ಈ ಮುಸ್ಲಿಂ ದಂಪತಿ ತಮ್ಮ ಮಗಳಿಗೆ ಮಹಾಲಕ್ಷ್ಮಿ ಎಂದು ಹೆಸರಿಟ್ಟು ಸುದ್ದಿಯಾಗಿದ್ದಾರೆ. ಈ ಮಗುವಿಗೆ ಹಿಂದೂ ದೇವಿಯ ಹೆಸರಿಡುವ ಹಿಂದೊಂದು ಕಾರಣವಿದೆ.
ಮುಂಬೈ: ಮಹಾರಾಷ್ಟ್ರದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜೂನ್ 6ರಂದು ಬೆಳಗ್ಗೆ ಕೊಲ್ಹಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಫಾತಿಮಾ ಖಾತೂನ್ (31) ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದಾದ ನಂತರ ಫಾತಿಮಾ ರೈಲಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಲೋನಾವಾಲಾ ನಿಲ್ದಾಣವನ್ನು ತಲುಪಿದಾಗ, ಫಾತಿಮಾ ತನ್ನ ಪತಿ ತಯ್ಯಬ್‌ಗೆ ನೋವಿನ ಬಗ್ಗೆ ತಿಳಿಸಿದರು. ನೋವು ತುಂಬಾ ವೇಗವಾಗಿ ಜಾಸ್ತಿಯಾಗುತ್ತಿದೆ ಎಂದು ಪತಿಗೆ ಹೇಳಿದ ಫಾತಿಮಾ ರೈಲಿನ ಶೌಚಾಲಯಕ್ಕೆ ಹೋದಳು. ತಯ್ಯಬ್ ಫಾತಿಮಾಳನ್ನು ನೋಡಲು ಟಾಯ್ಲೆಟ್‌ಗೆ ಹೋದರು. ಆಗ ಆಕೆಗೆ ಹೆಣ್ಣು ಮಗು ಜನಿಸಿರುವುದು ಗೊತ್ತಾಯಿತು. ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ಫಾತಿಮಾ ಅವರಿಗೆ ಸಹಾಯ ಮಾಡಿದರು.
ಈ ಬಗ್ಗೆ ತಯ್ಯಬ್ ಕರ್ಜತ್ ಸರ್ಕಾರಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೇ ನಿಲ್ದಾಣ ತಲುಪಿದ ಕೂಡಲೇ ಫಾತಿಮಾ ಮತ್ತು ಅವರ ಕುಟುಂಬವನ್ನು ರೈಲಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸರ್ಕಾರಿ ರೈಲ್ವೆ ಪೊಲೀಸರು ಈಗಾಗಲೇ ಆಸ್ಪತ್ರೆಗೆ ಮಾಹಿತಿ ನೀಡಿದ್ದರು. ಆಸ್ಪತ್ರೆಯವರು ಫಾತಿಮಾ ಮತ್ತು ಅವರ ಮಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು. ಮೂರು ದಿನಗಳ ನಂತರ ಫಾತಿಮಾ ಮತ್ತು ಮಗುವನ್ನು ಡಿಸ್ಚಾರ್ಜ್ ಮಾಡಲಾಯಿತು. ನಂತರ ಈ ಮಗುವಿಗೆ ಮಹಾಲಕ್ಷ್ಮಿ ಎಂದು ಹೆಸರಿಸಲಾಗಿದೆ.
ತಯ್ಯಬ್ ಪ್ರಕಾರ, ಜೂನ್ 20 ರಂದು ಪತ್ನಿಯ ಹೆರಿಗೆ ದಿನಾಂಕವಿತ್ತು. ಅವರಿಗೆ ಈಗಾಗಲೇ ಮೂವರು ಗಂಡು ಮಕ್ಕಳಿದ್ದಾರೆ. ಇಂಥ ಸಂದರ್ಭದಲ್ಲಿ ಜೂ.6ರಂದೇ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೆಣ್ಣುಮಗು ಹುಟ್ಟಿದ್ದು ಮಗುವಿಗೆ ಮಹಾಲಕ್ಷ್ಮಿ ಎಂದು ಹೆಸರಿಡಲು ಒಂದು ಕಾರಣವಾದರೆ, ರೈಲಿನಲ್ಲಿ ತಿರುಪತಿಯಿಂದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗುತ್ತಿದ್ದ ಕೆಲವು ಪ್ರಯಾಣಿಕರು ಮಗುವನ್ನು ನೋಡಿ- ನಾವು ಲಕ್ಷ್ಮಿ ದೇವಿಯನ್ನು ನೋಡಿದೆವು ಎಂದಿದ್ದು ಮತ್ತೊಂದು ಕಾರಣ.
ಅಂತೂ ತಯ್ಯಬ್ ಫಾತಿಮಾ ಬಾಳಿನಲ್ಲಿ ಮಹಾಲಕ್ಷ್ಮಿಯ ಆಗಮನ ಸಂತಸ ತಂದಿದೆ.