ಸಂಕಷ್ಟ ಪರಿಹರಿಸುವ ಜೋಕುಮಾರ ಸ್ವಾಮಿ..!

By Kannadaprabha News  |  First Published Sep 28, 2023, 7:35 AM IST

ಜೋಕುಮಾರನ ಕುರಿತ ವಿಶಿಷ್ಟ ಜಾನಪದ ಹಾಡುಗಳನ್ನು ಹಾಡುವ ಮಹಿಳೆಯರ ತಂಡ, ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನನ್ನು ಬೇವಿನ ಎಲೆಗಳ ಮಧ್ಯೆ ಪ್ರತಿಷ್ಠಾಪಿಸಿಕೊಂಡು ಆತನ ಬಾಯಿಯಲ್ಲಿ ಬೆಣ್ಣೆ ಇಟ್ಟು, ಮನೆಗಳಿಗೆ ಹೊತ್ತೂಯ್ಯುವ ಜೋಗಪ್ಪನ ಹಬ್ಬದ ಆಚರಣೆ ತಾಲೂಕಿನ ಮಣ್ಣೂರ ಹೊಸೂರ ರಾಮನಗರ ಕುಡಗನೂರ ಶಿವೂರ ಕರಜಗಿ ಮಾಶಾಳ ಉಡಚಣ ಗ್ರಾಮಗಳಲ್ಲಿ ಕಂಡು ಬಂತು.


ಅಫಜಲ್ಪುರ(ಸೆ.28):  ಅಡ್ಡಡ್ಡ ಮಳಿ ಬಂದ, ದೊಡ್ಡ ದೊಡ್ಡ ಕೆರೆ ತುಂಬಿ ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ, ಮಡಿವಾಳರ ಮನೆ ಹೊಕ್ಯಾನೆ ಜೋಕುಮಾರ... ಹೀಗೆ ಸಾಮೂಹಿಕವಾಗಿ ಮಹಿಳೆಯರು ಜೋಕುಮಾರನ ಕುರಿತು ಜನಪದ ಶೈಲಿಯಲ್ಲಿ ಹಾಡುವುದನ್ನು ಕೇಳುವುದೇ ಬಲು ಚಂದ.

ಜೋಕುಮಾರನ ಕುರಿತ ವಿಶಿಷ್ಟ ಜಾನಪದ ಹಾಡುಗಳನ್ನು ಹಾಡುವ ಮಹಿಳೆಯರ ತಂಡ, ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನನ್ನು ಬೇವಿನ ಎಲೆಗಳ ಮಧ್ಯೆ ಪ್ರತಿಷ್ಠಾಪಿಸಿಕೊಂಡು ಆತನ ಬಾಯಿಯಲ್ಲಿ ಬೆಣ್ಣೆ ಇಟ್ಟು, ಮನೆಗಳಿಗೆ ಹೊತ್ತೂಯ್ಯುವ ಜೋಗಪ್ಪನ ಹಬ್ಬದ ಆಚರಣೆ ತಾಲೂಕಿನ ಮಣ್ಣೂರ ಹೊಸೂರ ರಾಮನಗರ ಕುಡಗನೂರ ಶಿವೂರ ಕರಜಗಿ ಮಾಶಾಳ ಉಡಚಣ ಗ್ರಾಮಗಳಲ್ಲಿ ಕಂಡು ಬಂತು. ಈ ಭಾಗದಲ್ಲಿ ಮಳೆ-ಬೆಳೆ ಸಮೃದ್ಧಿಯಾಗಿ ಜನರು ಬದುಕು ಸುಧಾರಿಸಲಿ ಎಂಬ ಉದ್ದೇಶದಿಂದ ಜೋಕುಮಾರನ ಹಬ್ಬ ಆಚರಣೆ ಮಾಡಲಾಗುತ್ತದೆ.

Latest Videos

undefined

ಅನಂತ ಚತುರ್ದಶಿ,ಶಿವನ ಆಶೀರ್ವಾದ ಪಡೆಯುವ 5 ರಾಶಿಯವರು ಇವರೇ..!

ಜೋಕುಮಾರನನ್ನು ಬುಟ್ಟಿಯಲ್ಲಿ ಕೂಡ್ರಿಸಿಕೊಂಡು ಮನೆ ಮನೆಗೆ ಹೊತ್ತೂಯ್ಯುವ ಮಹಿಳೆಯರು ಮನೆಗಳ ಮುಂದೆ ಜೋಕುಮಾರನಿಗೆ ವಿಶೇಷ ಪೂಜೆ ಸಲ್ಲಿಸಿ, ಆ ಮನೆಯಿಂದ ದವಸ ಧಾನ್ಯಗಳನ್ನು ಪಡೆದುಕೊಳ್ಳುತ್ತಾರೆ. ಮನೆಯ ಮಂದಿಯೆಲ್ಲ ಬೆಣ್ಣೆ ಪ್ರೀಯನಾದ ಜೋಕುಮಾರನ ಬಾಯಿಗೆ ಬೆಣ್ಣೆ ಸವರಿ ತಮ್ಮ ಹರಕೆಗಳು ಈಡೇರಲಿ ಎಂದು ಪ್ರಾರ್ಥಿಸುವುದು ವಾಡಿಕೆ.

ಜೋಕುಮಾರನ ಕೈಯಲ್ಲಿ ಇರುವ ಖಡ್ಗ, ಆತನು ಶೂರನು ಮತ್ತು ಪರಾಕ್ರಮಿಯೂ ಎಂಬುದನ್ನು ಬಿಂಬಿಸುತ್ತದೆ. ಜೋಕುಮಾರನ ಪೂಜೆ ಮಾಡಿ ಹರಕೆ ಕಟ್ಟಿದರೆ ಬಂಜೆತನ ನಿವಾರಣೆಯಾಗುತ್ತದೆ ಎಂಬ ಪ್ರತೀತಿಯೂ ಗ್ರಾಮೀಣ ಭಾಗದಲ್ಲಿ ಪ್ರಸ್ತುತವಾಗಿದೆ.

ಪಿತೃಪಕ್ಷದ ಸಮಯದಲ್ಲಿ ಕೂದಲು, ಗಡ್ಡ ಕತ್ತರಿಸಿದರೆ ಅಪಶಕುನವೇ?

ಜೋಕುಮಾರನ ಪೂಜೆ ನಂತರ ಅವನನ್ನು ಹೊತ್ತು ತಂದ ಮಹಿಳೆಯರು ನೀಡುವ ಚರಗಾ ಎಂಬ ಪ್ರಸಾದವನ್ನು ರೈತರು ತಮ್ಮ ಹೊಲದಲ್ಲಿ ಚೆಲ್ಲಿದರೆ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಹಿಂದೂ ಸಂಪ್ರದಾಯ ಆಚರಣೆಗಳಲ್ಲಿ ವಿಶಿಷ್ಟತೆಗಳ ಮಹಾಪೂರವೇ ಇದ್ದು, ಜೋಕುಮಾರನ ಹಬ್ಬ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಪ್ರತಿವರ್ಷ ಗಣೇಶ ಹಬ್ಬದ ನಡುವೆ ಜೋಕುಮಾರನ ಪೂಜೆ ನಡೆಯುವುದು ವಾಡಿಕೆ.

ಭೂಲೋಕದಲ್ಲಿ ಹನ್ನೊಂದು ದಿನಗಳ ಕಾಲ ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪೂಜೆ ಮಾಡಿಸಿಕೊಂಡು, ಭಕ್ತಕೋಟಿ ಅರ್ಪಿಸುವ ಕಡುಬು-ಮೋದಕ, ಉಂಡಿಗಳನ್ನು ಸೇವಿಸಿ ಗಣೇಶನು ವಿಸರ್ಜನೆ ನಂತರ ಕೈಲಾಸಕ್ಕೆ ತೆರಳಿ, ಭೂಲೋಕದಲ್ಲಿ ಜನರು ಚನ್ನಾಗಿದ್ದಾರೆ ಎಂದು ಶಿವನಲ್ಲಿ ವರದಿ ಒಪ್ಪಿಸುತ್ತಾನೆ. ಆದರೆ, ಬುಟ್ಟಿಯಲ್ಲಿದ್ದುಕೊಂಡು ಬಿಸಿಲಿನಲ್ಲಿ ಮನೆಮನೆಗೆ ಹೋಗಿ ಪೂಜೆಗೊಂಡ ಜೋಕುಮಾರ ವಿಸರ್ಜನೆ ನಂತರ ಶಿವನಿಗೆ ಜನರ ಸಂಕಷ್ಟಗಳನ್ನು ಮನವರಿಕೆ ಮಾಡಿ ಉತ್ತಮ ಮಳೆ-ಬೆಳೆ ನೀಡುವಂತೆ ಶಿವನಲ್ಲಿ ಪ್ರಾರ್ಥಿಸುತ್ತಾನೆ ಎಂಬ ದೃಢವಾದ ನಂಬಿಕೆಯಿಂದಲೇ ಈ ಜೋಕುಮಾರ ಹಬ್ಬದ ವಿಶಿಷ್ಟ ಆಚರಣೆ ಇಂದಿಗೂ ಪ್ರಸ್ತುತವಾಗಿದೆ.

click me!