
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹ, ರಾಶಿ ಮತ್ತು ನಕ್ಷತ್ರಗಳಿಗೆ ವಿಶೇಷ ಪ್ರಾಮುಖ್ಯತೆಯಿದೆ. ವ್ಯಕ್ತಿಯ ಗುಣ - ವಿಶೇಷತೆಗಳನ್ನು ಅರಿಯಲು, ಭವಿಷ್ಯದ ವಿಚಾರಗಳನ್ನು ತಿಳಿಯಲು ಜನ್ಮ ನಕ್ಷತ್ರದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಹಸ್ತಾ, ಚಿತ್ರಾ, ಸ್ವಾತಿ, ವಿಶಾಖಾ ಮತ್ತು ಅನುರಾಧ ನಕ್ಷತ್ರದಲ್ಲಿ ಜನಿಸಿದವರ ಗುಣ ವಿಶೇಷತೆಗಳ ಬಗ್ಗೆ ತಿಳಿಯೋಣ.....
ಇದನ್ನು ಓದಿ: ಈ ನಾಲ್ಕು ರಾಶಿಯವರು ಮಿತವ್ಯಯಿಗಳು..
ಹಸ್ತಾ ನಕ್ಷತ್ರ
ಒಟ್ಟು ನಕ್ಷತ್ರಗಳ ಪಟ್ಟಿಯಲ್ಲಿ ಹಸ್ತಾ ನಕ್ಷತ್ರವು ಹದಿಮೂರನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಚಂದ್ರ ದೇವನಾಗಿದ್ದಾನೆ. ವ್ಯವಹಾರದ ಬಗ್ಗೆ ಉತ್ತಮ ಜ್ಞಾನವನ್ನು ಇವರು ಹೊಂದಿರುತ್ತಾರೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಬೇರೆಯವರಿಂದ ಕೆಲಸ ಮಾಡಿಸಿಕೊಳ್ಳುವ ಕಲೆ ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಎಲ್ಲ ರೀತಿಯ ಸುಖ ಮತ್ತು ಐಷಾರಾಮಿ ಜೀವನ ಸಿಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಜೀವನವು ಶಾಂತಿ ಮತ್ತು ನೆಮ್ಮದಿಯಿಂದ ಸಾಗುತ್ತದೆ.
ಚಿತ್ರಾ ನಕ್ಷತ್ರ
ಇಪ್ಪತ್ತೇಳು ನಕ್ಷತ್ರಗಳಲ್ಲಿ ಚಿತ್ರಾ ನಕ್ಷತ್ರವು ಹದಿನಾಲ್ಕನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಮಂಗಳಗ್ರಹವಾಗಿದೆ. ಚಿತ್ರಾ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳ ಸ್ವಭಾವದಲ್ಲಿ ಮಂಗಳ ಗ್ರಹದ ಪ್ರಭಾವ ನೋಡಬಹುದಾಗಿದೆ. ಖಾಸಗಿ ವ್ಯಕ್ತಿಗಳ ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಸಮಾಜದ ಹಿತಕ್ಕಾಗಿ ಕೆಲಸ ಮಾಡುವುದು ಇವರ ಅಭಿರುಚಿಯಾಗಿರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಕಠಿಣ ಸಮಸ್ಯೆಗಳು ಎದುರಾದರೂ ಗಾಬರಿಗೊಳ್ಳದೆ ಸಮಾಧಾನದಿಂದ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಪರಿಶ್ರಮ ಮತ್ತು ಧೈರ್ಯವೇ ಇವರ ಸಾಧನವಾಗಿರುತ್ತದೆ. ಚಿತ್ರಾ ನಕ್ಷತ್ರದಲ್ಲಿ ಜನಿಸಿದವರು ಇತರರ ಸಹಾಯಕ್ಕೆ ಸದಾ ಸಿದ್ಧರಿರುತ್ತಾರೆ.
ಇದನ್ನು ಓದಿ: ಈ ನಾಲ್ಕು ರಾಶಿಯವರು ಬುದ್ಧಿವಂತರು ಜೊತೆಗೆ ಚತುರರು ಆಗಿರುತ್ತಾರಂತೆ...
ಸ್ವಾತಿ ನಕ್ಷತ್ರ
ನಕ್ಷತ್ರಗಳ ಕೂಟದಲ್ಲಿ ಸ್ವಾತಿ ನಕ್ಷತ್ರ ಹದಿನೈದನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ರಾಹು ಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳ ಸ್ವಭಾವ ಮತ್ತು ಆಚರಣೆ ಅತ್ಯಂತ ಸ್ವಚ್ಛವಾಗಿರುತ್ತದೆ. ಈ ನಕ್ಷತ್ರದಲ್ಲಿ ಬಿದ್ದ ಮಳೆ ನೀರು ಮುತ್ತು ಆಗುತ್ತದೆ ಎಂಬ ನಂಬಿಕೆ ಸಹ ಇದೆ. ತುಲಾ ರಾಶಿಯ ಕಾರಣ ಸ್ವಾತಿ ನಕ್ಷತ್ರದವರು ಸಾತ್ವಿಕ ಮತ್ತು ತಾಮಸ ಎರಡೂ ಗುಣವನ್ನು ಹೊಂದಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ರಾಜಕಾರಣದಂಥ ಕ್ಷೇತ್ರಗಳಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುತ್ತಾರೆ.
ವಿಶಾಖಾ ನಕ್ಷತ್ರ
ಒಟ್ಟು ನಕ್ಷತ್ರಗಳಲ್ಲಿ ವಿಶಾಖ ನಕ್ಷತ್ರವು ಹದಿನಾರನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಗುರು ಗ್ರಹವಾಗಿದೆ. ಪಾಠ ಪ್ರವಚನಗಳಂಥ ಉತ್ತಮ ಕಾರ್ಯಗಳಲ್ಲಿ ವಿಶಾಖಾ ನಕ್ಷತ್ರದವರು ಹೆಸರುವಾಸಿಯಾಗುತ್ತಾರೆ. ಶರೀರಕ್ಕೆ ಹೆಚ್ಚು ಶ್ರಮ ಕೊಡದ ಈ ವ್ಯಕ್ತಿಗಳು ಬುದ್ಧಿಯ ಬಲದ ಮೇಲೆಯೇ ಎಲ್ಲರನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸಮಾಜದಲ್ಲಿ ಉತ್ತಮ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತಾರೆ. ಸಾಮಾಜಿಕ ಕಾರ್ಯಗಳಲ್ಲಿ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ತಮ್ಮ ಲಕ್ಷ್ಯವನ್ನು ತಲುಪಲು ಹೆಚ್ಚಿನ ಶ್ರಮವಹಿಸುತ್ತಾರೆ.
ಇದನ್ನು ಓದಿ: ಆಶ್ಲೇಷಾ, ಮಘಾ, ಪೂರ್ವ ಮತ್ತು ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಜನಿಸಿದವರ ಗುಣವಿದು!
ಅನುರಾಧಾ ನಕ್ಷತ್ರ
ನಕ್ಷತ್ರಗಳ ಕೂಟದಲ್ಲಿ ಅನೂರಾಧ ನಕ್ಷತ್ರವು ಹದಿನೇಳನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಶನಿಗ್ರಹವಾಗಿದೆ. ಅನುರಾಧ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಆದರ್ಶ ಮತ್ತು ಸಿದ್ಧಾಂತಗಳ ಮೇಲೆಯೇ ಜೀವನ ನಡೆಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಿಟ್ಟಿನ ಮೇಲೆ ನಿಯಂತ್ರಣವಿರುವುದಿಲ್ಲ. ಹಾಗಾಗಿ ಅನೇಕ ಬಾರಿ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಬುದ್ಧಿಗಿಂತ ಹೆಚ್ಚು ಮನಸ್ಸಿನಿಂದ ಯೋಚಿಸುತ್ತಾರೆ. ಇವರು ತಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಅನುರಾಧ ನಕ್ಷತ್ರದವರ ಮಾತು ಒರಟಾಗಿರುತ್ತದೆ. ಹಾಗಾಗಿ ಜನರು ಇವರನ್ನು ಅಷ್ಟಾಗಿ ಇಷ್ಟಪಡುವುದಿಲ್ಲ.