ಮಹಾಭಾರತದಲ್ಲಿ ಬರುವ ಮಹಿಮಾವತಾರಿ, ಯುಗಪುರುಷ, ಮಹಾವಿಷ್ಣುವಿನ ಅವತಾರವಾದ ಶ್ರೀಕೃಷ್ಣನಿಗೂ ಶಾಪವಿತ್ತು ಎಂಬುದು ನಿಮಗೆ ಗೊತ್ತಿದೆಯೇ? ಆ ಕತೆ ಹೀಗಿದೆ.
ಮಹಾಭಾರತದಲ್ಲಿ (Mahabharath) ಪಾಂಡವರಿಗೂ (Pandava) ಕೌರವರಿಗೂ ಘನಘೋರ ಯುದ್ಧವಾಗುತ್ತದೆ. ಯುದ್ಧದಲ್ಲಿ ಕೌರವರೆಲ್ಲಾ ನಾಶವಾಗುತ್ತಾರೆ. ತದನಂತರ ಯುಧಿಷ್ಠಿರ ತನ್ನ ತಮ್ಮಂದಿರನ್ನೂ ಶ್ರೀಕೃಷ್ಣನನ್ನೂ (Sri Krishna) ಕರೆದುಕೊಂಡು ಹಸ್ತಿನಾಪುರದ (Hasthinapur) ಅರಮನೆಗೆ ಹೋಗುತ್ತಾನೆ. ತಮ್ಮ ಮಕ್ಕಳನ್ನೆಲ್ಲ ಕೊಂದು ಹಾಕಿದ್ದಕ್ಕಾಗಿ ಧೃತರಾಷ್ಟ್ರ ಹಾಗೂ ಗಾಂಧಾರಿಯರಿಗೆ (Gandhari) ಪಾಂಡವರ ಮೇಲೂ ಶ್ರೀಕೃಷ್ಣನ ಮೇಲೂ ತುಂಬಾ ಸಿಟ್ಟಿರುತ್ತದೆ. ಅದರಲ್ಲೂ ಧೃತರಾಷ್ಟ್ರನಿಗೆ ಭೀಮನ (Bhima) ಮೇಲೆ ತುಂಬಾ ಕ್ರೋಧ. ಯಾಕೆಂದರೆ ದುರ್ಯೋಧನ, ದುಶ್ಶಾಸನ ಸೇರಿಂದತೆ ನೂರು ಕೌರವರನ್ನೂ ಕೊಂದವನು ಅವನೇ. ಅವನು ಯುಧಿಷ್ಠಿರನ ಮುಂದೆ, "ಭೀಮನನ್ನು ನನ್ನ ಮುಂದೆ ಕಳುಹಿಸು'' ಎಂದು ಹೇಳುತ್ತಾನೆ. ಅಪಾಯ ಅರಿತ ಶ್ರೀಕೃಷ್ಣ, ಭೀಮನ ಮೂರ್ತಿಯೊಂದನ್ನು ಧೃತರಾಷ್ಟ್ರನ ಮುಂದೆ ತಳ್ಳಿಬಿಡುತ್ತಾನೆ. ಸಾವಿರ ಆನೆಗಳ ಬಲ ಹೊಂದಿರುವ ಧೃತರಾಷ್ಟ್ರ ಆ ಮೂರ್ತಿಯನ್ನು ಭೀಮನೆಂದೇ ತಿಳಿದು ಅಪ್ಪಿಕೊಂಡು ಹಿಸುಕಿಬಿಡುತ್ತಾನೆ. ಮೂರ್ತಿ ಪುಡಿಪುಡಿಯಾಗುತ್ತದೆ. ಧೃತರಾಷ್ಟ್ರನಿಗೆ ತನ್ನ ಕೋಪಕ್ಕೆ ತನಗೇ ನಾಚಿಕೆಯಾಗುತ್ತದೆ.
Energy Centers: ನಾವೇಕೆ ಪ್ರತಿ ದಿನ ದೇವಸ್ಥಾನಕ್ಕೆ ಭೇಟಿ ನೀಡಬೇಕು?
undefined
ನಂತರ ಶ್ರೀಕೃಷ್ಣ ಗಾಂಧಾರಿಯಿದ್ದಲ್ಲಿಗೆ ಹೋಗುತ್ತಾನೆ. ಶ್ರೀಕೃಷ್ಣ ಮನಸ್ಸು ಮಾಡಿದ್ದರೆ ಯುದ್ಧವನ್ನು ತಪ್ಪಿಸಿ ಮಕ್ಕಳನ್ನು ಉಳಿಸಬಹುದಿತ್ತು. ಆದರೆ ಇವನು ವಂಶದ ನಾಶಕ್ಕೆ ಕಾರಣನಾದ ಎಂದು ಗಾಂಧಾರಿಗೆ ಅವನ ಮೇಲೆ ಸಿಟ್ಟು. ಸಿಟ್ಟಿನಿಂದ ಕೃಷ್ಣನಿಗೆ ಶಾಪ ಕೊಡುತ್ತಾಳೆ- "ಕೃಷ್ಣ, ಹೇಗೆ ನನ್ನ ಕಣ್ಣ ಮುಂದೆಯೇ ನನ್ನ ಮಕ್ಕಳು ನಾಶವಾಗುವುದನ್ನು ನಾನು ಕಂಡೆನೋ, ಅದೇ ರೀತಿ ನಿನ್ನ ಮಕ್ಕಳು ದಾಯಾದಿಗಳು ವಂಶದವರೆಲ್ಲಾ ನಿನ್ನ ಕಣ್ಣ ಮುಂದೆಯೇ ಹೊಡೆದಾಡಿಕೊಂಡು ನಾಶವಾಗಿ ಹೋಗಲಿ,'' ಎಂದು ಶಾಪ ಕೊಡುತ್ತಾಳೆ. ಶ್ರೀಕೃಷ್ಣ ನಸುನಕ್ಕು "ಹಾಗೆಯೇ ಆಗಲಿ, ಅಮ್ಮ. ನಿನ್ನ ಶಾಪ ನಿಜವಾಗಲಿ'' ಎಂದುಬಿಡುತ್ತಾನೆ. ಆಡಿದ ಬಳಿಕ ನಾಲಿಗೆ ಕಚ್ಚಿಕೊಳ್ಳುತ್ತಾಳೆ ಗಾಂಧಾರಿ. ಹಾಗಾಗದಿರಲಿ ಎಂದು ಅಂದುಕೊಳ್ಳುತ್ತಾಳೆ. ಆದರೆ ಹಾಗೆಯೇ ಆಗಲೆಂದು ಕೃಷ್ಣ ಸಂಕಲ್ಪಿಸಿರುತ್ತಾನೆ. ಮುಂದೆ ಶ್ರೀಕೃಷ್ಣನ ಕಣ್ಣ ಮುಂದೆಯೇ ಯಾದವರೆಲ್ಲಾ ಹೊಡೆದಾಡಿ ನಾಶ ಹೊಂದುತ್ತಾರೆ.
ಶ್ರೀಕೃಷ್ಣನಿಗೆ ಇದ್ದ ಎರಡನೇ ಶಾಪ ದುರ್ವಾಸ ಮುನಿಗಳದು. ಒಮ್ಮೆ ಅವರು ದ್ವಾರಕೆಗೆ ಬರುತ್ತಾರೆ, ದುರ್ವಾಸರು ಯಾರಲ್ಲಿಗೆ ಬಂದರೋ ಅವರು ದುರ್ವಾಸರು ಕೇಳಿದಂಥ ಆತಿಥ್ಯವನ್ನು ಒದಗಿಸಬೇಕು. ಇಲ್ಲವಾದರೆ ದುರ್ವಾಸರು ಶಾಪ ಕೊಡುತ್ತಾರೆ. ಅವರು ತಮ್ಮ ಕೋಪಕ್ಕೇ ಕುಖ್ಯಾತರು. ಹೀಗೆ ದ್ವಾರಕೆಗೆ ಬಂದ ಅವರು ರುಕ್ಮಿಣಿಗೆ ಅಡುಗೆ ಮಾಡುಬೇಕೆಂದೂ, ನಂತರ ತಾನು ಬಾಳೆಯೆಲೆಯ ಮೇಲೆ ಊಟ ಮಾಡುವೆನೆಂದೂ, ನಂತರ ಶ್ರೀಕೃಷ್ಣ ರುಕ್ಮಿಣಿಯರು ತಾನು ಉಂಡು ಬಿಟ್ಟ ಬಾಳೆಯೆಲೆಯ ಮೇಲೆ ಮೈಯೆಲ್ಲವೂ ಎಂಜಲಾಗುವಂತೆ ಉರುಳಾಡಬೇಕು ಎಂದೂ ಆಜ್ಞಾಪಿಸುತ್ತಾರೆ. ಶ್ರೀಕೃಷ್ಣ ಒಪ್ಪುತ್ತಾನೆ.
Astro Tips: ದಾಂಪತ್ಯದಲ್ಲಿ ಪ್ರತಿ ದಿನ ಜಗಳ, ಮುನಿಸು ಉಂಟಾಗ್ತಿದ್ಯಾ? ಹೀಗೆ ಮಾಡಿ ನೋಡಿ..
ದುರ್ವಾಸರ ಊಟವಾದ ಬಳಿಕ ಕೃಷ್ಣ ಮತ್ತು ರುಕ್ಮಿಣಿ ಅವರ ಬಾಳೆಯೆಲೆಯ ಮೇಲೆ ಮೈಯೆಲ್ಲ ಎಂಜಲಾಗುವಂತೆ ಹೊರಳಾಡುತ್ತಾರೆ. ಉರುಳಾಡಿ ಎದ್ದ ಮೇಲೆ ದುರ್ವಾಸರು ಅವರನ್ನು ದಿಟ್ಟಿಸಿ ನೋಡುತ್ತಾರೆ. ರುಕ್ಮಿಣಿಯ ಮೈಯೆಲ್ಲಾ ಎಂಜಲಾಗಿರುತ್ತದೆ. ಶ್ರೀಕೃಷ್ಣನ ಬಲಗಾಲಿನ ಹೆಬ್ಬೆರಳು ಹೊರತುಪಡಿಸಿ ಬೇರೆಲ್ಲಾ ಕಡೆ ಎಂಜಲಾಗಿರುತ್ತದೆ. ದುರ್ವಾಸರು ಸಿಟ್ಟಿಗೆದ್ದು, ''ನನ್ನ ಎಂಜಲೇ ನಿನಗೆ ವಜ್ರರಕ್ಷೆಯಾಗಿರಲಿ ಎಂದು ಬಯಸಿದ್ದೆ. ಆದರೆ ನೀನು ಹೆಬ್ಬೆರಳನ್ನು ಮಾತ್ರ ಎಂಜಲಾಗದಂತೆ ನೋಡಿಕೊಂಡು ನಿನ್ನ ಸಾವನ್ನು ನೀನೇ ತಂದುಕೊಂಡೆ. ನಿನ್ನ ಹೆಬ್ಬೆರಳಿನಿಂದಲೇ ನಿನಗೆ ಸಾವು ಬರಲಿ'' ಎಂದು ಶಪಿಸಿ ಹೋಗುತ್ತಾರೆ.
ಮುಂದೆ ಯಾದವರ ಕಲಹದಿಂದ ನೊಂದ ಶ್ರೀಕೃಷ್ಣ ಒಬ್ಬಂಟಿಯಾಗಿ ಕಾಡಿಗೆ ತೆರಳಿ ಮರದಡಿ ಕೂತಿದ್ದಾಗ, ದೂರದಿಂದ ಬೇಡನೊಬ್ಬ ಕೃಷ್ಣನ ಕಾಲಿನ ಹೆಬ್ಬೆರಳನ್ನೇ ಜಿಂಕೆಯ ಮೂತಿ ಎಂದು ಭ್ರಮಿಸಿ ಬಾಣ ಬಿಡುತ್ತಾನೆ. ಅದು ಕೃಷ್ಣನ ಕಾಲಿಗೆ ನಾಟಿಕೊಂಡು, ವಿಷದ ನಂಜೇರಿ ಕೃಷ್ಣ ಸಾಯುತ್ತಾನೆ. ಹೀಗೆ ಶ್ರೀಕೃಷ್ಣನಿಗೆ ದೊರೆತ ಎರಡು ಶಾಪಗಳೂ ನಿಜವಾಗುತ್ತವೆ.