ಮಕರ ರಾಶಿಗೆ ಗುರು ಪ್ರವೇಶ; ಯಾವ ಯಾವ ರಾಶಿಯವರಿಗೆ ಲಕ್..?

By Adarsha A  |  First Published Nov 21, 2020, 10:54 AM IST

ಪ್ರತಿ ಗ್ರಹಗಳ ಪರಿವರ್ತನೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಆದಾಗ ಅದರ ಪರಿಣಾಮವು ಎಲ್ಲ ರಾಶಿಗಳ ಮೇಲಾಗುತ್ತದೆ. ಕೆಲವು ರಾಶಿಯವರಿಗೆ ಶುಭ ಫಲ ಸಿಕ್ಕಿದರೆ, ಮತ್ತೆ ಕೆಲವು ರಾಶಿಯವರಿಗೆ ಅಶುಭ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದೇ ನವೆಂಬರ್ ತಿಂಗಳಿನಲ್ಲಿ ಗುರು ಗ್ರಹವು ಮಕರ ರಾಶಿಯನ್ನು ಪ್ರವೇಶಿಸಿದೆ. ಹಾಗಾಗಿ ಈ ರಾಶಿ ಪರಿವರ್ತನೆಯು ಪ್ರತ್ಯೇಕ ರಾಶಿಗಳ ಮೇಲೆ ಶುಭಾಶುಭ ಪರಿಣಾಮಗಳನ್ನು ಬೀರಲಿದೆ. ಹಾಗಾದರೆ ಯಾವ್ಯಾವ ರಾಶಿಗೆ ಯಾವ ಫಲ? ನೋಡೋಣ....
 


ಗುರುಗ್ರಹವು ಇದೇ ನವೆಂಬರ್ 20 ರಂದು ಸ್ವರಾಶಿಯಾದ ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದೆ. ಮಕರ ರಾಶಿಯ ಅಧಿಪತಿ ಶನಿದೇವನಾಗಿದ್ದಾನೆ. ಪ್ರಸ್ತುತ ಶನಿಗ್ರಹವು ಮಕರ ರಾಶಿಯಲ್ಲಿಯೇ ಗೋಚಾರವಾಗಿರುವುದರಿಂದ, ಒಂದೇ ಕಡೆ ಶನಿ ಮತ್ತು ಗುರು ಗ್ರಹದ ಯುತಿ ಉಂಟಾಗುತ್ತದೆ. ಇದರಿಂದ ಜಗತ್ತು ಅನಿರೀಕ್ಷಿತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದು ನುರಿತ ಜ್ಯೋತಿಷ್ಯಿಗಳ ಅಭಿಪ್ರಾಯವಾಗಿದೆ. ಹಾಗಾಗಿ ಈ ಪರಿವರ್ತನೆಯಿಂದ ರಾಶಿ ಚಕ್ರದ ಮೇಲಾಗುವ ಪರಿಣಾಮಗಳನ್ನು ತಿಳಿಯೋಣ..

ಮೇಷ ರಾಶಿ
ಈ ರಾಶಿಯ ಹತ್ತನೇ ಮನೆಯಲ್ಲಿ ಗುರು ಗೋಚಾರವಾಗುವುದರಿಂದ ಶುಭ-ಅಶುಭ ಪರಿಣಾಮಗಳು ಉಂಟಾಗುತ್ತವೆ. ಈ ಪರಿವರ್ತನೆಯಿಂದ ನೌಕರಿಯಲ್ಲಿ ಸ್ಥಾನ ಪರಿವರ್ತನೆಯ ಯೋಗವಿದೆ. ಜಮೀನು, ಆಸ್ತಿಗಳ ವಿಷಯದಲ್ಲಿ ಸಮಸ್ಯೆಗಳಿದ್ದರೆ ಈ ಸಂದರ್ಭದಲ್ಲಿ ಪರಿಹಾರ ಕಾಣುತ್ತದೆ. ಮನೆ ಮತ್ತು ವಾಹನವನ್ನು ಖರೀದಿಸುವ ಯೋಗವಿದೆ. ಕೆಲಸ, ವ್ಯಾಪಾರದ ದೃಷ್ಟಿಯಿಂದ ಗುರು ಗ್ರಹದ ಈ ಪರಿವರ್ತನೆಯು ಅತ್ಯಂತ ಶುಭ ಫಲವನ್ನು ನೀಡುತ್ತದೆ. ದೊಡ್ಡ ವ್ಯಕ್ತಿಗಳ ನಡುವಿನ ಸಂಬಂಧ ಸ್ವಲ್ಪ ಬಿಗಡಾಯಿಸುವ ಸಂಭವವಿದೆ. ನಿಮ್ಮ ಹಠ-ಆವೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಎಲ್ಲವೂ ಸರಿಯಾಗುತ್ತದೆ. 

ಇದನ್ನು ಓದಿ: ಹಸ್ತರೇಖೆಯಿಂದ ತಿಳಿಯಿರಿ ವೈವಾಹಿಕ ಜೀವನದ ರಹಸ್ಯ..! 

ವೃಷಭ ರಾಶಿ
ಈ ರಾಶಿಯವರು ಗರು ಗ್ರಹದ ಪರಿವರ್ತನೆಯಿಂದ ಅನಿರೀಕ್ಷಿತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇನ್ನೇನು ಕೆಲಸ ಆಗಿಯೇಬಿಡುತ್ತದೆ ಎನ್ನುವಂತಿದ್ದರೂ ನಿಮ್ಮವರಿಂದಲೇ ಅರ್ಧದಲ್ಲೇ ನಿಲ್ಲುತ್ತದೆ. ಧಾರ್ಮಿಕ ವಿಚಾರದಲ್ಲಿ ಉದಾಸೀನತೆ ಎದುರಾದರೆ, ನವ ದಂಪತಿಗಳಿಗೆ ಸಂತಾನ ಭಾಗ್ಯವಿದೆ. 

ಮಿಥುನ ರಾಶಿ
ಈ ರಾಶಿಯವರಿಗೆ ಮಿಶ್ರಫಲಗಳಿದ್ದು, ಉದ್ಯೋಗ ಕ್ಷೇತ್ರದಲ್ಲಿ ಅನೇಕ ಸವಾಲುಗಳಿರುತ್ತವೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕಾರ್ಯಕ್ಷೇತ್ರಗಳಲ್ಲಿ ವಾದ-ವಿವಾದಗಳಿಂದ ದೂರವಿರಿ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ಕರ್ಕಾಟಕ ರಾಶಿ
ಈ ರಾಶಿಯವರಿಗೆ ಸಾಮಾಜಿಕ ಪ್ರತಿಷ್ಠೆ ಹೆಚ್ಚುವುದಲ್ಲದೆ, ಕಾರ್ಯಕ್ಷೇತ್ರದಲ್ಲೂ ವರ್ಚಸ್ಸು ಹೆಚ್ಚಲಿದೆ. ದೊಡ್ಡ ಕೆಲಸ ಆರಂಭಿಸಬೇಕೆಂದಿದ್ದರೆ ಇದು ಸಕಾಲ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗುತ್ತದೆ.

ಸಿಂಹರಾಶಿ
ಈ ರಾಶಿಯವರಿಗೆ ಶುಭ ಫಲ ನೀಡುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ, ಜಾಗ್ರತೆ ವಹಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಕಬೇಕು, ವ್ಯಾಪಾರಸ್ಥರಿಗೆ ಸಾಧಾರಣ ಲಾಭವಿದ್ದು, ಜಾಗ್ರತೆವಹಿಸಬೇಕು. ವಿದೇಶ ಯಾತ್ರೆಗೆ ಸಂಬಂಧಿಸಿದ ಕೆಲಸಗಳು ಸುಲಭವಾಗುತ್ತವೆ.

ಕನ್ಯಾ ರಾಶಿ
ಈ ರಾಶಿಯವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಸಿಗಲಿದ್ದು, ಸಂತಾನ ಸಂಬಂಧಿತ ವಿಷಯಗಳು ಚಿಂತೆಗೀಡು ಮಾಡುತ್ತದೆ. ಸರ್ಕಾರಗಳ ಪ್ರಮುಖ ವಿಭಾಗಗಳ ಕೆಲಸವು ಕೈಗೂಡಲಿದೆ. ಜೊತೆಗೆ ಸಾಮಾಜಿಕ ಪ್ರತಿಷ್ಠೆ ಸಹ ಹೆಚ್ಚಲಿದೆ. 

ಇದನ್ನು ಓದಿ: ಈ ನಾಲ್ಕು ರಾಶಿಯವರಿಗಿರುತ್ತೆ ಮಹಾಲಕ್ಷ್ಮಿಯ ಕೃಪೆ: ನಿಮ್ಮ ರಾಶಿನೂ ಇದೆಯಾ..? 

ತುಲಾ ರಾಶಿ
ಈ ರಾಶಿಯವರು ಅನೇಕ ತೊಂದರೆ ಎದುರಿಸಬೇಕಾಗಬಹುದು. ಕುಟುಂಬ ಸಮಸ್ಯೆಗಳು ಮಾನಸಿಕ ಅಶಾಂತಿಗೆ ಕಾರಣವಾಗುತ್ತದೆ. ಸ್ನೇಹಿತರು ಇಲ್ಲವೇ ಸಂಬಂಧಿಕರಿಂದ ಸಹಕಾರ ನಿರೀಕ್ಷೆ ಮಾಡದಿರುವುದು ಉತ್ತಮ. ವಾಹನ, ಮನೆ ಖರೀದಿಸುವ ಯೋಗವಿದೆ. 

ವೃಶ್ಚಿಕ ರಾಶಿ
ಶನಿಯ ಜೊತೆಗೆ ಗುರುವಿನ ಯುತಿ ಇರುವ ಕಾರಣ ಈ ರಾಶಿಯವರು ತೆಗೆದುಕೊಂಡ ನಿರ್ಧಾರ, ಮಾಡಿದ ಕೆಲಸವು ಯಶಸ್ಸನ್ನು ಕಾಣುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ನವದಂಪತಿಗಳಿಗೆ ಸಂತಾನ ಯೋಗವಿದೆ. ಹಠ ಹಾಗೂ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಉತ್ತಮ. 

ಧನು ರಾಶಿ
ಈ ರಾಶಿಯವರಿಗೆ ಕುಟುಂಬದಲ್ಲಿ ಕಲಹ ಏರ್ಪಡುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮಾತಿನ ಚತುರತೆಯಿಂದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಸಾಧ್ಯವಿದೆ. ಗುಪ್ತ ಶತ್ರುಗಳಿಂದ ಹುಷಾರಾಗಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಉತ್ತಮ.

ಮಕರ ರಾಶಿ
ಗುರು ಮತ್ತು ಶನಿಯ ಸಕಾರಾತ್ಮಕ ಪ್ರಭಾವದಿಂದ ಯಶಸ್ಸು ಸಿಗುತ್ತಾ ಹೋಗುತ್ತದೆ. ಸಾಮಾಜಿಕ ಪ್ರತಿಷ್ಠೆ ವೃದ್ಧಿಸುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಇದು ಸಕಾಲವಾಗಿದೆ. ನವ ದಂಪತಿಗೆ ಸಂತಾನಯೋಗವಿದೆ.

ಇದನ್ನು ಓದಿ: ಈ 5 ರಾಶಿಯವರು ತುಂಬಾ ಸ್ಟೈಲಿಶ್ ಆಗಿರೋಕೆ ಇಷ್ಟಪಡ್ತಾರಂತೆ! 

ಕುಂಭ ರಾಶಿ
ಧರ್ಮ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚು. ದಾನ-ಧರ್ಮಾದಿಗಳನ್ನು ಮಾಡುವುದರಿಂದ ಪ್ರತಿಷ್ಠೆ ಸಹ ಹೆಚ್ಚಲಿದೆ. ಆದರೆ, ಇದರಿಂದಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ಸ್ವಲ್ಪ ಯೋಚಿಸಿ ಹಣ ವ್ಯಯಿಸಿ. ಗುಪ್ತ ಶತ್ರುಗಳಿಂದ ಜಾಗರೂಕರಾಗಿರಿ.

ಮೀನರಾಶಿ
ಈ ರಾಶಿಯವರಿಗೆ ಆರ್ಥಿಕ ಸ್ಥಿತಿ ಲಾಭದಾಯಕವಾಗಿದೆ. ಬಹಳ ದಿನಗಳಿಂದ ಬರಬೇಕಿರುವ ಹಣ ವಾಪಸ್ ಬರಲಿದೆ. ಕುಟುಂಬದ ಹಿರಿಯ ಸದಸ್ಯರು ಹಾಗೂ ಸಹೋದರರ ಸಹಕಾರ ಸಿಗಲಿದೆ. ಸರ್ಕಾರಿ ಕೆಲಸಗಳಲ್ಲಿಯೂ ಯಶಸ್ಸು ದೊರೆಯಲಿದೆ. ಅಲ್ಲದೆ, ಸಂತಾನ ಸಂಬಂಧಿ ಚಿಂತೆಗಳಿಗೆ ಮುಕ್ತಿ ದೊರೆಯಲಿದೆ. 

click me!