ಬಾದಾಮಿ: ತಾಯಿ ಬನಶಂಕರಿದೇವಿ ಜಾತ್ರೆ ಯಶಸ್ವಿಗೊಳಿಸಿ, ಡಿಸಿ ಸುನೀಲಕುಮಾರ

By Kannadaprabha News  |  First Published Dec 23, 2022, 11:30 PM IST

ಕಳೆದ ಎರಡು ವರ್ಷ ಕೋವಿಡ್‌ ಸಂಬಂಧ ಜಾತ್ರೆ ನಡೆಯದ ಕಾರಣ ಈ ಬಾರಿಯ ಜಾತ್ರೆಗೆ ಸುಮಾರು 1 ಲಕ್ಷ 50 ಸಾವಿರ ಭಕ್ತರು ಸೇರುವ ಸಂಭವವಿದ್ದು, ಇದಕ್ಕಾಗಿ ಜಾತ್ರೆಗೆ ಬಂದಂತಹ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಲಭೂತ ಸೌಕರ್ಯಗಳನ್ನು ನೀಡಬೇಕು: ಜಿಲ್ಲಾಧಿಕಾರಿ ಪಿ.ಸುನೀಲಕುಮಾರ 


ಬಾದಾಮಿ(ಡಿ.23): ಬರುವ ಜ.6 ರಿಂದ ಆರಂಭವಾಗಲಿರುವ ಉತ್ತರ ಕರ್ನಾಟಕದ ಸುಪ್ರಸಿದ್ಧ ಬನಶಂಕರಿದೇವಿ ಜಾತ್ರೆಯ ಯಶಸ್ವಿಗೆ ಅಧಿಕಾರಿಗಳು ಹಾಗೂ ಟ್ರಸ್ಟ್‌, ಗ್ರಾಮ ಪಂಚಾಯತದವರು ಜಾತ್ರೆಗೆ ಆಗಮಿಸುವ ಲಕ್ಷಾಂತರ ಜನ ಭಕ್ತರಿಗೆ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸೂಚಿಸಿದರು.

ಅವರು ಗುರುವಾರ ಪಟ್ಟಣದ ತಹಶೀಲದಾರ ಕಚೇರಿಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಬನಶಂಕರಿದೇವಿ ಜಾತ್ರೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕಾಮಟ್ಟದ ಅಧಿಕಾರಿಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಎರಡು ವರ್ಷ ಕೋವಿಡ್‌ ಸಂಬಂಧ ಜಾತ್ರೆ ನಡೆಯದ ಕಾರಣ ಈ ಬಾರಿಯ ಜಾತ್ರೆಗೆ ಸುಮಾರು 1 ಲಕ್ಷ 50 ಸಾವಿರ ಭಕ್ತರು ಸೇರುವ ಸಂಭವವಿದ್ದು, ಇದಕ್ಕಾಗಿ ಜಾತ್ರೆಗೆ ಬಂದಂತಹ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಲಭೂತ ಸೌಕರ್ಯಗಳನ್ನು ನೀಡಬೇಕು. ಜಾತ್ರೆಯಲ್ಲಿ ಹಾಕುವ ಅಂಗಡಿ, ನಾಟಕ ಕಂಪನಿಗಳಿಗೆ ಅನುಮತಿಯನ್ನು ಸರಳವಾಗಿ, ಸುಲಭವಾಗಿ ನೀಡಬೇಕು. ಗ್ರಾ,ಪಂ.ಕಚೇರಿಯಲ್ಲಿ ತಂಡ ಮಾಡಿ ಯಾರಿಗೂ ತೊಂದರೆಯಾಗದಂತೆ, ವಿಳಂಬವಾಗದಂತೆ ಅನುಮತಿ ನೀಡಬೇಕು. ಬಂದಂತಹ ಲಕ್ಷಾಂತರ ಜನ ಭಕ್ತರು ಸೌಲಭ್ಯಗಳನ್ನು ನೋಡಿ ಸುಧಾರಣೆ ಅನಿಸಬೇಕು.

Tap to resize

Latest Videos

undefined

ಐತಿಹಾಸಿಕ ಬಾದಾಮಿಯ ಬನಶಂಕರಿದೇವಿಗೆ ನೇಕಾರರಿಂದ ಸೀರೆಗಳ ವಿಶೇಷ ಅಲಂಕಾರ

ಜ.6 ರಂದು ಬನಶಂಕರಿದೇವಿ ಮಹಾರಥೋತ್ಸವ ಜರುಗಲಿದ್ದು, ಅಂದು ವಾಹನಗಳು ಬನಶಂಕರಿ ಒಳಗಡೆ ಬರದಂತೆ ಮಾಡಿ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. 4 ಕಡೆಗಳಲ್ಲಿ ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು. ರಸ್ತೆಯ ಪಕ್ಕದಲ್ಲಿ ವಾಹನಗಳು ನಿಲ್ಲಿಸದಂತೆ, ಅಂಗಡಿ ಹಾಕಲು, ಪಾರ್ಕಿಂಗ್‌ ಕುರಿತು ಸಮಗ್ರ ಕ್ರಿಯಾ ಯೋಜನೆ ತಯಾರಿಸಿ ಯಾವುದೇ ಲೋಪದೋಷಗಳು ಆಗದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಜಾತ್ರೆಗೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ, ಯಾವುದೇ ಕಳ್ಳತನ ನಡೆಯದಂತೆ, ಅಗತ್ಯ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಸ್ವಚ್ಚತೆ ಕಾಪಾಡಬೇಕು. ಬನಶಂಕರಿ ಟ್ರಸ್ಟ್‌, ಗ್ರಾ.ಪಂ ಸಹಯೋಗದಲ್ಲಿ ಸಮನ್ವಯತೆಯಿಂದ ಎಲ್ಲ ವ್ಯವಸ್ಥೆಗಳನ್ನು ಮಾಡಬೇಕು. ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಭಕ್ತರಿಗೆ ಅವಶ್ಯಕತೆಗೆ ತಕ್ಕಂತೆ ಸ್ವಚ್ಚತೆ, ಸಂಚಾರಿ ಶೌಚಾಲಯ, ವಿದ್ಯುತ್‌ ದೀಪದ ವ್ಯವಸ್ಥೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಬಾಗಲಕೋಟೆ ವಿಭಾಗದ ಉಪವಿಭಾಗಾಧಿಕಾರಿ(ಎ.ಸಿ) ಶ್ರೀಮತಿ ಶ್ವೇತಾ ಬಿಡಿಕರ ಇವರ ಅಧ್ಯಕ್ಷತೆಯಲ್ಲಿ ಕಮಿಟಿ ರಚಿಸಲಾಗುವುದು. ಇದರಲ್ಲಿ ಡಿ.ವೈ.ಎಸ್‌.ಪಿ, ಸಿ.ಪಿ.ಐ, ತಹಶೀಲ್ದಾರ್‌, ತಾ.ಪಂ.ಇಒ, ಪಿ.ಎಸ್‌.ಐ.ಸೇರಿದಂತೆ ಎಲ್ಲ ಅಧಿಕಾರಿಗಳು ಇರುತ್ತಾರೆ ಎಂದು ತಿಳಿಸಿದರು. ಬನಶಂಕರಿಗೆ ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯುತ್‌ ದೀಪ ಸಮಸ್ಯೆಗಳನ್ನು ಮತ್ತು ಬಾದಾಮಿಯಿಂದ ಪುಷ್ಕರಿಣಿಗೆ ಸೇರುವ ಗಟಾರ ನೀರನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಯಪ್ರಕಾಶ ಮಾತನಾಡಿ ಬನಶಂಕರಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ನೂಕುನುಗ್ಗಲು ಆಗದಂತೆ ಮತ್ತು ಸಂಚಾರ ನಿಯಮ ಪಾಲನೆ ಮಾಡಬೇಕು. ಅಪರಾಧ ಪ್ರಕರಣ, ಕಿಸೆ ಕಳ್ಳತನ ತಡೆಯಲು 2 ದ್ರೋಣ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಅಪರಾಧ ಹಿನ್ನೆಲೆಯುಳ್ಳವರನ್ನು ಒಳಗೆ ಹಾಕುವುದು ಮತ್ತು ಗಡಿಪಾರು ಮಾಡಲಾಗುವುದು, ಮಕ್ಕಳ ಕಾಣೆಯನ್ನು ತಡೆಯಲು ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಆರಂಭಿಸಲಾಗುವುದು. ಪರಿಸ್ಥಿತಿಯನ್ನು ಅವಲೋಕಿಸಿ ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು ಎಂದು ತಿಳಿಸಿದರು.

Badami: ಕೋವಿಡ್‌ ನಿಯಮ ಉಲ್ಲಂಘಿಸಿ ಬನಶಂಕರಿ ಜಾತ್ರೆ: 38 ಜನರ ವಿರುದ್ಧ FIR

ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಬೂಬಾಲನ್‌ ಮಾತನಾಡಿ ಜಾತ್ರೆಗೆ ಬರುವ ಭಕ್ತರಮ ಜನರ ಅನುಕೂಲಕ್ಕಾಗಿ ಅಗತ್ಯ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಅಗತ್ಯ ನೀರಿನ ಸೌಲಭ್ಯವನ್ನು ಸ್ಥಳೀಯ ಪುರಸಭೆಯ ವತಿಯಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಜಾತ್ರೆಗೆ ಸಂಬಂಧಿಸಿದಂತೆ ಆರೋಗ್ಯ, ಪಶುಪಾಲನಾ ಇಲಾಖೆ, ಪುರಸಭೆ, ಪುರಾತತ್ವ ಇಲಾಖೆ, ಲೋಕೋಪಯೋಗಿ ಇಲಾಖೆ, ಸಾರಿಗೆ ಇಲಾಖೆಯ ಸೇರಿದಂತೆ ವಿವಿದ ಇಲಾಖೆಗಳಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆಯಲಾಯಿತು. ಸಭೆಯಲ್ಲಿ ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ, ಸಿದ್ದರಾಮಯ್ಯನವರ ಆಪ್ತ ಕಾರ್ಯದರ್ಶಿ ವಿಜಯಕುಮಾರ, ಜಿಲ್ಲಾ ಆರೋಗ್ಯಾಧಿಕರಿ ಜಯಶ್ರೀ ಎಮ್ಮಿ, ತಹಶೀಲದಾರ ಜೆ.ಬಿ.ಮಜ್ಜಗಿ, ತಾ.ಪಂ.ಇಒ ಮಲ್ಲಿಕಾರ್ಜುನ ಕಲಾದಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಿಪಿಐ ದಶವಂತ ಹರ್ಷ, ಪಿ.ಎಸ್‌.ಐ.ನೇತ್ರಾವತಿ ಪಾಟೀಲ, ಟಿಎಚ್‌ಓ ಡಾ.ಎಂ.ಬಿ.ಪಾಟೀಲ, ಸೇರಿದಂತೆ, ದೇವಾಂಗ ಸಮಾಜದವರು, ಚೊಳಚಗುಡ್ಡ ಗ್ರಾ.ಪಂ.ಸದಸ್ಯರು ಸೇರಿದಂತೆ ಜಿಲ್ಲಾ ಮತ್ತು ತಾಲೂಕಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ಬನಶಂಕರಿ ದೇವಸ್ಥಾನಕ್ಕೆ ಭೇಟಿ

ಪರಿಶೀಲನೆ; ಸಭೆಯ ನಂತರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಎಸ್‌.ಪಿ.ಜಯಪ್ರಕಾಶ, ಜಿ.ಪಂ.ಸಿಇಒ ಟಿ.ಭೂಬಾಲನ್‌, ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ ಸೇರಿದಂತೆ ಅಧಿಕಾರಿಗಳ ತಂಡ ಸಭೆಯ ನಂತರ ಬನಶಂಕರಿದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಬನಶಂಕರಿ ಮಹಾರಥೋತ್ಸವದ ಸ್ಥಳ ಪರಿಶೀಲನೆ ಮಾಡಿ, ಜಾತ್ರೆಯ ದಿನ ರಥೋತ್ಸವದ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
 

click me!