
ಸೂರತ್ (ನ.18) ಉದ್ಯಮ ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ, ಅದರಲ್ಲೂ ಯಾವುದೇ ಹಿನ್ನಲೆ ಇಲ್ಲದೆ, ಬಂಡವಾಳ ಇಲ್ಲದೆ ಶ್ರಮದಿಂದ, ಬೆವರಿನಿಂದ ಕಟ್ಟಿ ಬೆಳೆಸಿದ ಸಂಸ್ಥೆಗಳು ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಿದೆ. ಹೀಗೆ ಒಂದೇ ಅಂಗಡಿ ಮೂಲಕ ಉದ್ಯಮ ಆರಂಭಿಸಿದ ಕುಟುಂಬ ಪರಿಶ್ರಮದ ಮೂಲಕ 15 ಕೋಟಿ ರೂಪಾಯಿ ಜವಳಿ ಉದ್ಯಮವಾಗಿ ಬೆಳೆದು ನಿಂತಿದೆ. ಕೆಲಸಗಾರರು, ಮ್ಯಾನೇಜರ್ ಸೇರಿದಂತೆ ಪ್ರತಿಯೊಂದು ಆಳಿದ್ದಾರೆ. ಶ್ರೀಮಂತ ಉದ್ಯಮಿಯಾಗಿರುವಾಗಲೇ ಕುಟುಂಬ ಅಚ್ಚರಿ ನಿರ್ಧಾರ ತೆಗೆದುಕೊಂಡಿದೆ. ಕುಟುಂಬದ ನಾಲ್ವರೂ ಜೈನ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ.
ರಾಜಸ್ಥಾನದ ಉದಯಪುರದ ಮೂಲದ ಉದ್ಯಮಿ ದಿಲೀಪ್ ಭಾಯ್ ಭೋಗರ್ ಗುಜರಾತ್‌ನ ಸೂರತ್‌ನಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದಾರೆ. ಉದ್ಯಮ ಇದೀಗ 15 ಕೋಟಿ ರೂಪಾಯಿ ಮೀರಿದೆ. ಹಲವೆಡೆದೆ ಆಸ್ತಿ ಖರೀದಿಸಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿರುವ ದಿಲೀಪ್ ಭಾಯ್ ಭೋಗರ್ ಹಾಗೂ ಕುಟುಂಬ ಇದೀಗ ಜೈನ ಸನ್ಯಾಸತ್ವ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ. ದಿಲೀಪ್ ಭಾಯ್ ಭೋಗರ್, ಪತ್ನಿ ಜ್ಯೋತಿ ಬೆನ್, ಇಬ್ಬರು ಪುತ್ರಿಯರಾದ 22 ವರ್ಷದ ಛವಿ, 14 ವರ್ಷದ ಛಾರ್ವಿ ಜೈನ ದೀಕ್ಷೆ ಪಡೆಯಲಿದ್ದಾರೆ. ಇವರ ಮತ್ತೊಬ್ಬ ಪುತ್ರಿ ದರ್ಶಿತಾ 2023ರಲ್ಲೇ ಜೈನ ದೀಕ್ಷೆ ಸ್ವೀಕರಿಸಿದ್ದಾರೆ.
ಫೆಬ್ರವರಿ 8 , 2027ರಲ್ಲಿ ಸೂರತ್‌ನಲ್ಲಿ ಭೋಗರ್ ಕುಟುಂಬ ಜೈನ ದೀಕ್ಷೆ ಸ್ವೀಕರಿಸಲಿದೆ. ಭೋಗರ್ ತಮ್ಮ ಉದ್ಯಮ ವಿಸ್ತರಿಸಲು ಪ್ಲಾನ್ ಮಾಡಿದ್ದರು. ಈ ವೇಳೆ ಜೈನ ಆಚಾರ್ಯರ ಭೇಟಿಯಾದ ಉದ್ಯಮಿ ಭೋಗರ್ ಅವರ ಮಾತುಗಳು, ಪ್ರವಚನಗಳಿಂದ ಪ್ರಭಾವಿತರಾಗಿದ್ದಾರೆ. ಬಳಿಕ ಕುಟುಂಬ ಸಮೇತ ಆಚಾರ್ಯರ ಭೇಟಿಯಾಗಿದ್ದಾರೆ. ಇದರಿಂದ ಕುಟುಂಬದ ಇತರ ಸದಸ್ಯರಿಗೂ ಜೈನ ಧರ್ಮದ ಆಳವಾದ ಜ್ಞಾನ ಲಭ್ಯವಾಗಿದೆ. 2023ರಲ್ಲಿ ಪುತ್ರಿ ದರ್ಶಿತಾ ಜೈನ ದೀಕ್ಷೆ ಸ್ವೀಕರಿಸಿದ ಬಳಿಕ ಭೋಗರ್ ಕುಟುಂಬ ಉದ್ಯಮಕ್ಕಿಂತ ಹೆಚ್ಚು ಪ್ರವಚನದಲ್ಲಿ ಪಾಲ್ಗೊಳ್ಳಲು ಆರಂಭಿಸಿತು. ಇದೀಗ ನಾಲ್ವರೂ ಜೈನ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ.
ತಮ್ಮ ಕೋಟಿ ಕೋಟಿ ರೂಪಾಯಿ ಆಸ್ತಿಯನ್ನು ದಾನ ಮಾಡಲು ಮುಂದಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇಬ್ಬರು ಪುತ್ರಿಯರಲ್ಲಿ ಹಿರಿಯ ಪುತ್ರಿ ಆರಂಭಿಸಿದ ಕರಕುಶಲ ವಸ್ತುಗಳ ಮಾರಾಟ ಉದ್ಯಮ ಸ್ಥಗಿತಗೊಳಿಸಿದ್ದಾರೆ. ಈ ಮಳಿಗೆಯ ಎಲ್ಲಾ ವಸ್ತುಗಳನ್ನು ದಾನ ಮಾಡಿದ್ದಾರೆ ಎಂದು ವರದಿಯಾಗಿದೆ. ಇದೀಗ ಇಡೀ ಕುಟುಂಬ ತಮ್ಮ ಹಣ, ಆಸ್ತಿ ದಾನ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ.
ಸದ್ಯ ಜೈನ ಮುನಿಗಳ ಜೊತೆ ಉಳಿದಿಕೊಂಡಿರುವ ಕುಟುಂಬ ಕಠಿಣ ಆಹಾರ, ಕಾಲ್ನಡಿಯಲ್ಲಿ ಓಡಾಟ ಸೇರಿದಂತೆ ಸನ್ಯಾಸದ ದಿನಚರಿ ಅನುಸರಿಸುತ್ತಿದ್ದಾರೆ. ಇಡೀ ಕುಟುಂಬ ಸನ್ಯಾಸತ್ವ ಸ್ವೀಕರಿಸುತ್ತಿರುವುದು ಇದೀಗ ಹಲವರ ಅಚ್ಚರಿಗೆ ಕಾರಣವಾಗಿದೆ.