Chaitra Navratri 2022: ನವಮಿಯಂದು ಸಿದ್ಧಿಧಾತ್ರಿಯ ಆರಾಧನೆ ಮಾಡಿ

By Suvarna News  |  First Published Apr 10, 2022, 10:33 AM IST

ಇಂದು ಚೈತ್ರ ನವರಾತ್ರಿಯ ಕಡೆಯ ದಿನ. ಈ ದಿನ ಮಾ ಸಿದ್ಧಿಧಾತ್ರಿಯನ್ನು ಆರಾಧಿಸುವುದರಿಂದ ಆಶೀರ್ವಾದ ಫಲ ಪಡೆಯಬಹುದಾಗಿದೆ. 


ಇಂದು ಚೈತ್ರ ನವರಾತ್ರಿ(Chaitra Navratri)ಯ ಒಂಬತ್ತನೇ ದಿನ. ದುರ್ಗಾ ದೇವಿಯ ಆರಾಧಕರಿಗೆ ಅತ್ಯಂತ ಮಹತ್ವದ ದಿನ. ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿ ಆಚರಣೆ ಜೋರು. ಈ ಹಬ್ಬದ ಸಂದರ್ಭದಲ್ಲಿ ಭಕ್ತರು ದುರ್ಗಾ ದೇವಿಯ 9 ವಿವಿಧ ರೂಪಗಳನ್ನು ಪೂಜಿಸುತ್ತಾರೆ. ಒಂಬತ್ತನೇ ದಿನವಾದ ಇಂದು ಮಾ ಸಿದ್ಧಿಧಾತ್ರಿ(Maa Siddhidhatri)ಯನ್ನು ಪೂಜಿಸಲಾಗುತ್ತದೆ. ಸಿದ್ಧಿಧಾತ್ರಿಯು ದುರ್ಗಾದೇವಿಯ 9ನೇ ಅವತಾರವಾಗಿದ್ದು, ತನ್ನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ತ್ರಿಶೂಲವನ್ನು ಹಿಡಿದಿರುತ್ತಾಳೆ. ಪೂರ್ತಿ ಅರಳಿದ ಕಮಲ ಇಲ್ಲವೇ ಸಿಂಹದ ಮೇಲೆ ತಾಯಿ ಕುಳಿತಿರುತ್ತಾಳೆ. 

ಈ ದಿನ ರಾಮನವಮಿ ಕೂಡಾ ಹೌದು. ಭಗವಾನ್ ರಾಮ ಭೂಮಿಯಲ್ಲಿ ಜನ್ಮವೆತ್ತಿದ ದಿನ. ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮನು ಮಧ್ಯಾಹ್ನ ಜನಿಸಿದನೆಂದು ನಂಬಲಾಗಿದೆ. ವಿಷ್ಣುವಿನ 10 ಅವತಾರಗಳಲ್ಲಿ ರಾಮನೂ ಒಬ್ಬನಾಗಿದ್ದಾನೆ.

Tap to resize

Latest Videos

Weekly Horoscope: ಸಿಂಹಕ್ಕೆ ಈ ವಾರ ಆರೋಗ್ಯ ಸಮಸ್ಯೆ, ಮಕರಕ್ಕೆ ಮಾನಭಂಗ

ಇಂದು ದುರ್ಗಾ ಮಾತೆಯ ಅನುಯಾಯಿಗಳು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಮಾ ಸಿದ್ಧಿಧಾತ್ರಿಯನ್ನು ಪ್ರಾರ್ಥಿಸುತ್ತಾರೆ. ದುರ್ಗೆಯ ಈ ರೂಪವು ಮನಸ್ಸಿಗೆ ನೆಮ್ಮದಿಯನ್ನೂ, ಸಮಾಧಾನವನ್ನೂ ನೀಡುತ್ತದೆ. ಸಿದ್ಧಿ ಎಂಬುದು ಧ್ಯಾನ ಪ್ರಕ್ರಿಯೆಗಳ ಮೂಲಕ ಸಾಧಿಸುವ ಅತಿಮಾನುಷ ಶಕ್ತಿಗಳನ್ನು ಸೂಚಿಸುತ್ತದೆ. ಧಾತ್ರಿ ಎಂದರೆ ಕೊಡುವವರು ಅಥವಾ ಪ್ರತಿಫಲ ನೀಡುವವರು. ಆದ್ದರಿಂದ, ಸಿದ್ಧಿಧಾತ್ರಿ ಎಂದರೆ ಶಕ್ತಿಗಳನ್ನು ಕೊಡುವವಳು. ಚೈತ್ರ ನವರಾತ್ರಿಯು ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸುತ್ತದೆ. ಅವರೆಂದರೆ - ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದ ಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ. ಪ್ರತಿ ರೂಪದ ಹಿಂದೆಯೂ ಅದರದೇ ಆದ ಕತೆಯಿದೆ.

ದುರ್ಗೆಯ ರೂಪವು ಅರ್ಧನಾರೀಶ್ವರ ಸ್ವರೂಪಕ್ಕೆ ಸಂಬಂಧಿಸಿದೆ, ಅದು ಅರ್ಧ ಶಿವ ಮತ್ತು ಅರ್ಧ ಪಾರ್ವತಿ. ಮಹಾದೇವನ ಒಂದು ಬದಿಯನ್ನು ಸಿದ್ಧಿಧಾತ್ರಿ ದೇವತೆ ಎಂದು ನಂಬಲಾಗಿದೆ. ವೈದಿಕ ಗ್ರಂಥಗಳ ಪ್ರಕಾರ, ಶಿವನು ಮಾ ಸಿದ್ಧಿಧಾತ್ರಿಯನ್ನು ಪ್ರಾರ್ಥಿಸುವ ಮೂಲಕ ತನ್ನ ಶಕ್ತಿಯನ್ನು ಸಾಧಿಸಿದನು. ಅಂದರೆ ಮಾ ಸಿದ್ಧಿಧಾತ್ರಿಯು ಪಾರ್ವತಿಯೇ ಆಗಿದ್ದಾಳೆ.

ರಾಮನವಮಿ, ರಾಮಾವತಾರದ ಮಹತ್ವ, ಜೀವನ ಸಂದೇಶವಿದು..!

ಪೂಜಾ ವಿಧಿ(Pooja Vidhi)
ಇಂದು ನವರಾತ್ರಿಯ ಕಡೆಯ ದಿನವನ್ನು ಆಚರಿಸುವ ಭಕ್ತರು, ಮೊದಲು ಗಣಪತಿ ಪೂಜೆಯಿಂದ ಆರಂಭಿಸಿ ಬಳಿಕ ದುರ್ಗೆಗೆ ಹವನ ನಡೆಸುತ್ತಾರೆ. ಹವನ ಮುಗಿದ ಬಳಿಕ ನವರಾತ್ರಿಯ ಪೂಜೆ ಪೂರ್ಣಗೊಳ್ಳುತ್ತದೆ. ಇದರ ಮುಹೂರ್ತವು ಶನಿವಾರ ಮಧ್ಯಾಹ್ನ 1:23ಕ್ಕೆ ಆರಂಭವಾಗಿದ್ದು, 11ನೇ ತಾರೀಖಿನಂದು ಬೆಳಗ್ಗೆ 3:15ಕ್ಕೆ ಕೊನೆಗೊಳ್ಳಲಿದೆ.  ರವಿಯೋಗ, ಸರ್ವಾರ್ಥ ಸಿದ್ಧಿ ಯೋಗ, ಪುಷ್ಯ ಯೋಗ, ಸುಕರ್ಮ ಯೋಗಗಳಿರುವ ಈ ದಿನ ಯಾವುದೇ ಸಮಯದಲ್ಲಿ ಕೂಡಾ ಹವನ ನಡೆಸಬಹುದಾಗಿದೆ. 
ಸಿದ್ಧಿಧಾತ್ರಿ ಪೂಜೆಯ ಸಂದರ್ಭದಲ್ಲಿ ಈ ಮಂತ್ರಗಳನ್ನು ಹೇಳಿಕೊಳ್ಳಿ. 
ಓಂ ದೇವಿ ಸಿದ್ಧಿ ಧಾತ್ರೈ ನಮಃ

ಸಿದ್ಧ ಗಂಧರ್ವ ಯಕ್ಷಧೈರಾಸುರೈರಾಮರೈರಪಿ
ಸೇವ್ಯಮಾನ ಸದಾ ಭೂಯತ್ ಸಿದ್ಧಿದಾ ಸಿದ್ಧಿದಾಯಿನಿ

ಯಾ ದೇವಿ ಸರ್ವಭೂತೇಷು ಮಾ ಸಿದ್ಧಿಧಾತ್ರಿ ರೂಪೇನ ಸಂಸ್ಥಿತಾ
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ

ಇದಾದ ಬಳಿಕ ಗಂಧ, ಪುಷ್ಪ, ದೀಪ, ಸುಗಂಧ, ನೈವೇಧ್ಯ ಸೇರಿದಂತೆ ಪಂಚೋಪಚಾರ ಪೂಜೆ ನಡೆಸಿ. ಪೂಜೆಯ ಬಳಿಕ, ಖೀರು ಹಾಗೂ ಪಂಚಾಮೃತವನ್ನು ನೈವೇದ್ಯ ನೀಡಿ. 
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!