ಹನುಮಾನ್ ಜಯಂತಿ ಯಾವಾಗ? ಹೀಗಿರಲಿ ಪೂಜೆಯ ವಿಧಿ ವಿಧಾನ

By Suvarna NewsFirst Published Apr 13, 2022, 5:07 PM IST
Highlights

ರಾಮನವಮಿ ಮುಗಿದ ಬೆನ್ನಲ್ಲೇ ಹನುಮಾನ್ ಜಯಂತಿ ಹತ್ತಿರ ಬರುತ್ತಿದೆ. ಈ ದಿನ ಏಕಾಗಿ ಆಂಜನೇಯನನ್ನು ಪೂಜಿಸಬೇಕು, ಹೇಗೆ ಪೂಜಿಸಬೇಕು ಎಲ್ಲ ವಿವರಗಳು ಇಲ್ಲಿವೆ. 

ಆಂಜನೇಯ(Hanuman)ನೆಂದರೆ ಧೈರ್ಯ ಕೊಡುವ ದೇವರು. ಭಕ್ತಿಗೆ, ಶಕ್ತಿಗೆ ಹೆಸರಾದವನು. ಚಿರಂಜೀವಿಗಳಲ್ಲೊಬ್ಬನಾದ ಆಂಜನೇಯನ ಜನ್ಮ ದಿನವನ್ನು ಜಗತ್ತಿನೆಲ್ಲೆಡೆ ಹನುಮಾನ್‌ ಜಯಂತಿ(Hanuman Jayanti)ಯೆಂದು ಆಚರಿಸಲಾಗುತ್ತದೆ. ಈ ಬಾರಿಯೂ ಆಂಜನೇಯ ಜಯಂತಿಗೆ ದಿನಗಣನೆ ಆರಂಭವಾಗಿದ್ದು, ಹಿಂದೂಗಳು ಈ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ. ಪಂಚಾಂಗದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಹನುಮ ಹುಟ್ಟಿದ್ದು. ಈ ಬಾರಿ ಹನುಮಾನ್ ಜಯಂತಿಯು ಏಪ್ರಿಲ್ 16ರಂದು ಬರಲಿದೆ. ಮಂಗಳವಾರ ಹಾಗೂ ಶನಿವಾರ(Saturday) ಆಂಜನೇಯನಿಗೆ ಶ್ರೇಷ್ಠವಾಗಿದೆ. ಅಂಥದರಲ್ಲಿ ಈ ಬಾರಿ ಶನಿವಾರವೇ ಹನುಮಾನ್ ಜಯಂತಿ ಬರುತ್ತಿರುವುದು ವಿಶೇಷ. ಈ ದಿನ ಆಂಜನೇಯ ಭಕ್ತರು ಉಪವಾಸ ಆಚರಿಸಿ, ಮನೆಯಲ್ಲೂ ಪೂಜೆ ನೆರವೇರಿಸಿ ಹನುಮಂತನ ದೇವಾಲಯಕ್ಕೆ ಭೇಟಿ ನೀಡುತ್ತಾರೆ. 

ಪ್ರಾಮುಖ್ಯತೆ(Significance)
ವಿಷ್ಣುವು ರಾವಣನ ಸಂಹಾರಕ್ಕಾಗಿ ರಾಮಾವತಾರ ತಾಳಿದಾಗ, ಪರಶಿವ(Lord Shiva)ನು ವಿಷ್ಣುವಿಗೆ ಸಹಾಯ ಮಾಡಲು ತಾನು ಆಂಜನೇಯ ಅವತಾರದಲ್ಲಿ ಭೂಮಿಗೆ ಬಂದನೆಂಬ ಪ್ರತೀತಿ ಇದೆ. ರಾವಣನು ಅಪಹರಿಸಿದ ಸೀತೆಯ ಹುಡುಕಾಟದಲ್ಲಿ ಆಂಜನೇಯ ಪಾತ್ರವೇ ದೊಡ್ಡದು. ರಾಮನ ಜಯದಲ್ಲಿ ಆಂಜನೇಯನ ಪಾತ್ರವಿದೆ. ಇನ್ನು ಚಿರಂಜೀವಿಯಾಗಿರುವ ಆಂಜನೇಯನು ಭಕ್ತರ ಕರೆಗೆ ಬೇಗ ಸ್ಪಂದಿಸುವವನು. ಹಾಗಾಗಿ ಹನುಮಾನ್ ಜಯಂತಿಯಂದು ಆಂಜನೇಯನ ಪೂಜೆಯಿಂದ ಆತನ ಆಶೀರ್ವಾದ ಗಳಿಸಿ, ಸಂಕಟಮೋಚನನೆಂದೇ ಹೆಸರಾಗಿರುವ ಆತನಿಂದ ಜೀವನದಲ್ಲಿ ಸಾಕಷ್ಟು ಸಮೃದ್ಧಿ ಕಾಣಬಹುದಾಗಿದೆ. 

ಮುಹೂರ್ತ(Muhurth)
ಪೂರ್ಣಿಮಾ ತಿಥಿ ಆರಂಭ: ಏಪ್ರಿಲ್ 16, ಶನಿವಾರ ಬೆಳಗ್ಗೆ 2:25
ಪೂರ್ಣಿಮಾ ತಿಥಿ ಅಂತ್ಯ: ಏಪ್ರಿಲ್ 17, ಭಾನುವಾರ, ಮಧ್ಯಾಹ್ನ 12:24 

ಪೂಜಾ ಸಾಮಗ್ರಿಗಳು
ಕೆಂಪು ಬಟ್ಟೆ, ನೀರಿನ ಕಲಶ, ಪಂಚಾಮೃತ, ಗಂಗಾಜಲ, ಸಿಂಧೂರ, ಕೆಂಪು ಹೂವುಗಳು, ಮಾಲೆಗಳು, ಹುರಿದ ಬೇಳೆ, ಬೆಲ್ಲ, ವೀಳ್ಯದೆಲೆ, ತೆಂಗಿನಕಾಯಿ, ಬಾಳೆಹಣ್ಣು, ಸಾಸಿವೆ ಎಣ್ಣೆ, ಮಲ್ಲಿಗೆ ಎಣ್ಣೆ, ತುಪ್ಪ, ತುಳಸಿ ಎಲೆಗಳು, ದೀಪಗಳು, ಧೂಪ, ಧೂಪದ್ರವ್ಯ ಮತ್ತು ಕರ್ಪೂರ ಇತ್ಯಾದಿ.

ಶನಿ ದೋಷ, ಮಂಗಳ ದೋಷದಿಂದ ಮುಕ್ತರಾಗಲು ಸರಳೋಪಾಯ Hanuman Chalisa

ಪೂಜಾ ವಿಧಾನ(Puja Vidhi)
ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿವಾರದಂದು ಹನುಮಾನ್ ಪೂಜೆಗೆ ವಿಶೇಷ ಮಹತ್ವವಿದೆ. ಆಂಜನೇಯನನ್ನು ಮೆಚ್ಚಿಸಲು ಸುಲಭವಾದ ಮಾರ್ಗವೆಂದರೆ ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವುದು. ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಅದಕ್ಕೂ ಮುನ್ನ ಪೂಜೆ ಹೇಗೆ ಮಾಡುವುದು ನೋಡೋಣ.

ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಕೆಂಪು ಇಲ್ಲವೇ ಹಳದಿ ಬಟ್ಟೆಯನ್ನು ಧರಿಸಿ. ನಂತರ ಶಾಂತ ಮನಸ್ಸಿನಲ್ಲಿ ದೇವರ ಕೋಣೆಗೆ ಹೋಗಿ ನಮಸ್ಕರಿಸಿ. ಮೊದಲು ಗಣಪತಿಯನ್ನು ಸ್ಮರಿಸಿ. ಬಳಿಕ, ಹನುಮಂತನನ್ನು ಮೆಚ್ಚಿಸಲು ಈ ದಿನ ಸಾಸಿವೆ ಎಣ್ಣೆಯಿಂದ ನಾಲ್ಕು ಮುಖದ ದೀಪವನ್ನು ಹಚ್ಚಿ. ದೀಪ ಹಚ್ಚುವಾಗ 'ಓಂ ಶ್ರೀ ರಾಮದೂತ ಹನುಮತೇ ನಮಃ ದೀಪಂ ದರ್ಶಯಾಮಿ' ಮಂತ್ರ ಹೇಳಿಕೊಳ್ಳಿ. 
ನಂತರ ಸಿಂಧೂರವನ್ನು ಅರ್ಪಿಸಿ. ಬಳಿಕ,  ಸಾಸಿವೆ ಎಣ್ಣೆ, ತೆಂಗಿನಕಾಯಿ ಮತ್ತು 21 ವೀಳ್ಯದೆಲೆಗಳಿರುವ ಹಾರವನ್ನು ಹನುಮನಿಗೆ ಅರ್ಪಿಸಿ. ಜೊತೆಗೆ, ದಾಸವಾಳ ಮತ್ತು ಗುಲಾಬಿ ಹೂಗಳನ್ನು ಅರ್ಪಿಸಿ. 
ಕಡೆಯಲ್ಲಿ ಲಡ್ಡು, ಬಾಳೆಹಣ್ಣು, ಪೇರಲೆ ಹಣ್ಣು ಇತ್ಯಾದಿಯನ್ನು ನೈವೇದ್ಯ ಮಾಡಿ. 
ಹನುಮಾನ್ ಚಾಲೀಸಾ ಮತ್ತು ಸುಂದರಕಾಂಡವನ್ನು ಪಠಿಸಿ. ರಾಮಧ್ಯಾನವನ್ನೂ ಮಾಡಿ ನಮಸ್ಕರಿಸಿ. 

ಸಂಖ್ಯೆ 9ರ ಸ್ವಾರಸ್ಯ; ಆಂಜನೇಯನನ್ನು ನಂಬಿದ್ರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ

ಪೂಜೆಯಲ್ಲಿ ಈ ತಪ್ಪುಗಳನ್ನು(Mistakes) ಮಾಡಬೇಡಿ

  • ಕಪ್ಪು ಅಥವಾ ಬಿಳಿ ಬಟ್ಟೆಗಳನ್ನು ಧರಿಸಿದ ಆಂಜನೇಯನ ಪೂಜೆ ಬೇಡ.
  • ಉಪವಾಸ ಮಾಡಿದರೆ ತೊಂದರೆಯಿಲ್ಲ, ಉಪವಾಸ ಮಾಡದಿದ್ದರೆ ಹನುಮಾನ್ ಜಯಂತಿಯಂದು ಉಪ್ಪು ತಿನ್ನುವುದು ಬೇಡ.
  • ಕೋಪದಲ್ಲಿ ಆಂಜನೇಯನ ಪೂಜೆ ಬೇಡ.
  • ಈ ದಿನ ಮದ್ಯ ಸೇವನೆ ಮಾಡಕೂಡದು. ಎಲ್ಲ ಚಟಗಳಿಂದ ದೂರವುಳಿಯಬೇಕು.
  • ಸ್ನಾನ ಮಾಡದೇ ಕೊಳಕು ಬಟ್ಟೆಯಲ್ಲಿ ಪೂಜೆ ಮಾಡಬಾರದು. 
     
click me!