನೆಲದ ಮೇಲೆ ಮಲಗುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಚಾತುರ್ಮಾಸದಲ್ಲಿ ಸೂರ್ಯನನ್ನು ಆರಾಧಿಸುವುದರಿಂದ ಶಕ್ತಿ ಮತ್ತು ಗೌರವ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.