ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವವು ಏಪ್ರಿಲ್ 2 ರಿಂದ 14 ರವರೆಗೆ ನಡೆಯಲಿದೆ. ಏಪ್ರಿಲ್ 7 ರಂದು ವೈರಮುಡಿ ಕಿರೀಟಧಾರಣೆ ನಡೆಯಲಿದ್ದು, ಚೆಲುವನಾರಾಯಣಸ್ವಾಮಿ ವಿಶೇಷ ದರ್ಶನ ನೀಡಲಿದ್ದಾರೆ.
ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ ನಡೆಯುತ್ತಿದ್ದು ಜಾತ್ರಾಮಹೋತ್ಸವ ಏ.2 ರಿಂದ ಏ.14ರ ಶೇರ್ತಿ ಸೇವೆಯವರೆಗೆ 14 ದಿನಗಳ ಕಾಲ ನಡೆಯಲಿದೆ. ಉತ್ಸವದ ಪ್ರಮುಖ ಆಕರ್ಷಣೆ ವೈರಮುಡಿ ಕಿರೀಟಧಾರಣ ಮಹೋತ್ಸವ ಏ.7ರ ಸೋಮವಾರ ರಾತ್ರಿ 8.30ಕ್ಕೆ ಆರಂಭವಾಗಲಿದೆ. ನಂತರ ಬೆಳಗಿನ 4 ಗಂಟೆವರೆಗೆ ವೈರಮುಡಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಮೈ ಆವರಿಸಿದ ಚೆಲುವನಾರಾಯಣಸ್ವಾಮಿ ದೇವರು
ಇದಕ್ಕೂ ಮುನ್ನ ಮಂಡ್ಯ ಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ, ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಮಂಡ್ಯ ಬೆಂಗಳೂರು- ಮೈಸೂರು ಹೆದ್ದಾರಿ ಶ್ರೀರಂಗಪಟ್ಟಣ ಬನ್ನಿಮಂಟಪ ಕಿರಂಗೂರು ಮೂಲಕ ಪಾಂಡವಪುರ, ಹರಳಹಳ್ಳಿ, ಟಿ.ಎಸ್.ಛತ್ರ, ಅಮೃತಿ, ಜಕ್ಕನಹಳ್ಳಿ ಮಾರ್ಗವಾಗಿ ಪೊಲೀಸರ್ ಬಂದೋಬಸ್ತ್ ನಲ್ಲಿ ಡೊಳ್ಳು, ಮಂಗಳವಾದ್ಯದೊಂದಿಗೆ ಭಾರೀ ಬಿಗಿ ಭದ್ರತೆಯೊಂದಿಗೆ ಮೇಲುಕೋಟೆಗೆ ಸಂಜೆ ತಲುಪಲಿದೆ. ಈ ಹಿನ್ನೆಲೆಯಲ್ಲಿ ಖಜಾನೆಯಿಂದ ಆಭರಣಗಳನ್ನು ತೆಗೆದು ಕೊಡಲಾಗಿದ್ದು, ಪರಕಾಲ ಮಠದ ವಾಹನದಲ್ಲಿ ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ವೈರಮುಡಿ ಪೆಟ್ಟಿಗೆಗೆ ಮಂಡ್ಯದ ಲಕ್ಷ್ಮೀಜನಾರ್ಧನಸ್ವಾಮಿ ಸನ್ನಿಧಿಯಲ್ಲಿ ಪ್ರಥಮ ಪೂಜೆ ನಡೆಯಿತು. ಬಳಿಕ ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಮೇಲುಕೋಟೆಗೆ ಕಿರೀಟ ರವಾನೆ ಮಾಡುವ ವೇಳೆ ವೈರಮುಡಿ ಕಿರೀಟಕ್ಕೆ ಪೂಜೆ ಸಲ್ಲಿಸುತ್ತಿದ್ದ ಭಕ್ತನ ಮೇಲೆ ಚೆಲುವನಾರಾಯಣಸ್ವಾಮಿ ಮೈದುಂಬಿ ಅಚ್ಚರಿ ಸೃಷ್ಟಿಯಾಗಿದೆ. ಇದನ್ನು ನೋಡಿ ನೆರೆದಿದ್ದವರು ಭಕ್ತಿ ಪರವಶರಾದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಈ ವೇಳೆ ಜಮಾವಣೆಯಾಗಿದ್ದರು.
ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವದ ಎಚ್ಚರಿಕೆ: 'ಶತ್ರುಗಳಿಂದ ನಿನ್ನ ಸಂಸಾರ ಹಾಳು ಮಾಡಲು ಯತ್ನ'!
ಇನ್ನು ವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ಪೂಜೆ ಮಾಡಿ ನಂತರ ಚಿನ್ನದಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ದೇಗುಲಕ್ಕೆ ತರಲಾಗುತ್ತದೆ. ದೇವಾಲಯದ ಮುಂಭಾಗ ಯತಿರಾಜದಾಸರ್ ಗುರುಪೀಠದಿಂದ ಕೊನೆಯಪೂಜೆ ನಡೆಯಲಿದೆ. ನಂತರ ಸ್ಥಾನೀಕರು,ಅರ್ಚಕ, ಪರಿಚಾರಕರಿಗೆ ಪಾರ್ಕಾವಣೆಮಾಡಿ ಹಸ್ತಾಂತರ ಮಾಡಲಾಗುತ್ತದೆ.
ಶ್ರೀದೇವಿ, ಭೂದೇವಿಯರ ಜೊತೆಗೆ ದರ್ಶನ
ಬ್ರಹ್ಮೋತ್ಸವದ 4ನೇ ತಿರುನಾಳ್ ಅಂಗವಾಗಿ ಏ.7ರಂದು ರಾತ್ರಿ 8 ಶ್ರೀದೇವಿಭೂದೇವಿ ಸಮೇತ ಗರುಢಾರೂಢನಾದ ಚೆಲುವನಾರಾಯಣನಿಗೆ ಅಪೂರ್ವ ನಾಗಮಣಿ ಇರುವ ವೈರಮುಡಿ ಕಿರೀಟಧಾರಣೆ ನಡೆಯಲಿದೆ. ಮಹಾ ಮಂಗಳಾರತಿ ನೆರವೇರಿಸಿ ದೇವಾಲಯದಿಂದ ರಾತ್ರಿ 8.30ಕ್ಕೆ ಆರಂಭವಾಗುವ ವೈರಮುಡಿ ಉತ್ಸವ ಬೆಳಗಿನ 4ರ ಸುಮಾರಿಗೆ ವಾಹನೋತ್ಸವ ಮಂಟಪದಲ್ಲಿ ಮುಕ್ತಾಯವಾಗಲಿದೆ. ನಂತರ ವಜ್ರಖಚಿತ ರಾಜಮುಡಿ ಧರಿಸಲಾಗುತ್ತದೆ. ಶ್ರೀದೇವಿ, ಭೂದೇವಿಯರ ಜೊತೆಗೆ ರತ್ನ ಖಚಿತ ವೈರಮುಡಿ ಕಿರೀಟ ಧರಿಸಿ ಗರುಢಾರೂಢನಾದ ಚಲುವನಾರಾಯಣಸ್ವಾಮಿ ಭಕ್ತರಿಗೆ ದರ್ಶನ ನೀಡಲಿದ್ದಾನೆ.
ರಾಮನವಮಿ: ಮರ್ಯಾದಾ ಪುರುಷೋತ್ತಮನ ಹಣೆಗೆ ಬೆಳಕಿನ ತಿಲಕವಿಟ್ಟ ಸೂರ್ಯ
ವಿಶ್ವವಿಖ್ಯಾತ ವೈರಮುಡಿ ಉತ್ಸವಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿದ ತಂಡೋಪತಂಡವಾಗಿ ಜನ ಈಗಾಗಲೇ ಆಗಮಿಸುತ್ತಿದ್ದಾರೆ. ಈಗಾಗಲೇ ಎಲ್ಲಾ ಛತ್ರಗಳು, ರಾಮಾನುಜ ಕೂಟಂಗಳು, ವಸತಿ ಗೃಹಗಳು ಭಕ್ತರಿಂದ ತುಂಬಿ ತುಳುಕುತ್ತಿದೆ. ಈ ಬಾರಿ ಸುಮಾರು ಒಂದರಿಂದ ಒಂದೂವರೆ ಲಕ್ಷದಷ್ಟು ಭಕ್ತರು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ.
ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಏ.4ರಿಂದ ಆರಂಭ; 'ಕರಗ ಶಕ್ತ್ಯೋತ್ಸವ' ವಿವರ ಬಿಚ್ಚಿಟ್ಟ ಬಿಬಿಎಂಪಿ!
ಉಳಿದಂತೆ ಏ.9 ರಂದು ಸಂಜೆ 6.30ಕ್ಕೆ ಗಜೇಂದ್ರಮೋಕ್ಷ , ಏ.10ರ ಬೆಳಗ್ಗೆ 9 ರಿಂದ ಮಹಾರಥೋತ್ಸವ, ಏ.11ರ ರಾತ್ರಿ 7 ಗಂಟೆಗೆ ಕಲ್ಯಾಣಿಯಲ್ಲಿ ತೆಪ್ಪೋತ್ಸವ, ಏ.12 ರಂದು ಬೆಳಗ್ಗೆ 11 ಗಂಟೆಗೆ ತೀರ್ಥಸ್ನಾನ, ಸಂಜೆ ಪಟ್ಟಾಭಿಷೇಕ , ಏ.13 ರಂದು ಬೆಳಗ್ಗೆ 11 ಗಂಟೆಗೆ ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ಜರುಗಲಿದೆ.
ಇಂದು ರಾತ್ರಿ 11ಕ್ಕೆ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಚಾಲನೆ: ಯಾವಾಗ ಏನೇನು ಕಾರ್ಯಕ್ರಮ?