ಕಲಾವಾ ಎಂಬ ಶ್ರೀ ರಕ್ಷೆ, ಕೈಗೆ ಧರಿಸಿದರೆ ದುಷ್ಟ ಶಕ್ತಿಗಳೆಲ್ಲ ದೂರ ದೂರ

By Suvarna NewsFirst Published Mar 23, 2022, 11:10 AM IST
Highlights

ಶುಭ ಪೂಜೆಯ ಸಂದರ್ಭದಲ್ಲಿ ಕಲಾವಾ ದಾರ ಕೈಗೆ ಕಟ್ಟುವ ಸಂಪ್ರದಾಯವಿದೆ. ನೋಡಲು ಸಾಮಾನ್ಯದಂತೆ ಕಾಣುವ ಈ ಕೆಂಪು ಹಳದಿ ದಾರದಲ್ಲಿ ಅದೆಂಥಾ ಶಕ್ತಿ ಅಡಗಿದೆ ಗೊತ್ತೇ?

ಸರಸ್ವತಿಯ ಜ್ಞಾನ, ಲಕ್ಷ್ಮೀಯಿಂದ ಧನಸಂಪತ್ತಿನ ಕೃಪಾಕಟಾಕ್ಷ, ಮಹಾಕಾಳಿಯ ಶಕ್ತಿ- ಇವೆಲ್ಲವೂ ಸಿದ್ಧಿಸಬೇಕೆಂದರೆ ಇದಕ್ಕೊಂದು ಸುಲಭೋಪಾಯವಿದೆ. ಅದೇ ಕಲಾವಾ(Kalava) ಅಥವಾ ಮೌಲಿ ಎಂದು ಕರೆಯಲ್ಪಡುವ ಈ ಅರಿಶಿನ ಕುಂಕುಮ ಬಣ್ಣದ ದಾರ. 

ಹಿಂದೂ ಧರ್ಮದ ಆಚರಣೆಗಳಲ್ಲಿ, ಶುಭ ಸಮಾರಂಭಗಳಿರುವಾಗ ಇಲ್ಲವೇ, ಯಾವುದೋ ಸಮಸ್ಯೆ ತೋಡಿಕೊಂಡು ದೇವಾಲಯಕ್ಕೆ ಹೋದಾಗ ಕಲಾವಾ ಕಟ್ಟುವ ಪರಿಪಾಠವಿದೆ. ಮಂತ್ರಶಕ್ತಿಯ ಸಿದ್ಧಿ ಪಡೆದ ಈ ದಾರ ವ್ಯಕ್ತಿಗೆ ಭಯ, ಚಿಂತೆ, ಆತಂಕ ಮುಂತಾದ ವಿಷಯಗಳಿಂದ ಶ್ರೀ ರಕ್ಷೆ ನೀಡುತ್ತದೆ. ಅವಿವಾಹಿತರಿಗೆ ಬಲಗೈಯ ಮಣಿಕಟ್ಟಿಗೆ ಈ ದಾರವನ್ನು ಕಟ್ಟಲಾಗುತ್ತದೆ. ವಿವಾಹಿತ ಮಹಿಳೆಯಾದರೆ ಎಡಗೈ ಮಣಿಕಟ್ಟಿಗೆ ಕಟ್ಟಿಕೊಳ್ಳಬೇಕು. ಈ ಕಲಾವಾವು ವ್ಯಕ್ತಿಯನ್ನು ಕೆಟ್ಟ ದೃಷ್ಟಿ(evil eye), ನಕಾರಾತ್ಮಕ ಶಕ್ತಿ(negative energies)ಗಳಿಂದ ರಕ್ಷಿಸಲು ಶಕ್ತವಾಗಿದೆ. 

ಕಲಾವಾ ಕೈಗೆ ಕಟ್ಟುವುದರಿಂದ ಬ್ರಹ್ಮ, ವಿಷ್ಣು, ಮಹೇಶ್ವರರ ಆಶೀರ್ವಾದದ ಜೊತೆಗೆ, ಲಕ್ಷ್ಮೀ, ಸರಸ್ವತಿ ಹಾಗೂ ಪಾರ್ವತಿಯ ವಿಶೇಷ ಅನುಗ್ರಹವೂ ದೊರೆಯುತ್ತದೆ. ಕೆಂಪು ಬಣ್ಣದ ಕಲಾವಾ ಕಟ್ಟುವುದರಿಂದ ಮಂಗಳ ಗ್ರಹಕ್ಕೆ ಬಲ ತುಂಬಬಹುದಾಗಿದೆ. ಹಳದಿ ಬಣ್ಣದ ಕಲಾವಾವು ಗುರು ಗ್ರಹಕ್ಕೆ ಬಲ ತುಂಬುತ್ತದೆ. ಶನಿ(planet Saturn) ತೊಂದರೆ ಇದ್ದಾಗ ಕಪ್ಪು ಬಣ್ಣದ ಕಲಾವಾ ಕಟ್ಟಲಾಗುತ್ತದೆ. 

Solar Eclipse 2022: ನಿಮ್ಮ ರಾಶಿ ಮೇಲೆ ಏನು ಪರಿಣಾಮ ಬೀರಲಿದೆ?

ಕಾರಣ
ಕಲಾವಾ ಎಂಬುದು ರಕ್ಷಾ ಸೂತ್ರ. ನಂಬಿಕೆಗಳ ಪ್ರಕಾರ, ಬಹಳ ರೀತಿಯ ದೈವಿಕ ಶಕ್ತಿಗಳು ಈ ದಾರದಲ್ಲಿ ಅಡಗಿವೆ. ಈ ಕಲಾವಾ ಕಟ್ಟುವುದರ ಹಿಂದೊಂದು ಪುರಾಣ(Mythology)ದ ಕತೆ ಇದೆ. ವಿಷ್ಣುವು ವಾಮನ ಅವತಾರ ತಾಳಿ ಬಲಿ ಚಕ್ರವರ್ತಿಯ ಬಳಿ ಹೋಗಿ ಮೂರು ಹೆಜ್ಜೆ ಇಡುವಂಥ ಜಾಗ ಕೇಳುತ್ತಾನೆ. ದಾನ ಶೂರನೆನೆಸಿಕೊಂಡ ಬಲಿ(Bali) ಇದಕ್ಕೆ ಒಪ್ಪುತ್ತಾನೆ. ಆಗ ವಾಮನನು ದೊಡ್ಡದಾಗಿ ಬೆಳೆದು ಒಂದು ಹೆಜ್ಜೆಯನ್ನು ಇಡೀ ಆಕಾಶದ ಮೇಲಿಡುತ್ತಾನೆ. ಇನ್ನೊಂದು ಹೆಜ್ಜೆಯನ್ನು ಭೂಮಿಯ ಮೇಲಿಡುತ್ತಾನೆ. ಮೂರನೇ ಹೆಜ್ಜೆ ಎಲ್ಲಿಡಲಿ ಎಂದು ಕೇಳಿದಾಗ ತನ್ನ ತಲೆಯ ಮೇಲಿಡುವಂತೆ ಬಲಿ ಹೇಳುತ್ತಾನೆ. ಹೀಗೆ ಬಲಿಯ ತಲೆ ಮೇಲೆ ಕಾಲಿಟ್ಟಾಗ ಆತ ಪಾತಾಳ ಲೋಕಕ್ಕೆ ಇಳಿದು ಹೋಗುತ್ತಾನೆ. ಈಗ ಬಲಿಯು ವಿಷ್ಣು(Lord Vishnu)ವಿನಲ್ಲಿ ತನ್ನೊಂದಿಗೆ ಪಾತಾಳದಲ್ಲಿ ಇರುವಂತೆ ಕೋರುತ್ತಾನೆ. ಆತನ ದಾನಶೂರತೆ ಮೆಚ್ಚಿದ ವಿಷ್ಣುವು ಬಲಿಯ ಈ ಕೋರಿಕೆಗೆ ಒಪ್ಪುತ್ತಾನೆ. ಆದರೆ, ಇದರಿಂದ ಲಕ್ಷ್ಮೀ ದೇವಿಗೆ ಚಿಂತೆಯಾಗುತ್ತದೆ. ಪತಿ ಮನೆಗೆ ಮರಳುತ್ತಿಲ್ಲ ಎಂಬ ಆತಂಕದಿಂದ ಆತನನ್ನು ಕರೆತರಲು ಆಕೆ ಪಾತಾಳ ಲೋಕಕ್ಕೆ ಹೋಗಿ ಬಲಿಯೆದುರು ಕಣ್ಣೀರಿಡುತ್ತಾಳೆ. ಆಗ ಬಲಿಯು ತಾನು ಆಕೆಗೆ ಸಹೋದರ ಸಮಾನ ಎನ್ನಲು ಲಕ್ಷ್ಮಿಯು ಆತನ ರಕ್ಷಣೆಗಾಗಿ ಕೈಗೆ ಕಲಾವಾ ಕಟ್ಟುತ್ತಾಳೆ. ತನ್ನ ಸಹೋದರ ಯಾವತ್ತೂ ಹುಷಾರಾಗಿರಲಿ ಎಂದು ಹಾರೈಸುತ್ತಾಳೆ. ಇದರ ಬದಲಾಗಿ ತನ್ನ ಜೊತೆ ವಿಷ್ಣುವನ್ನು ಕಳಿಸಿಕೊಡುವಂತೆ ಕೋರುತ್ತಾಳೆ. ಅಂದಿನಿಂದ ಕಲಾವಾವನ್ನು ರಕ್ಷಾ ದಾರವಾಗಿ ಕಟ್ಟಲಾಗುತ್ತಿದೆ. 

ಹಿರಿಯರನ್ನು ಹೇಗೆ ಗೌರವಿಸಬೇಕು ಅಂಥ ಈ ರಾಶಿಯವರನ್ನು ನೋಡಿ ಕಲೀಬೇಕು!

ವೈಜ್ಞಾನಿಕ ಕಾರಣ(Scientific reason)
ವೈಜ್ಞಾನಿಕ ಕಾರಣಗಳನ್ನು ಹುಡುಕುವಾಗ ನಮ್ಮ ಮಣಿಕಟ್ಟಿನಲ್ಲಿ ದೇಹದ ಎಲ್ಲ ಅಂಗಗಳಿಗೆ ತಲುಪುವ ನರಗಳಿರುತ್ತವೆ. ಈ ಭಾಗಕ್ಕೆ ಕಲಾವಾ ಕಟ್ಟುವುದರಿಂದ ಈ ನರಗಳ ಮೇಲೆ ಪರಿಣಾಮವಾಗಿ ಬಿಪಿ, ಹೃದಯ ಸಂಬಂಧಿ ಕಾಯಿಲೆಗಳು, ಡಯಾಬಿಟೀಸ್, ಪ್ಯಾರಾಲಿಸಿಸ್ ಮುಂತಾದ ಆರೋಗ್ಯ ಸಮಸ್ಯೆಗಳಿಂದ ತಕ್ಕ ಮಟ್ಟಿಗೆ ರಕ್ಷಣೆ ಸಿಗುತ್ತದೆ. 

ಯಾವತ್ತು ಕಟ್ಟಬೇಕು?
ಶನಿವಾರ ಇಲ್ಲವೇ ಮಂಗಳವಾರದ ದಿನ ಕಲಾವಾ ಕಟ್ಟಿಕೊಳ್ಳಬೇಕು. ಒಮ್ಮೆ ಕಟ್ಟಿದ ಮೇಲೆ ಯಾವಾಗೆಂದರೆ ಆಗ ಕಳಚಿ ಎಲ್ಲೆಂದರಲ್ಲಿ ಬಿಸಾಡಬಾರದು. ಅದನ್ನು ಅರಳಿ ಮರದ ಬುಡದಲ್ಲಿಡಬೇಕು. 

click me!