Vijaya Dashami: ಸಿದ್ಧಿದಾತ್ರಿ ಪೂಜಿಸಿ, ಎಂಟು ದಿನಗಳ ಪೂಜೆಗೆ ಇಂದು ಫಲ

By Suvarna NewsFirst Published Oct 15, 2021, 2:12 PM IST
Highlights

ನವರಾತ್ರಿಯ ಕೊನೆಯ ತಾಯಿ ಗೌರಿಯ ಸ್ವರೂಪವಾದ ಸಿದ್ಧಿದಾತ್ರಿಯನ್ನು ಸ್ಮರಿಸಿ ಪ್ರಾರ್ಥಿಸುವುದರಿಂದ ಪುಣ್ಯಫಲ ಪ್ರಾಪ್ತಿ.
 

ನವರಾತ್ರಿಯ (Navratri) ವಿಜಯದಶಮಿಯಂದು (Vijayadashami) ತಾಯಿ ಸಿದ್ಧಿದಾತ್ರಿಗೆ ವಿಶೇಷ ಪೂಜೆ ಪುನಸ್ಕಾರಗಳು ಸಲ್ಲುತ್ತವೆ. ಆ ದಿನ ಸೌಮ್ಯ ಸ್ವಭಾವದ ಹೆಣ್ಣುಮಗಳು, ಮೃದುಭಾವದ ಗೌರಿ, ಮಹಿಷಾಸುರನನ್ನು ಮರ್ಧನ ಮಾಡಲು ತಾಯಿಯು ಚಾಮುಂಡೇಶ್ವರಿಯ (Chamundeshwari) ಅವತಾರ ಎತ್ತುತ್ತಾಳೆ. ಮಹಿಷನನ್ನು ಕೊಂದ ತಾಯಿಯನ್ನು ಇದೇ ಕಾರಣಕ್ಕೆ ಮಹಿಷಾಸುರ ಮರ್ದಿನಿ ಎಂದು ಕರೆಯಲಾಗುತ್ತದೆ.

ನವ ಎಂದರೆ ಒಂಬತ್ತು. ಈ ಒಂಭತ್ತು ರಾತ್ರಿಗಳು ತಾಯಿಯ ಒಂಬತ್ತು ಅವತಾರಗಳ ಬಿಂಬವಾಗಿವೆ. ತಾಯಿಯನ್ನು ನವದುರ್ಗೆ ಎಂದೂ ಕರೆಯಲಾಗುವುದು. ದೇವಿಯು ಒಂಬತ್ತು ಅವತಾರ ಎತ್ತಿ ದುಷ್ಟ ಶಕ್ತಿಯ ಸಂಹಾರ ಮಾಡುವುದೇ ಈ ಹಬ್ಬದ ವಿಶೇಷ. ಹಾಗೇ ನವ ಎಂದರೆ ಹೊಸದು ಎಂದೂ ಅರ್ಥ. ದೇವಿ ಪ್ರತಿಸಲ ದುಷ್ಟರನ್ನು ನಾಶ ಮಾಡುವುದಕ್ಕೂ ಹೊಸ ಹೊಸದಾಗಿ ಅವತಾರ ಎತ್ತುತ್ತಲೇ ಇರುತ್ತಾಳೆ. ಕತೆಗಳ ಪ್ರಕಾರ ತಾಯಿಯು ಮಹಿಷಾಸುರನನ್ನು ಮರ್ದನ ಮಾಡಿ ವಿಜಯ ಸಾಧಿಸುವ ಹಬ್ಬವೇ ವಿಜಯ ದಶಮಿ. ಒಂಬತ್ತು ದಿನಗಳ ಕಾಲ ಯುದ್ಧ ಮಾಡುವ ತಾಯಿಯು ಕೊನೆಯ ದಿನದಂದು ಮಹಿಷನನ್ನು ವಧಿಸುತ್ತಾಳೆ.

ಸಿದ್ಧಿದಾತ್ರಿಯ ಮಹತ್ವ
ಸಿದ್ಧಿ ಎಂದರೆ ಅಲೌಕಿಕ ಶಕ್ತಿ ಅಥವಾ ಸೃಷ್ಟಿ ಮತ್ತು ಅಸ್ತಿತ್ವದ ಅಂತಿಮ ಮೂಲದ ಅರ್ಥವನ್ನು ಸಾಧಿಸುವ ಸಾಮರ್ಥ್ಯ ಮತ್ತು ದಾತ್ರಿ ಎಂದರೆ ಕೊಡುವುದು. ಸಿದ್ಧಿದಾತ್ರಿಯ ಪೂಜೆಯಿಂದ ನಿಜವಾದ ಅಸ್ತಿತ್ವವನ್ನು ಅರಿತುಕೊಳ್ಳುವ ಶಕ್ತಿ ಪ್ರಾಪ್ತಿಯಾಗುತ್ತದೆ. ತಾಯಿಯ ಆರಾಧನೆಯು ನಮ್ಮ ಮನಸ್ಸಿನಲ್ಲಿರುವ ಅಜ್ಞಾನವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪುರಾಣದ ಪ್ರಕಾರ ಜಗತ್ತಿನ ಎಂಟು ಸಿದ್ಧಿಗಳೆಂದರೆ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವ. ನವದುರ್ಗೆಗಳಲ್ಲಿ ತಾಯಿ (Mother) ಸಿದ್ಧಿದಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನು ಹೊಂದಿದ್ದಾಳೆ.

ಇಂದು ವಿಜಯ ದಶಮಿ: ಏನಿದರ ಮಹತ್ವ..? ಇದರ ಹಿನ್ನಲೆ ಹೀಗಿದೆ

ತಾಯಿ ಸಿದ್ಧಿದಾತ್ರಿಯಿಂದ ಆಶೀರ್ವಾದ ಪಡೆದ ಶಿವನು ಆಕೆಯಿಂದ ಎಂಟು ಸಿದ್ಧಿಗಳನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಯ ವೇಳೆ ಶಿವನು ಆದಿ ಪರಾಕಾಷ್ಟೆಯನ್ನು ಆರಾಧಿಸಿದನು. ಎಷ್ಟೇ ಆರಾಧಿಸಿದರೂ ಶಕ್ತಿ ದೇವತೆಯು ಪ್ರತ್ಯಕ್ಷಳಾಗಲಿಲ್ಲ. ನಂತರ ಆಕೆಯು ಶಿವನ ಎಡ ಭಾಗದ ಅರ್ಧದಲ್ಲಿ ಕಾಣಿಸಿಕೊಂಡಳು. ಆಗಿನಿಂದ ಪರಶಿವನು ಅರ್ಧನಾರೀಶ್ವರ ಎನ್ನುವ ಇನ್ನೊಂದು ಹೆಸರಿನಿಂದ ಗುರುತಿಸಿಕೊಂಡನು ಎಂದು ಹೇಳಲಾಗುತ್ತದೆ.

ತಾಯಿ ಸಿದ್ಧಿದಾತ್ರಿಯು ಕೆಂಪು ಸೀರೆಯುಟ್ಟು ಸಿಂಹದ ಮೇಲೆ ಕುಳಿತಿರುತ್ತಾಳೆ. ಆಕೆಗೆ ನಾಲ್ಕು ಕೈಗಳಿವೆ. ಎಡ ಭಾಗದ ಒಂದು ಕೈನಲ್ಲಿ ಕಮಲ, ಮತ್ತೊಂದು ಕೈನಲ್ಲಿ ಶಂಖವಿದೆ. ಬಲಗೈನಲ್ಲಿ ಗದೆ ಮತ್ತು ಚಕ್ರವಿದೆ. ಆಕೆಯು ಕಮಲದ ಹೂವಿನ ಕಡೆಗೆ ನೋಡುತ್ತಿರುತ್ತಾಳೆ. ಸಿದ್ಧಿದಾತ್ರಿ ತನ್ನ ಭಕ್ತರ ಆರಾಧನೆಯಿಂದ ಖುಷಿಯಾಗಿ ಧರ್ಮ, ಅರ್ಥ, ಕರ್ಮ ಮತ್ತು ಮೋಕ್ಷ ಸಾಧನೆಗೆ ನೆರವಾಗುತ್ತಾಳೆ. ನವರಾತ್ರಿಯ ಒಂಬತ್ತನೇ ದಿನದಂದು ಭಕ್ತರು ತಮ್ಮ ಗಮನವನ್ನು ತಮ್ಮ ಭ್ರೂಮಧ್ಯದಲ್ಲಿರುವ ಸಹಸ್ರಾರ ಚಕ್ರದತ್ತ ಇಟ್ಟು ಸಾಧನೆ ಮಾಡಬೇಕು. ಹಾಗೆ ಮಾಡುವುದರಿಂದ, ತಾಯಿಯ ಕೃಪೆಯಿಂದ ಭಕ್ತರು (Devotees) ಶಕ್ತಿಯನ್ನು ಪಡೆಯುತ್ತಾರೆ.
 

ಇಂದು ಸಿದ್ಧಿದಾತ್ರಿ ತಾಯಿಗೆ ಸಂಪಿಗೆ ಹೂವು ಪ್ರಿಯವಾದುದರಿಂದ ಅದನ್ನು ಅರ್ಪಿಸಬೇಕು. ಸಿದ್ಧಿದಾತ್ರಿಗೆ ಹಸಿರು ಬಣ್ಣ ಇಷ್ಟವಾದುದರಿಂದ ಹಸಿರು ಸೀರೆಯ ಅಲಂಕಾರ ಮಾಡಬೇಕು.

ನವರಾತ್ರಿ ವೇಳೆ ದೇವಿ ಮೆಚ್ಚಿಸಲು ಏನು ಮಾಡಬೇಕು? ಏನು ಮಾಡಬಾರದು?

ಸಿದ್ಧಿದಾತ್ರಿ ಪೂಜಾ ಮಂತ್ರ

ಓಂ ದೇವಿ ಸಿದ್ಧಿಧಾತ್ರಿಯೈ ನಮಃ

ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ ಸೇವ್ಯಾಮಾನಾ

ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ ||

ಯಾ ದೇವಿ ಸರ್ವಭುತೇಶ್ವರ ಸಿದ್ಧಿಧಾತ್ರಿ ರೂಪನೇ ಸಂಹಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

click me!