Basava Jayanti 2022 ಯಾವಾಗ? ಆಚರಣೆ ಹೇಗೆ? ಮಹತ್ವವೇನು?

By Suvarna NewsFirst Published May 1, 2022, 3:50 PM IST
Highlights

ಬಸವೇಶ್ವರ ಜಯಂತಿಯು ಅಕ್ಷಯ ತೃತೀಯ ದಿನವಾದ ಮೇ 3ರಂದು ಆಚರಿಸ್ಪಡುತ್ತಿದೆ. ಈ ದಿನದ ಮಹತ್ವವೇನು, ಆಚರಣೆ ಹೇಗೆ ಎಲ್ಲವನ್ನೂ ನೋಡೋಣ.

ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯಾ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯಾ
ಕೂಡಲಸಂಗಮದೇವಾ ಕೇಳಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಹೀಗೆ ಮನುಕುಲಕ್ಕೆ ಮಹಾ ಸಂದೇಶ ನೀಡಿದ ಬಸವಣ್ಣ(basavanna)ನವರ ಜಯಂತಿ ಮೇ 3ರಂದು. ಕರ್ನಾಟಕ(Karnataka)ದಲ್ಲಿ ವೀರಶೈವ ಲಿಂಗಾಯತ ಸಮಾಜ ಈ ದಿನವನ್ನು ಅತ್ಯಂತ ದೊಡ್ಡದಾಗಿ ಆಚರಿಸುತ್ತದೆ. ಇದಲ್ಲದೆ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಕೆಲ ಭಾಗಗಳಲ್ಲಿಯೂ ಬಸವ ಜಯಂತಿ ಆಚರಣೆ ನಡೆಯುತ್ತದೆ.

ಹನ್ನೆರಡನೇ ಶತಮಾನದ ಬಹು ದೊಡ್ಡ ಸಮಾಜ ಸುಧಾರಕರು ಬಸವಣ್ಣನವರು. ಮೇಲು ಕೀಳು, ಜಾತಿ ಧರ್ಮ, ಮಡಿಮೈಲಿಗೆ ತುಂಬಿದ್ದ ಸಮಯದಲ್ಲಿ ನೊಂದವರ, ದೀನದಲಿತರ ಉದ್ಧಾರಕ್ಕೆ ನಿಂತವರು. ಕೆಳವರ್ಗದವರನ್ನು ಮೇಲ್ವರ್ಗದವರು ಅತ್ಯಂತ ಹೀನಾಯವಾಗಿ ಕಾಣುತಿದ್ದ ಆ ಅನ್ಯಾಯವನ್ನು ಹೋಗಲಾಡಿಸಲೆಂದೇ ಬಸವಣ್ಣನವರ ಕಲ್ಯಾಣದಲ್ಲಿ ಕ್ರಾಂತಿಯ ಬೀಜ ಬಿತ್ತಿದರು. ಬಿಜ್ಜಳನ ವಿರುದ್ಧ, ಅಂಧಶ್ರದ್ಧೆಯ ವಿರುದ್ಧ ಸಿಡಿದು ನಿಂತು ಅನುಭವ ಮಂಟಪ ನಿರ್ಮಿಸಿದರು. ಅದರಡಿ ಎಲ್ಲ ವರ್ಗದವರನ್ನೂ ಬರ ಮಾಡಿಕೊಂಡರು. ಕಾಯಕವೇ ಕೈಲಾಸ ಎಂದು ಸಾರಿ, ಪ್ರತಿಯೊಬ್ಬರಲ್ಲೂ ದುಡಿದು ತಿನ್ನುವ ಹುಮ್ಮಸ್ಸು ತುಂಬಿದರು. 'ವಸುದೈವ ಕುಟುಂಬಕಂ' ಎನ್ನುತ್ತಾ ಎಲ್ಲರಲ್ಲೂ ಸಹೋದರತ್ವದ ಸಂದೇಶ ಸಾರಿದರು. 

Latest Videos

Akshaya Tritiya 2022: ಈ ದಿನ ಶುಭಾತಿಶುಭವಾಗಲು ಕಾರಣ ಒಂದೆರಡಲ್ಲ..

ಮೂಢನಂಬಿಕೆ, ಮಡಿ ಮೈಲಿಗೆಯಿಂದ ತುಂಬಿದ್ದ ಸಮಾಜದ ನಡುವೆ ಬಸವಣ್ಣನವರ ವಚನಗಳು ಜೀವನವನ್ನು ಮತ್ತು ದೇವರನ್ನು ವಿಭಿನ್ನವಾಗಿ ನೋಡುವ ದೃಷ್ಟಿ ನೀಡಿದವು. ಜಾತಿರಹಿತ ಸಮಾಜದ ಕನಸನ್ನು ಕಂಡ ಬಸವಣ್ಣನವರು ಪ್ರತಿಯೊಬ್ಬರಿಗೂ ಜೀವನದಲ್ಲಿ ಏಳ್ಗೆ ಪಡೆಯಲು ಸಮಾನ ಅವಕಾಶ ಬೇಕೆಂದು ಬಯಸಿದರು. ತಮ್ಮೆಲ್ಲ ಈ ದೂರದೃಷ್ಟಿಯ ಸಮಾಜ ನಿರ್ಮಾಣಕ್ಕಾಗಿ 'ಅನುಭವ ಮಂಟಪ'ವನ್ನು ಹುಟ್ಟು ಹಾಕಿದರು. ಈ ಅನುಭವ ಮಂಟಪದಲ್ಲಿ ಲಿಂಗಾಯತ ಮತ ನಂಬಿಕೆಯ ತತ್ವಜ್ಞಾನಿಗಳನ್ನು ಕಲೆ ಹಾಕಿ ಮನುಷ್ಯನ ನೈತಿಕತೆ ಮತ್ತು ಆದರ್ಶಗಳ ಬಗ್ಗೆ ನಿರಂತರ ಚರ್ಚೆಗಳನ್ನು ಹುಟ್ಟು ಹಾಕಲಾಯಿತು. ಅಲ್ಲಮ ಪ್ರಭು ಸೇರಿದಂತೆ ಸಮಾಜದ ಕೆಳವರ್ಗ ಎನಿಸಿಕೊಂಡಿದ್ದ ಸಾಕಷ್ಟು ಜನರು ಶರಣರಾಗಿ ಈ ಅನುಭವ ಮಂಟಪ(Anubhava Mantapa)ದಿಂದ ಹೊರಬಂದರು. 

ಬಸವಣ್ಣ ಕೂಡಾ ಈ ಅನುಭವ ಮಂಟಪದಲ್ಲಿ ಅಭ್ಯರ್ಥಿಯಾಗಿ ಪಾಲು ವಹಿಸಿದರು. ಅಕ್ಕ ಮಹಾದೇವಿ, ಚನ್ನಬಸವಣ್ಣ ಇವರೆಲ್ಲರೂ ಅನುಭವ ಮಂಟಪದ ಮಹಾನ್ ಶರಣರು. 

ಈ ನಾಲ್ಕು ರಾಶಿಗಳ ಜನ ತಮ್ಮ ಆರೋಗ್ಯ ಲೆಕ್ಕಿಸದೆ ಇತರರನ್ನು ಕಾಳಜಿ ಮಾಡ್ತಾರೆ!

ಅಕ್ಷಯ ತೃತೀಯದಂದೇ ಆಚರಣೆ ಏಕೆ?
ಬಸವ ಜಯಂತಿಯಂದು ಕರ್ನಾಟಕದಲ್ಲಿ ಸಾರ್ವಜನಿಕ ರಜೆ ನೀಡಲಾಗುತ್ತದೆ. ಪ್ರತಿ ವರ್ಷವೂ ಅಕ್ಷಯ ತೃತೀಯ(Akshaya Tritiya)ದಂದೇ ಬಸವ ಜಯಂತಿ(Basava Jayanti)ಯೂ ಬರುತ್ತದೆ. ಆದರೆ, ಬಸವಣ್ಣನವರು ಯಾವಾಗ ಜನಿಸಿದರೆಂಬ ಉಲ್ಲೇಖ ಎಲ್ಲಿಯೂ ಇಲ್ಲ. ಆದರೂ ಅಕ್ಷಯ ತೃತೀಯದಂದೇ ಬಸವ ಜಯಂತಿ ಆಚರಿಸುವುದರ ಹಿನ್ನೆಲೆ ಇಲ್ಲಿದೆ. 
ಕರ್ನಾಟಕದ ಗಾಂಧಿಯಂದು ಪ್ರಸಿದ್ಧರಾದ ಹರ್ಡೇಕರ ಮಂಜಪ್ಪನವರು 1913ರಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿಯ ಆಚರಣೆ ಶುರು ಮಾಡಲು ನಿಶ್ಚಯಿಸಿದರು. ವೀರಶೈವ, ಲಿಂಗಾಯತ ಸಮಾಜದ ಸಂಘಟನೆಗಾಗಿ ಬಸವ ಜಯಂತಿ ಆಚರಿಸಲು ಹೊರಟ ಅವರಿಗೆ ಬಸವಣ್ಣ ಜನಿಸಿದ ದಿನಾಂಕ ತಿಳಿಯದಿರುವುದು ದೊಡ್ಡ ಗೊಂದಲವಾಯಿತು. ಆಗ ಮುರುಘಾಮಠದ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಕ್ಷಯ ತದಿಗೆಯಂದು ಬಸವ ಜಯಂತಿ ಆಚರಿಸಲು ತಿಳಿಸಿದರು. ಅಂದಿನಿಂದಲೂ ಅಕ್ಷಯ ತೃತೀಯದಂದು ಬಸವ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. 

ಈ ದಿನ ಎಲ್ಲ ಬಸವಣ್ಣನ ಬೆಂಬಲಿಗರು ಅವರ ಸಂದೇಶಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಸಮಾಜಕ್ಕೆ ಬಸವಣ್ಣನವರು ನೀಡಿದ ಕೊಡುಗೆಗಳನ್ನು ಸ್ಮರಿಸುತ್ತಾರೆ. ಜೊತೆಗೆ ಬಸವಣ್ಣನ ವಚನಗಳು ಎಲ್ಲೆಡೆ ಹರಿದಾಡುತ್ತವೆ. 
 

click me!