Anagha Devi: ದತ್ತಾತ್ರೇಯ ಸ್ವಾಮಿಯ ಹೆಣ್ಣು ರೂಪ ಅನಘಾ ದೇವಿ

By Suvarna NewsFirst Published Dec 9, 2021, 10:13 AM IST
Highlights

ಭಕ್ತರಿಗೆ ದೇವರ ಸ್ವರೂಪದ ಬಗ್ಗೆ ಅರ್ಥ ಮಾಡಿಸಲು ದತ್ತಾತ್ರೇಯರು ತಾಳಿದ ರೂಪವೇ ಅನಘಾ ದೇವಿ. ಅನಘಾ ದೇವಿಯ ಕತೆಯ ಬಗ್ಗೆ ದತ್ತಾತ್ರೇಯ ಪುರಾಣದಲ್ಲಿ ಏನಿದೆ ಗೊತ್ತಾ?

ದತ್ತಾತ್ರೇಯ ಸ್ವಾಮಿಯ ಬಗ್ಗೆ ಕೇಳಿಯೇ ಇರುತ್ತೀರಿ. ಆದರೆ, ಆತನ ಹೆಣ್ಣು ರೂಪ ಅನಘಾ ದೇವಿಯ ಬಗ್ಗೆ ಗೊತ್ತಾ? ದೇವರನ್ನು ಗಂಡು, ಹೆಣ್ಣು ಎಂದು ವಿಭಾಗಿಸುವುದು ಸರಿಯಲ್ಲ. ದೇವರು ಯಾವ ರೂಪದಲ್ಲಿ ಬೇಕಾದರೂ ಇರಬಹುದು. ರೂಪವಲ್ಲ, ಶಕ್ತಿಯಾಗಿ ದೇವರನ್ನು ಆರಾಧಿಸುವವರು ನಾವು. ಹಾಗಿದ್ದೂ, ಅನಘಾ ದೇವಿಯ ಈ ಕತೆ ಬಹಳ ಆಸಕ್ತಿಕರವಾಗಿದೆ ಓದಿ.

ತ್ರಿಲೋಕ ಸುಂದರಿ
ದತ್ತಾತ್ರೇಯ ಸ್ವಾಮಿಯ ಯೋಗದ ಶಕ್ತಿಯಿಂದ ಅವತಾರವೆತ್ತಿದವಳು ಅನಘಾ ದೇವಿ(Anagha Devi). ಬಹಳ ಸುಂದರಿ. ಹೊಳೆಯುವ ಮುಖಕಾಂತಿಯ ಈಕೆ ದತ್ತಾತ್ರೇಯ ಸ್ವಾಮಿಯ ಹಲವಾರು ಅವತಾರಗಳಲ್ಲಿ ಒಬ್ಬಾಕೆ. 
ಕಮಲದ ಹೂವಿನಲ್ಲಿ ಕೂರವ ಈಕೆ, ಕಾಲಿಗೆ ತುಂಬು ಗೆಜ್ಜೆ ಧರಿಸಿರುತ್ತಾಳೆ. ಒಂದು ಕೈಲಿ ತಾವರೆ(lotus)ಯನ್ನು ಹಿಡಿದಿದ್ದರೆ ಮತ್ತೊಂದು ಕೈಯ್ಯನ್ನು ರಕ್ಷಣೆಯ ಭರವಸೆ ನೀಡುವಂತೆ ಇಟ್ಟುಕೊಂಡಿರುತ್ತಾಳೆ. ಆಕೆಯ ಅರ್ಧ ನಿಮೀಲಿತ ಕಣ್ಗಳು ಯೋಗಧ್ಯಾನದಲ್ಲಿರುವುದನ್ನು ಸೂಚಿಸುತ್ತವೆ. 

Personality traits of Amavasya born: ಏಕಾದಶಿ, ಹುಣ್ಣಿಮೆ, ಅಮಾವಾಸ್ಯೆ ತಿಥಿಯಲ್ಲಿ ಹುಟ್ಟಿದವರು ಹೀಗೆ..!

ದತ್ತಾತ್ರೇಯ ಸ್ವಾಮಿ ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ(Brahma, Vishnu, and Maheshwar) ಮೂವರ ಅಂಶವೂ ಸೇರಿದ ತ್ರಿದೇವನ ಸ್ವರೂಪ. ಹಾಗೆಯೇ ಅನಘಾ ದೇವಿ ಎಂದರೆ ತ್ರಿದೇವಿ. ಆಕೆ ಸರಸ್ವತಿ, ಲಕ್ಷ್ಮಿ, ಪಾರ್ವತಿ(Saraswati, Lakshmi, and Parvati)ಯ ಅಂಶಗಳೆಲ್ಲ ಮಿಳಿತವಾದ ಶಕ್ತಿರೂಪ. ಭಕ್ತರಿಗೆ ತಾಯಿಯ ಪ್ರೀತಿಯನ್ನು ಧಾರೆಯೆರೆಯುವ ಮಮತೆ ಆಕೆಯದ್ದು. ಅನಘಾ ದೇವಿಯು ದತ್ತಾತ್ರೇಯ ಸ್ವಾಮಿಯ ಶಕ್ತಿಯಾಗಿ ಆತನೊಳಗೆ ಇರುತ್ತಾಳೆ. 

ದತ್ತಾತ್ರೇಯ ಪುರಾಣ(Dattatreya Purana)
ದತ್ತಾತ್ರೇಯ ಪುರಾಣದಲ್ಲಿ ಹೇಳುವಂತೆ, ದತ್ತಾತ್ರೇಯನು ತ್ರಿದೇವನಷ್ಟೇ ಅಲ್ಲದೆ, ಅವಧೂತ ಕೂಡಾ. ಆತನಿಗೆ ಮನೆಯಲ್ಲಿ ಕರೆವ ಹೆಸರು ಅನಘಾ ಎಂದು. ತಪಸ್ವಿಗಳಾದ ದತ್ತಾತ್ರೇಯರು ತಮ್ಮ ತಪಶಕ್ತಿಯಿಂದ ಹೆಣ್ಣಿನ ರೂಪ ತಾಳುತ್ತಿದ್ದರು. ಅದೇ ಅನಘಾ ದೇವಿ. ಅನಘಾ ದೇವಿಯ ಹುಟ್ಟಿನ ಹಿಂದೆ ಹಲವು ಕತೆಗಳಿವೆ. ಅವುಗಳಲ್ಲಿ ಹೆಚ್ಚು ಜನಪ್ರಿಯವಾದುದನ್ನು ಇಲ್ಲಿ ಕೊಡಲಾಗಿದೆ. 

Mythology and Navagraha: ನಮ್ಮನ್ನಾಳುವ ನವಗ್ರಹಗಳ ಬಗ್ಗೆ ನಿಮಗೆಷ್ಟು ಗೊತ್ತು?

ಒಮ್ಮೆ ದತ್ತಾತ್ರೇಯ ಸ್ವಾಮಿಗೆ 5 ವರ್ಷಗಳಿದ್ದಾಗ ಕೊಳವೊಂದರಲ್ಲಿ ಅವರು ಕಳೆದು ಹೋಗುತ್ತಾರೆ. ಬಹಳಷ್ಟು ತಪಸ್ವಿಗಳು ಹಾಗೂ ಶಿಷ್ಯರು ಅವರು ಹಿಂದಿರುಗುತ್ತಾರೆಂದು ಕೊಳದ ಬಳಿಯೇ ಕಾಯುತ್ತಿರುತ್ತಾರೆ. ಸುಮಾರು 100 ವರ್ಷಗಳ ಬಳಿಕ ಸಮಾಧಿ ಸ್ಥಿತಿಯಿಂದ ಹೊರಬರುವ ದತ್ತಾತ್ರೇಯರು ತಮಗಾಗಿ ಕಾಯುತ್ತಿದ್ದ ಶಿಷ್ಯರನ್ನು ಪರೀಕ್ಷಿಸ ಬಯಸುತ್ತಾರೆ. ಹೀಗಾಗಿ, ಯೋಗದ ಶಕ್ತಿ ಬಳಸಿ ಚೆಂದದ ಹೆಣ್ಣಿನ ಸ್ವರೂಪ ತಾಳುತ್ತಾರೆ. 
ನಂತರ ಕೈಲಿ ಅಮೃತ ಕುಡಿಯುತ್ತಾ, ನೃತ್ಯ ಮಾಡತೊಡಗುತ್ತಾರೆ. ಈಕೆಯನ್ನು ನೋಡಿದವರಲ್ಲಿ ಕೆಲವರು ಕೈಲಿ ಮಧು ಹಿಡಿದ ಈಕೆ ಮಧುಮತಿ ಎಂದರೆ, ನದಿಯಂತೆ ಕುಣಿಯುವ ಈಕೆ ನದಿಯೇ ಇರಬೇಕು ಎನ್ನುತ್ತಾರೆ. ಆದರೆ, ಕೆಲವರಿಗೆ ಮಾತ್ರ ಆಕೆ ದತ್ತಾತ್ರೇಯ ಸ್ವಾಮಿಯ ಹೆಣ್ಣಿನ ರೂಪ ಎಂಬುದು ಅರಿವಾಗಿ ಆಕೆಯನ್ನು ಪೂಜಿಸತೊಡಗುತ್ತಾರೆ. ಎಲ್ಲರ ಅಭಿಪ್ರಾಯ ಕೇಳಿದ ಮೇಲೆ ದತ್ತಾತ್ರೇಯರು ಕೊಳದಿಂದ ಹೊರ ಬಂದು ತಮ್ಮ ತಪೋಶಕ್ತಿ(yogic energy)ಯಿಂದ ಹುಟ್ಟಿದ ಹೆಣ್ಣನ್ನು ಅನಘಾ ಎಂದು ಹೆಸರಿಸುತ್ತಾರೆ. ಅನಘಾ ಎಂದರೆ ಪಾಪವೇ ಮಾಡದವಳು ಎಂದರ್ಥ.

ಯಾರೆಲ್ಲ ಆಕೆಯ ರೂಪವನ್ನು ಗುರುತಿಸುತ್ತಾರೋ ಅವರಿಗೆ ಸುಖ, ಸಮೃದ್ಧಿ(prosperity) ಹಾಗೂ ಶಾಂತಿ(peace) ದೊರಕುತ್ತದೆ. ಅವರೆಲ್ಲ ದುಃಖಗಳು ಮರೆಯಾಗುತ್ತವೆ. ಅನಘ ದೇವನಿಗೂ, ಅನಘ ದೇವಿಗೂ ವ್ಯತ್ಯಾಸವಿಲ್ಲ, ಅವರಿಬ್ಬರೂ ಒಂದೇ ಎಂದು ಅರಿತವರಿಗೆ ಕೂಡಾ ದೇವರ ಕೃಪಾಶೀರ್ವಾದ ದೊರಕುತ್ತದೆ. 
ಈ ಲೀಲೆಯ ಹಿಂದಿನ ಕಾರಣವೇ ದೇವರಲ್ಲಿ ಗಂಡು, ಹೆಣ್ಣೆಂಬ ಬೇಧವಿಲ್ಲ ಎಂದು ಭಕ್ತರಿಗೆ ಅರ್ಥ ಮಾಡಿಸುವುದು. ದೇವರು ಯಾವ ರೂಪದಲ್ಲಿಯೂ ಇರಬಹುದು ಅಥವಾ ರೂಪವೇ ಇಲ್ಲದಿರಬಹುದು. ದೇವರು ಶಕ್ತಿಯ ಸ್ವರೂಪ ಎಂಬುದನ್ನು ಅರಿಯಬೇಕು. ಇದನ್ನರಿತು ಅನಘಾ ದೇವಿಯ ಪೂಜೆ ಮಾಡುವುದರಿಂದ ಸರ್ವ ವ್ಯಾಧಿಗಳೂ ನಿವಾರಣೆಯಾಗಿ ಶಾಂತಿ, ನೆಮ್ಮದಿ, ಅಷ್ಟಸಿದ್ಧಿಗಳೂ ದೊರಕುತ್ತವೆ. 

click me!