ಕಾಂತಾರಾ ಎಫೆಕ್ಟ್?!; ಉತ್ತರ ಕರ್ನಾಟಕದಲ್ಲಿಯೂ ಶುರುವಾಯ್ತು ಕರಾವಳಿಯ ದೈವಾರಾಧನೆ!

By Suvarna NewsFirst Published Oct 18, 2022, 11:49 AM IST
Highlights

ಕನ್ನಡದ ಸೂಪರ್ ಡೂಪರ್ ಹಿಟ್ ಮೂವಿ ಕಾಂತಾರ ಸಿನಿಮಾ ಎಫೆಕ್ಟ್  ಉತ್ತರ ಕರ್ನಾಟಕದ ಮೇಲೆ ಭಾರಿ ಪರಿಣಾಮ ಬೀರಿದೆ. ಉತ್ತರ ಕರ್ನಾಟಕದಲ್ಲಿಯೂ ಕರಾವಳಿ ದೈವಾರಾಧನೆ ಶುರುವಾಗಿದೆ! ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ಕೊರಗಜ್ಜನ ಆರಾಧನೆ ಶುರುವಾಗಿದೆ. ಕೊರಗಜ್ಜ ನೀನೇ ಎಲ್ಲಾ ಅಂತಿದ್ದಾರೆ ಭಕ್ತರು..

ವರದಿ: ಪವನ್ ಕುಮಾರ್, ಏಷ್ಯಾನೆಟ್ ನ್ಯೂಸ್, ಹಾವೇರಿ

ಇತ್ತೀಚೆಗೆ ಇಡೀ ದೇಶಾದ್ಯಂತ ಹವಾ ಸೃಷ್ಟಿಸಿ ಸಿನಿ ಪಂಡಿತರನ್ನೇ ಬೆರಗುಗೊಳಿಸಿದ , ಪ್ರೇಕ್ಷಕರು ಬಹುಪರಾಕ್ ಹೇಳ್ತಿರೋ ಕಾಂತಾರ ಈಗ ಬಹು ದೊಡ್ಡ ಯಶಸ್ವಿ ಸಿನಿಮಾ ಆಗಿದೆ. ಕರಾವಳಿ ಭಾಗದ ಸಂಸ್ಕೃತಿ, ದೈವಾರಾಧನೆ, ಪಂಜುರ್ಲಿ, ಗುಳಿಗ ದೈವಗಳ ಮಹತ್ವ, ಭಕ್ತರ ನಂಬಿಕೆ ಎಲ್ಲವನ್ನೂ ಎಳೆ ಎಳೆಯಾಗಿ ಪ್ರೇಕ್ಷಕರಿಗೆ ಮನ ಮುಟ್ಟುವಂತೆ ತೋರಿಸಿ ರಿಷಬ್ ಶೆಟ್ಟಿ ಸಕ್ಸಸ್ ಕಂಡಿದ್ದಾರೆ. ಈಗ ಕಾಂತಾರ ಸಿನಿಮಾ ಎಫೆಕ್ಟ್ ಹೇಗಿದೆ ಎಂದರೆ ಕರಾವಳಿ ದೈವಾರಾಧನೆ ಉತ್ತರ ಕರ್ನಾಟಕದಲ್ಲಿಯೂ ಶುರುವಾಗಿದೆ. ಕರಾವಳಿಯ ಆರಾಧ್ಯ ದೈವ ಕೊರಗಜ್ಜನ ಆರಾಧನೆಯಲ್ಲಿ ಹಾವೇರಿ ಭಕ್ತರು ತಲ್ಲೀನರಾಗಿದ್ದಾರೆ.

ಸವದತ್ತಿ ಯಲ್ಲಮ್ಮ, ಮೈಲಾರ ಲಿಂಗಪ್ಪ, ದೇವರಗುಡ್ಡದ ಮಾಲತೇಶ ಸ್ವಾಮಿ ಭಕ್ತರೇ ಹೆಚ್ಚಿರುವ ಉತ್ತರ ಕರ್ನಾಟಕ ಭಾಗದಲ್ಲಿ ಕೊರಗಜ್ಜ ಈಗ ಪವಾಡ ಸೃಷ್ಟಿಸಿದ್ದಾರೆ. ಹಾವೇರಿ ತಾಲೂಕು ಕೇರಿಮತ್ತಿಹಳ್ಳಿಯಲ್ಲಿ ಕೊರಗಜ್ಜ ದೈವ ಪ್ರತಿಷ್ಠಾಪನೆಯಾಗಿದೆ.

Latest Videos

ಹಲವು ಪವಾಡಗಳನ್ನು ಸೃಷ್ಟಿಸಿದ ಕೊರಗಜ್ಜ
ಕೊರಗಜ್ಜ ಮೊದಲೇ ಕರಾವಳಿ ಜನರ ಆರಾಧ್ಯ ದೈವ. ಅನಾರೋಗ್ಯ ಪರಿಹರಿಸಿ ಸಕಲ ಸಂಕಷ್ಟ ನಿವಾರಣೆ ಮಾಡುವ ಕೊರಗಜ್ಜ ಉತ್ತರ ಕರ್ನಾಟಕದ ಜನರ ಕಷ್ಟಗಳನ್ನು ನಿವಾರಿಸಿ ಪವಾಡ ಸೃಷ್ಟಿಸಿದ್ದಾರೆ. ನಂಬಿ ನಡೆದ ಜನರ ಕೈ ಬಿಡದ ದೈವವಾಗಿ ನೆಲೆಸಿರುವ ಕೊರಗಜ್ಜ  ವೈದ್ಯರಿಗೂ ಕಗ್ಗಂಟಾದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿದ್ದಾರೆ.
ಕೇರಿಮತ್ತಿಹಳ್ಳಿಯ ಯುವಕ ಫಕ್ಕಿರೇಶ ಮರಿಯಣ್ಣನವರ ಹೊಲದಲ್ಲಿ  ಕೊರಗಜ್ಜನ ಪುಟ್ಟ ದೇವಸ್ಥಾನ ನಿರ್ಮಾಣವಾಗಿದೆ. ಬೆಳಗಾಗಿ, ದಾವಣಗೆರೆ, ಬಳ್ಳಾರಿ , ಹುಬ್ಬಳ್ಳಿ , ಧಾರವಾಡ ಸೇರಿದಂತೆ ನಾನಾ ಜಿಲ್ಲೆಗಳಿಂದ ಆಗಮಿಸುತ್ತಿರುವ ಭಕ್ತರು ಕೊರಗಜ್ಜನ ಆಶೀರ್ವಾದ ಪಡೆದು ಪುನೀತರಾಗ್ತಿದ್ದಾರೆ.

Diwali 2022: 'ನೀರ್ ತುಂಬೋ ಹಬ್ಬ' ಏಕೆ, ಹೇಗೆ, ಯಾವಾಗ?

ಮಂಗಳೂರು ಬಳಿಯ ಕುತ್ತಾರುವಿನ ಕೊರಗಜ್ಜನಿಗೂ ಕೇರಿಮತ್ತಿಹಳ್ಳಿ ಗ್ರಾಮಕ್ಕೂ ಒಂದು ನಂಟೇ ಇದೆ. ಸುಮಾರು 40 ವರ್ಷಗಳ ಹಿಂದೆ ಕೊರಗಜ್ಜನ ಸೇವೆ ಮಾಡಿದ್ದ ಕೇರಿಮತ್ತಿಹಳ್ಳಿ ಗ್ರಾಮದ ವೃದ್ದೆ ಬಾಲಮ್ಮ ಕೊರಗಜ್ಜನ ಕೃಪೆಗೆ ಪಾತ್ರರಾಗಿದ್ದರು. ಮಂಗಳೂರಿನ ಕುತ್ತಾರುವಿಗೆ ತೆರಳಿ ಕೊರಗಜ್ಜನಿಗೆ ಸೇವೆ ಮಾಡಿದ್ದರು. ಈಗ ಮೃತ ಪಟ್ಟಿರೋ ಬಾಲಮ್ಮನ ಮೊಮ್ಮಗ ಫಕ್ಕಿರೇಶ ಮರಿಯಣ್ಣನವರ ಕನಸ್ಸಿನಲ್ಲಿ ಕಾಣಿಸಿಕೊಂಡಿದ್ದ ಕೊರಗಜ್ಜ, ತಮ್ಮನ್ನು ಕೇರಿಮತ್ತಿಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸುವಂತೆ ಸೂಚಿಸಿದ್ರಂತೆ. ಊರ ಹೊರಗೆ ಸಿಕ್ಕ ಕೊರಗಜ್ಜನ ಕಲ್ಲನ್ನೇ  ತಂದು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗ್ತಿದೆ. ಕೊರಗಜ್ಜನ
ದೇವಸ್ಥಾನದ ಉದ್ಘಾಟನೆ ಸಂದರ್ಭದಲ್ಲಿ ಕೋಲಾ ಸೇವೆ  ಕೂಡಾ ನಡೆದಿದೆ. ಕರಾವಳಿಯ ರಘು ಅಜ್ಜನವರು ಬಂದು ಕೋಲಾ ಸೇವೆ ನಡೆಸಿದ್ದಾರೆ.

ಸದ್ಯ ಕೊರಗಜ್ಜನ ಕೃಪೆಗೆ ಪಾತ್ರರಾಗಿರೋ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಇಷ್ಟು ದಿನ ಕರಾವಳಿ ಭಾಗದಲ್ಲಷ್ಟೇ ನಡೆಯುತ್ತಿದ್ದ ಕೊರಗಜ್ಜನ ಆರಾಧನೆ ಈಗ ಉತ್ತರ ಕರ್ನಾಟಕದಲ್ಲಿಯೂ ನಡೆದಿರೋದು ಹೊಸತನಕ್ಕೆ ಮುನ್ನುಡಿ ಬರೆದಿದೆ‌.

click me!