ವಾಸ್ತು ಶಾಸ್ತ್ರದಲ್ಲಿ, ಫೆಂಗ್‌ಶೂಯ್‌ನಲ್ಲಿ ಅಥವಾ ಹರಳು ಧಾರಣೆಯ ವಿಷಯಕ್ಕೆ ಬಂದಾಗಲೂ ಆಮೆಗೆ ಮಹತ್ವದ ಸ್ಥಾನವಿದೆ. ಆಮೆಯು ವಾಸ್ತುವಿನಲ್ಲಿ ಮನೆಯ ದೋಷ ನಿವಾರಕವಾಗಿದ್ದರೆ, ಆಮೆಯ ಉಂಗುರ(Turtle Ring)ವು ವ್ಯಕ್ತಿಗೆ ಅದೃಷ್ಟ ತಂದುಕೊಡಲಿದೆ ಎಂಬ ಕಾರಣಕ್ಕೆ ಈಗಂತೂ ಬಹಳಷ್ಟು ಜನರ ಕೈಲಿ ನಾವದನ್ನು ಕಾಣಬಹುದು.
ಹೌದು, ಆಮೆ ಉಂಗುರ ಅದೃಷ್ಟ ಬದಲಿಸುತ್ತದೆ ಎಂಬುದೇನೋ ನಿಜವೇ. ಆದರೆ, ಅದನ್ನು ಎಲ್ಲರೂ ಧರಿಸುವುದು ಸರಿಯಲ್ಲ. ಜೊತೆಗೆ, ಧಾರಣೆ ವಿಷಯವಾಗಿ ಹಲವು ನಿಯಮ ಪಾಲನೆಯಾಗಬೇಕು. ಇಲ್ಲದಿದ್ದರೆ ಎಲ್ಲವೂ ತಲೆ ಕೆಳಗಾಗಿ ದುರದೃಷ್ಟಕ್ಕೆ ಕಾರಣವಾಗಬಹುದು.
ಹೌದು, ಆಮೆ ಉಂಗುರವು ಮಹಾವಿಷ್ಣು(Lord Vishnu) ಹಾಗೂ ಲಕ್ಷ್ಮೀದೇವಿ(Goddess Lakshmi)ಗೆ ಸಂಬಂಧಿಸಿದ್ದಾಗಿದೆ. ವಿಷ್ಣುವು ಆಮೆಯ ಅವತಾರವೆತ್ತಿದ್ದ. ಅಂದರೆ ಆಮೆಯ ಅವತಾರ. ಇನ್ನು ಲಕ್ಷ್ಮೀ ಎಂದರೆ ಸಂಪತ್ತಿಗೆ ಸಂಬಂಧಿಸಿದ್ದು. ಹೀಗಾಗಿ ಆಮೆ ಉಂಗುರ ಧರಿಸಿದವರ ಅದೃಷ್ಟವನ್ನೇ ಬದಲಾಯಿಸಲಿದೆ. ಆದರೆ ಅದನ್ನು ಧರಿಸುವಾಗ ಪಾಲಿಸಬೇಕಾದ ನಿಯಮಗಳೇನು ಎಂಬುದನ್ನು ನೋಡೋಣ.
ಆಮೆಯು ನೀರಿನಲ್ಲಿ ವಾಸಿಸುವಂಥದ್ದು. ಲಕ್ಷ್ಮೀ ಕೂಡಾ ನೀರಿನಿಂದ ಉದ್ಭವಿಸಿದವಳು. ಹಾಗಾಗಿ, ವಾಸ್ತುವಿನಲ್ಲಿ ಕೂಡಾ ಆಮೆಗೆ ಮಹತ್ವದ ಸ್ಥಾನವಿರುವುದು. ಸಂಪತ್ತು ಹೆಚ್ಚಿಸಲು ಆಮೆಯ ವಿಗ್ರಹ ತಂದಿಡಲು ಹೇಳಲಾಗುತ್ತದೆ. ನೀವೊಂದು ವೇಳೆ ಆಮೆ ಉಂಗುರ ತಂದು ಧರಿಸಿದ್ದೀರಾದರೆ ಈ ವಿಷಯಗಳ ಕಡೆ ಗಮನ ಹರಿಸಿದ್ದೀರೇ ನೋಡಿ.
Gemstones For Luck: ಈ ಎರಡು ಹರಳಿಂದ ಬದಲಾಗುತ್ತೆ ನಿಮ್ಮ ಅದೃಷ್ಟ!
- ಮೊದಲನೆಯದಾಗಿ ಎಲ್ಲ ರಾಶಿಯವರಿಗೂ ಆಮೆ ಉಂಗುರ ಆಗಿ ಬರುವುದಿಲ್ಲ. ಅಗ್ನಿ ತತ್ವದವರು ಈ ಜಲ ತತ್ವದ ಪ್ರಾಣಿಯ ಉಂಗುರ ಧರಿಸುವುದರಿಂದ ವಿರೋಧಾಭಾಸಗಳಾಗಬಹುದು. ಸಿಂಹ ಮತ್ತು ತುಲಾ(Leo and Libra) ರಾಶಿಯವರು ಆಮೆ ಉಂಗುರ ಧರಿಸುವ ಮುನ್ನ ನುರಿತ ಜ್ಯೋತಿಷಿಗಳ ಬಳಿ ವಿಚಾರಿಸಿಯೇ ಮುಂದುವರಿಯಬೇಕು.
- ಟರ್ಟಲ್ ರಿಂಗ್ ಧರಿಸಿದಾಗ ಆಮೆಯ ಮುಖವು ನಿಮ್ಮ ಕಡೆ ಮುಖ ಮಾಡಿರಬೇಕು. ಅದು ನಿಮಗೆ ಬೆನ್ನು ಹಾಕಿರಕೂಡದು. ಹಾಗಿದ್ದಾಗ ಮಾತ್ರ ಅದು ಸಂತೋಷ ಹಾಗೂ ಸಮೃದ್ಧಿಯನ್ನು ನಿಮ್ಮತ್ತ ಎಳೆದು ತರುತ್ತದೆ. ಅದೇ ಆಮೆಯ ಮುಖ ನಿಮಗೆ ವಿರುದ್ಧವಾಗಿದ್ದರೆ, ಆಗ ಹಣಕಾಸಿನ ತೊಂದರೆಗಳು(financial loss) ಹೆಚ್ಚುತ್ತವೆ. ಸಾಲ ಮಾಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ.
Business and black magic: ವ್ಯಾಪಾರಕ್ಕೆ ನಷ್ಟ ತರುವ ವಾಮಾಚಾರ, ರಕ್ಷಣೆ ಹೇಗೆ?
- ಯಾವಾಗಲೂ ಆಮೆ ಉಂಗುರವನ್ನು ಬಲಗೈಯ ಮಧ್ಯದ ಬೆರಳಿ(middle finger)ಗೇ ಧರಿಸಬೇಕು.
- ಶುಕ್ರವಾರದ ದಿನವೇ ಕೈಗೆ ಉಂಗುರ ಹಾಕಿಕೊಳ್ಳಬೇಕು. ಏಕೆಂದರೆ ಶುಕ್ರವಾರವು ತಾಯಿ ಲಕ್ಷ್ಮೀಯ ದಿನವಾಗಿದೆ.
- ಬೆಳ್ಳಿ(silver)ಯಿಂದ ತಯಾರಿಸಿದ ಆಮೆ ಉಂಗುರವನ್ನು ಮಾತ್ರ ಧರಿಸಬೇಕು.
- ಆಮೆ ಉಂಗುರ ಮಾಡಿಸುವಾಗ ಹಿಂಬದಿಯಲ್ಲಿ 'ಶ್ರೀ' ಎಂದು ಬರೆಸಬೇಕು.
- ಕೈಗೆ ಧರಿಸಿದ ಉಂಗುರವನ್ನು ಏನೋ ಯೋಚಿಸುವಾಗ, ಸುಮ್ಮನೆ ಕುಳಿತಾಗ ತೆಗೆಯುವುದು, ಹಾಕುವುದು ಮಾಡುತ್ತಿರಬಾರದು. ಅದರಲ್ಲಿ ಆಟವಾಡಬಾರದು. ಜೊತೆಗೆ, ಪದೇ ಪದೆ ನಾನಾ ಕಾರಣಗಳಿಗಾಗಿ ಅದನ್ನು ಬಿಚ್ಚಿಡುವುದು ಮತ್ತೆ ಧರಿಸುವುದು ಉತ್ತಮ ಅಭ್ಯಾಸವಲ್ಲ.
- ಒಂದು ವೇಳೆ ಆಮೆ ಉಂಗುರವನ್ನು ಕೆಲ ದಿನಗಳಿಗೆ ತೆಗೆದಿಡಲೇಬೇಕಾದ ಸಂದರ್ಭ ಬಂದರೆ ಅದನ್ನು ದೇವರ ಮನೆಯಲ್ಲಿ ಲಕ್ಷ್ಮೀದೇವಿಯ ಪಾದದ ಬುಡದಲ್ಲೇ ಕಳಚಿಡಬೇಕು.
- ಒಮ್ಮೆ ತೆಗೆದಿಟ್ಟ ಉಂಗುರ ಮತ್ತೆ ಧರಿಸಬೇಕೆಂದರೆ ಅದನ್ನು ಹಾಲಿನ ಬಟ್ಟಲಿನೊಳಗೆ ಹಾಕಿಟ್ಟು, ಲಕ್ಷ್ಮೀ ದೇವಿಯ ಕಾಲಿಗೆ ನಮಸ್ಕರಿಸಿ ಬಳಿಕ ಧಾರಣೆ ಮಾಡಬೇಕು.
- ಕಟಕ, ಮೇಷ, ವೃಸ್ಚಿಕ ಹಾಗೂ ಮೀನ ರಾಶಿಯ ಜನರು ಜ್ಯೋತಿಷಿಗಳ ಸಲಹೆ ಕೇಳದೆ ಆಮೆ ಉಂಗುರವನ್ನು ಧರಿಸಕೂಡದು. ಒಂದು ವೇಳೆ ಬೇಕಾಬಿಟ್ಟಿ ಧರಿಸಿದರೆ ಅವರ ಗ್ರಹದೋಷ ಹೆಚ್ಚುವುದು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.