ಜಾತಕ ಹೇಳುತ್ತೆ ನಿಮ್ಮ ಲವ್ ಮ್ಯಾರೇಜ್ ಭವಿಷ್ಯ!

By Suvarna News  |  First Published May 6, 2020, 6:20 PM IST

ಕೆಲವರಿಗೆ ಲವ್ ಮಾಡಬೇಕು, ತಾನು ಮೆಚ್ಚಿದ ಹುಡುಗ/ಹುಡುಗಿಯನ್ನು ಜೀವನ ಸಂಗಾತಿಯಾಗಿ ಪಡೆಯಬೇಕು. ಆಗ ಒಂದೊಳ್ಳೇ ಲೈಫನ್ನು ಲೀಡ್ ಮಾಡಬಹುದು ಎಂಬ ಪ್ಲಾನ್ ಇರುತ್ತೆ. ಆದರೆ, ತುಂಬಾ ಹತ್ತಿರದವರಲ್ಲೇ, ಇಲ್ಲವೇ ಸ್ನೇಹಿತ ವಲಯದಲ್ಲೇ ಯಾವುದಾದರೂ ಲವ್ ಮ್ಯಾರೇಜ್ ಫೇಲ್ ಆಗಿದ್ದನ್ನು ಕಂಡಿದ್ದರೆ, ಇಲ್ಲವೇ ಹತ್ತಿರದವರು ಪ್ರೇಮ ವಿವಾಹ ತುಂಬಾ ಗೋಳು ಅಂದಿದ್ದರೆ ಮಾತ್ರ ಡೋಲಾಯಮಾನಕ್ಕೆ ಬೀಳುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವಂತೆ ಜಾತಕದಲ್ಲಿರುವ ಕೆಲವು ಯೋಗಗಳನ್ನು ಪರಿಶೀಲಿಸಿ, ಭವಿಷ್ಯದ ಹಲವು ವಿಷಯದ ಬಗ್ಗೆ ಮಾಹಿತಿ ಕಲೆಹಾಕಬಹುದು. ಹಾಗೆಯೇ ಜಾತಕದಲ್ಲಿ ಪ್ರೇಮ ವಿವಾಹ ಯೋಗವಿದೆಯೇ ಎಂಬುದನ್ನು ತಿಳಿಯಬಹುದು. ಜಾತಕದಲ್ಲಿರುವ ಗ್ರಹಗತಿಗಳ ಸ್ಥಾನ, ಸ್ಥಿತಿಗಳಿಂದ, ದೃಷ್ಟಿಗಳಿಂದ ಈ ಯೋಗಗಳ ಬಗ್ಗೆ ಅರಿಯಬಹುದು. 


ಪ್ರತಿಯೊಬ್ಬರಿಗೂ ಮದುವೆಯ ಬಗ್ಗೆ ಹಲವು ಕನಸುಗಳಿರುತ್ತವೆ. ಅದರಲ್ಲೂ ಯಾವ ರೀತಿಯ ಮದುವೆ ಆಗಬೇಕು, ಪ್ರೇಮ ವಿವಾಹವೋ ಅಥವಾ ಮನೆಯವರೆಲ್ಲ ಸೇರಿ ಹುಡುಕಿ ನೋಡಿದವರನ್ನು ಆಗಬೇಕೋ ಎನ್ನುವ ಬಗ್ಗೆ ಕುತೂಹಲ ಮತ್ತು ಗೊಂದಲ ಸಹಜವಾಗಿ ಎಲ್ಲರಲ್ಲೂ ಇರುತ್ತದೆ. ಹಲವರು ಲವ್ ಮ್ಯಾರೇಜ್ ಆದ್ರೆ ಚೆನ್ನಾಗಿರತ್ತೆ, ಆರೆಂಜ್ ಮ್ಯಾರೇಜ್ ಬೇಡ. ನಾನು ಲವ್ ಮ್ಯಾರೇಜ್‌ ಅನ್ನೇ ಆಗ್ತೀನಿ ಎನ್ನುತ್ತಾರೆ. ಇದಕ್ಕೂ ಕಾರಣವಿದೆ. 

ಪ್ರೀತಿಸಿ ಮದುವೆಯಾದರೆ ಹುಡುಗ, ಹುಡುಗಿ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಬಹುದು. ಗುಣ- ಸ್ವಭಾವ, ಇಷ್ಟ, ಕಷ್ಟ, ಭಾವನೆಗಳನ್ನು ಚೆನ್ನಾಗಿ ತಿಳಿಯಲು ಸಮಯಾವಕಾಶ ಸಿಗುತ್ತದೆ. ಆದರೆ ಕೆಲವು ಬಾರಿ ಮದುವೆಗೆ ಮುಂಚೆ ಅರಿತ ಗುಣ-ಸ್ವಭಾವ, ಪರಸ್ಪರ ಅರ್ಥೈಸಿಕೊಂಡದ್ದು ಮದುವೆಯಾದ ಮೇಲೆ ಕಾಣ ಸಿಗುವುದಿಲ್ಲ. ಸಂಸಾರದಲ್ಲಿ ಸಾಮರಸ್ಯವಿರುವುದಿಲ್ಲ, ಜಗಳ, ಅಹಂಕಾರ ಮನೋಭಾವನೆ ಹೆಚ್ಚಾಗುತ್ತದೆ. ಜ್ಯೋತಿಷ್ಯದಲ್ಲಿ ಇದಕ್ಕೆ ಉಪಾಯವಿದೆ. ಲವ್ ಮ್ಯಾರೇಜ್ ಆಗುವ ಯೋಗ ನಿಮಗಿದೆಯೇ ಎಂದು ತಿಳಿದುಕೊಳ್ಳಬಹುದು. ಅಥವಾ ಪ್ರೇಮ ವಿವಾಹವಾದ ನಂತರ ಜೀವನ ಹೇಗಿರುತ್ತದೆ ಎಂಬುದನ್ನು ಜಾತಕದ ಮೂಲಕ ತಿಳಿದು ಕೊಳ್ಳಬಹುದಾಗಿದೆ. ಒಮ್ಮೆ ತಿಳಿದುಕೊಂಡ ಮೇಲೆ ಲವ್ ಮಾಡಬೇಕೇ? ಬೇಡವೇ ಎಂಬುದನ್ನು ನೀವು ನಿರ್ಧರಿಸಬಹುದಾಗಿದೆ.

ಇದನ್ನು ಓದಿ: ಶನಿ ನಿಮ್ಮ ಜಾತಕದಲ್ಲಿ ಈ ರಾಶಿಯಲ್ಲಿದ್ದಾಗ ನಿಮಗ್ಯಾವ ಫಲ!

ರಾಹುವಿನಿಂದ ಪ್ರೇಮ ವಿವಾಹದ ಸಾಧ್ಯತೆ
ರಾಹು ಲಗ್ನದಲ್ಲಿದ್ದು, ಏಳನೇ(ಸಪ್ತಮ) ಮನೆಯ ಮೇಲೆ ಗುರುವಿನ ದೃಷ್ಟಿ ಇದ್ದರೆ ಅಂಥವರಿಗೆ ಪ್ರೇಮ ವಿವಾಹದ ಯೋಗವಿರುತ್ತದೆ. ಜಾತಕದಲ್ಲಿ ಮಂಗಳ ಗ್ರಹದ ಸಂಬಂಧ ಶನಿ, ರಾಹುವಿನೊಂದಿಗೆ ಇದ್ದರೆ ಅಥವಾ ಈ ಗ್ರಹಗಳ ಸಹಯೋಗವಿದ್ದರೆ ಪ್ರೇಮ ವಿವಾಹವಾಗುವ ಸಾಧ್ಯತೆ ಇರುತ್ತದೆ. ಜಾತಕದಲ್ಲಿ ಈ ಮೂರು ಗ್ರಹಗಳನ್ನು ಹೆಚ್ಚು ಅಶುಭ ಮತ್ತು ಪಾಪಿ ಗ್ರಹ ಎಂದು ಹೇಳಲಾಗುತ್ತದೆ. ಈ ಮೂರು ಗ್ರಹಗಳಲ್ಲಿ ಯಾವುದಾದರೂ ಒಂದು ಗ್ರಹ ವಿವಾಹ ಮನೆಯಲ್ಲಿದ್ದರೆ ಅಥವಾ ಆ ಮನೆಯ ಮೇಲೆ ದೃಷ್ಟಿ ಬೀರಿದ್ದರೆ ಅಂಥವರು ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವ ಸಂಭವ ಹೆಚ್ಚಿರುತ್ತದೆ. 

ಜಾತಕದಲ್ಲಿ ಸಪ್ತಮದಲ್ಲಿ ರಾಹು, ಶುಕ್ರ ಅಥವಾ ಶನಿಯು ದೃಷ್ಟಿ ಬೀರಿದ್ದರೆ ಅಂಥವರದ್ದು ಲವ್ ಮ್ಯಾರೇಜ್ ಆಗೋದೆ ಹೆಚ್ಚು. ಐದನೇ ಮನೆಯಲ್ಲಿ ಇರುವ ಗ್ರಹದ ಉಚ್ಛ ರಾಶಿಯಲ್ಲಿ ರಾಹು ಅಥವಾ ಕೇತು ಇದ್ದರೂ ಪ್ರೇಮ ವಿವಾಹವಾಗೋದು ನಿಶ್ಚಿತ.

ಇದನ್ನು ಓದಿ: ಲಲಿತಾ ಸಹಸ್ರನಾಮ ಪಠಿಸಿ, ದೇವಿ ಕೃಪೆಗೆ ಪಾತ್ರರಾಗಿ, ಇಲ್ಲಿವೆ ಸಹಸ್ರ ಲಾಭ

ಲವ್ ಮ್ಯಾರೇಜ್‌ಗೆ ಕೆಲವು ವಿಶೇಷ ಯೋಗಗಳು
ಜಾತಕದಲ್ಲಿ ಮಂಗಳ ಅಥವಾ ಚಂದ್ರ ಐದನೇ ಮನೆಯ ಗ್ರಹದ ಜೊತೆ ಐದನೇ ಮನೆಯಲ್ಲಿಯೇ ಸ್ಥಿತನಾಗಿದ್ದರೆ ಅಂಥ ಸಂದರ್ಭದಲ್ಲಿ, ಏಳನೇ ಮನೆಯ ಗ್ರಹದ ಜೊತೆ ಏಳನೇ ಮನೆಯಲ್ಲಿಯೇ ಇದ್ದರೆ ಆಗಲೂ ಪ್ರೇಮ ವಿವಾಹ ಯೋಗವಿರುತ್ತದೆ. ಶುಕ್ರ ಲಗ್ನದಿಂದ ಐದನೇ ಅಥವಾ ಏಳನೇ, ಚಂದ್ರ ಲಗ್ನದಿಂದ ಐದನೇ ಮನೆಯಲ್ಲಿ ಸ್ಥಿತನಾಗಿದ್ದರೆ ಆಗ ಪ್ರೇಮ ವಿವಾಹ ಸಾಧ್ಯತೆ ಹೆಚ್ಚು.  ಜಾತಕದಲ್ಲಿ ಐದನೇ ಮತ್ತು ಏಳನೇ ಮನೆಯ ಗ್ರಹ, ಏಳನೇ ಮತ್ತು ಒಂಭತ್ತನೇ ಮನೆಯ ಗ್ರಹಗಳು ಜೊತೆಯಲ್ಲಿ ಸ್ಥಿತರಾಗಿದ್ದರೆ ಲವ್ ಮ್ಯಾರೇಜ್ ಯೋಗ ನಿಮಗೆ ಒಲಿಯಲಿದೆ. ಏಳನೇ ಮನೆಯಲ್ಲಿ ಕೇತು ಅಥವಾ ಶನಿ ಇದ್ದರೂ ನಿಮಗೆ ಈ ಯೋಗವುಂಟು.

ಜಾತಕದ ಲಗ್ನದಲ್ಲಿ ಇರುವ ಗ್ರಹ ಮತ್ತು ಐದನೇ ಮನೆಯ ಗ್ರಹ ಒಟ್ಟಿಗೆ ಇದ್ದರೆ, ಲಗ್ನದಲ್ಲಿರುವ ಗ್ರಹ ಮತ್ತು ಒಂಭತ್ತನೇ ಮನೆಯ ಗ್ರಹ ಜೊತೆಗೆ ಸ್ಥಿತರಾಗಿದ್ದರೆ ಅಥವಾ ಒಬ್ಬರ ಮೇಲೊಬ್ಬರು ದೃಷ್ಟಿ ಬೀರಿದ್ದರೆ ಆಗ ಆಗುವುದು ಪ್ರೇಮ ವಿವಾಹ.

ಇದನ್ನು ಓದಿ: ಪೂಜೆಯ ಫಲ ಸಿಗಬೇಕೆಂದರೆ ಈ ವಸ್ತುಗಳನ್ನು ನೆಲದಮೇಲೆ ಇಡಬೇಡಿ!

ಜಾತಕದಲ್ಲಿ ಏಳನೇ ಮನೆಯ ಗ್ರಹವು ಏಳನೇ ಮನೆಯಲ್ಲಿಯೇ ಸ್ಥಿತನಾಗಿದ್ದರೆ ಆಗ ವಿವಾಹ ಯೋಗ ಬಲವಾಗಿರುತ್ತದೆ. ಅಂಥ ಸಂದರ್ಭದಲ್ಲಿ ಇಲ್ಲವೇ ಜಾತಕದಲ್ಲಿ ಏಳನೇ ಮನೆಯ ದೃಷ್ಟಿ, ಸಹಯೋಗ ಮತ್ತು ಸ್ಥಿತಿ ಶುಕ್ರನ ಜೊತೆ, ಹನ್ನೆರಡನೇ ಮನೆಯ ಜೊತೆ ಇದ್ದರೂ ಪ್ರೇಮ ವಿವಾಹವಾಗುವ ಸಂಭವವಿರುತ್ತದೆ.

click me!