ಇಂದು ಹಿಮಾಲಯನ್ ಯೋಗಿ ಸ್ವಾಮಿ ರಾಮ ಮಹಾಸಮಾಧಿ ದಿನ: ಹೃದಯ ಬಡಿತವನ್ನೇ ನಿಲ್ಲಿಸಿದ್ದ ಈ ಮಹಾಯೋಗಿಯ ಬದುಕು ಅಂತ್ಯವಾದದ್ದು ಹೇಗೆ?

By Bhavani Bhat  |  First Published Nov 13, 2024, 10:46 AM IST

 ಭಾರತೀಯ ಯೋಗಪದ್ಧತಿಯನ್ನು, ಅದರ ಹಿಂದಿನ ವಿಸ್ಮಯಗಳನ್ನು ಜಗತ್ತಿಗೆ ಪರಿಚಯಿಸಿದ ಮಹಾನ್‌ ಯೋಗಿ ಸ್ವಾಮಿ ರಾಮ ದೇಹತ್ಯಜಿಸಿದ ದಿನವಿಂದು. ಹದಿನೇಳು ಸೆಕೆಂಡ್ ಹೃದಯ ಬಡಿತವನ್ನೇ ನಿಲ್ಲಿಸಿದ್ದ ಈ ಮಹಾತ್ಮರ ಬದುಕು ಅಂತ್ಯವಾದದ್ದು ಹೇಗೆ?


ಹಿಮಾಲಯದ ಮಹಾನ್ ಯೋಗಿ ಸ್ವಾಮಿ ರಾಮ ಅವರ ಮಹಾ ಸಮಾಧಿ ದಿನವಿಂದು. ಈ ಮಹಾತ್ಮರು ದೇಹ ತ್ಯಜಿಸಿದ್ದು 1996 ನವೆಂಬರ್ 13ಕ್ಕೆ. ಘಡ್ವಾಲ್ ಹಿಮಾಲಯದ ಹಳ್ಳಿಯೊಂದರಲ್ಲಿ 1925ರಲ್ಲಿ ಹುಟ್ಟಿದ ಇವರ ಮೂಲ ಹೆಸರು ಬೃಜ್ ಕಿಶೋರ್ ಧಾಸ್ಮಾನ. ಅಕ್ಕರೆಯಿಂದ ಆಪ್ತರು ಕರೆಯುತ್ತಿದ್ದ ಹೆಸರು ಭೋಲೆ ಬಾಬಾ. ಇವರು ಹುಟ್ಟಿದಾಗ ಇವರ ತಂದೆ ತಾಯಿಗೆ ಮಧ್ಯ ವಯಸ್ಸು ದಾಟಿತ್ತು ಎಂಬ ವಿವರಗಳು ಇವರ ಜೀವನಚರಿತ್ರೆಯಲ್ಲಿ ಸಿಗುತ್ತವೆ. ಹಿಮಾಲಯದ ಗವಿಗಳಲ್ಲಿ ಸದಾ ಸಮಾಧಿ ಸ್ಥಿತಿಯಲ್ಲಿ ಧ್ಯಾನಸ್ಥರಾಗಿರುತ್ತಿದ್ದ ಯೋಗಿ ಬೆಂಗಾಲಿ ಬಾಬಾಜಿ ಇವರ ಗುರು. ಬಹಳ ಚಿಕ್ಕ ವಯಸ್ಸಿನಲ್ಲೇ ಇವರನ್ನು ಗುರು ಬೆಂಗಾಲಿ ಬಾಬಾಜಿ ತಾವು ತಪಸ್ಸು ಮಾಡುವ ಹಿಮಾಲಯದ ಗುಹೆಗೆ ಕರೆತಂದು ಸಾಕುತ್ತಾರೆ. ಬಾಲ್ಯದಲ್ಲೇ ಅಂತಃಶಿಸ್ತು ರೂಪಿಸುತ್ತಾರೆ. ತಾಯಿ ಮಮತೆಯನ್ನೂ ಮೀರಿದ ಗುರು ವಾತ್ಸಲ್ಯವನ್ನು ಧಾರೆ ಎರೆಯುತ್ತಾರೆ. ಗುರುಗಳಿಂದ ಯೋಗ, ಫಿಲಾಸಫಿ, ಅಧ್ಯಾತ್ಮದ ಶಿಕ್ಷಣದ ಜೊತೆಗೆ ಇತರ ಮಕ್ಕಳೊಂದಿಗೆ ಶಾಲಾ ಶಿಕ್ಷಣವನ್ನೂ ಸ್ವಾಮಿ ರಾಮ ಪಡೆಯುತ್ತಾರೆ. ಹಿಮಾಲಯದ ಯೋಗಿಗಳ ಜೊತೆಗೆ ಬುದ್ಧಿಸ್ಟ್ ಯೋಗಿಗಳಿಂದಲೂ ಪರಂಪರೆಯ ಜ್ಞಾನ ಪಡೆಯುತ್ತಾರೆ.

ಬಹಳ ಕಿರಿಯ ವಯಸ್ಸಿನಲ್ಲೇ ವಿವಿಧ ಯೋಗಿಗಳಿಂದ ತಂತ್ರ, ಶ್ರೀವಿದ್ಯೆ, ಪರಕಾಯ ಪ್ರವೇಶಗಳನ್ನು ಕಲಿಯುವ ಇವರ ಸಾಧನೆ ಸಾಮಾನ್ಯವಾದದ್ದಲ್ಲ.

Latest Videos

undefined

ಡಿಗ್ರಿವರೆಗಿನ ಶಿಕ್ಷಣವನ್ನು ಭಾರತದಲ್ಲಿ ಪೂರೈಸಿ ವಿದೇಶದಲ್ಲಿ ಉನ್ನತಿ ಪದವಿ ಪಡೆಯುತ್ತಾರೆ. ಆಕ್ಸ್‌ಫರ್ಡ್‌ ಯೂನಿವರ್ಸಿಟಿಯಿಂದ ಉನ್ನತ ಪದವಿ ಪಡೆದು ಭಾರತಕ್ಕೆ ಮರಳುತ್ತಾರೆ.

ಚಳಿಗಾಲ ಶುರು: ಬಾಲರಾಮನ ಬೆಚ್ಚಗಿಡಲು ಡಿಸೈನರ್‌ ವಸ್ತ್ರ, ಹೀಟರ್

ತನ್ನ 24ನೇ ವಯಸ್ಸಿನಲ್ಲಿ ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಕರವೀರ ಪೀಠದ ಪೀಠಾಧಿಪತಿಗಳಾಗುತ್ತಾರೆ. ಆಗ ಇವರಿಗೆ ಸದಾಶಿವ ಭಾರತೀ ಸ್ವಾಮೀಜಿ ಎಂಬ ನಾಮಧೇಯವಿರುತ್ತದೆ. ಈ ಸಂದರ್ಭ ಮಠದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಇವರು ಮುಂದೆ ಕೆಲವೇ ವರ್ಷದಲ್ಲಿ ಮಠ, ಇದರ ಕಟ್ಟಳೆಗಳಿಂದ ಹೊರಬಂದು ಸ್ವತಂತ್ರ್ಯರಾಗುತ್ತಾರೆ. ತಮ್ಮ ಅಧ್ಯಾತ್ಮ ಸಾಧನೆಯನ್ನು ಮುಂದುವರಿಸುತ್ತಾರೆ. ಜೊತೆಗೆ ದೇಶ, ವಿದೇಶಗಳಲ್ಲಿ ಹಠ ಯೋಗ, ಭಾರತೀಯ ಯೋಗ ಪದ್ಧತಿ, ಧ್ಯಾನ ಇತ್ಯಾದಿಗಳ ಬಗೆಗೆ ಉಪನ್ಯಾಸ ನೀಡುತ್ತಾರೆ. ಒಂದು ಹಂತದಲ್ಲಿ ಅಮೇರಿಕಾದಲ್ಲಿ ನೆಲೆಸಿ ಅಲ್ಲಿ ಯೋಗ, ತತ್ವ ಪ್ರಸಾರಕ್ಕೆ ಮುಂದಾಗುತ್ತಾರೆ. ಹಲವು ಯೋಗಿಕ ಸಿದ್ಧಿಗಳನ್ನು ಆಧುನಿಕ ಜಗತ್ತಿನ ಮುಂದಿಟ್ಟು ಆ ಕಾಲದ ದೊಡ್ಡ ದೊಡ್ಡ ವೈದ್ಯರು, ವಿಜ್ಞಾನಿಗಳೇ ನಿಬ್ಬೆರರಾಗುವಂತೆ ಮಾಡುತ್ತಾರೆ. ತನ್ನ ಹೃದಯ ಬಡಿತವನ್ನು ಹದಿನೇಳು ಸೆಕೆಂಡ್‌ಗಳ ಕಾಲ ನಿಲ್ಲಿಸಿದ್ದು ಅವರು ಮಾಡಿದ ಪ್ರಯೋಗಗಳಲ್ಲೊಂದು.

ಇದರ ಜೊತೆಗೆ ತನ್ನ ಹೃದಯ ಬಡಿತವನ್ನು ನಿಮಿಷಕ್ಕೆ ೩೦೦ಕ್ಕೇರಿಸುತ್ತಾರೆ. ಅಷ್ಟೇ ಅಲ್ಲ, ತನ್ನ ದೇಹದ ಬಲಭಾಗದ ಉಷ್ಣಾಂಶವನ್ನು ೫ ಡಿಗ್ರಿ ಸೆಲ್ಶಿಯಸ್‌ಗೆ ಇಳಿಸಿ, ಇನ್ನೊಂದು ಭಾಗದ ಟೆಂಪರೇಚರ್ ನಾರ್ಮಲ್ ಇರುವಂತೆ ಮಾಡುತ್ತಾರೆ. ಇಂಥಾ ಹಲವು ಪ್ರಯೋಗಗಳನ್ನು ಆ ಕಾಲದ ಖ್ಯಾತ ವೈದ್ಯರು, ವಿಜ್ಞಾನಿಗಳ ಮುಂದೆ ಮಾಡಿ ತೋರಿಸುತ್ತಾರೆ. ಇದನ್ನು ಅವರು ವೈಜ್ಞಾನಿಕವಾಗಿ ಪರೀಕ್ಷಿಸಿ ದಿಗ್ಮೂಢರಾಗುವಂತೆ ಮಾಡುತ್ತಾರೆ.

90 ವರ್ಷದ ನಂತರ ಕಾರ್ತಿಕ ಪೂರ್ಣಿಮೆಯಲ್ಲಿ ವಿಶೇಷ ಯೋಗ, 3 ರಾಶಿಗೆ ಶ್ರೀಮಂತಿಕೆ ಭಾಗ್ಯ

ಇಂಥಾ ಸ್ವಾಮಿ ರಾಮ ತಾನೇ ತನ್ನ ದೇಹದಲ್ಲಿ ಕ್ಯಾನ್ಸರ್ ಗಡ್ಡೆಯನ್ನು ಮೂಡಿಸಿ ಅದನ್ನು ದೇಹದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಶಿಫ್ಟ್ ಮಾಡಿದ್ದು ಮತ್ತೊಂದು ವಿಸ್ಮಯ. ಇದನ್ನು ಬೆಂಗಳೂರಿನಲ್ಲಿ ಅವರು ಪ್ರಸ್ತುತ ಪಡಿಸಿದ್ದು ಆ ಕಾರ್ಯಕ್ರಮವನ್ನು ಈಗ ಸಕಲಮಾ ಎಂದು ಖ್ಯಾತರಾಗಿರುವ ಆಗಿನ ಜ್ಯೋತಿ ಪಟ್ಟಾಭಿರಾಂ ಹಾಗೂ ಇವರ ಪತಿ ಯೋಗಾಚಾರ್ಯ ಪಟ್ಟಾಭಿರಾಂ ಗುರೂಜಿ ಅವರೇ ಆಯೋಜಿಸಿದ್ದು ವಿಶೇಷವಾಗಿತ್ತು.

ಇಂಥಾ ಸ್ವಾಮಿ ರಾಮರು ದೇಹ ತ್ಯಜಿಸಿದ್ದು ಕ್ಯಾನ್ಸರ್‌ನಿಂದ. ಜಗತ್ತಿನ ಖ್ಯಾತ ಯೋಗಿಗಳಾದ ಚಿಂತಕರಾದ ರಮಣ ಮಹರ್ಷಿ, ಜಿಡ್ಡು ಕೃಷ್ಣಮೂರ್ತಿ ಅವರೂ ದೇಹಾರ್ಪಣೆ ಮಾಡಿದ್ದು ಕ್ಯಾನ್ಸರ್‌ನಿಂದಲೇ. ಇವರಿಗೆಲ್ಲ ಇದನ್ನು ಗುಣಪಡಿಸುವುದು ಕ್ಷಣದ ಕೆಲಸ. ಆದರೆ ಅವರಿಗೆ ದೇಹ ತ್ಯಜಿಸುವುದಕ್ಕೆ ಒಂದು ನೆವ ಬೇಕಷ್ಟೇ. ಜೊತೆಗೆ ಅವರು ಜಗತ್ತಿನ ಕಷ್ಟ ಕೋಟಲೆಗಳನ್ನು ಪರಿಹರಿಸುತ್ತಾರೆಯೇ ಹೊರತು ತಮ್ಮ ದೇಹದ ಹಾನಿಯ ಬಗೆಗೆ ಎಂದೂ ಚಿಂತಿಸುವುದಿಲ್ಲ. ಸ್ವಾಮಿ ರಾಮ ಹೀಗೆ ತಮ್ಮ ದೇಹವನ್ನು ತ್ಯಜಿಸಲು ಕ್ಯಾನ್ಸರ್‌ ಅನ್ನು ನೆವವಾಗಿಸಿಕೊಂಡರು.

 

ದೇಹ ತ್ಯಜಿಸಿದ ಬಳಿಕ ಹಲವು ಶಿಷ್ಯರಿಗೆ ಸೂಕ್ಷ್ಮ ಶರೀರದ ಮೂಲಕ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಇದನ್ನು ಗುರು ಸಕಲಮಾ ಅವರು ತಮ್ಮ 'ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು' ಕೃತಿಯಲ್ಲಿ ವಿವರವಾಗಿ ದಾಖಲಿಸಿದ್ದಾರೆ.

click me!