ಮಹಾ ಪರಿಕ್ರಮ ಯಾತ್ರೆ ಮುಗಿಸಿ ಸಾಧನೆ ಮೆರೆದಿದ್ದಾರೆ ರಾಜಾಜಿನಗರ ಕ್ಷೇತ್ರದ ನಿವೃತ್ತ ಪೋಸ್ಟ್ ಮಾಸ್ಟರ್ ಶ್ರೀಯುತ ಚಂದ್ರಶೇಖರ್.. ಏನು ಈ ಮಹಾಪರಿಕ್ರಮ ಯಾತ್ರೆ?
15 ರಾಜ್ಯಗಳು, ಒಂದು ವಿದೇಶ, 415 ದಿನಗಳು, ಬರೋಬ್ಬರಿ 15590 ಕಿಲೋಮೀಟರ್.. ಮಳೆ, ಚಳಿ, ಬಿಸಿಲಿಗೆ ಜಗ್ಗದೆ, ಸುಸ್ತೆಂದು ಕೂರದೆ, ಸತತ ನಡೆಯುತ್ತಲೇ ಇರುವುದು, ದೇಶದ ಎಲ್ಲ ತೀರ್ಥಕ್ಷೇತ್ರಗಳ ದರ್ಶನ ಮಾಡುವುದು ಎಂದರೆ ಸಣ್ಣ ಮಾತಲ್ಲ.. ಇಂಥದೊಂದು ಮಹಾ ಪರಿಕ್ರಮ ಯಾತ್ರೆ ಮುಗಿಸಿ ಸಾಧನೆ ಮೆರೆದಿದ್ದಾರೆ ರಾಜಾಜಿನಗರ ಕ್ಷೇತ್ರದ ನಿವೃತ್ತ ಪೋಸ್ಟ್ ಮಾಸ್ಟರ್ ಶ್ರೀಯುತ ಚಂದ್ರಶೇಖರ್.
ಡಿ.1, 2021ರಂದು ಬೆಂಗಳೂರಿನಿಂದ ಪಾದಯಾತ್ರೆ ಹೊರಟು, 15 ರಾಜ್ಯಗಳನ್ನು ತಿರುಗಿ, ಎಲ್ಲ 12 ಜ್ಯೋತಿರ್ಲಿಂಗಗಳ ದರ್ಶನ ಮಾಡಿ, ನೇಪಾಳಕ್ಕೂ ಕಾಲಿಟ್ಟು, ಇಡೀ ದೇಶದ ನೂರಾರು ತೀರ್ಥಕ್ಷೇತ್ರಗಳ ಪುಣ್ಯ ನೆಲ ಸ್ಪರ್ಶಿಸಿ ಅಂತೂ 415 ದಿನಗಳ ಬಳಿಕ, ಜ.18ರಂದು ಮೆಟ್ಟೂರಿನ ಮೂಲಕ ಕರ್ನಾಟಕ ಪ್ರವೇಶಿಸಿದ್ದಾರೆ ಚಂದ್ರಶೇಖರ್. ಅವರ ಈ ತೀರ್ಥಯಾತ್ರೆ ಕೇವಲ ದೈವಕ್ಷೇತ್ರಗಳ ದರ್ಶನವಾಗಿರದೆ, ಅಂತರಂಗ ಹಾಗೂ ಬಹಿರಂಗವನ್ನರಿಯುವ ಅಂತಃಜ್ಞಾನ ಪಡೆಯುವ ಯಾತ್ರೆಯೂ ಆಗಿತ್ತು. ಜೊತೆಗೆ, ಆಧ್ಯಾತ್ಮಿಕತೆಯ ಹಾದಿಯೂ ಹೌದಿತ್ತು.
ಚಂದ್ರಶೇಖರ್ ಅವರ ಮಹಾಪರಿಕ್ರಮ ಯಾತ್ರೆಯುದ್ಧಕ್ಕೂ ಬೆಂಬಲವಾಗಿ ನಿಂತವರು ರಾಜಾಜಿನಗರ ಕ್ಷೇತ್ರದ ಶಾಸಕರಾದ ಸುರೇಶ್ ಕುಮಾರ್ ಅವರು. ಅವರು ಈ ಕಳೆದೊಂದೂವರೆ ವರ್ಷದಲ್ಲಿ ಪ್ರತಿದಿನ ಚಂದ್ರಶೇಖರ್ ಅವರ ಯಾತ್ರೆಯ ವಿವರಗಳನ್ನು ಪಡೆಯುತ್ತಾ, ಅದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪರಿಚಯಿಸುತ್ತಾ ಜನರಿಗೆ ಈ ಸಾಧಕರನ್ನು ಚಿರಪರಿಚಿತರಾಗಿಸಿದ್ದಾರೆ.
Shukra Gochar 2023: ಮಾಳವ್ಯ ರಾಜಯೋಗ ಈ 3 ರಾಶಿಗಳಿಗೆ ತರಲಿದೆ ಶುಕ್ರದೆಸೆ
ಇದೀಗ ತಮಿಳುನಾಡು ಗಡಿಗೆ ಬಂದಿದ್ದ ಚಂದ್ರಶೇಖರ್ ಅವರನ್ನು ಆತ್ಮೀಯತೆಯಿಂದ ಬರ ಮಾಡಿಕೊಂಡು ಮೆಟ್ಟೂರಿನಿಂದ ಕರ್ನಾಟಕದ ಪ್ರಾರಂಭದ ಪಾಲಾರ್‌ವರೆಗೆ ಅವರೊಡನೆ ಸುಮಾರು 33 ಕಿ.ಮೀ. ತಾವೂ ನಡೆದು, ಅವರ ಈ ಎಲ್ಲಾ ದಿನಗಳ, ನೋಡಿದ ಸ್ಥಳಗಳ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ ಸುರೇಶ್ ಕುಮಾರ್.
ಮಹಾಪರಿಕ್ರಮ ಯಾತ್ರೆ
ಇದೊಂದು ದೀರ್ಘ ಪಾದಯಾತ್ರೆಯಾಗಿದ್ದು, ದೇಶದ ನಾಲ್ಕೂ ಮೂಲೆಗಳನ್ನೂ, ಎಲ್ಲ 12 ಜ್ಯೋತಿರ್ಲಿಂಗಗಳನ್ನೂ, 15 ರಾಜ್ಯದ ಬಹುತೇಕ ಎಲ್ಲ ಪ್ರಮುಖ ತೀರ್ಥಕ್ಷೇತ್ರಗಳನ್ನೂ ಕಾಲ್ನಡಿಗೆಯಲ್ಲೇ ತಲುಪುತ್ತಾ, ಅಲ್ಲಿನ ದೇವರ ದರ್ಶನ ಮಾಡುವ ಕಾರ್ಯವನ್ನು ಚಂದ್ರಶೇಖರ್ ತಮ್ಮ ಇಳಿವಯಸ್ಸಿನಲ್ಲಿ ಮಾಡಿದ್ದಾರೆ.
ಪ್ರಾರಂಭದಲ್ಲಿ ಕರ್ನಾಟಕದಲ್ಲಿ 42 ದಿನಗಳು, 1378 km ಸಂಚರಿಸಿದ್ದಾರೆ.
ನಂತರದಲ್ಲಿ
ಮಹಾರಾಷ್ಟ್ರ: 47 ದಿನ, 1729 ಕಿ.ಮೀ.
ಗುಜರಾತ್ : 45 ದಿನ, 1764 ಕಿ.ಮೀ.
ಮಧ್ಯ ಪ್ರದೇಶ: 28 ದಿನ, 1023 ಕಿ.ಮೀ.
ರಾಜಸ್ತಾನ: 1 ದಿನ, 21 ಕಿ.ಮೀ.
ಉತ್ತರಪ್ರದೇಶ : 38 ದಿನ, 1648 ಕಿ.ಮೀ.
ಉತ್ತರಾಖಂಡ: 45 ದಿನ, 1645 ಕಿ.ಮೀ.
ನೇಪಾಳ : 31 ದಿನ, 1025 ಕಿ.ಮೀ.
ಬಿಹಾರ : 10 ದಿನ, 360 ಕಿ.ಮೀ.
ಜಾರ್ಖಂಡ್ : 9 ದಿನ, 319 ಕಿ.ಮೀ.
ಪಶ್ಚಿಮ ಬಂಗಾಳ : 7 ದಿನ, 307 ಕಿ.ಮೀ.
ಒಡಿಶಾ: 15 ದಿನ, 546 ಕಿ.ಮೀ.
ಆಂಧ್ರ ಪ್ರದೇಶ : 41 ದಿನ, 1754 ಕಿ.ಮೀ.
ತಮಿಳುನಾಡು : 6 ದಿನ, 175 ಕಿ.ಮೀ. ದೂರ ಪ್ರಯಾಣವನ್ನು ಕಾಲ್ನಡಿಗೆಯಲ್ಲಿ ಪೂರೈಸಿದ್ದಾರೆ.
ವೃಷಭದಿಂದ ಸಿಂಹದವರೆಗೆ: ಈ 5 ರಾಶಿಗಳಿಗೆ ಬ್ರೇಕಪ್‌ನ ಆಘಾತ ಎಲ್ಲಕ್ಕಿಂತ ಹೆಚ್ಚು!
ಯಾವೆಲ್ಲ ಪ್ರಮುಖ ತೀರ್ಥಕ್ಷೇತ್ರಗಳ ದರ್ಶನ?
ಪಶ್ಚಿಮದಲ್ಲಿ ಗುಜರಾತ್, ಉತ್ತರದಲ್ಲಿ ಉತ್ತರಖಂಡ್, ಪೂರ್ವದಲ್ಲಿ ಒರಿಸ್ಸಾ (ನೇಪಾಳವೂ ಸೇರಿದೆ) ಮತ್ತು ದಕ್ಷಿಣದ ತುತ್ತ ತುದಿ ಕನ್ಯಾಕುಮಾರಿ ತಲುಪುವ ಮೂಲಕ ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗ, ನಾಗೇಶ್ವರ ಜ್ಯೋತಿರ್ಲಿಂಗ, ಆಂಧ್ರದ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ, ಮಧ್ಯಪ್ರದೇಶದ ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಓಂಕಾರೇಶ್ವರ ಜ್ಯೋತಿರ್ಲಿಂಗ, ಉತ್ತರಾಖಂಡದ ಕೇದಾರನಾಥ ಜ್ಯೋತಿರ್ಲಿಂಗ, ಮಹಾರಾಷ್ಟ್ರದ ಭೀಮಾಶಂಕರ್ ಜ್ಯೋತಿರ್ಲಿಂಗ, ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ಘೃಷ್ಣೇಶ್ವರ ಜ್ಯೋತಿರ್ಲಿಂಗ, ಉತ್ತರ ಪ್ರದೇಶದ ವಿಶ್ವನಾಥ ಜ್ಯೋತಿರ್ಲಿಂಗ, ಜಾರ್ಖಂಡ್‌ನ ಬೈದ್ಯನಾಥ್ ಜ್ಯೋತಿರ್ಲಿಂಗ, ತಮಿಳುನಾಡಿನ ರಾಮೇಶ್ವರ ಜ್ಯೋತಿರ್ಲಿಂಗ ಸೇರಿದಂತೆ ಅನಂತ ಪದ್ಮಸ್ವಾಮಿ ದೇವಾಲಯ, ಶಬರಿಮಲೆ ಅಯ್ಯಪ್ಪಸ್ವಾಮಿ, ಕನ್ಯಾಕುಮಾರಿ ಮುಂತಾದ ನೂರಾರು ಕ್ಷೇತ್ರಗಳ ದರ್ಶನ ಮಾಡಿದ್ದಾರೆ.
ಈ ಬಗ್ಗೆ ಕರ್ನಾಟಕ ತಲುಪಿರುವ ಚಂದ್ರಶೇಖರ್ ಮಾತನಾಡಿ, 'ಸುರೇಶ್ ಕುಮಾರ್ ಸರ್ ಇದುವರೆಗೂ ಈ ಬಗ್ಗೆ 30ಕ್ಕೂ ಹೆಚ್ಚು ಫೇಸ್ಬುಕ್ ಪೋಸ್ಟ್ ಮಾಡಿ ಜವಾಬ್ದಾರಿ ಹೆಚ್ಚಿಸಿದ್ದಾರೆ. ಕರ್ನಾಟಕದ ಜನತೆ ಕಾಮೆಂಟ್ ಮೂಲಕ ಶುಭ ಹಾರೈಸಿದ್ದಾರೆ. ಎಲ್ಲರ ಕೃಪೆಯಿಂದ 415 ದಿನದ ಪಾದಯಾತ್ರೆ ಮಾಡಿದ್ದೇನೆ. ದೇಶದ ಎಲ್ಲ 12 ಜ್ಯೋತಿರ್ಲಿಂಗಗಳ ದರ್ಶನ, ನೇಪಾಳ, ಶಬರಿಮಲೆಯ ದರ್ಶನ ಮಾಡಿ ಮೆಟ್ಟೂರಿಗೆ ಬಂದಿದ್ದೇನೆ' ಎಂದು ತಿಳಿಸಿದ್ದಾರೆ.
ಇವರ ಅನುಭವಗಳನ್ನು ಕರ್ನಾಟಕದ ಜನತೆಗೆ ತಲುಪಿಸುವ ಕಾರಣದಿಂದ ಶಾಸಕರಾದ ಸುರೇಶ್ ಕುಮಾರ್ ಅವರು ಬೆಂಗಳೂರಿನಲ್ಲಿ ಅವರೊಡನೆ "ಸಂವಾದ" ಕಾರ್ಯಕ್ರಮ ಯೋಜಿಸಿದ್ದಾರೆ. ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.