ಲಕ್ಷಾಂತರ ಭಕ್ತರ ಮಧ್ಯೆ ಅದ್ಧೂರಿ ಕರಗ: ಗೋವಿಂದ ನಾಮಸ್ಮರಣೆಯಲ್ಲಿ ಉತ್ಸವ ಕಣ್ತುಂಬಿಕೊಂಡ ಭಕ್ತಸಾಗರ!

ಚೈತ್ರಮಾಸದ ಶುದ್ಧ ಪೌರ್ಣಿಮೆ ರಾತ್ರಿ ಬೆಳದಿಂಗಳ ಬೆಳಕಿನಲ್ಲಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಶನಿವಾರ ಮಧ್ಯರಾತ್ರಿ ಗೋವಿಂದಾ... ಗೋವಿಂದಾ... ನಾಮಸ್ಮರಣೆಯೊಂದಿಗೆ ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. 
 

Historic Bengaluru Karaga 2025 A lavish Karaga amidst millions of Devotees gvd

ಬೆಂಗಳೂರು (ಏ.13): ಚೈತ್ರಮಾಸದ ಶುದ್ಧ ಪೌರ್ಣಿಮೆ ರಾತ್ರಿ ಬೆಳದಿಂಗಳ ಬೆಳಕಿನಲ್ಲಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಶನಿವಾರ ಮಧ್ಯರಾತ್ರಿ ಗೋವಿಂದಾ... ಗೋವಿಂದಾ... ನಾಮಸ್ಮರಣೆಯೊಂದಿಗೆ ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಶನಿವಾರ ಮಧ್ಯರಾತ್ರಿ ನಗರ್ತರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ಮಹಾರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಅದರ ಹಿಂದೆಯೇ ಧರ್ಮರಾಯಸ್ವಾಮಿ ಗರ್ಭ ಗುಡಿಯಿಂದ ದ್ರೌಪದಿ ದೇವಿ ಮಲ್ಲಿಗೆ ಹೂವಿನ ಕರಗ ಸಾಗಿತು. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ತಿಗಳ ಸಮುದಾಯದ ಅರ್ಚಕ ಎ.ಜ್ಞಾನೇಂದ್ರ ಅವರು ಕರಗವನ್ನು ಹೊತ್ತು ಹೆಜ್ಜೆ ಹಾಕಿದರು. 

ಕರಗದ ಅಕ್ಕ ಪಕ್ಕದಲ್ಲಿ ವೀರಕುಮಾರರು ಕರಗಕ್ಕೆ ಭದ್ರತೆ ಒದಗಿಸಿದರು. ರಾತ್ರಿ ಸುರಿದ ಮಳೆಯ ನಡುವೆಯೂ ಕರಗ ವಿಧಿವಿಧಾನಗಳ ಪೂಜಾ ಕೈಂಕರ್ಯ ಮುಂದುವರಿಸಲಾಯಿತು. ಘಮ ಘಮಿಸುವ ಮಲ್ಲಿಗೆ ಹೂಗಳಿಂದ ಸಿಂಗರಿಸಲಾದ ಕರಗ ಭಕ್ತಿಯಿಂದ ಸಾಗಿತು. ಕರಗ ತೆರಳುತ್ತಿದ್ದ ಮಾರ್ಗದ ಉದ್ದಕ್ಕೂ ಕಟ್ಟಡಗಳ ಮೇಲೆ ನಿಂತು ಜನ ದರ್ಶನ ಪಡೆಯಲು ಕಾತರರಾಗಿದ್ದರು. ಸಿಎಂ ಸಿದ್ದರಾಮಯ್ಯ, ಸಂಸದ ತೇಜಸ್ವಿ ಸೂರ್ಯ, ಎಂಎಲ್‌ಸಿ ಗೋವಿಂದರಾಜು ಸೇರಿ ಹಲವು ಗಣ್ಯರು ಕರಗದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೂರದೂರುಗಳಿಂದ ಬಂದಿದ್ದ ಲಕ್ಷಾಂತರ ಭಕ್ತರ ರಸ್ತೆಯ ಎರಡು ಬದಿಗಳಲ್ಲಿ ನಿಂತು ಕರಗ ಉತ್ಸವ ದರ್ಶನಕ್ಕಾಗಿ ಕಾಯುತ್ತ ನಿಂತಿದ್ದರು.

Latest Videos

ಇಂದು ಐತಿಹಾಸಿಕ ಬೆಂಗ್ಳೂರು ಕರಗ ಉತ್ಸವ: ಸಿಎಂ, ಡಿಸಿಎಂ ಭಾಗಿ

ದ್ರೌಪದಿ ದೇವಿ ಆಹ್ವಾಹನೆ: ಶಕ್ತಿ ದೇವತೆ ದ್ರೌಪದಿ ದೇವಿಯ ಹೆಸರಿನಲ್ಲಿ ನಡೆಯುವುದೇ ಹೂವಿನ ಕರಗ ಉತ್ಸವ ಅಂಗವಾಗಿ ಶನಿವಾರ ಸಂಜೆ ಚಂದ್ರೋದಯವಾಗುತ್ತಿದ್ದಂತೆ ಶ್ರೀ ಧರ್ಮರಾಯ ದೇವಸ್ಥಾನದ ಅರ್ಚಕ ಜ್ಞಾನೇಂದ್ರ ಕಬ್ಬನ್‌ ಪಾರ್ಕ್‌ನಲ್ಲಿರುವ ಕರಗದ ಕುಂಟೆಯಲ್ಲಿ ಪುಣ್ಯ ಸ್ನಾನ ಮಾಡಿ ಗಂಗಾ ಪೂಜೆ ನೆರವೇರಿಸಿದರು. ಅಲ್ಲಿಂದ ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಹಿಂದಿರುಗಿದರು. ದೇವಾಲಯದಲ್ಲಿ ಪರಿವಾರ ಸಹಿತ ಧರ್ಮರಾಯಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಕುಂಭದಲ್ಲಿ ದುರ್ಗೆಯನ್ನು ಆಹ್ವಾ ನಿಸಿ, ಪೂಜಿಸಿ, ಅದಕ್ಕೆ ಹೂವಿನಿಂದ ಅಲಂಕಾರ ಮಾಡಲಾಯಿತು. ಈ ವೇಳೆ ಹಳದಿ ಸೀರೆಯುಟ್ಟು, ಬಳೆ ತೊಟ್ಟಿದ್ದ ದೇವಸ್ಥಾನದ ಅರ್ಚಕ ಜ್ಞಾನೇಂದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಹೂವಿನ ಕರಗ ಹೊತ್ತು ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಸಮೀಪದ ಶಕ್ತಿ ಗಣಪತಿ ಮತ್ತು ಮುತ್ಯಾಲಮ್ಮದೇವಿ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿದರು.

ಭಕ್ತರಲ್ಲಿ ಸಂಭ್ರಮ, ಸಡಗರ: ಶನಿವಾರ ಬೆಳಗ್ಗೆಯಿಂದಲೇ ಭಕ್ತರಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಧರ್ಮರಾಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಲ್ಲಿಗೆ ಹಾಗೂ ಕರ್ಪೂರದ ಪರಿಮಳ ಘಮಘಮಿಸಿತ್ತು. ವರ್ಷಕ್ಕೊಮ್ಮೆ ನಡೆಯುವ ಹೂವಿನ ಕರಗ ಉತ್ಸವ ನಗರ್ತಪೇಟೆಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು. ದೇವಸ್ಥಾನಗಳು, ವಿವಿಧೆಡೆಯ ಬಾಗಿಲುಗಳು, ಕಟ್ಟಡಗಳನ್ನು ಸಂಪೂರ್ಣ ವಾಗಿ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು.

ಸರ್ವ ಧರ್ಮಗಳ ಭಾವೈಕ್ಯತೆಯ ಸಂಗಮವಾಗಿರುವ ಅಕ್ಕಿಪೇಟೆ ರಸ್ತೆಯ ತವಕ್ಕಲ್ ಮಸ್ತಾನ್ ದರ್ಗಾ ಕರಗ ಹಿನ್ನೆಲೆಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿತ್ತು. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಹೂವಿನ ಕರಗ ದರ್ಗಾದೊಳಕ್ಕೆ ಪ್ರವೇಶಿಸಿ ಮುಂದಕ್ಕೆ ಸಾಗುತ್ತದೆ. ಸಂಜೆಯಿಂದಲೇ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಅಪಾರ ಜನಸ್ತೋಮ ಸೇರಲು ಆರಂಭಿಸಿತ್ತು.

ಕರಗ ಉತ್ಸವ ಸಾಗಿದ ಮಾರ್ಗ: ಕರಗ ಉತ್ಸವ ಹಲಸೂರು ಪೇಟೆಯ ಆಂಜನೇಯಸ್ವಾಮಿ, ಶ್ರೀ ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್​ಪೇಟೆ, ಗಾಣಿಗರಪೇಟೆ, ದೊಡ್ಡಪೇಟೆಯಿಂದ ಕೆ.ಆರ್​. ಮಾರುಕಟ್ಟೆ ತಲುಪಲಿದ್ದು, ಈ ಮಾರ್ಗದ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ ನಂತರ ಮಸ್ತಾನ್​ ಸಾಹೇಬರ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ ಹಳೇಗರಡಿ, ಅಣ್ಣಮ್ಮನ ದೇವಾಲಯಕ್ಕೆ ತೆರಳಿ, ಕಿಲಾರಿ ರಸ್ತೆ, ಯಲಹಂಕ ಗೇಟ್​, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆಗಳಲ್ಲಿರುವ ಕುಲಬಾಂಧವರ ಮನೆಗಳಲ್ಲಿ ಮತ್ತು ಭಕ್ತರಿಂದ ಪೂಜೆ ಮಾಡಿಸಿಕೊಂಡು ಹಾಲುಬೀದಿ, ಕಬ್ಬನ್​ಪೇಟೆ, ಸುಣ್ಣಕಲ್​ ಪೇಟೆ ಮಾರ್ಗವಾಗಿ ಕುಲಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ, ನರಸಿಂಹ ಜೋಯಿಸ್​ಗಲ್ಲಿ ಮಾರ್ಗವಾಗಿ ದೇವಾಲಯ ತಲುಪಿತು.

ಇಂದು ರಾತ್ರಿ 11ಕ್ಕೆ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಚಾಲನೆ: ಯಾವಾಗ ಏನೇನು ಕಾರ್ಯಕ್ರಮ?

ಕರ್ಪೂರದಾರತಿ: ಇಷ್ಟಾರ್ಥಗಳ ಸಿದ್ದಿಗಾಗಿ ದೇವಾಲಯದ ಮುಂದೆ ಕರ್ಪೂರವನ್ನು ಹಚ್ಚುವುದು ಕರಗ ಉತ್ಸವ, ರಥೋತ್ಸವದ ವಿಶೇಷ. ಅದರಂತೆ ಶನಿವಾರ ಮಧ್ಯಾಹ್ನ ನೂರಾರು ಭಕ್ತರು ದೇವಾಲಯದ ಆವರಣ ಹಾಗೂ ರಸ್ತೆಯಲ್ಲಿ ಕರ್ಪೂರ ಹಚ್ಚಿ ದೇವರ ಕೃಪೆಗೆ ಪಾತ್ರರಾದರು. ಓಂ, ಸ್ವಸ್ತಿಕ್, ತ್ರಿಶೂಲ, ಗದೆಯನ್ನು ರಸ್ತೆ ಮಧ್ಯದಲ್ಲಿ ಬಳಪದಿಂದ ಚಿತ್ರಿಸಿ ಅದರ ಮೇಲೆ ಹರಕೆ ಹೊತ್ತುಕೊಂಡಷ್ಟು ಕರ್ಪೂರ ಬೆಳಗಿಸಿದರು.

vuukle one pixel image
click me!