ಸೂರ್ಯಗ್ರಹಣದ ಬಳಿಕ ನೀವೇನು ತಿನ್ನಬಹುದು?

By Suvarna NewsFirst Published Oct 25, 2022, 11:50 AM IST
Highlights

ಗ್ರಹಣದ ಸಮಯದಲ್ಲಿ ಏನೂ ತಿನ್ನಬಾರದೆಂದು ಎಲ್ಲರೂ ಹೇಳುತ್ತಾರೆ. ಆದರೆ, ಗ್ರಹಣದ ಬಳಿಕ ಏನು ತಿನ್ನಬೇಕೆಂದು ಬಹುತೇಕರಲ್ಲಿ ಗೊಂದಲ ಇದೆ. ನಿಮ್ಮಲ್ಲೂ ಈ ಗೊಂದಲ ಇದ್ದರೆ, ಇಂದು ಗ್ರಹಣವಾದ ನಂತರ ನೀವು ಸೇವಿಸಬಹುದಾದ ಆಹಾರ ಪಟ್ಟಿ ಇಲ್ಲಿದೆ.

ಇಂದು ಅಂದರೆ ಅಕ್ಟೋಬರ್ 25ರಂದು ಭಾಗಶಃ ಸೂರ್ಯಗ್ರಹಣ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದುಹೋಗುತ್ತದೆ, ಇದು ಸೂರ್ಯನನ್ನು ಭಾಗಶಃ ನಿರ್ಬಂಧಿಸುತ್ತದೆ. ಗ್ರಹಣಗಳ ಬಗ್ಗೆ ಸಾಕಷ್ಟು ಪುರಾಣಗಳು ಮತ್ತು ನಂಬಿಕೆಗಳಿವೆ. ಅದರಲ್ಲೂ ಈ ಬಾರಿ ದೀಪಾವಳಿಯ ದಿನವೇ ಗ್ರಹಣ ಬಂದಿದೆ. ಹಾಗಾಗಿ, ಜನರಿಗೆ ಹಬ್ಬಾಚರಣೆ ಬಗ್ಗೆ ಸಾಕಷ್ಟು ಗೊಂದಲಗಳಿವೆ.

ಸಾಮಾನ್ಯವಾಗಿ ಗ್ರಹಣ ಸಂದರ್ಭದಲ್ಲಿ ಉಪವಾಸವಿರಲು ಹೇಳಲಾಗುತ್ತದೆ. ಇದಕ್ಕೆ ಕಾರಣ, ಈ ಸಂದರ್ಭದಲ್ಲಿ ಪ್ರಕೃತಿಯಲ್ಲಿ ಬ್ಯಾಕ್ಟೀರಿಯಾಗಳ ಮತ್ತು ಸೂಕ್ಷ್ಮಜೀವಿಗಳ ಸಂಖ್ಯೆ ಹೆಚ್ಚಿರುತ್ತದೆ ಮತ್ತು ಅವು ಆಹಾರ ಪದಾರ್ಥಗಳನ್ನು ವಿಷಯುಕ್ತಗೊಳಿಸುತ್ತವೆ ಎಂಬುದಾಗಿದೆ. ಇದರಿಂದ, ಅದನ್ನು ಸೇವಿಸಿದವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದು. ಹಾಗಾಗಿ ಸಾಂಪ್ರದಾಯಿಕವಾಗಿ, ಭಾರತದಲ್ಲಿನ ಹಿಂದೂಗಳು ಆಯುರ್ವೇದದ ಆಧಾರದ ಮೇಲೆ ಆಹಾರದ ನಿರ್ಬಂಧಗಳನ್ನು ಅನುಸರಿಸುತ್ತಾರೆ.

ಅದರಂತೆ, ಗ್ರಹಣದ ಸಮಯದಲ್ಲಿ, ಅಡುಗೆ ಮಾಡುವುದು ಅಥವಾ ಆಹಾರವನ್ನು ತಿನ್ನುವುದು, ನೀರು ಕುಡಿಯುವುದು ಅಥವಾ ಹೊರಾಂಗಣಕ್ಕೆ ಹೋಗುವುದನ್ನು ತಪ್ಪಿಸಬೇಕು. ಕೆಲವು ಜನರು ಅದರ ಹಾನಿಕಾರಕ ಪರಿಣಾಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಈ ಅವಧಿಯಲ್ಲಿ ದೇವರ ಶ್ಲೋಕ ಪಠಣ ಅಥವಾ ಪ್ರಾರ್ಥನೆಯನ್ನು ನಂಬುತ್ತಾರೆ. ಗ್ರಹಣದ ನಂತರ, ಅನೇಕ ಜನರು ತಮ್ಮನ್ನು ಶುದ್ಧೀಕರಿಸಲು ಮತ್ತು ತಾಜಾ ಬಟ್ಟೆಗಳನ್ನು ಬದಲಾಯಿಸಲು ಸ್ನಾನ ಮಾಡುತ್ತಾರೆ.

ಗ್ರಹಣ ವೇಳೆ ದೇಗುಲ ಬಂದ್‌: ಬಳಿಕ ಪೂಜೆ

ತಮ್ಮ ವೆಬ್‌ಸೈಟ್‌ನಲ್ಲಿ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಹೇಳುತ್ತಾರೆ, 'ಗ್ರಹಣದ ಮೊದಲು ಮತ್ತು ನಂತರ ಬೇಯಿಸಿದ ಆಹಾರದಲ್ಲಿ ಅನೇಕ ಬದಲಾವಣೆಗಳಿವೆ. ಪೋಷಣೆಯಾಗಬೇಕಾದ ಆಹಾರವು ಈ ಸಮಯದಲ್ಲಿ ವಿಷವಾಗಿ ಬದಲಾಗುತ್ತದೆ. ಬೇಯಿಸಿದ ಆಹಾರವು ಸಾಮಾನ್ಯ ದಿನಕ್ಕಿಂತ ಹೆಚ್ಚು ವೇಗವಾಗಿ ಅದರ ಕ್ಷೀಣತೆಯ ಹಂತಗಳ ಮೂಲಕ ಸೂಕ್ಷ್ಮ ರೀತಿಯಲ್ಲಿ ಹಾದು ಹೋಗುತ್ತದೆ.'  

ಬ್ರಹ್ಮಾಂಡದಲ್ಲಿ ಏನಾಗುತ್ತದೆ ಎಂಬುದು ಮಾನವ ದೇಹಕ್ಕೂ ಮಹತ್ವದ್ದಾಗಿದೆ. ಸೂರ್ಯಗ್ರಹಣದ ಸಮಯದಲ್ಲಿ, ಕಾಂತೀಯ ಕ್ಷೇತ್ರಗಳು ಮತ್ತು ಯುವಿ ಕಿರಣಗಳ ಮಟ್ಟವು ಅಧಿಕವಾಗಿರುತ್ತದೆ. ಮತ್ತು ನಮ್ಮ ಚಯಾಪಚಯ ಮತ್ತು ಜೀರ್ಣಕ್ರಿಯೆ ದುರ್ಬಲವಾಗುತ್ತದೆ. ಅದಕ್ಕಾಗಿಯೇ ಜನರು ಈ ಸಮಯದಲ್ಲಿ ತಿನ್ನುವುದನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ.  ಗ್ರಹಣ ಸಮಯದಲ್ಲಿ ನೀವು ಸಾಂಪ್ರದಾಯಿಕ ಮಾರ್ಗಸೂಚಿಗಳನ್ನು ಅನುಸರಿಸಲು ಆಯ್ಕೆ ಮಾಡಿದರೆ, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು ಇಲ್ಲಿದೆ.

  • ಗ್ರಹಣ ಸಮಯದಲ್ಲಿ ತಿನ್ನಬಾರದು. ಆದರೆ ವಯಸ್ಸಾದ, ಅಸ್ವಸ್ಥ ಮತ್ತು ಗರ್ಭಿಣಿ ರೋಗಿಗಳಿಗೆ ವಿನಾಯಿತಿಗಳಿವೆ, ಅವರು ಲಘುವಾದ, ಸಾತ್ವಿಕ ಆಹಾರವನ್ನು ಅಂದರೆ ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾದ ಆಹಾರ ಸೇವಿಸಬಹುದು. ಯುವಿ ಕಿರಣಗಳು ಭ್ರೂಣಕ್ಕೆ ಹಾನಿಯುಂಟುಮಾಡುವುದರಿಂದ ಸೂರ್ಯಗ್ರಹಣದ ಸಮಯದಲ್ಲಿ ಮಹಿಳೆಯರು ಹೊರಗೆ ಹೋಗದಂತೆ ಆಯುರ್ವೇದ ಶಿಫಾರಸು ಮಾಡುತ್ತದೆ.
  • ಗ್ರಹಣ ಸಮಯದಲ್ಲಿ ನೀರು ಕುಡಿಯುವುದನ್ನು ಸಹ ತಪ್ಪಿಸಬೇಕು. ನಂತರದಲ್ಲಿ ಕುಡಿಯಲು ನೀರು ಹಿಡಿದಿಡಲೇಬೇಕಿದ್ದ ಅವಶ್ಯಕತೆ ಇದ್ದರೆ ಅದಕ್ಕೆ ಸಾಕಷ್ಟು ತುಳಸಿ, ಬೇವು, ದರ್ಬೆ ಹಾಕಿ ಪಾತ್ರೆಯಲ್ಲಿ ಮುಚ್ಚಿಡಬೇಕು. 
  • ಮಾಂಸಾಹಾರ, ಬ್ರೆಡ್, ಈರುಳ್ಳಿ, ಬೆಳ್ಳುಳ್ಳಿ, ಆಲ್ಕೋಹಾಲ್ ಅಥವಾ ಹುದುಗಿಸಿದ ಆಹಾರಗಳು, ಜೀರ್ಣವಾಗಲು ಕಷ್ಟವಾದ ಆಹಾರವನ್ನು ಗ್ರಹಣ ಸಮಯದಲ್ಲಾಗಲೀ, ಬಳಿಕವಾಗಲೀ ಸೇವಿಸಬಾರದು.
  • ಹಬ್ಬಕ್ಕಾಗಿ ಮುಂಚೆಯೇ ಮಾಡಿಟ್ಟ ಚಕ್ಕುಲಿ, ಕೋಡುಬಳೆ ಇತ್ಯಾದಿಗಳಿದ್ದರೆ ಡಬ್ಬಿಗೆ ಸಾಕಷ್ಟು ದರ್ಬೆ, ತುಳಸಿ ಎಲೆ ಹಾಕಿಡಿ. ಗ್ರಹಣಕ್ಕಿಂತ ಮುಂಚೆಯೇ ಇಂಥ ತಿಂಡಿಗಳನ್ನು ಮಾಡಿಡದೇ ಇರುವುದು ಉತ್ತಮ.

ಇಂದು ಪಾಶ್ವ ಸೂರ್ಯಗ್ರಹಣ: ಬರಿಗಣ್ಣಿನಿಂದ ನೋಡಲೇಬೇಡಿ

  • ಗ್ರಹಣಕ್ಕೂ ಮುಂಚೆ ತಯಾರಿಸಿದ ತಿಂಡಿಗಳನ್ನು ನಂತರದಲ್ಲಿ ಸೇವಿಸಬಾರದು. ಗ್ರಹಣದ ಬಳಿಕ ನೀವು ಸ್ನಾನ ಮಾಡಿ, ಮನೆಯನ್ನೂ ಸ್ವಚ್ಛಗೊಳಿಸಿ, ತರಕಾರಿ, ಹಣ್ಣುಗಳನ್ನು ಹೆಚ್ಚು ಸ್ವಚ್ಛಗೊಳಿಸಿ ಚೆನ್ನಾಗಿ ಬೇಯಿಸಿ ಸೇವಿಸಬೇಕು. 
  • ಗ್ರಹಣದ ನಂತರ, ಸುಲಭವಾಗಿ ಜೀರ್ಣವಾಗುವ ಹಣ್ಣುಗಳು,ತರಕಾರಿಗಳು ಅಕ್ಕಿ ಗಂಜಿ ತಿನ್ನುವ ಮೂಲಕ ಆಹಾರವನ್ನು ನಿಧಾನವಾಗಿ ಪ್ರಾರಂಭಿಸಿ. ಹೀಗೆ ಗಂಜಿ ಅಥವಾ ಯಾವುದೇ ಲಘು ಆಹಾರ ಬೇಯಿಸುವಾಗ ಅದಕ್ಕೆ ಹೆಚ್ಚು ಅರಿಶಿನ, ತುಳಸಿ ಹಾಕಿ. 
click me!