ಜಾತಕದ ಅನುಸಾರ ಶುಭ ವಿವಾಹಕ್ಕೆ ಗುಣ ಲೆಕ್ಕಾಚಾರ..!

By Suvarna News  |  First Published Jul 21, 2021, 11:12 AM IST

ವಿವಾಹಕ್ಕೆ ಮುನ್ನ ವರ ಮತ್ತು ಕನ್ಯೆಯ ಜಾತಕ ಹೊಂದಾಣಿಕೆ ಮಾಡಲಾಗುತ್ತದೆ. ಒಟ್ಟು 36 ಗುಣಗಳಲ್ಲಿ ಕನಿಷ್ಠ 18 ಗುಣಗಳು ಕೂಡಿ ಬಂದರೆ ಮದುವೆಗೆ ಯೋಗ್ಯವೆಂದು ಅರ್ಥ. ಸರಿಯಾದ ರೀತಿಯಲ್ಲಿ ಎಲ್ಲ ಗುಣಗಳ ಹೊಂದಾಣಿಕೆ ಮಾಡಿಯೇ ಜಾತಕ ಹೊಂದಾಣಿಕೆ ಆಗುವುದೋ ಇಲ್ಲವೋ ಎಂಬುದನ್ನು ಹೇಳಬೇಕು. ಕೆಲವು ಗುಣಗಳನ್ನು ನೋಡಿ ಅಂತಿಮ ತೀರ್ಮಾನಕ್ಕೆ ಬರುವುದು ಶಾಸ್ತ್ರ ಸಮ್ಮತವಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ವಿವಾಹಕ್ಕೆ ಯೋಗ್ಯವಾಗಬೇಕೆಂದರೆ ಗುಣಗಳ ಲೆಕ್ಕಾಚಾರದ ಬಗ್ಗೆ ತಿಳಿಯೋಣ.


ಸನಾತನ ಹಿಂದೂ ಸಂಸ್ಕೃತಿಯ ಮೌಲ್ಯಗಳು ಅತ್ಯಂತ ಮಹತ್ವದ್ದಾಗಿದೆ. ಶಾಸ್ತ್ರಗಳಲ್ಲಿ ತಿಳಿಸಲಾದ ನಿಯಮಗಳ ಪಾಲನೆಯಿಂದ ಜೀವನದಲ್ಲಿ ಸುಖ-ಸಂತೋಷಗಳನ್ನು ಕಾಣಬಹುದಾಗಿದೆ. ಇಂಥ ಶಾಸ್ತ್ರ ನಿಯಮಗಳಲ್ಲಿ ವಿವಾಹಕ್ಕೆ ಮೊದಲು ಹುಡುಗ-ಹುಡುಗಿಯ ಜಾತಕವನ್ನು ಹೊಂದಾಣಿಕೆ ಮಾಡುವುದು ಒಂದಾಗಿದೆ.

ವೈವಾಹಿಕ ಜೀವನವು ಸಂತೋಷ ಮತ್ತು ನೆಮ್ಮದಿಯಿಂದ ಕೂಡಿರಬೇಕೆಂದರೆ, ಹುಡುಗ-ಹುಡುಗಿಯ ಜಾತಕವು ಹೊಂದಾಣಿಕೆ ಆಗಬೇಕು. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವಂತೆ ಜಾತಕವು ವ್ಯಕ್ತಿಯ ಸ್ವಭಾವ ಗುಣ-ಲಕ್ಷಣಗಳನ್ನು ತಿಳಿಸುತ್ತದೆ. ಹಾಗಾಗಿ ಹುಡುಗ ಮತ್ತು ಹುಡುಗಿಯ ಜಾತಕವನ್ನು ಹೊಂದಾಣಿಕೆ ಮಾಡುವುದರ ಮೂಲಕ ವಿವಾಹದ ನಂತರ ಇಬ್ಬರಲ್ಲಿ ಸಾಮರಸ್ಯ ಸಾಧ್ಯವೇ ಎಂಬುದನ್ನು ತಿಳಿಯಬಹುದಾಗಿರುತ್ತದೆ.

Latest Videos

undefined

ಜಾತಕ ಮತ್ತು ಅದರ ಗುಣಗಳು

ಜಾತಕ ಹೊಂದಾಣಿಕೆಯಾಗಬೇಕೆಂದರೆ ಗುಣಗಳ ಹೊಂದಾಣಿಕೆ ಅತ್ಯವಶ್ಯಕ. ಒಟ್ಟು 36 ಗುಣಗಳಿದ್ದು ಅವುಗಳಲ್ಲಿ ಕನಿಷ್ಠ 18 ಗುಣಗಳು ಹೊಂದಾಣಿಕೆ ಆಗಬೇಕು. ವೈವಾಹಿಕ ಜೀವನ ಸಫಲವಾಗಬೇಕೆಂದರೆ ಪತಿ-ಪತ್ನಿಯ ನಡುವೆ ಗುಣಗಳ ಹೊಂದಾಣಿಕೆ ಅತ್ಯಗತ್ಯ. ಈ ಗುಣಗಳನ್ನು ಜಾತಕದ ಮುಖಾಂತರ ತಿಳಿಯಲಾಗುತ್ತದೆ. ಜಾತಕ ಹೊಂದಾಣಿಕೆಯಲ್ಲಿ ಮುಖ್ಯವಾಗಿ ಒಟ್ಟು ಗುಣಕೂಟ ಎಂಟು. ಪ್ರತಿ ಗುಣಕ್ಕೂ ಅಂಕಗಳನ್ನಿಟ್ಟು ಹೊಂದಾಣಿಕೆಯನ್ನು ನೋಡಲಾಗುತ್ತದೆ.ವಿವಾಹಕ್ಕೆ ಕನಿಷ್ಠ 18 ಗುಣಗಳು ಹೊಂದಾಣಿಕೆಯಾಗುವುದು ಅವಶ್ಯಕ. 32 ರಿಂದ 36ಗುಣಗಳು ಹೊಂದಾಣಿಕೆಯಾದರೆ ಅದು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.

ಇದನ್ನು ಓದಿ: ಮುಖದ ಈ ಭಾಗಗಳಲ್ಲಿ ಮಚ್ಚೆ ಇದ್ರೆ ನಿಮ್ಮದೇ ಅದೃಷ್ಟ...!

ಮುಖ್ಯವಾದ ಎಂಟುಗುಣಗಳು : ಗಣಕೂಟಕ್ಕೆ 6 ಅಂಕಗಳು, ಗ್ರಹಮೈತ್ರಿ ಕೂಟಕ್ಕೆ 5, ನಾಡಿಕೂಟಕ್ಕೆ 8, ವೈಶ್ಯ ಕೂಟಕ್ಕೆ 2, ವರ್ಣಕೂಟಕ್ಕೆ 1, ಯೋನಿಕೂಟಕ್ಕೆ 4, ತಾರಾ ಕೂಟಕ್ಕೆ 3 ಮತ್ತು ರಾಶಿಕೂಟ/ಭಾಕೂಟಕ್ಕೆ 7 ಅಂಕಗಳು ಇರುತ್ತವೆ. ಒಟ್ಟು 36 ಗುಣಗಳಲ್ಲಿ ಹೊಂದಾಣಿಕೆಯನ್ನು ನೋಡಲಾಗುತ್ತದೆ.

ಎಷ್ಟು ಗುಣಗಳ ಹೊಂದಾಣಿಕೆ ವಿವಾಹಕ್ಕೆ ಯೋಗ್ಯ…? - ಜಾತಕ ಹೊಂದಾಣಿಕೆಗೆ ಇರುವುದು 36 ಗುಣಗಳು 

  • 36 ಗುಣಗಳಲ್ಲಿ  18 ಕ್ಕಿಂತ ಕಡಿಮೆ ಗುಣಗಳು ಹೊಂದಾಣಿಕೆಯಾದರೆ ಅಂಥ ಜಾತಕಗಳು ವಿವಾಹಕ್ಕೆ ಯೋಗ್ಯವಲ್ಲವೆಂದು ನಿರ್ಧರಿಸಲಾಗುತ್ತದೆ.
  • ಕನಿಷ್ಠ 18 ರಿಂದ 25 ಗುಣಗಳು ಹೊಂದಾಣಿಕೆಯಾದರೆ ವಿವಾಹಕ್ಕೆ ಯೋಗ್ಯವಾದ ಉತ್ತಮ ಜಾತಕವೆಂದು ಹೇಳಲಾಗುತ್ತದೆ.
  • 25 ರಿಂದ 32 ಗುಣಗಳು ಹೊಂದಾಣಿಕೆಯಾದರೆ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಇದರಿಂದ ವೈವಾಹಿಕ ಜೀವನ ಉತ್ತಮವಾಗಿರುತ್ತದೆ ಎಂದು ನಿರ್ಧರಿತವಾಗುತ್ತದೆ
  • 32ರಿಂದ 36 ಗುಣಗಳು ಹೊಂದಾಣಿಕೆಯಾದರೆ ಶ್ರೇಷ್ಠ ಹೊಂದಾಣಿಕೆ ಆಗಿರುತ್ತದೆ. ಅಷ್ಟೇ ಅಲ್ಲದೆ ವಿವಾಹಕ್ಕೆ ಅತ್ಯಂತ ಯೋಗ್ಯವಾದ ಜಾತಕ ಇದು ಎಂದು ಹೇಳಲಾಗುತ್ತದೆ.

ಇದನ್ನು ಓದಿ: ಮಂಗಳವಾರದ ಈ ಆರಾಧನೆಗಳಿಂದ ನಿಮಗೆ ಎಲ್ಲವೂ ಪ್ಲಸ್..!

  • 36 ಗುಣಗಳು ಹೊಂದಾಣಿಕೆಯಾದರೆ ಶಾಸ್ತ್ರದಲ್ಲಿ ಉತ್ತಮವೆಂದು ಹೇಳಲಾಗುತ್ತದೆ. ಆದರೆ, ವಿಪರೀತವೆಂಬಂತೆ ಶ್ರೀರಾಮ –ಸೀತೆ ಮಾತೆಯ ಜಾತಕ ಹೊಂದಾಣಿಕೆಯಲ್ಲಿ 36 ಗುಣಗಳು ಕೂಡಿಬಂದರೂ ಅವರ ವೈವಾಹಿಕ ಜೀವನ ಸುಖದಿಂದ ಕೂಡಿರಲಿಲ್ಲ. ಹಾಗಾಗಿ 36 ಗುಣಗಳು ಕೂಡಿಬಂದರೆ ಅದು ಉತ್ತಮ ವೈವಾಹಿಕ ಜೀವನವನ್ನು ಕಾಣುತ್ತದೆ ಎಂದು ಹೇಳಲಾಗುವುದಿಲ್ಲ. ಅಷ್ಟೇ ಅಲ್ಲದೆ ಒಟ್ಟು 36 ಗುಣಗಳು ಕೂಡಿ ಬರುವ ಸಾಧ್ಯತೆ ಕಡಿಮೆ.
  • ಗುಣಗಳನ್ನು ಹೊಂದಿಸುವ ಮೂಲಕ ಹುಡುಗ –ಹುಡುಗಿಯ ಸ್ವಭಾವಗಳನ್ನು ಹೊಂದಾಣಿಕೆಯನ್ನು ನೋಡಲಾಗುತ್ತದೆ. ಜಾತಕದ ಹೊಂದಾಣಿಕೆಯ ಆಧಾರದ ಮೇಲೆ ವಿವಾಹಕ್ಕೆ ಯೋಗ್ಯವೆಂದು ತಿಳಿಯಲಾಗುತ್ತದೆ. ಎಷ್ಟು ಗುಣಗಳು ಹೊಂದಾಣಿಕೆಯಾಗುತ್ತವೆ ಎಂಬ ವಿಚಾರವನ್ನು ಗಮನಿಸಿ, ವಿವಾಹವಾದ ನಂತರ ಹುಡುಗ – ಹುಡುಗಿ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಜೀವನ ನಡೆಸುತ್ತಾರೆ ಅಥವಾ ಇಲ್ಲ ಎಂಬ ಬಗ್ಗೆ ತಿಳಿಯುತ್ತದೆ.


ಇದನ್ನು ಓದಿ: ಅಡುಗೆ ಮನೆಯ ಈ ವಾಸ್ತುವಿನಲ್ಲಿದೆ ಆರೋಗ್ಯದ ಗುಟ್ಟು...!!

ಜಾತಕದಲ್ಲಿ ಕುಜ ದೋಷವಿದ್ದರೆ: 

ಹುಡುಗ ಅಥವಾ ಹುಡುಗಿಯ ಜಾತಕದ ಮೊದಲನೆ, ನಾಲ್ಕನೇ, ಏಳನೇ, ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ ಅದಕ್ಕೆ ಮಂಗಳ ದೋಷ ಅಥವಾ ಕುಜದೋಷವೆಂದು ಕರೆಯುತ್ತಾರೆ. ಜಾತಕ ಹೊಂದಾಣಿಕೆಯ ಸಂದರ್ಭದಲ್ಲಿ ಹುಡುಗ ಅಥವಾ ಹುಡುಗಿಗೆ ಕುಜ ದೋಷವಿದ್ದರೆ ಅದರ ಹೊಂದಾಣಿಕೆಯಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಮಂಗಳ ದೋಷವಿರುವ ವ್ಯಕ್ತಿಯನ್ನು ಮಂಗಳ ದೋಷವಿರುವ ಜಾತಕದೊಂದಿಗೆ ವಿವಾಹ ಮಾಡಿದರೆ ಆಗ ದೋಷವಿರುವುದಿಲ್ಲವೆಂದು ಹೇಳಲಾಗುತ್ತದೆ. ಒಬ್ಬರ ಜಾತಕದಲ್ಲಿ ಕುಜ ದೋಷವಿದ್ದು ವಿವಾಹಕ್ಕೆ ಹೊಂದಾಣಿಕೆ ಮಾಡುವ ಸಂದರ್ಭದಲ್ಲಿ ಅರ್ಹ ಜ್ಯೋತಿಷಿಗಳ ಸಲಹೆ ಪಡೆದು ಮುಂದುವರಿಯುವುದು ಅಗತ್ಯ. 

click me!