ಬದುಕಲು ವಿದ್ಯೆ ಬೇಕೋ, ಹಣ ಬೇಕೋ ಎಂಬ ಜಿಜ್ಞಾಸೆ ಸರ್ವಕಾಲದಲ್ಲಿಯೂ ಇದೆ. ಆದರೆ, ಇವುಗಳ ಅಧಿದೇವತೆಗಳ ನಡುವೆಯೇ ಈ ವಿಷ್ಯದಲ್ಲಿ ಜಗಳವಾಗಿತ್ತು.
- ಮಹಾಬಲ ಸೀತಾಳಭಾವಿ
ದೇವ ದೇವತೆಗಳಲ್ಲೂ ದ್ವೇಷ, ಅಸೂಯೆಗಳು ಹೊಸತಲ್ಲ. ನಾನೇ ಮೇಲು, ನೀನು ಕೀಳು ಎಂಬಂತಹ ಜಗಳಗಳು ಅವರಲ್ಲೂ ನಡೆಯುತ್ತಿದ್ದವು. ಅದರಲ್ಲೂ ಹೆಣ್ಣು ದೇವತೆಗಳಲ್ಲಿ ಇಂತಹ ಕಿತ್ತಾಟಗಳು ಒಂದು ಕೈ ಹೆಚ್ಚೇ ಇದ್ದವು. ಅಂತಹದ್ದೊಂದು ಜಗಳದ ಕತೆ ಮಾರ್ಕಂಡೇಯ ಪುರಾಣದಲ್ಲಿದೆ. ಅದರಲ್ಲಿನ ಕಾಮಾಕ್ಷಿ ವಿಲಾಸ ಅಧ್ಯಾಯದಲ್ಲಿ ಈ ಕತೆ ಬರುತ್ತದೆ.
ನಮಗೆ ಗೊತ್ತಿರುವಂತೆ ಸರಸ್ವತಿ ಅಂದರೆ ವಿದ್ಯೆ, ಲಕ್ಷ್ಮಿ ಅಂದರೆ ಸಂಪತ್ತು. ವಿದ್ಯೆಗೂ ಸಂಪತ್ತಿಗೂ ಒಂಥರಾ ವೈರ ಇದ್ದೇ ಇದೆ. ವಿದ್ಯೆ ಹೆಚ್ಚೋ, ಸಂಪತ್ತು ಹೆಚ್ಚೋ ಎಂಬ ಜಿಜ್ಞಾಸೆ ಈಗಲೂ ನಡೆಯುತ್ತಿರುತ್ತದೆ. ವಿದ್ಯೆ ಇರುವಲ್ಲಿ ಸಂಪತ್ತಿರುವುದಿಲ್ಲ, ಸಂಪತ್ತಿರುವಲ್ಲಿ ವಿದ್ಯೆ ಇರುವುದಿಲ್ಲ ಎಂಬ ನಂಬಿಕೆಯೂ ಇದೆ. ಇದು ಸುಳ್ಳೂ ಹೌದು, ನಿಜವೂ ಹೌದು. ಇದೇ ಕಾರಣಕ್ಕೆ ವಿದ್ಯೆಯ ಅಧಿದೇವತೆ ಸರಸ್ವತಿ ಹಾಗೂ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿಯ ನಡುವೆ ಒಮ್ಮೆ ಜಗಳವಾಯಿತಂತೆ. ಸರಸ್ವತಿ ನಾನೇ ಶ್ರೇಷ್ಠ ಅಂದರೆ, ಲಕ್ಷ್ಮಿ ನಾನೇ ಶ್ರೇಷ್ಠ ಅಂದಳು. ಸರಸ್ವತಿ ಅಲಿಯಾಸ್ ಶಾರದೆಯು ಬ್ರಹ್ಮನ ಹೆಂಡತಿ. ಅವನಿಗೆ ಮಗಳೂ ಹೌದು. ಅವಳನ್ನು ಸೃಷ್ಟಿಸಿದ ಮೇಲೆ ಸೌಂದರ್ಯಕ್ಕೆ ಮಾರುಹೋಗಿ ಬ್ರಹ್ಮನೇ ಅವಳನ್ನು ಮದುವೆಯಾಗಿದ್ದನಂತೆ. ಲಕ್ಷ್ಮಿಯು ವಿಷ್ಣುವಿನ ಹೆಂಡತಿ. ಇವರಿಬ್ಬರ ಜಗಳ ಅವರವರ ಗಂಡನ ಬುಡಕ್ಕೂ ಹೋಗಿ ಬ್ರಹ್ಮ ಮತ್ತು ವಿಷ್ಣು ಕೂಡ ಪರಸ್ಪರರ ಮೇಲೆ ಸ್ವಲ್ಪ ಕಾಲ ಮುನಿಸಿಕೊಂಡಿದ್ದರಂತೆ.
ಪುರಾಣ ಕಥೆಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ಅದು ಹೇಗಾದರೂ ಇರಲಿ, ಈಗ ಸರಸ್ವತಿ ಮತ್ತು ಲಕ್ಷ್ಮಿಯರಲ್ಲಿ ಯಾರು ಶ್ರೇಷ್ಠ ಎಂಬುದು ನಿರ್ಣಯವಾಗಬೇಕಲ್ಲವೇ? ಇಬ್ಬರೂ ಸೇರಿ ಇಂದ್ರನ ಬಳಿಗೆ ಹೋದರಂತೆ. ದೇವೇಂದ್ರನು ದೇವಲೋಕದ ರಾಜ. ಅವನೇ ಎಲ್ಲಾ ದೇವರಿಗೂ ಒಡೆಯ. ಅವನ ಪರಿವಾರದಲ್ಲಿ ಜಗಳ ಬಂದರೆ ಅವನೇ ಬಗೆಹರಿಸಬೇಕಲ್ಲವೇ?
ಸರಿ, ಇಂದ್ರ ಅದೇನು ತಲೆಬಿಸಿಯಲ್ಲಿದ್ದನೋ ಏನೋ, ಹೆಚ್ಚು ಯೋಚನೆ ಮಾಡಲು ಹೋಗದೆ ತರಾತುರಿಯಲ್ಲಿ ತನ್ನ ತೀರ್ಪು ಕೊಟ್ಟ. ವಿದ್ಯೆಯಿಲ್ಲದಿದ್ದರೂ ಬದುಕಬಹುದು, ಆದರೆ ಸಂಪತ್ತು ಇಲ್ಲದಿದ್ದರೆ ಹೊಟ್ಟೆಗೆ ಅನ್ನ ಕೂಡ ಸಿಗುವುದಿಲ್ಲ, ಹೀಗಾಗಿ ಜಗತ್ತಿನ ಎಲ್ಲಾ ಭೋಗ ಭಾಗ್ಯಗಳ ಅಧಿದೇವತೆಯಾದ ಲಕ್ಷ್ಮಿಯೇ ಶ್ರೇಷ್ಠ ಎಂದು ಇಂದ್ರ ಹೇಳಿದ.
ಸರಸ್ವತಿಗೆ ಸಿಟ್ಟು ಬಂತು. ಅವಳು ಇಂದ್ರನಿಗೇ ಬೈಯಲು ಶುರುಮಾಡಿದಳು. ಇಂದ್ರನ ನಡತೆಯೇ ಸರಿಯಿಲ್ಲ, ಅವನು ಅಹಲ್ಯಾ ದೇವಿಯ ಚಾರಿತ್ರ‍್ಯ ಹರಣ ಮಾಡಿದವನು, ಅವನು ದುರಹಂಕಾರಿ, ಕುತಂತ್ರಿ, ಅವನು ದೇವ ದೇವತೆಗಳ ನಡುವೆ ತಾರತಮ್ಯ ಮಾಡುತ್ತಾನೆ ಎಂದೆಲ್ಲಾ ದೂಷಿಸಿದಳು. ಅಷ್ಟಕ್ಕೇ ಸುಮ್ಮನಾಗದೆ ಇಂದ್ರನು ಆನೆಯಾಗಲಿ ಎಂದು ಶಾಪ ಕೊಟ್ಟುಬಿಟ್ಟಳು.
ಸಮುದ್ರ ಮಂಥನದಲ್ಲಿ ಹೊರ ಬಂದ ಈ ವಸ್ತುಗಳನ್ನ ಮನೆಗೆ ತಂದ್ರೆ ಅದೃಷ್ಟವೋ ಅದೃಷ್ಟ
ಲಕ್ಷ್ಮಿಗೆ ಅಯ್ಯೋ ಅನ್ನಿಸಿತು. ತನ್ನ ಕಾರಣದಿಂದ ದೇವಲೋಕದ ರಾಜ ಮಹೇಂದ್ರ ಆನೆಯಾಗಬೇಕಾಯಿತಲ್ಲ ಎಂದು ಮರುಗಿದಳು. ಆದರೆ ದೇವತೆಯ ಶಾಪವನ್ನು ಅನುಭವಿಸುವುದು ಕಡ್ಡಾಯ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇಂದ್ರ ದೇವಲೋಕ ಬಿಟ್ಟು ಭೂಮಿಗಿಳಿದ. ಭೂಲೋಕದಲ್ಲಿ ಅವನಿಗೆ ಶಾಪ ವಿಮೋಚನೆ ಆಗಲು ಲಕ್ಷ್ಮಿಯೇ ಒಂದು ದಾರಿ ಹೇಳಿಕೊಟ್ಟಳು. 'ನೀನು ಸಿಂಹಾಚಲ ಕ್ಷೇತ್ರಕ್ಕೆ ಹೋಗು. ಅಲ್ಲಿ ಕಾಂಚೀಪುರದಲ್ಲಿ ನನ್ನ ಗಂಡನ ಹರಿಕ್ಷೇತ್ರವಿದೆ. ಅಲ್ಲಿಗೆ ಹೋಗಲು ನಾನು ಅನುಮತಿ ಕೊಡಿಸುತ್ತೇನೆ. ಅಲ್ಲಿ ಆನೆಯ ರೂಪದಲ್ಲೇ ತಪಸ್ಸು ಮಾಡು. ಆಗ ನಿನ್ನ ಶಾಪವಿಮೋಚನೆಯಾಗಿ ಮತ್ತೆ ಸ್ವರ್ಗಕ್ಕೆ ಬರುತ್ತೀಯೆ' ಎಂದಳು. ಅವಳು ಹೇಳಿದ ಹಾಗೆಯೇ ಇಂದ್ರ ಮಾಡಿದ. ಅದರೊಂದಿಗೆ ಅವನ ಶಾಪ ವಿಮೋಚನೆಯಾಯಿತು.
ಆದರೆ ಇದಕ್ಕೆಲ್ಲ ಎಷ್ಟೋ ವರ್ಷಗಳೇ ಹಿಡಿದವು. ಹೀಗಾಗಿ ಸರಸ್ವತಿಯ ಶಾಪದಿಂದ ಇಂದ್ರ ಹಲವು ವರ್ಷಗಳ ಕಾಲ ಭೂಲೋಕದಲ್ಲಿ ಆನೆಯ ರೂಪದಲ್ಲಿ ಅಲೆದಾಡಬೇಕಾಗಿ ಬಂತು. ಇಬ್ಬರು ಹೆಣ್ಣು ದೇವತೆಗಳ ಜಗಳ ಬಗೆಹರಿಸಲು ಹೋಗಿ ಅವನು ಬಲಿಪಶುವಾಗಿದ್ದ. ನೀವು ದೇವರಾದರೂ ಆಗಿರಿ, ಮನುಷ್ಯರಾದರೂ ಆಗಿರಿ, ಇಬ್ಬರ ಜಗಳದಲ್ಲಿ ಮೂಗು ತೂರಿಸಲು ಹೋದರೆ ಇಕ್ಕಟ್ಟಿಗೆ ಸಿಲುಕುತ್ತೀರಿ.
Mythological Story: ನಾರದನನ್ನು ಹೆಣ್ಣಾಗಿಸಿ ವಿಷ್ಣು ಕುಚೋದ್ಯ ಮಾಡಿದ್ದೇಕೆ?
ಸಂದೇಶವೇನು? ಲಕ್ಷ್ಮಿ ಹಾಗೂ ಸರಸ್ವತಿಯರಲ್ಲಿ ಯಾರು ಶ್ರೇಷ್ಠ ಎಂದು ನೀವೂ ಜಿಜ್ಞಾಸೆಗೆ ಹೋಗಬೇಡಿ. ಇಬ್ಬರೂ ಶ್ರೇಷ್ಠರೇ. ಚೆನ್ನಾಗಿ ಬದುಕಲು ವಿದ್ಯೆಯೂ ಬೇಕು, ಹಣವೂ ಬೇಕು. ಅವೆರಡರಲ್ಲಿ ಯಾವುದು ಶ್ರೇಷ್ಠ ಎಂದು ನಿರ್ಣಯಿಸಲು ಹೋಗಿ ಇಂದ್ರನಂತಹ ಸ್ವರ್ಗಾಧಿಪತಿಯೇ ತೊಂದರೆ ಸಿಲುಕಿಕೊಂಡಿದ್ದ ಎಂಬುದು ನೆನಪಿರಲಿ.