ನಿಮ್ಮ ರಾಶಿಗೆ ಯಾವ ದಿನ ಶುಭ ಗೊತ್ತಾ..?

By Suvarna NewsFirst Published Jul 19, 2021, 9:10 PM IST
Highlights

ಕೆಲವೊಬ್ಬರು ಕೆಲವೊಂದು ವಾರ ಬಹಳ ಇಷ್ಟ, ಲಕ್ಕಿ. ಅವರು ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವುದಿದ್ದರೂ ಆ ವಾರದ ದಿನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾರಣ, ಅವರು ಆ ವಾರದ ದಿನದಂದು ಪ್ರಾರಂಭಿಸಿದ ಕೆಲಸ ಬಹಳ ಯಶಸ್ಸನ್ನು ಸಾಧಿಸಿರುತ್ತಾರೆ. ಆದರೆ, ವಾರದ ದಿನದ ರಹಸ್ಯ ರಾಶಿಯನುಸಾರವೂ ಇದೆ ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಹಾಗಾದರೆ ಯಾವ ರಾಶಿಯವರಿಗೆ ವಾರದ ಯಾವ ದಿನ ಶುಭಕರ ಎಂಬ ಬಗ್ಗೆ ನೋಡೋಣ ಬನ್ನಿ…

ಒಬ್ಬೊಬ್ಬರಿಗೆ ಒಂದೊಂದು ದಿನ ಬಹಳ ಲಕ್ಕಿಯಾಗಿರುತ್ತದೆ. ಮತ್ತೆ ಕೆಲವು ದಿನ ತುಂಬಾ ಸಮಸ್ಯೆಗಳೇ ಬರುತ್ತವೆ. ಅಂದರೆ ಶುಭ ತರುವ ವಾರದ ದಿನವಾದರೆ ಒಳ್ಳೆಯದು, ಅದೇ ಕೆಲವೊಂದು ಕೆಲಸಗಳಿಗೆ ಕೆಲವೊಂದು ವಾರದ ದಿನಗಳು ಶುಭಕರವಾಗಿರುವುದಿಲ್ಲ. ಆದರೆ, ಹೀಗೆ ಆಗುವುದಕ್ಕೂ ಇದೆ ಕಾರಣ. 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂಥ ಶುಭ ವಾರದ ದಿನ, ಅಶುಭ ವಾರದ ದಿನಕ್ಕೆ ನಿಮ್ಮ ರಾಶಿಯೂ ಕಾರಣ ಇರಬಹುದು. ಕೆಲವೊಂದು ರಾಶಿ ನಕ್ಷತ್ರಕ್ಕೆ ಒಂದೊಂದು ದಿನ ಶುಭಕರವಾಗಿದ್ದರೆ, ಮತ್ತೆ ಕೆಲವು ವಾರದ ದಿನ ಅಶುಭವಾಗಿರುತ್ತದೆ.
 
ಪ್ರತಿ ರಾಶಿಗೂ ಒಂದೊಂದು ಅಧಿಪತಿ ಗ್ರಹ ಇರುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ ಜೀವನದ ಬಗ್ಗೆ ತಿಳಿದುಕೊಳ್ಳಬಹುದು. ಹಾಗಾಗಿ ರಾಶಿಯ ಆಧಾರದ ಮೇಲೆ ನಿಮಗೆ ಯಾವ ದಿನ ಸಫಲತೆಯನ್ನು ತಂದುಕೊಡಲಿದೆ ಎಂಬುದರ ಬಗ್ಗೆ ತಿಳಿಯೋಣ…

ಮೇಷ ರಾಶಿ
ಮೇಷ ರಾಶಿಯ ಅಧಿಪತಿ ಗ್ರಹ ಮಂಗಳ ಆಗಿದೆ. ಮಂಗಳ ಗ್ರಹ ಪರಾಕ್ರಮ ಮತ್ತು ಉತ್ಸಾಹದ ಕಾರಕ ಗ್ರಹವಾಗಿದೆ. ಹೀಗಾಗಿ ಈ ರಾಶಿಯವರು ಸಾಹಸ ಪ್ರವೃತ್ತಿಯನ್ನು ಉಳ್ಳವರಾಗಿರುವುದಲ್ಲದೆ, ಅತಿ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಇವರಿಗೆ ಮಂಗಳವಾರ ಎಲ್ಲಕ್ಕಿಂತ ಶುಭ ಎಂದು ಹೇಳಲಾಗುತ್ತದೆ. ಮಹತ್ವಪೂರ್ಣವಾದ ಯಾವುದಾದರೂ ಕಾರ್ಯಗಳನ್ನು ಮಾಡಬೇಕೆಂದಿದ್ದರೆ ಈ ರಾಶಿಯವರು ಮಂಗಳವಾರ ಮಾಡಿದರೆ ಯಶಸ್ಸು ಸಿಗುವ ಸಂಭವ ಹೆಚ್ಚು. 

ಇದನ್ನು ಓದಿ: ಮಂಗಳವಾರದ ಈ ಆರಾಧನೆಗಳಿಂದ ನಿಮಗೆ ಎಲ್ಲವೂ ಪ್ಲಸ್..!

ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರವಾಗಿದೆ. ಈ ರಾಶಿಯ ವ್ಯಕ್ತಿಗಳು ಹಠವಾದಿಗಳಾಗಿದ್ದಾರೆ. ಇದೇ ವೇಳೆ ಅವರಿಗೆ ಅಷ್ಟೇ ತಾಳ್ಮೆ ಸಹ ಇರುತ್ತದೆ. ಇವರು ಇಂಥ ಕೆಲಸವನ್ನು ಮಾಡಬೇಕೆಂದುಕೊಂಡರೆ ಅದನ್ನು ಮಾಡದೇ ಬಿಡಲಾರರು. ಬುಧವಾರ ಮತ್ತು ಶುಕ್ರವಾರ ಇವರಿಗೆ ಅದೃಷ್ಟದ ದಿನವಾಗಲಿದೆ. 


ಮಿಥುನ ರಾಶಿ
ಈ ರಾಶಿಯ ಅಧಿಪತಿ ಗ್ರಹ ಬುಧವಾಗಿದ್ದು, ಇವರಿಗೆ ಗ್ರಹಣ ಶಕ್ತಿ ಉತ್ತಮವಾಗಿರುತ್ತದೆ. ತಮ್ಮ ಮಾತಿನಿಂದ ಯಾರನ್ನು ಬೇಕಿದ್ದರೂ ಮನವೊಲಿಸುವ ಶಕ್ತಿಯನ್ನು ಹೊಂದಿದ್ದಾರೆ. ಬುಧವಾರ ಇವರಿಗೆ ಶುಭದಿನವಾಗಿದೆ.

ಕರ್ಕಾಟಕ ರಾಶಿ
ಇವರಿಗೆ ಚಂದ್ರ ಅಧಿಪತಿ ಗ್ರಹವಾಗಿದ್ದಾನೆ. ಈ ರಾಶಿಯ ವ್ಯಕ್ತಿಗಳು ಶಾಂತ ಹಾಗೂ ಸೌಮ್ಯ ಸ್ವಭಾವವನ್ನು ಹೊಂದಿರುತ್ತಾರೆ. ಇವರ ಕಲ್ಪನಾ ಶಕ್ತಿ ಹೆಚ್ಚಿರುತ್ತದೆ. ಸೋಮವಾರ ಇವರಿಗೆ ಶುಭದಿನ ಆಗಿರುತ್ತದೆ. 

ಸಿಂಹ ರಾಶಿ
ಸೂರ್ಯ ಅಧಿಪತಿ ಗ್ರಹವಾಗಿದ್ದಾನೆ. ಈ ರಾಶಿಯ ವ್ಯಕ್ತಿಗಳು ಬಹಳ ಬುದ್ಧಿವಂತರು ಹಾಗೂ ಸಾಹಸ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಮುಂದಾಳತ್ವ ವಹಿಸಿಕೊಳ್ಳುವ ಕ್ಷಮತೆಯನ್ನು ಹೊಂದಿರುವ ಇವರಿಗೆ ಶುಭ ದಿನ ಭಾನುವಾರ.

ಇದನ್ನು ಓದಿ: ಅಡುಗೆ ಮನೆಯ ಈ ವಾಸ್ತುವಿನಲ್ಲಿದೆ ಆರೋಗ್ಯದ ಗುಟ್ಟು...!!

ಕನ್ಯಾ ರಾಶಿ
ಈ ರಾಶಿಯ ವ್ಯಕ್ತಿಗಳು ಬಹಳ ಭಾವುಕ ಜೀವಿಗಳು. ಅಲ್ಲದೆ, ಇವರು ಪರಿಪೂರ್ಣರು ಎಂದು ಎಲ್ಲರಿಂದಲೂ ಹೇಳಿಸಿಕೊಳ್ಳುತ್ತಾರೆ. ಅಧಿಪತಿ ಗ್ರಹವು ಬುಧವಾಗಿದ್ದರಿಂದ ಬುಧವಾರ ಇವರಿಗೆ ಶುಭಕರ ದಿನವಾಗಿದೆ. 

ತುಲಾ ರಾಶಿ
ಈ ರಾಶಿಗೆ ಶುಕ್ರವು ಅಧಿಪತಿ ಗ್ರಹವಾಗಿದೆ. ಜೀವನದಲ್ಲಿ ಸುಖ-ಸಮೃದ್ಧಿಯನ್ನು ಹೊಂದಲು ಬಹಳ ಶ್ರಮವಹಿಸುವ ಇವರು, ಅದರಲ್ಲಿ ಯಶಸ್ಸನ್ನೂ ಗಳಿಸುವರು. ಈ ರಾಶಿಯವರಿಗೆ ಶುಕ್ರವಾರ ಶುಭ ದಿನವಾಗಿದೆ. 

ವೃಶ್ಚಿಕ ರಾಶಿ
ಮಂಗಳ ಅಧಿಪತಿ ಗ್ರಹವಾಗಿದೆ. ಇವರು ತುಂಬಾ ಬುದ್ಧಿವಂತರು ಹಾಗೂ ಚತುರರು. ಇವರು ವ್ಯಕ್ತಿತ್ವ ಆಕರ್ಷಕವಾಗಿರುತ್ತದೆ. ಮಂಗಳವಾರಕ್ಕಿಂತ ಇವರಿಗೆ ಉತ್ತಮ ದಿನ ಬೇರೆ ಇಲ್ಲ.

ಧನು ರಾಶಿ
ಧನು ರಾಶಿಗೆ ಅಧಿಪತಿ ಗ್ರಹ ಗುರುವಾಗಿದ್ದಾನೆ. ಇವರು ಹೋದ ಕಡೆ ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ. ಇವರಿಗೆ ಗುರುವಾರ ಶುಭ ದಿನವಾಗಿದ್ದು, ಈ ದಿನ ಮಾಡಿದ ಕಾರ್ಯಗಳಿಗೆಲ್ಲ ಯಶಸ್ಸು ಲಭ್ಯವಾಗುತ್ತದೆ. 

ಮಕರ ರಾಶಿ
ಈ ರಾಶಿಯವರಿಗೆ ಶನಿ ದೇವ ಅಧಿಪತಿ ಗ್ರಹವಾಗಿದ್ದಾನೆ. ಪರಿಶ್ರಮಿಗಳಾಗಿರುವ ಇವರಿಗೆ ಜೀವನದಲ್ಲಿ ಅನೇಕ ಸಂಘರ್ಷಗಳು ಎದುರಾಗುತ್ತವೆ. ಆದರೆ, ಅವುಗಳನ್ನು ಮೆಟ್ಟಿ ನಿಂತು ಸಫಲತೆಯನ್ನು ಸಹಕಾಣುತ್ತಾರೆ. ಈ ರಾಶಿಯವರಿಗೆ ಶನಿವಾರ ಶುಭ ದಿನವಾಗಿದೆ.

ಕುಂಭ ರಾಶಿ
ಈ ರಾಶಿಯವರಿಗೆ ಶನಿ ಅಧಿಪತಿ ಗ್ರಹವಾಗಿದೆ. ಜೀವನದಲ್ಲಿ ಎಂಥದ್ದೇ ಕಠಿಣ ಪರಿಸ್ಥಿತಿಗಳು ಎದುರಾದರೂ ಅದಕ್ಕೆ ಹೆದರದೇ ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಹೊಂದಿದ್ದಾರೆ. ಈ ರಾಶಿಯವರಿಗೆ ಶನಿವಾರ ಅತ್ಯಂತ ಅದೃಷ್ಟದ ದಿನವಾಗಿದೆ. 

ಇದನ್ನು ಓದಿ: ಈ ತಾರೀಖಿನಲ್ಲಿ ಜನಿಸಿದವರು ಹೆಚ್ಚು ಭಾಗ್ಯವಂತರು..!

ಮೀನ ರಾಶಿ
ಈ ರಾಶಿಯವರಿಗೆ ಗರು ಅಧಿಪತಿ ಗ್ರಹವಾಗಿದ್ದು, ಗುರುವಾರ ಶುಭ ದಿನವಾಗಿದೆ. ಈ ದಿನ ಕೈಗೊಳ್ಳುವ ಕಾರ್ಯಗಳು ಇವರಿಗೆ ಶುಭ ಫಲವನ್ನು ತಂದುಕೊಡಲಿದೆ.

click me!