ಕರ್ಪೂರದ ಘಮ ಮನಸ್ಸಿಗೆ ಹಿತ ತರುತ್ತದೆ. ಕರ್ಪೂರದ ಬಳಕೆಯಿಂದ ನಮ್ಮ ಸಮಸ್ಯೆಗಳನ್ನೂ ನಿವಾರಿಸಿಕೊಳ್ಳಬಹುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹೇಗೆ, ಏನು ನೋಡೋಣ..
ಹಿಂದೂಗಳ ಪೂಜೆಯಲ್ಲಿ ಕರ್ಪೂರ(Camphor)ಕ್ಕೆ ಪ್ರಮುಖ ಸ್ಥಾನವಿದೆ. ಆರತಿ ಮಾಡುವಾಗ ಕರ್ಪೂರವನ್ನು ಉರಿಸಲಾಗುತ್ತದೆ. ಕರ್ಪೂರದ ಸುಗಂಧ ಮನೆಯೆಲ್ಲ ತುಂಬುವಾಗ ದೈವಿಕ ಕಳೆ ತರುವುದಲ್ಲದೆ ಮನಸ್ಸಿಗೂ ಹಿತ ತರುತ್ತದೆ. ಏಕೆಂದರೆ ಈ ಮೂಲಕ ಮನೆಯ ನಕಾರಾತ್ಮಕ ಶಕ್ತಿ(negative energy)ಯನ್ನು ಅದು ಹೊರ ಕಳಿಸುತ್ತದೆ. ಈ ಕರ್ಪೂರವನ್ನು ಕೇವಲ ಪೂಜೆಯಲ್ಲಷ್ಟೇ ಅಲ್ಲ, ಔಷಧಿಯಾಗಿಯೂ ಬಳಸಲಾಗುತ್ತದೆ. ಕರ್ಪೂರದ ಗಿಡದಲ್ಲಿ ನೈಸರ್ಗಿಕವಾಗಿ ಔಷಧೀಯ ಗುಣಗಳಿವೆ. ಈ ಕಾರಣದಿಂದಾಗಿ, ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕಲು ಇದನ್ನು ಬಳಸಲಾಗುತ್ತದೆ. ಕರ್ಪೂರವು ತುರಿಕೆ, ಕೀಲು ನೋವು, ಮುಖದ ಮೇಲಿನ ಮೊಡವೆಗಳು ಮತ್ತು ಹಿಮ್ಮಡಿ ಬಿರುಕುಗಳಿಂದ ಪರಿಹಾರವನ್ನು ನೀಡುತ್ತದೆ. ಕೂದಲು ಉದುರುವಿಕೆ, ಕೂದಲನ್ನು ಬಲಪಡಿಸುವುದು ಮತ್ತು ತಲೆಹೊಟ್ಟು ಚಿಕಿತ್ಸೆಗಾಗಿ ಕರ್ಪೂರ ಬಳಸಲಾಗುತ್ತದೆ. ಈ ಕರ್ಪೂರಕ್ಕೆ ಜ್ಯೋತಿಷ್ಯ ಶಾಸ್ತ್ರ(astrology)ದಲ್ಲೂ ಪ್ರಾಮುಖ್ಯತೆ ಇದೆ. ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಕರ್ಪೂರವನ್ನು ಬಳಸಲಾಗುತ್ತದೆ.
ಹೌದು, ಮನೆಯ ಸಮಸ್ಯೆಗಳಿಗೆ, ಗಂಡ ಹೆಂಡತಿಯ ನಡುವಿನ ಮುಗಿಯದ ಕದನಗಳಿಗೆ, ನೆಗೆಟಿವ್ ಎನರ್ಜಿ ತೆಗೆದು ಹಾಕಲು- ಹೀಗೆ ಕರ್ಪೂರವನ್ನು ಸಾಕಷ್ಟು ಸಮಸ್ಯೆಗಳ ನಿವಾರಣೆಗೆ ಬಳಸಲು ಸಲಹೆ ನೀಡಲಾಗುತ್ತದೆ.
ಕರ್ಪೂರದ ಪರಿಹಾರಗಳು
ನಿಮ್ಮ ಜಾತಕ(horoscope)ದಲ್ಲಿ ಪಿತೃ ದೋಷವಿದ್ದರೆ ಅಥವಾ ಕಾಳಸರ್ಪ ದೋಷವಿದ್ದರೆ, ಆಗ ನೀವು ಪ್ರತಿ ಬೆಳಗ್ಗೆ ಹಾಗೂ ಸಂಜೆ ಕರ್ಪೂರವನ್ನು ತುಪ್ಪದಲ್ಲಿ ಅದ್ದಿ ಉರಿಸಬೇಕು. ಹೀಗೆ ಮಾಡುವುದರಿಂದ ಪಿತೃ ದೋಷ, ಕಾಳ ಸರ್ಪ ದೋಷ ಹೋಗುವುದಷ್ಟೇ ಅಲ್ಲ, ಮನೆಯ ನೆಗೆಟಿವ್ ಎನರ್ಜಿಯೂ ಹೋಗುತ್ತದೆ.
ಕೆಲವೊಮ್ಮೆ ನಾವೆಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರೂ ಅದಕ್ಕೆ ತಕ್ಕ ಫಲ ದೊರೆಯುತ್ತಿರುವುದಿಲ್ಲ. ಏಕೆಂದರೆ ಅದಕ್ಕೆ ಬೇಕಾದ ಅದೃಷ್ಟ ನಮ್ಮೊಂದಿಗೆ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಅದೃಷ್ಟವನ್ನು ಜೊತೆಗೆ ತಂದಿಟ್ಟುಕೊಳ್ಳಲು ಕರ್ಪೂರ ಸಹಾಯ ಮಾಡುತ್ತದೆ. ಹೌದು, ನಿಮ್ಮ ಅದೃಷ್ಟ ಹೆಚ್ಚಿಸಿಕೊಳ್ಳಲು ಪ್ರತಿ ಬೆಳಗ್ಗೆ ಕರ್ಪೂರದ ಎಣ್ಣೆಯ ಕೆಲ ಹನಿಗಳನ್ನು ನೀವು ಸ್ನಾನ ಮಾಡುವ ನೀರಿಗೆ ಹಾಕಿಕೊಂಡು ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಅದೃಷ್ಟ ಹೆಚ್ಚುತ್ತದೆ.
ಮನೆಯಲ್ಲಿ ನಕಾರಾತ್ಮಕತೆ ಮತ್ತು ಆತಂಕ ಹೆಚ್ಚಿದ್ದರೆ, ಆಗ ಅದು ಕುಟುಂಬ ಸದಸ್ಯರ ಜೀವನಶೈಲಿ(lifestyle)ಯ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಸಂತೋಷ ಹಾಗೂ ಶಾಂತಿ ಹೆಚ್ಚಿದ್ದಾಗ ಮನೆಯ ಸದಸ್ಯರ ಜೀವನಶೈಲಿಯೂ ಚೆನ್ನಾಗಿರುತ್ತದೆ. ಹೀಗಾಗಿ ಮನೆಯಲ್ಲಿ ಸಂತೋಷ, ಸಮೃದ್ಧಿಯನ್ನು ಹೆಚ್ಚಿಸಲು ಬೆಳಗ್ಗೆ ಹಾಗೂ ಸಂಜೆ ಪೂಜೆ ಮಾಡುವಾಗ ಕರ್ಪೂರ ಉರಿಸಬೇಕು. ಇದರಿಂದ ಮನೆಯಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ.
ಅಂತೆಯೇ, ತುಪ್ಪದಲ್ಲಿ ಅದ್ದಿದ ಕರ್ಪೂರವನ್ನು ಬೆಳಗ್ಗೆ ಹಾಗೂ ಸಂಜೆ ಉರಿಸುವುದರಿಂದ ಮನೆಯ ಸದಸ್ಯರ ಅಭಿವೃದ್ಧಿ ಹೆಚ್ಚುತ್ತದೆ. ನಿಮ್ಮ ಸಾಧನೆಯ ಹಾದಿಯಲ್ಲಿ ಬರುವ ಸಮಸ್ಯೆಗಳು ಕಡಿಮೆಯಾಗುತ್ತವೆ.
ಇನ್ನು ಸಮೃದ್ಧಿ ಹೆಚ್ಚಿಸಬೇಕೆಂದರೆ ಆಗ ಹೀಗೆ ಮಾಡಿ- ಕರ್ಪೂರದ ತುಂಡೊಂದನ್ನು ಗುಲಾಬಿ ಹೂವಿನೊಳಗೆ ಇಡಿ. ನಂತರ ಇದನ್ನು ತಾಯಿ ದುರ್ಗೆಯ ಎದುರಿಟ್ಟು ಆಕೆಗಾಗಿ ಬೆಳಗ್ಗೆ ಮತ್ತು ಸಂಜೆ ಹೂವಿನ ಜೊತೆ ಸುಟ್ಟು ನೋಡಿ. ಹೀಗೆ ಮಾಡುವುದರಿಂದ ಇದ್ದಕ್ಕಿದ್ದಂತೆ ಧನಲಾಭ ಹೆಚ್ಚುವುದು. 43 ದಿನಗಳ ಕಾಲ ನಿರಂತರವಾಗಿ ಹೀಗೆ ಮಾಡಿದರೆ, ಎಲ್ಲೋ ಸಿಕ್ಕಿಕೊಂಡು ಕೈಗೆ ಸಿಗದೆ ಆಟವಾಡಿಸುತ್ತಿರುವ ಹಣವು ಕೈಗೆ ಸಿಗುವುದು.
ರಾತ್ರಿಯಲ್ಲಿ, ಅಡುಗೆಮನೆಯ ಎಲ್ಲ ಕೆಲಸಗಳು ಮುಗಿದ ಬಳಿಕ, ಬೆಳ್ಳಿಯ ಬಟ್ಟಲಲ್ಲಿ ಕರ್ಪೂರ ಮತ್ತು ಲವಂಗವನ್ನು ಸುಡಿ. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಮತ್ತು ಕುಟುಂಬದಲ್ಲಿ ಎಂದಿಗೂ ಹಣದ ಕೊರತೆ ಕಾಣಿಸದು.
ಕರ್ಪೂರ ನೈಸರ್ಗಿಕ ಔಷಧವಾಗಿರುವುದರಿಂದ ಅದನ್ನು ಪ್ರತಿ ದಿನ ಮನೆಯಲ್ಲಿ ಉರಿಸುವುದರಿಂದ ಯಾವುದೇ ಅಡ್ಡ ಪರಿಣಾಮವಿರದು. ಬದಲಿಗೆ ಲಾಭವೇ ಹೆಚ್ಚಿರಲಿದೆ. ಹೀಗಾಗಿ ಕರ್ಪೂರ ಬಳಸಿ ನಿಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ.