ಇಂದು ಮಧ್ಯರಾತ್ರಿ ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ: ಇಲ್ಲಿದೆ ಕರಗ ಸಾಗುವ ಮಾರ್ಗ!

By Kannadaprabha News  |  First Published Apr 23, 2024, 7:23 AM IST

ಐತಿಹಾಸಿಕ ಬೆಂಗಳೂರು ದ್ರೌಪದಮ್ಮ ಕರಗ ಶಕ್ತ್ಯೋತ್ಸವವು ಮಂಗಳವಾರ ರಾತ್ರಿ ನಡೆಯಲಿದೆ. ಇದಕ್ಕಾಗಿ ತಿಗಳರಪೇಟೆ, ಚಿಕ್ಕಪೇಟೆ, ಕಾರ್ಪೋರೇಷನ್‌ ಸೇರಿದಂತೆ ಹಳೇ ಬೆಂಗಳೂರು ಪ್ರದೇಶವನ್ನು ಸಿಂಗಾರಗೊಳಿಸಲಾಗಿದೆ. 


ಬೆಂಗಳೂರು (ಏ.23): ಐತಿಹಾಸಿಕ ಬೆಂಗಳೂರು ದ್ರೌಪದಮ್ಮ ಕರಗ ಶಕ್ತ್ಯೋತ್ಸವವು ಮಂಗಳವಾರ ರಾತ್ರಿ ನಡೆಯಲಿದೆ. ಇದಕ್ಕಾಗಿ ತಿಗಳರಪೇಟೆ, ಚಿಕ್ಕಪೇಟೆ, ಕಾರ್ಪೋರೇಷನ್‌ ಸೇರಿದಂತೆ ಹಳೇ ಬೆಂಗಳೂರು ಪ್ರದೇಶವನ್ನು ಸಿಂಗಾರಗೊಳಿಸಲಾಗಿದೆ. ಪ್ರತಿ ವರ್ಷ ಚೈತ್ರ ಮಾಸದಂದು ನಡೆಯಲಿರುವ ಬೆಂಗಳೂರು ಕರಗ ಶಕ್ತ್ಯೋತ್ಸವವು ಮಂಗಳವಾರ ಮಧ್ಯರಾತ್ರಿ 12.30ರಿಂದ ಆರಂಭವಾಗಲಿದೆ. ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಆರಂಭವಾಗುವ ಕರಗ ಮೆರವಣಿಗೆ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಬುಧವಾರ ಮುಂಜಾನೆ ವಾಪಾಸು ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಬರಲಿದೆ.

ಉತ್ಸವಕ್ಕಾಗಿ ಕರಗ ವ್ಯವಸ್ಥಾಪನಾ ಸಮಿತಿ, ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿಯ ಕರಗಕ್ಕೆ 8 ಲಕ್ಷಕ್ಕೂ ಹೆಚ್ಚಿನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕರಗ ಸಾಗುವ ಮಾರ್ಗವನ್ನು ಮಂಗಳವಾರ ಬೆಳಗ್ಗೆಯಿಂದಲೇ ಸ್ವಚ್ಛಗೊಳಿಸಲಾಗುತ್ತದೆ. ಕರಗ ಸಾಗುವ ಹಾದಿಯಲ್ಲಿ ಯಾವುದೇ ಅಡೆತಡೆ ಎದುರಾಗದಂತೆ ರಸ್ತೆ ಬದಿಯಲ್ಲಿ ಶೇಖರಣೆಯಾಗಿದ್ದ ತ್ಯಾಜ್ಯ ತೆರವು ಮಾಡಲಾಗಿದೆ.

Tap to resize

Latest Videos

ಬಿಜೆಪಿಗೆ ಮತ್ತೊಬ್ಬ ಎಂಎಲ್‌ಸಿ ಗುಡ್‌ಬೈ: ಕೆ.ಪಿ.ನಂಜುಂಡಿ ನಾಳೆ ಕಾಂಗ್ರೆಸ್‌ ಸೇರ್ಪಡೆ

ಕಳೆದ ಸೋಮವಾರದಿಂದ ಕರಗ ಉತ್ಸವ ಆರಂಭವಾಗಿದ್ದು, ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಹಲವು ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗಿದೆ. ಇದೀಗ ಮಂಗಳವಾರ ದ್ರೌಪದಮ್ಮ ಕರಗ ಶಕ್ತ್ಯೋತ್ಸವ ನಡೆಯಲಿದ್ದು, ರಾತ್ರಿ 12.30ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ದ್ರೌಪದಮ್ಮ ಕರಗ ಹೊರಡಲಿದೆ. ಅರ್ಚಕ ಜ್ಞಾನೇಂದ್ರ ಅವರು ಹೂವಿನ ಕರಗವನ್ನು ಹೊತ್ತು ನಗರದ ವಿವಿಧ ಸ್ಥಳಗಳಿಗೆ ತೆರಳಿ, ಕರಗಕ್ಕೆ ಪೂಜೆ ಸ್ವೀಕರಿಸಲಿದ್ದಾರೆ.

ಭಾವೈಕ್ಯತೆಯ ಸಂಕೇತ ಕರಗ: ಕರಗ ಶಕ್ತ್ಯೋತ್ಸವವು ಭಾವೈಕ್ಯತೆಯ ಸಂಕೇತವಾಗಿದ್ದು, ವಿವಿಧ ದೇವಸ್ಥಾನಗಳಿಗೆ ತೆರಳುವ ಮಾದರಿಯಲ್ಲಿಯೇ ಮಸ್ತಾನ್‌ ಸಾಬ್‌ ದರ್ಗಾಕ್ಕೂ ತೆರಳಲಿದೆ. ಕರಗ ಆರಂಭವಾದಾಗಿನಿಂದಲೂ ಈ ಸಂಪ್ರದಾಯ ನಡೆಯುತ್ತಿದ್ದು, ಕಾಟನ್‌ಪೇಟೆಯ ದರ್ಗಾಕ್ಕೆ ತೆರಳಿ ಅಲ್ಲಿ ಪೂಜೆ ಸ್ವೀಕರಿಸಲಿದೆ.

ಕರಗ ಸಾಗುವ ಮಾರ್ಗ: ಮೊದಲಿಗೆ ಧರ್ಮರಾಯ ಸ್ವಾಮಿ ದೇವಸ್ಥಾನ ಪ್ರದಕ್ಷಿಣೆ ಹಾಕಿ ದ್ರೌಪದಮ್ಮ ಕರಗ ಹೊರಡಲಿದೆ. ಕುಂಬಾರಪೇಟೆ ರಸ್ತೆ ಮೂಲಕ ಸಾಗಿ, ರಾಜ ಮಾರುಕಟ್ಟೆ ವೃತ್ತ, ಕೆ.ಆರ್‌.ಮಾರುಕಟ್ಟೆ ವೃತ್ತದ ಮೂಲಕ ಸಾಗಿ ನಂತರ ಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸ್ವೀಕರಿಸಲಿದೆ. ವಾಪಾಸು ಕೆ.ಆರ್‌. ಮಾರುಕಟ್ಟೆ ವೃತ್ತಕ್ಕೆ ವಾಪಾಸಾಗಿ ಕಾಟನ್‌ಪೇಟೆ ಪೊಲೀಸ್‌ ಠಾಣೆ ರಸ್ತೆಯಲ್ಲಿ ತೆರಳಿ, ಅಲ್ಲಿನ ಮಸ್ತಾನ್‌ಸಾಬ್‌ ದರ್ಗಾಕ್ಕೆ ತೆರಳಿ ಪೂಜೆ ಸ್ವೀಕರಿಸಿ, ಬಳೇಪೇಟೆ ವೃತ್ತದ ಮೂಲಕ ಅಣ್ಣಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ, ಮುಂಜಾನೆ ವಾಪಾಸು ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಮರಳಲಿದೆ.

ನೇಹಾ ಕೇಸ್‌ ಸಿಬಿಐಗೆ ಒಪ್ಪಿಸಿ, ರಾಜ್ಯ ಸರ್ಕಾರದಿಂದ ಪರಿಹಾರ ನೀಡಿ: ಕಟೀಲ್‌ ಆಗ್ರಹ

ಅದ್ಧೂರಿ ಹಸಿ ಕರಗ: ಹೂವಿನ ಕರಗ ಶಕ್ತ್ಯೋತ್ಸವದ ಎರಡು ದಿನ ಹಸಿ ಕರಗ ನಡೆಯಲಿದ್ದು, ಅದರಂತೆ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ನಡೆದಿದೆ. ಸಂಪಗಿರಾಮ ಕೆರೆಯ ಅಂಗಳದ ಶಕ್ತಿ ಪೀಠದಲ್ಲಿ ಹಸಿ ಕರಗ ಅದ್ಧೂರಿಯಾಗಿ ನಡೆಯಿತು. ಅರ್ಚಕ ಜ್ಞಾನೇಂದ್ರ ಅವರು ಕರಗಕ್ಕೆ ಪೂಜೆ ಸಲ್ಲಿಸಿ, ಹಸಿ ಕರಗ ನೆರವೇರಿಸಿದರು.

click me!