Sabarimala temple: ಅಯ್ಯಪ್ಪ ದೀಕ್ಷೆ ಪಡೆದವರು ಹೊರುವ ಇರುಮುಡಿಯಲ್ಲಿ ಏನೆಲ್ಲ ಇರುತ್ತದೆ?

By Suvarna News  |  First Published Jan 8, 2022, 4:04 PM IST

ಅಯ್ಯಪ್ಪ ದೀಕ್ಷೆ ತೆಗೆದುಕೊಂಡವರು ಇರುಮುಡಿ ಹೊತ್ತಿರುವುದನ್ನು ನೋಡಿದ್ದೇವೆ. ಈ ಇರುಮುಡಿಯಲ್ಲಿ ಏನೆಲ್ಲ ಇರುತ್ತದೆ ಎಂಬ ವಿವರ ಇಲ್ಲಿದೆ. 


ಸುಮಾರು 41 ದಿನಗಳ ಕಾಲ ಅಯ್ಯಪ್ಪ ವ್ರತ ಆಚರಿಸುವ ದೀಕ್ಷಾಧಾರಿಗಳು ಮಕರ ಸಂಕ್ರಾಂತಿ ಸಂದರ್ಭದಲ್ಲಿ ಶಬರಿಮಲೆ(Sabarimala)ಗೆ ಭೇಟಿ ನೀಡುತ್ತಾರೆ. ಹೀಗೆ ಅಯ್ಯಪ್ಪ ಮಾಲೆ ಹಾಕಿದವರು ತಲೆಯ ಮೇಲೆ ಇರುಮುಡಿ(Irumudi) ಹೊತ್ತಿರುವುದನ್ನು ನಾವೆಲ್ಲ ನೋಡಿಯೇ ಇರುತ್ತೇವೆ. ಈ ಇರುಮುಡಿಯ ಪ್ರಾಮುಖ್ಯತೆ ಏನು, ಅದರೊಳಗೆ ಏನೆಲ್ಲ ಇರುತ್ತದೆ ಗೊತ್ತಾ?

'ಇರು' ಎಂದರೆ ಎರಡು ಎಂದರ್ಥ. 'ಮುಡಿ' ಎಂದರೆ ಚೀಲ, 'ಕಟ್ಟು' ಎಂದರೆ ಗಂಟು(knot) ಹಾಕುವುದು. ಎರಡು ಭಾಗವಿರುವ ಚೀಲದೊಳಗೆ ಪೂಜೆ ಹಾಗೂ ಯಾತ್ರೆಗೆ ಬೇಕಾದ ವಸ್ತುಗಳನ್ನಿಟ್ಟುಕೊಂಡು ಗಂಟು ಹಾಕಿಕೊಂಡು ಹೊತ್ತು ಹೋಗುವುದೇ ಇರುಮುಡಿ ಕಟ್ಟು. ಈ ಇರುಮುಡಿಯು ಬಹಳ ಪವಿತ್ರವಾದುದಾಗಿದ್ದು, 41 ದಿನ ವ್ರತ ಆಚರಿಸುವವರು ಮಾತ್ರ ಇದನ್ನು ಹೊರಬಹುದು. ಅಷ್ಟೇ ಅಲ್ಲ, ಇರುಮುಡಿ ಇಲ್ಲದ ಭಕ್ತರನ್ನು ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ 18 ಮೆಟ್ಟಿಲ(holy stairs)ನ್ನು ಹತ್ತಲು ಬಿಡುವುದೇ ಇಲ್ಲ. ವ್ರತ ಆಚರಿಸದೆ ಇರುವವರು ಇರುಮುಡಿ ಹೊರುವಂತಿಲ್ಲ ಹಾಗೂ ಮೆಟ್ಟಿಲು ಹತ್ತಲೂ ಅವಕಾಶವಿಲ್ಲ. ಅವರು ಅಯ್ಯಪ್ಪನನ್ನು ಬೇರೊಂದು ಪ್ರವೇಶದ್ವಾರ ಮೂಲಕ ದೇವಾಲಯಕ್ಕೆ ಹೋಗಿ ನೋಡಬೇಕು. 

Tap to resize

Latest Videos

ಇರುಮುಡಿಯಲ್ಲಿ ಏನೆಲ್ಲ ಇರುತ್ತದೆ?
ಇರುಮುಡಿಯು ಕಪ್ಪು ಬಣ್ಣದ ಹತ್ತಿಯ ಚೀಲವಾಗಿದ್ದು, ಇದರಲ್ಲಿ ಎರಡು ಪೌಚ್‌ಗಳಿರುತ್ತವೆ. ಇದರಲ್ಲಿ ಮುಂದಿನ ಭಾಗಕ್ಕೆ ಮುನ್ಮುಡಿ ಎಂದರೆ ಹಿಂದಿನ ಭಾಗಕ್ಕೆ ಪಿನ್ಮುಡಿ ಎನ್ನಲಾಗುತ್ತದೆ. ಇವು ಪೂಜೆ ಹಾಗೂ ಯಾತ್ರೆಗೆ ಬೇಕಾದ ವಸ್ತುಗಳನ್ನು ಇಟ್ಟುಕೊಳ್ಳಲು ನೆರವಾಗುತ್ತವೆ. ಅಯ್ಯಪ್ಪ ದೀಕ್ಷಾಧಾರಿಗಳು ಈ ಇರುಮುಡಿಯಲ್ಲಿ ತುಪ್ಪ ತುಂಬಿದ ಕಾಯಿ, ಕಾಣಿಕೆ ನಾಣ್ಯಗಳು, ಅಕ್ಕಿ ಹಾಗೂ ಬೆಲ್ಲ, ಎಲೆಅಡಿಕೆ, ಅರಿಶಿನ, ಗಂಧದ ಪುಡಿ, ವಿಭೂತಿ(holy ash), ಮತ್ತೆರಡು ತೆಂಗಿನಕಾಯಿ(coconut), ಗುಲಾಬಿ ನೀರು, ಅವಲಕ್ಕಿ, ಊದುಬತ್ತಿ, ಕಾಳುಮೆಣಸು(pepper), ಕರ್ಪೂರ ಇತ್ಯಾದಿಗಳನ್ನು ಇಟ್ಟುಕೊಂಡಿರುತ್ತಾರೆ. ಇದರೊಂದಿಗೆ ಭಕ್ತರು ಯಾತ್ರೆ ಸಂದರ್ಭದಲ್ಲಿ ಬೇಕಾಗುವ ಟವೆಲ್, ಹಾಸಲು ಬೆಡ್‌ಶೀಟ್, ಬದಲಿಸುವ ಬಟ್ಟೆ ಕೂಡಾ ಇಟ್ಟುಕೊಂಡಿರುತ್ತಾರೆ. 

Makar Sankranti : ಸುಗ್ಗಿ ಹಬ್ಬದಂದು ಖಿಚಡಿ ಯಾಕೆ ಮಾಡ್ತಾರೆ?

ಮುನ್ಮುಡಿ
ಮುನ್ಮುಡಿಯಲ್ಲಿ ಅಕ್ಕಿಯನ್ನು ಮೂರು ಬಾರಿ ಹಾಕಲಾಗುತ್ತದೆ. ಇದನ್ನ ದೀಕ್ಷೆ ಪಡೆವವರ ತಾಯಿ ಹಾಕಬೇಕು. ನಂತರ ಮುದ್ರಾ ತೆಂಗಾ ಎಂದು ಕರೆವ ತುಪ್ಪದಿಂದ ತುಂಬಿದ ತೆಂಗಿನಕಾಯಿ ಇಡಲಾಗಿದೆ. ಹಣ, ಕಾಣಿಕೆ, ಎಲೆಯನ್ನು ಅಕ್ಕಿಯ ಮೇಲಿಡಲಾಗುತ್ತದೆ. ಇದರ ಮೇಲೆ ಕರ್ಪೂರ, ಬೆಲ್ಲ, ಊದುಬತ್ತಿ, ರೋಸ್ ವಾಟರ್ ಇಡಲಾಗುತ್ತದೆ. 

undefined

ಪಿನ್ಮುಡಿ
ಪಿನ್ಮುಡಿಯಲ್ಲಿ ಎರಡು ತೆಂಗಿನಕಾಯಿಗಳು- ಒಂದನೆಯದನ್ನು 18 ಮೆಟ್ಟಿಲು ಹತ್ತುವಾಗ ಒಡೆಯಬೇಕು. ಮತ್ತೊಂದನ್ನು ದೇವಾಲಯದಿಂದ ಹೊರ ಬರುವಾಗ ಒಡೆಯಬೇಕು. ಇದಲ್ಲದೆ ಅರಿಶಿನ(turmeric powder), ಕುಂಕುಮ ಇತ್ಯಾದಿಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಪಿನ್ಮುಡಿಯಲ್ಲಿಡಲಾಗುತ್ತದೆ. 

Chakras And Strength: ರಾಶಿ ಪ್ರಕಾರ, ಯಾವ ಚಕ್ರ ನಿಮಗೆ ಬಲ ತಂದು ಕೊಡಲಿದೆ?

ಇರುಮುಡಿಯ ಉದ್ದೇಶ(Purpose)
ಇದರಲ್ಲಿರುವ ತೆಂಗಿನಕಾಯನ್ನು ವ್ರತ ಮುದ್ರಾ ಎನ್ನಲಾಗುತ್ತದೆ. ಒಮ್ಮೆ ಈ ತೆಂಗಿನಕಾಯಿಯ ಹೊರ ಮೈಯ್ಯನ್ನು ಎಲ್ಲ ನಾರು ತೆಗೆದು ಸ್ವಚ್ಛಗೊಳಿಸಲಾಗುತ್ತದೆ. ಇದು ವ್ರತ ಕೈಗೊಳ್ಳುವವರ ದೈಹಿಕ ಸ್ವಚ್ಛತೆಯ ಪ್ರತೀಕ. ನಂತರ ಕಾಯೊಳಗಿನ ನೀರನ್ನು ಸಂಪೂರ್ಣ ಒಣಗಿಸಲಾಗುತ್ತದೆ. ಇದು ಭಕ್ತರ ದೇಹದಿಂದ ಇಂದ್ರಿಯ ಸುಖ(sensual pleasure)ಗಳನ್ನು ತೆಗೆಯುವ ಪ್ರತೀಕ. ನಂತರ ಕಾಯೊಳಗೆ ಶುದ್ಧ ತುಪ್ಪ(pure ghee) ತುಂಬಿಸಲಾಗುತ್ತದೆ. ಇದನ್ನು ಅಯ್ಯಪ್ಪನ ಅಭಿಷೇಕಕ್ಕೆ ಬಳಸಲಾಗುತ್ತದೆ. ಈ ತುಪ್ಪ ತುಂಬುವುದು ಭಕ್ತನ ಮನಸ್ಸನ್ನು ಜೀವನ ಶಕ್ತಿಯಿಂದ ತುಂಬುವುದರ ಸೂಚಕವಾಗಿದೆ. ಮುದ್ರಾ ತೆಂಗಾ ಎಂದರೆ ಶುದ್ಧ ಮನಸ್ಸು, ದೇಹವನ್ನು ಹೊಂದಿದ ಭಕ್ತರು. 

ಒಮ್ಮೆ ಇರುಮುಡಿ ಧರಿಸಿದ ಮೇಲೆ ಅದನ್ನು ಎಲ್ಲೆಂದರಲ್ಲಿ ಕೆಳಗಿಳಿಸುವಂತಿಲ್ಲ. ಸ್ವತಃ ತಾವೇ ಕೆಳಗಿಸುವಂತೆಯೂ ಇಲ್ಲ. ಯಾವಾಗಲೂ ಗುರು ಸ್ವಾಮಿಯ ಸಹಾಯ ಪಡೆದು ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಇರಿಸಬಹುದು.

ಅಯ್ಯಪ್ಪ ದೀಕ್ಷೆ ವ್ರತಾಚರಣೆ ಎಷ್ಟು ಕಟ್ಟುನಿಟ್ಟೋ, ಇರುಮುಡಿಯನ್ನು ನಿಭಾಯಿಸಲೂ ಅಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಬೇಕು. 

click me!