Hubballi: ವಿಘ್ನ ನಿವಾರಕನ ಆಗಮನಕ್ಕೆ ನಗರ ಸಜ್ಜು

By Kannadaprabha News  |  First Published Aug 31, 2022, 5:30 AM IST
  • ವಿಘ್ನ ನಿವಾರಕನ ಆಗಮನಕ್ಕೆ ನಗರ ಸಜ್ಜು
  • ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ
  • 800ಕ್ಕೂ ಅಧಿಕ ಗಣೇಶನ ಮೂರ್ತಿ ಪ್ರತಿಷ್ಠಾಪನೆ

ಹುಬ್ಬಳ್ಳಿ (ಆ.31): ಕೊರೋನಾದಿಂದ ಕಳೆದ ಎರಡು ವರ್ಷದಿಂದ ಕಳೆಗುಂದಿದ್ದ ಗಣೇಶೋತ್ಸವ ಈ ಸಲ ಅದ್ಧೂರಿಯಿಂದ ನಡೆಯಲಿದ್ದು, ಗಜಾನನ ಸ್ವಾಗತಕ್ಕೆ ವಾಣಿಜ್ಯನಗರಿ ಸಿದ್ಧಗೊಂಡಿದೆ. ನಗರದಲ್ಲಿ 800ಕ್ಕೂ ಅಧಿಕ ಸಾರ್ವಜನಿಕ ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿದ್ದು ಮಂಗಳವಾರ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ-ವಹಿವಾಟು ನಡೆದಿದೆ.

ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್, ಕಾಂಗ್ರೆಸ್‌ ವಿರೋಧ ಮಾಡಿಲ್ಲ ಎಂದ ಮೇಯರ್

Tap to resize

Latest Videos

ಬೆಳ್ಳಿ, ಪರಿಸರ ಸ್ನೇಹಿ ಹಾಗೂ ವಿಭಿನ್ನ ಶೈಲಿಯಲ್ಲಿ ತಯಾರಾದ ಗಣೇಶನ ಪ್ರತಿಷ್ಠಾಪನೆ ನಡೆಯಲಿದೆ. 300ಕ್ಕೂ ಹೆಚ್ಚು ಸ್ಥಳೀಯ ಮೂರ್ತಿಕಾರರು ತಯಾರಿಸಿದ ವಿಗ್ರಹಗಳ ಜತೆಗೆ ಪುಣೆ, ಮುಂಬೈ, ಬೆಂಗಳೂರು, ಕೊಲ್ಲಾಪುರದಲ್ಲಿ ಸಿದ್ಧಗೊಂಡ ಗಣೇಶ ವಿಗ್ರಹಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ನಗರದ ಗಣೇಶ ಪ್ರತಿಷ್ಠಾಪನಾ ಮಂಡಳಿಗಳು ಬೆಂಗಳೂರು, ಮುಂಬೈ ಚಲನಚಿತ್ರ ಸ್ಟುಡಿಯೋ ಕಲಾವಿದರನ್ನು ಆಹ್ವಾನಿಸಿ ವೇದಿಕೆ ಹಾಗೂ ಪೆಂಡಾಲ್‌ಗಳನ್ನು ಅಲಂಕರಿಸಿವೆ.

ಇಲ್ಲಿಯ ದಾಜಿಬಾನ್‌ಪೇಟ್‌ನಲ್ಲಿ ಪ್ರತಿಷ್ಠಾಪಿಸಲಾಗುವ ‘ಹುಬ್ಬಳ್ಳಿ ಕಾ ರಾಜಾ’ ಸಿದ್ಧಪಡಿಸಲು ಕೊಲ್ಕತ್ತಾದಿಂದ ಕಲಾವಿದರು ಆಗಮಿಸಿದ್ದರು. ಮರಾಠಗಲ್ಲಿಯ ‘ಹುಬ್ಬಳ್ಳಿ ಕಾ ಮಹಾರಾಜ’ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಭರದ ಸಿದ್ಧತೆ ನಡೆದಿದೆ. ದುರ್ಗದಬೈಲ್‌ನಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ದೇಗುಲ ಆಕಾರದಲ್ಲಿ ಮಂಟಪ ಹಾಕಲಾಗಿದೆ. ರೈಲ್ವೆ ಸ್ಟೇಶನ್‌ ರಸ್ತೆಯ ಗಣೇಶೋತ್ಸವ ಮಂಡಳದ ವತಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ರೂಪಕ ಸನ್ನಿವೇಶ ರಚಿಸಿದ್ದು 13 ಅಡಿಯ ಮಂಜುನಾಥ ಸ್ವಾಮಿ ಹಾಗೂ ನಂದಿ ನಿರ್ಮಿಸಲಾಗುತ್ತಿದೆ. ಶೀಲವಂತರ ಓಣಿಯ ವರಸಿದ್ದಿ ವಿನಾಯಕ ಮಂಡಳದ ವತಿಯಿಂದ 46 ಕೆಜಿ ಬೆಳ್ಳಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ 1.25 ಕೆಜಿ ಬಂಗಾರ ಆಭರಣಗಳಿಂದ ಅಲಂಕಾರ ಮಾಡಲಾಗುತ್ತಿದೆ.

ಪೌರಾಣಿಕ ನಾಟಕ ಪ್ರದರ್ಶನ:

ಕುಮಡೊಳ್ಳಿ ಓಣಿಯ ಕುಬಸದ ಗಲ್ಲಿಯಲ್ಲಿ 14 ಅಡಿ ಎತ್ತರದ ಕೊಲ್ಲಾಪುರ ಮಹಾಲಕ್ಷ್ಮೀ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದ್ದು, ಧಾರವಾಡದ ಕಲಾವಿದರು ಪೌರಾಣಿಕ ನಾಟಕಗಳನ್ನು ಒಂಬತ್ತು ದಿನಗಳ ಕಾಲ ಪ್ರದರ್ಶಿಸಲಿದ್ದಾರೆ. ಕೃಷ್ಣನ ಬಾಲ ಲೀಲೆಗಳ ಸನ್ನಿವೇಶಗಳನ್ನು ತಿಳಿಸುವ ಪ್ರಯತ್ನ, ವಿವಿಧ ರೂಪಕಗಳ ಮೂಲಕ ಸನ್ನಿವೇಶಗಳನ್ನು ಪ್ರದರ್ಶನ ಮಾಡಲು ಸಿದ್ಧತೆ ನಡೆದಿದೆ. ನಗರದೆಲ್ಲೆಡೆ ಸಾರ್ವಜನಿಕ ಗಣೇಶೋತ್ಸವಕ್ಕೆ ಪೂರಕ ತಯಾರಿ ಪೂರ್ಣಗೊಂಡಿದ್ದು ಗಣೇಶನ ಪ್ರತಿಷ್ಠಾಪನೆಗೆ ಹುಬ್ಬಳ್ಳಿ ಜನತೆ ಕಾತರರಾಗಿದ್ದಾರೆ.

ಮಾರ್ಕೆಟ್‌ನಲ್ಲಿ ಭರ್ಜರಿ ವ್ಯಾಪಾರ:

ಗೌರಿ ಗಣೇಶ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳಾದ ಹೂ, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿವೆ. ಈ ಮಧ್ಯೆಯೂ ಗಣೇಶೋತ್ಸವ ಆಚರಣೆಯ ಖರೀದಿಯಲ್ಲಿ ಸಾರ್ವಜನಿಕರು ತೊಡಗಿಕೊಂಡಿದ್ದರು. ಇದರ ಪರಿಣಾಮ ಇಲ್ಲಿಯ ದುರ್ಗದಬೈಲ್‌, ದಾಜಿಬಾನ್‌ಪೇಟೆ, ಗಾಂಧಿ ಮಾರ್ಕೆಟ್‌, ಬಟರ್‌ ಮಾರ್ಕೆಟ್‌, ಮರಾಠಗಲ್ಲಿ, ಬ್ರಾಡ್‌ ವೇ ರಸ್ತೆ ಸೇರಿದಂತೆ ನಗರದೆಲ್ಲೆಡೆ ಜನರ ಸಾಗರವೇ ಹರಿದು ಬಂದಿತ್ತು. ಇಲ್ಲಿಯ ದುರ್ಗದಬೈಲ್‌ನಲ್ಲಿ ಅಲಂಕಾರಿಕ ವಸ್ತುಗಳು ಸೇರಿದಂತೆ ಬಾಳೆದಿಂಡು, ಕಬ್ಬು, ತಳಿರು-ತೋರಣ ಮಾರಾಟ ನಡೆಯಿತು. ಹಳ್ಳಿಗಳಿಂದ ಬಂದಿದ್ದ ರೈತರು ಇಲ್ಲಿಯ ಉಣಕಲ್‌ ಕ್ರಾಸ್‌, ಕೇಶ್ವಾಪೂರ ಸೇರಿದಂತೆ ವಿವಿಧೆಡೆ ತಳಿರು ತೋರಣ, ಗರಿಕೆ, ಹೂ, ಹಣ್ಣು ಮಾರಾಟ ಮಾಡಿದರು.

ಅನುಮತಿ ಕೊಡದಿದ್ದರೂ ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವ: ಪ್ರಮೋದ್‌ ಮುತಾಲಿಕ್‌

ಬೆಳಗ್ಗೆ ಸುರಿದ ಮಳೆ ವ್ಯಾಪಾರಿಗಳಿಗೆ ಸೇರಿದಂತೆ ಗಣೇಶೋತ್ಸವ ಆಚರಿಸಲು ಸಜ್ಜಾದ ಜನರಲ್ಲಿ ಕೊಂಚ ಆತಂಕ ಮೂಡಿಸಿತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ಬಿಡುವು ನೀಡಿದ ಪರಿಣಾಮ ಮಾರುಕಟ್ಟೆಗೆ ಜನಸಾಗರವೇ ಹರಿದು ಬಂದಿತ್ತು. ಅಲ್ಲದೇ, ಗಣೇಶೋತ್ಸವ ಆಯೋಜಕರಲ್ಲಿ ಮಂದಹಾಸ ಮೂಡಿಸಿತು.

click me!