ತುಂಗಾನದಿಯ ತೀರದಲ್ಲಿ ಸನಾತನ ಧರ್ಮವನ್ನು ಪ್ರಸರಿಸಲು , ಪುರಾಣ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರ ಶ್ರೀ ಮಠದಲ್ಲಿ ಹದಿನೈದು ದಿನಗಳ ಕಾಲ ಅದ್ಧೂರಿ ಹಾಗೂ ವೈಭವದಿಂದ ನಡೆಯುವ ಮಹಾ ಕುಂಭಾಭಿಷೇಕದ ಅಂಗವಾಗಿ ಭರದಿಂದ ಸಿದ್ಧತೆಗಳು ಸಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.10): ತುಂಗಾನದಿಯ ತೀರದಲ್ಲಿ ಸನಾತನ ಧರ್ಮವನ್ನು ಪ್ರಸರಿಸಲು , ಪುರಾಣ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರ ಶ್ರೀ ಮಠದಲ್ಲಿ (Hariharpur Mutt) ಹದಿನೈದು ದಿನಗಳ ಕಾಲ ಅದ್ಧೂರಿ ಹಾಗೂ ವೈಭವದಿಂದ ನಡೆಯುವ ಮಹಾ ಕುಂಭಾಭಿಷೇಕದ (Maha Kumbhabhishekha) ಅಂಗವಾಗಿ ಭರದಿಂದ ಸಿದ್ಧತೆಗಳು ಸಾಗಿದೆ. ಪ್ರತಿಯೊಂದು ಕಾರ್ಯಕ್ಕೆ ಶ್ರೀಗಳು ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಹರಿಹರಪುರ ಮಠದ ಮಾರ್ಗ ಸೇರಿದಂತೆ ಇಡೀ ಪಟ್ಟಣವನ್ನು ಅಲಂಕೃತಗೊಳಿಸಿ ಕಂಗೊಳಿಸುವಂತೆ ಮಾಡಲಾಗಿದೆ. ಮಹಾ ಕುಂಭಾಭಿಷೇಕಕ್ಕೆ ಇಡೀ ಪಟ್ಟಣವೇ ವಿದ್ಯುತ್ ದೀಪಾಲಂಕಾರಗಳೋಂದಿಗೆ ಸಿದ್ದವಾಗಿದೆ.
undefined
ಐತಿಹಾಸಿಕ ಮಹಾಕುಂಭಾಭಿಷೇಕ ಮಹೋತ್ಸವ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿರುವ ಶ್ರೀ ಮಠವು ಧರ್ಮಪ್ರಸಾರದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಹಾಗೂ ಜ್ಞಾನಾರ್ಜನೆಯ ಸಲುವಾಗಿ ಹಲವಾರು ರೀತಿಯ ಕಾಯಕಗಳನ್ನು ಮಾಡುತ್ತಾ ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿದೆ. ಶ್ರೀ ಮಠದಲ್ಲಿ ಈ ಹಿಂದಿನಿಂದಲೂ ಶ್ರೇಷ್ಟವಾದ ಗುರುಪರಂಪರೆಯಿದ್ದು, ಪ್ರಸ್ತುತ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ಸಂಕಲ್ಪದಿಂದ ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ದೇವಾಲಯಗಳ ಪುನರ್ ನಿರ್ಮಾಣ ಕಾರ್ಯವು ಇದೀಗ ಮುಗಿಯುವ ಹಂತದಲ್ಲಿದೆ.
ಇದೀಗ ದೇವಾಲಯಗಳ ಪುನಃ ಪ್ರತಿಷ್ಠಾ ಮಹಾಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಏಪ್ರಿಲ್ 10 ರಿಂದ ಏಪ್ರಿಲ್ 24 ರ ವರೆಗೆ ಆಯೋಜನೆಗೊಂಡಿದೆ.ಮಹಾಕುಂಭಾಭಿಷೇಕ ಹಾಗೂ ಪುನಃಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಮಠದಲ್ಲಿ ಆಯೋಜನೆಗೊಂಡಿದ್ದು, ದಿನಾಂಕ 15 ಏಪ್ರಿಲ್ 2022 ರ ಶುಕ್ರವಾರ ಶ್ರೀಗಳು ಶಾರದಾ ದೇವಿಗೆ ಮಹಾ ಕುಂಭಾಭಿಷೇಕವನ್ನು ಮಾಡಲಿದ್ದಾರೆ. ಅಂತೆಯೇ ಶ್ರೀ ಮಠದ ಆವರಣದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ನಾಡಿನ ಪ್ರಖ್ಯಾತ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
Chikkamagaluru: ರೈತರ ಗೆದ್ದೆ ತೋಟಗಳಿಗೆ ದಾಳಿ ಮಾಡುತ್ತಿದ್ದ ಕಾಡಾನೆ ಸೆರೆ
ಕೇಂದ್ರ ಹಾಗೂ ರಾಜ್ಯ ನಾಯಕರ ಆಗಮನ: ಈ ಮಹಾ ಕುಂಭಾಭಿಷೇಕದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗಣ್ಯರ ದಂಡೇ ಹರಿದು ಬರಲಿದ್ದು, ಭಾರತ ಸರ್ಕಾರದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್, ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ದಿವ್ಯಕ್ಷೇತ್ರ ಹರಿಹರಪುರದ ಕೆಲವೊಂದು ವೈಶಿಷ್ಟತೆಗಳು: ಪವಿತ್ರ ತುಂಗಾ ನದಿಯು ದಿವ್ಯಕ್ಷೇತ್ರ ಹರಿಹರಪುರದಲ್ಲಿ ಉತ್ತರವಾಹಿನಿಯಾಗಿ ಪ್ರವಹಿಸುತ್ತಿದೆ. ಉತ್ತರವಾಹಿನಿಯು ಸರ್ವಸಿದ್ಧಿಗೆ ಪ್ರತೀಕವಾಗಿದ್ದು, ಇಲ್ಲಿ ತೀರ್ಥಸ್ನಾನ (ನದಿ ಸ್ನಾನ) ಮಾಡಿದರೆ ಭಕ್ತರಿಗೆ ಸಕಲ ವಿಧವಾದ ಮಂಗಳವು ಉಂಟಾಗುತ್ತೆ ಎನ್ನುವ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ.
ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ: ಹರಿಹರಪುರದಲ್ಲಿ ಸ್ತಂಭ ರೂಪದ ಶ್ರೀ ಲಕ್ಷ್ಮೀನ ರಸಿಂಹಸ್ವಾಮಿಯ ಮಹಾಯಂತ್ರವಿದ್ದು, ಆ ಮಹಾಯಂತ್ರದ ಬಿಂದು ಸ್ಥಾನದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯು ಪ್ರತ್ಯಕ್ಷವಾಗಿ ನೆಲೆಸಿ ಮೂರ್ತಿ ಇದೆ. ಜಗತ್ತಿನಲ್ಲೇ ಅತ್ಯಂತ ಅಪರೂಪವಾದ ಈ ದೇವಾಲಯಕ್ಕೆ ಎರಡು ಮಹಡಿಗಳಿದ್ದು, ನೆಲ ಮಹಡಿಯ ಪ್ರಾಕಾರದಲ್ಲಿ ಬಹು ಸುಂದರವಾದ ದಶಾವತಾರಗಳ ಶಿಲ್ಪಗಳಿದ್ದು, ಈ ನೆಲಮಹಡಿಯಲ್ಲಿ ಭಕ್ತರು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಮಹಾಯಂತ್ರದ ದರ್ಶನವನ್ನು ಮಾಡಬಹುದಾಗಿದೆ. ಮೇಲ್ಭಾಗದ ಮಹಡಿಯಲ್ಲಿ ಭಕ್ತರು ಶುದ್ಧ ಮರಕತ ಶಿಲೆಯ ನಯನ ಮನೋಹರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ದರ್ಶನವನ್ನು ಮಾಡಬಹುದಾಗಿದೆ.
ಶ್ರೀ ಶಾರದಾ ಪರಮೇಶ್ವರಿ ದೇವಾಲಯ: ಈ ದೇವಾಲಯದಲ್ಲಿ ಜಗದ್ಗುರು ಆದಿಶಂಕರ ಭಗವತ್ಪಾದರು ಶ್ರೀಚಕ್ರ ಯಂತ್ರೋದ್ಧಾರದ ಮೂಲಕ ಪ್ರತಿಷ್ಠಾಪಿಸಿರುವ ಶಾರದಾ ಪರಮೇಶ್ವರಿಯ ದಿವ್ಯ ಸಾನ್ನಿಧ್ಯವಿದೆ. ದೇವಾಲಯದ ಹೊರ ಸುತ್ತಿನ ಪ್ರಾಕಾರದಲ್ಲಿ, ಲಲಿತಾ ಸಹಸ್ರನಾಮದ ದ್ರಷ್ಟಾರರು ಮತ್ತು ಸಮಸ್ತ ವಾಕ್ ದೋಷಗಳನ್ನು ನಿವಾರಣೆ ಮಾಡುವ ವಶಿನ್ಯಾದಿ ವಾಗ್ದೇವತೆಯರನ್ನು, ಆಯಾಯ ದೇವತೆಯರನ್ನು ಯಂತ್ರಸಹಿತ ಪ್ರತಿಷ್ಠಾಪಿಸಲಾಗಿದೆ.
Chikkamagaluru: ಕಾಫಿನಾಡಲ್ಲಿ ಅರಳಿನಿಂತ ಅಪರೂಪದ ಆಲ್ಮಂಡ ಕ್ಯಾಥರಿಟಿಕಾ ಹೂವು
ಶ್ರೀ ಇಷ್ಟ ಸಿದ್ಧಿ ಭಕ್ತಾಂಜನೇಯ ಸ್ವಾಮಿ ಸನ್ನಿಧಿ: ಈ ಸನ್ನಿಧಿಯು ಸುಮಾರು ಐದು ಪ್ರಾಕಾರಗಳಲ್ಲಿ ಇದೆ. ಕೆಳಗಿನ ಪ್ರಾಕಾರದಲ್ಲಿ ಭಕ್ತರು ಕನ್ನಡ, ತಮಿಳು, ತೆಲುಗು, ಸಂಸ್ಕೃತ, ಮಲಯಾಳಂ, ಹಿಂದಿ ಈ ಭಾಷೆಗಳಲ್ಲಿ ಬರೆದಿರುವ ಸುಮಾರು 21 ಕೋಟಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ದಿವ್ಯನಾಮಗಳಿರುವ ಪುಸ್ತಕಗಳನ್ನು ಇಟ್ಟು ಮೇಲ್ಭಾಗದ ಪ್ರಾಕಾರದ ಮೇಲೆ 27 ಅಡಿ ಎತ್ತರದ ಭವ್ಯವಾದ 'ಶ್ರೀ ಇಷ್ಟಸಿದ್ಧಿ ಭಕ್ತಾಂಜನೇಯ ಸ್ವಾಮಿಯನ್ನು' ಪ್ರತಿಷ್ಠಾಪಿಸಲಾಗಿದೆ.
ಶ್ರೀ ಕಾಮಧೇನು ವಿಮಾನ ಗೋಪುರ ದರ್ಶನ ಕೇಂದ್ರ: ಕಾಮಧೇನು ಸ್ವರೂಪವಾದ ವಿಮಾನ ಗೋಪುರ ಕಲಶವನ್ನು ಕಾಮಧೇನು ಸನ್ನಿಧಿಯ ಮೂಲಕವೇ ದರ್ಶನ ಮಾಡುವುದು ಪರಮ ವಿಶೇಷ ದಿವ್ಯಕ್ಷೇತ್ರ ಹರಿಹರಪುರದಲ್ಲಿ ಕಾಣಬಹುದಾಗಿದೆ.