ಕಲಬುರಗಿಯ ಸುರುಪುರದಲ್ಲಿ ಭಾವೈಕ್ಯತೆ ಪಾಠ, 9 ದಿನ ತಳವಾರಗೇರಾ ಹಿಂದೂ ಗ್ರಾಮಸ್ಥರಿಂದ ಅಲಾಯಿ ಜಪ
ನಾಗರಾಜ್ ನ್ಯಾಮತಿ
ಸುರಪುರ(ಆ.09): ಹಿಂದೂಗಳು ಮತ್ತು ಮುಸ್ಲಿಮರು ಒಟ್ಟುಗೂಡಿ ಹಬ್ಬವನ್ನಾಚರಿಸುವುದು ಭಾರತದಲ್ಲಿ ಹೊಸತೇನೂ ಅಲ್ಲ. ಆದರೆ ಮುಸ್ಲಿಮರೇ ಇರದ, ಕೇವಲ ಹಿಂದೂಗಳು ಮಾತ್ರ ಇರುವ ಕಲಬುರಗಿ ಜಿಲ್ಲೆಯ ಗ್ರಾಮವೊಂದರಲ್ಲಿ ಹಿಂದಿನಿಂದಲೂ ಮೊಹರಂ ಹಬ್ಬವನ್ನು ಆಚರಿಸುತ್ತಾ ಬರಲಾಗುತ್ತಿದೆ! ಸುಮಾರು 600 ಮನೆಗಳು, 1250ರಷ್ಟು ಜನಸಂಖ್ಯೆಯಿರುವ ಸುರಪುರ ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ ಮೊಹರಂ ಹಿಂದೂ ಮುಸ್ಲಿಮರ ಭಾವೈಕ್ಯತೆಯ
ಸಂಕೇತದ ಹಬ್ಬವೇ ಆಗಿದೆ.
ಸುರಪುರ ತಾಲೂಕು ಕೇಂದ್ರದಿಂದ 7 ಕಿ.ಮೀ. ದೂರದಲ್ಲಿ ತಳವಾರಗೇರಾ ಗ್ರಾಮದಲ್ಲಿ ಹಿಂದೂಗಳೇ ಪಾಲ್ಗೊಳ್ಳುವ ಮೊಹರಂ ಹಬ್ಬದಲ್ಲಿ ಆಲಾಯಿ ದೇವರುಗಳನ್ನು ಕೂರಿಸುವುದರೊಂದಿಗೆ ಆರಂಭವಾಗುತ್ತದೆ. 10ನೇ ದಿನ ಹೊಳೆಗೆ(ದಫನ್) ಕಳುಹಿಸುವವರೆಗೂ ಒಂದಿಲ್ಲೊಂದು ಆಚರಣೆಗಳು ನಡೆಯುತ್ತವೆ. ಗ್ರಾಮದ ಯುವಕರು, ಕಿರಿಯರು, ಹಿರಿಯರು ನಿತ್ಯ 10 ದಿನಗಳ ಕಾಲ ರಾತ್ರಿ 8:30ರಿಂದ ಮಧ್ಯರಾತ್ರಿ 1:00 ಗಂಟೆವರೆಗೆ ಆಲಾಯಿ ಹಾಡು ಹಾಗೂ ಕುಣಿತದಲ್ಲಿ ಪಾಲ್ಗೊಳ್ಳುತ್ತಾರೆ. 1 ಗಂಟೆ ಆಲಾಯಿ ಹಾಡು, ಒಂದು ಗಂಟೆ ಆಲಾಯಿ ಕುಣಿತ ನಡೆಯುತ್ತದೆ.
ರಾಯಚೂರು ಜಿಲ್ಲೆಯಲ್ಲಿ ಮೊಹರಂ ಹಬ್ಬದ ಸಂಭ್ರಮ
ಗಂಧ-ಕತಲ್ ರಾತ್ರಿ:
ತಳವಾರಗೇರಾ ಗ್ರಾಮದಲ್ಲಿ ಮೊಹರಂನ ಕೊನೆ ದಿನ ಗಂಧದ ಮತ್ ಕತಲ್ ರಾತ್ರಿ ಆಚರಿಸಲಾಗುತ್ತದೆ. ಅಂದು ರಾತ್ರಿಯಿಂದ ಬೆಳಗಿನ ತನಕ ಹಾಡು ಮತ್ತು ಕುಣಿತ ನಡೆಯುತ್ತದೆ. ದೇವರು ಇರುವ ಸ್ಥಳಕ್ಕೆ ಬಂದು ಭಕ್ತರು ಪೂಜೆ ಸಲ್ಲಿಸುತ್ತಾರೆ. ಮಾರನೆ ದಿನ ಅಗ್ನಿ ಹಾಯಲಾಗುತ್ತದೆ. ಸಂಜೆ ಹೊಳಿಗೆ ಬೀಳ್ಕೊಡುವುದರ ಮೂಲಕ ಮುಕ್ತಾಯವಾಗುತ್ತದೆ.
ಬೇಡಿಕೆ:
ಗ್ರಾಮದಲ್ಲಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡಿರುತ್ತಾರೆ. ಭಕ್ತರು ಆಲಾಯಿ ದೇವರು ಕೂರಿಸುವ ಸ್ಥಳವನ್ನು ಅಲಂಕರಿಸುತ್ತಾರೆ. ಇನ್ನು ಕೆಲವರು ಸಣ್ಣ ದೇಗುಲಗಳಿಗೆ ಬಣ್ಣ ಬಳಿಸುತ್ತಾರೆ. ಮನೆ ಮನೆಗೆ ದೇವರು ಹೋಗಿ ಆಶೀರ್ವಾದ ಮಾಡುತ್ತದೆ. ಹೊಳಿಗೆ ಹೋಗುವ ದಿನದಂದು ಎಲ್ಲವು ಸಂಪನ್ನಗೊಳ್ಳುತ್ತದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಮಾನಪ್ಪ ಹುಜರತಿ ಹೇಳಿದರು.
ನಾಗರಪಂಚಮಿ ಬಳಿಕ ವಿಶೇಷ ಆಚರಣೆ, ಹಾವಿಗೆ ಹಾಲಲ್ಲ ರಕ್ತಾಭಿಷೇಕ ಮಾಡ್ತಾರೆ !
ತಳವಾರಗೇರಾ ಗ್ರಾಮದ ಮಧ್ಯದಲ್ಲಿ ದೇವರುಗಳನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುತ್ತದೆ. ಆಲಾಯಿ ಕುಣಿತ, ಮೊಹರಂ ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ವಿವಿಧ ಆಚರಣೆಗಳನ್ನು ಮಾಡಲಾಗುತ್ತದೆ ಅಂತ ತಳವಾರಗೇರಾ ಶಾಂತಪ್ಪ ಕಕ್ಕೇರಿ ಪೂಜಾರಿ ಹೇಳಿದ್ದಾರೆ.
ವಾಗಣಗೇರಿಯ ಮುಸ್ಲಿಂಮರು ಬಂದು ದೇವರಿಗೆ ಪೂಜೆ ಮಾಡಲಾಗುತ್ತದೆ. ಇಬ್ಬರು ಮಹಿಳೆಯರು, ಮೂವರು ಪುರುಷರು ಆಗಮಿಸುತ್ತಾರೆ. ದೇವರ ಕೂರಿಸುವುದರಿಂದ ಹಿಡಿದು ದಫನ್ ಆಗುವವರೆಗೂ ಇರುತ್ತಾರೆ. ಇವರಿಗೆ ಭಕ್ತಿಯ ರೂಪದಲ್ಲಿ ಮನೆ ಮನೆಯಿಂದ ಅಕ್ಕಿ, ಕೆಲವರು ಹಣ ನೀಡುತ್ತಾರೆ ಅಂತ ತಳವಾರಗೇರಾದ ಗುಡುದಪ್ಪ, ದೇವರಾಜ ತಿಳಿಸಿದ್ದಾರೆ.