* ಜಿ.ಪಂ ಮೈದಾನದಲ್ಲಿ ಭರ್ಜರಿ ಎತ್ತಿನ ಓಟ
* ಬಣ್ಣ ಬಳಿದು ಎತ್ತು-ಕುದುರೆಗಳನ್ನ ಸ್ಪರ್ಧೆಗೆ ತಂದ ರೈತರು
* ಗ್ರಾಮೀಣ ಪ್ರದೇಶದಂತೆ ನಗರದಲ್ಲು ಕಳೆಗಟ್ಟಿದ ಕಾರಹುಣ್ಣಿಮೆ
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಜೂ.14): ಉತ್ತರ ಕರ್ನಾಟಕ ಭಾಗದಲ್ಲಿ ಕಾರ ಹುಣ್ಣಿಮೆಯನ್ನ ವಿಶಿಷ್ಟವಾಗಿ ಆಚರಿಸಲಾಗುತ್ತೆ. ಎತ್ತುಗಳಿಗೆ ಪೂಜೆ ಸಲ್ಲಿಸಿ, ಭಕ್ತಿಯಿಂದ ಬಸವಗಳನ್ನ ಆರಾಧಿಸಿ ಕಾರಹುಣ್ಣಿಮೆಯನ್ನ ಅದ್ದೂರಿಯಾಗಿ ಆಚರಿಸಲಾಗುತ್ತೆ. ಎತ್ತುಗಳಿಗೆ ಬಣ್ಣ ಹಾಕಿ ಓಡಿಸುವ ಮೂಲಕವು ಹಬ್ಬವನ್ನ ಆಚರಿಸೋದು ವಾಡಿಕೆ.. ವಿಜಯಪುರ ನಗರದಲ್ಲು ಎತ್ತುಗಳನ್ನ ಸಿಂಗರಿಸಿ ಓಡಿಸುವ ಮೂಲಕ ಕಾರಹುಣ್ಣಿಮೆಯನ್ನ ಅದ್ದೂರಿಯಾಗಿ ಆಚರಿಸಲಾಯಿತು..
ವಿಜಯಪುರ ನಗರ ಭಾಗದಲ್ಲೂ ಅದ್ಧೂರಿ ಕಾರಹುಣ್ಣಿಮೆ
ಕಾರ ಹುಣ್ಣಿಮೆಯ ಅಂದಚಂದ ನೋಡಬೇಕಾದ್ರೆ ಗ್ರಾಮೀಣ ಭಾಗಗಳಲ್ಲಿ ಕಾಣಸಿಗುತ್ತೆ. ಎತ್ತುಗಳನ್ನ ಸಿಂಗರಿಸಿ ಅವುಗಳಿಗೆ ಪೂಜೆ ಸಲ್ಲಿಸಿ, ಬೆಂಕಿಯಲ್ಲಿ ಹಾಯಿಸೋದನ್ನ ಎರಡು ಕಣ್ಣುಗಳಿಂದ ನೋಡುವುದೆ ಭಾಗ್ಯ. ಇನ್ನು ಕಾರ ಹುಣ್ಣಿಮೆಯಂದು ಎತ್ತುಗಳ ಓಡಿಸಿ ಕರಿ ಹರಿಯೋದು ಉತ್ತರ ಕರ್ನಾಟಕ ಭಾಗದಲ್ಲಿ ವಾಡಿಕೆ. ಗ್ರಾಮೀಣ ಭಾಗದಲ್ಲಿ ಕಾಣಸಿಗುವ ಈ ಸಂಭ್ರಮ ಇಂದು ವಿಜಯಪುರ ನಗರದಲ್ಲು ಕಳೆಗಟ್ಟಿತ್ತು. ನಗರದ ಜಿಲ್ಲಾ ಪಂಚಾಯತ್ ಪ್ರಾಂಗಣದಲ್ಲಿ ಎತ್ತುಗಳನ್ನ ಓಡಿಸಿ ಸಂಭ್ರಮಿಸಲಾಯಿತು.
YADGIR; ಕಾರ ಹುಣ್ಣಿಮೆ ಸಡಗರವೋ ಸಡಗರ!
ಕಾರಹುಣ್ಣಿಯಂದು ಹಿಂದೂ-ಮುಸ್ಲಿಂ ಭಾವೈಕ್ಯತೆ
ಕಾರ ಹುಣ್ಣಿಮೆ ಆಚರಣೆಯಲ್ಲೂ ಹಿಂದೂ-ಮುಸ್ಲಿಂ ಭಾವೈಕ್ಯತೆ ಕಂಡು ಬಂತು. ನಗರದ ಜಿ.ಪಂ ಆವರಣದಲ್ಲಿ ಎತ್ತುಗಳನ್ನ ಓಡಿಸುವ ವೇಳೆ ಹಿಂದೂ-ಮುಸ್ಲಿಂರು ಒಟ್ಟಾಗಿಯೇ ಸಂಭ್ರಮಿಸಿದರು. ಮುಸ್ಲಿಂ ಸಮುದಾಯದವರು ಎತ್ತು, ಕುದುರೆಗಳನ್ನ ಸಿಂಗರಿಸಿಕೊಂಡು ಬಂದು ರೈತರೊಂದಿಗೆ ಓಡಿಸಿದ್ದು ವಿಶೇಷವಾಗಿತ್ತು. ಎತ್ತುಗಳ ಬಂಡಿಗೆ ಕುದುರೆಗಳನ್ನು ಹೂಡಿ ಓಡಿಸಿದ್ದು ನೋಡಲು ಆಕರ್ಷಕವಾಗಿತ್ತು.
ಶೃಂಗೇರಿ ಶಾರದಾ ಮಠ ಪೀಠಾಧ್ಯಕ್ಷರ ಸನ್ನಿಧಿಯಲ್ಲಿ Soundarya Lahari Parayana
ನಗರದಲ್ಲು ಸೇರಿದ ಎತ್ತಿನ ಬಂಡಿಗಳು
ಕಾರ ಹುಣ್ಣಿಮೆಯಂದು ಹಳ್ಳಿಗಳನ್ನ ಬಂಡಿಗಳು ಸೇರುವುದು, ಸ್ಪರ್ಧೆಗಳು ನಡೆಯೋದು ಕಾಮನ್, ಆದ್ರೆ ವಿಜಯಪುರ ನಗರದಲ್ಲು 50ಕ್ಕು ಅಧಿಕ ಬಂಡಿಗಳು ಓಟದಲ್ಲಿ ಸೇರಿದ್ದವು. ತೆರೆದ ಬಂಡಿಗಳನ್ನ ತಂದ ನಗರದ ಸುತ್ತಮುತ್ತಲಿರುವ ಜನರು ರಾಸುಗಳನ್ನ ಓಡಿಸಿ ಖುಷಿ ಪಟ್ಟರು.
ಹುಚ್ಚೆದ್ದು ಓಡಿದ ಎತ್ತುಗಳು
ಜಿಲ್ಲಾ ಪಂಚಾಯತ್ ಗ್ರೌಂಡ್‌ನಲ್ಲಿ ಎತ್ತುಗಳನ್ನ ಒಂದಾದ ನಂತರ ಒಂದರಂತೆ ಓಡಿಸಿದ್ರೆ ಜನರು ನೋಡಿ ಸಂಭ್ರಮ ಪಟ್ಟರು. ಎತ್ತುಗಳು ಜೋರಾಗಿ ಓಡಲಿ ಎಂದು ಬಂಡಿ ಸವಾರರು ಬೆದರಿಸುತ್ತಿದ್ದ ದೃಶ್ಯಗಳು ಕಂಡು ಬಂದ್ವು. ಕೆಲವರು ಎತ್ತುಗಳು ಜೋರಾಗಿ ಓಡಲಿ ಎಂದು ಬಾರಕೋಲಿನಿಂದ ಹೊಡೆದದ್ದು ಕಂಡು ಬಂತು. ಎತ್ತುಗಳನ್ನ ಬೆದರಿಸಿದ್ದರಿಂದ, ಗ್ರೌಂಡ್ ತುಂಬೆಲ್ಲ ಎತ್ತುಗಳು ಹುಚ್ಚಿದ್ದು ಓಡಾಡಿ, ಜನರ ಮೇಲೆ ಹೋದ ಘಟನೆಗಳು ನಡೆದವು. ಆದ್ರೆ ಯಾವುದೇ ಅಪಾಯ ಉಂಟಾಗಿಲ್ಲ.