ದೀಪಾವಳಿ 2022; ಭೂತಾಯಿಗೆ ನಮಿಸೋ ಲೆಕ್ಕೆ ಹಬ್ಬ

By Suvarna NewsFirst Published Oct 25, 2022, 11:21 AM IST
Highlights

ಹಳ್ಳಿ ಪರಂಪರೆಯಲ್ಲಿ ದೀಪಾವಳಿಯ ಲೆಕ್ಕೆ ಹಬ್ಬ ಆಚರಣೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೆಕ್ಕೆ ಸಂಭ್ರಮ
ಸಾಂಪ್ರದಾಯಿಕ ಆಚರಣೆ ಮರೆಯದ ರೈತರು

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್ ,ಚಿಕ್ಕಮಗಳೂರು 

ಭೂಮಿತಾಯಿಯನ್ನು ಪೂಜಿಸಿ ಆರಾಧಿಸುವ ಲೆಕ್ಕೆ ಹಬ್ಬವನ್ನು ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆ ಹಾಗೂ ಮಲೆನಾಡಿನ ರೈತಾಪಿ ವರ್ಗ ಸಡಗರ, ಸಂಭ್ರಮದಿಂದ ಆಚರಿಸಿತು. ಕಾಫಿನಾಡಿನ ಹಳ್ಳಿಗಳ ಹೊಲಗದ್ದೆಗಳಲ್ಲಿ ಬೆಳೆದ ಪಚ್ಚೆ, ಪೈರು ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದು ಭೂರಮೆಗೆ ಹಸಿರುಡಿಗೆ ತೊಡಿಸಿದಂತೆ ಭಾಸವಾಗುತ್ತಿದೆ. ಇಂತಹ ಪ್ರಾಕೃತಿಕ ಸೌಂದರ್ಯದ ನಡುವೆ ರೈತರು ಬೆಳ್ಳಂಬೆಳಗ್ಗೆಯೇ ಹೊಲಗದ್ದೆಗಳಿಗೆ ಹೋಗಿ ತಾವು ಬೆಳೆದಿದ್ದ ಪೈರು, ಪಚ್ಚೆ, ಲಕ್ಕೆಸೊಪ್ಪು, ಹೂವುಗಳನ್ನು ಮನೆಗೆ ತರುತ್ತಾರೆ. ಇದಕ್ಕೂ ಮುನ್ನ ಭೂತಾಯಿಗೆ ಪೂಜಿಸಿ ಲಕ್ಕೋ.. ಲಕ್ಕೋ ಎಂದು ಕೂಗು ಹಾಕಿ, ನಮಿಸಲಾಗುತ್ತದೆ.

Latest Videos

ನಗರದಲ್ಲೂ ಲೆಕ್ಕೆ ಹಬ್ಬ ಆಚರಣೆ
ಲೆಕ್ಕೆ ಹಬ್ಬ ಕೇವಲ ಗ್ರಾಮೀಣ ಭಾಗಕ್ಕೆ ಸೀಮಿತವಾಗಿರದೆ ನಗರದಲ್ಲೂ ಹಾಸುಹೊಕ್ಕಾಗಿದೆ. ನಗರದ ಕೋಟೆ ಬಡಾವಣೆಯಲ್ಲಿ ರೈತರು ತಮ್ಮ ಹಿರಿಯರ ಪರಂಪರೆಯನ್ನು ಮುಂದುವರಿಸಿದ್ದು ತಾವು ಬೆಳೆದಿರುವ ಭತ್ತ, ರಾಗಿ, ಕಬ್ಬು, ಜೋಳ, ಲಕ್ಕೆ ಸೊಪ್ಪು, ಸಿರಿಧಾನ್ಯ, ನರಿಬಾಲ (ಕೆರೆ ಹುಲ್ಲಿನ ಹೂವು ಮತ್ತಿತರೆ ಸಸ್ಯಗಳನ್ನು ಪೇರಿಸಿಕೊಂಡ ಹೊರೆಯನ್ನು ಲಕ್ಕೆ ಹೆಸರಲ್ಲಿ ಗ್ರಾಮಕ್ಕೆ ತಂದರು.ಕೋಟೆ ಬಡಾವಣೆಯ ಪ್ರಮುಖ ಬೀದಿ ಯಲ್ಲಿ ಮೆರವಣಿಗೆ ನಡೆಸಿಶ್ರೀ ಹರಿಹರೇಶ್ವರ, ಐತಿಹಾಸಿಕ ಸುಗ್ಗಿಕಲ್ಲು, ರಾಮಾಂಜನೇಯ ಸ್ವಾಮಿ, ಭೂತಪ್ಪ, ಉಗ್ರಾಣಮ್ಮ, ವೀರಭದ್ರೇಶ್ವರ ದೇವಾಲಯಗಳಿಗೆ ಲಕ್ಕೆ ಇಟ್ಟು ಪೂಜಿಸಿ ಲಕ್ಕೋ ಲಕ್ಕೋ ಎಂಬ ಘೋಷಣೆ ಮೊಳಗಿಸಿ ಲಕ್ಕ ಕೊನೆಯನ್ನು ಬಾಗಿಲಿಗೆ ಇಟ್ಟು ನಮಿಸಿದರು. ನಂತರ ಮನೆಗೆ ತಂದು ಪೂಜಿಸಿ ಉತ್ತಮ ಮಳೆ ಬೆಳೆಯಾಗಲಿ, ಮನೆಯಲ್ಲಿ ಸಿರಿಧಾನ್ಯ ತುಂಬಿರಲಿ, ರೈತನ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು.

Diwali 2022: ಉಡುಪಿ ಕೃಷ್ಣಮಠದಲ್ಲಿ ಸಂಭ್ರಮದ ಬಲೀಂದ್ರ ಪೂಜೆ

ಬೆಳಕಿನ ಹಬ್ಬ ದೀಪಾವಳಿಯಲ್ಲಿ  ಸಾಂಪ್ರದಾಯಿಕ ಆಚರಣೆ
ಅನಾದಿ ಕಾಲದಿಂದ ರೈತಾಪಿ ವರ್ಗದವರು, ಹಿರಿಯ ನಡೆಸಿಕೊಂಡು ಬಂದ ಹಾದಿಯಲ್ಲಿಯೇ ದೀಪಾವಳಿಯ ಲೆಕ್ಕೆಹಬ್ಬವನ್ನು   ಹಳ್ಳಿಯ ಪರಂಪರೆಯವೇಷಭೂಷಣದೊಂದಿಗೆ ಸಾಂಪ್ರದಾಯಿಕ ಹಬ್ಬವನ್ನು ಆಚರಿಸಿದರು. ಈ ಸಮಯದಲ್ಲಿ‌ ಮಾತಾಡಿದ   ಹಳ್ಳಿಕಾರ ಯುವಕರ ಸಂಘದ ಅಧ್ಯಕ್ಷ ಕೋಟೆ ಸೋಮಣ್ಣ ಕೋಟೆ ಬಡಾವಣೆಯಲ್ಲಿ ಕೃಷಿಕರೇ ಹೆಚ್ಚಿದ್ದು ತಾವು ಬೆಳೆದಿರುವ ದವಸಧಾನ್ಯಗಳಾದ ಭತ್ತ, ರಾಗಿ, ಜೋಳ, ಕೊಬ್ಬು, ಲೆಕ್ಕೆ ಸೊಪ್ಪು, ಹುಲ್ಲು,  ನರಿಬಾಲ ಹಲವು ತರದ ಸಸ್ಯಗಳನ್ನು ಸೇರಿಸಿ ಕಟ್ಟಿರುವುದನ್ನು ಲೆಕ್ಕೆ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.  ಜೀವನದಲ್ಲಿ ಕಷ್ಟ, ಸುಖ, ಏಳು, ಬೀಳುಗಳನ್ನು ಎಲ್ಲರೂ ಕಂಡಿರುತ್ತೇವೆ ಆದರೆ ವರ್ಷದಲ್ಲೊಮ್ಮೆ ಬರುವ ಹಬ್ಬ ಹರಿದಿನಗಳನ್ನು ಎಲ್ಲರೂ ಭೇದ ಭಾವಗಳನ್ನು ಬದುಗೊತ್ತಿ ಎಲ್ಲರೂ ಒಟ್ಟಾಗಿ ಸೇರಿಸಿಕೊಂಡು ಸಂಭ್ರಮಿ ಸುವ ಮೂಲಕ ಬೆಳಕಿನ ಹಬ್ಬ ದೀಪಾವಳಿ ಎಲ್ಲರನ್ನೂ  ನೆಮ್ಮದಿ ಪಡಿಸಲಿ ಎನ್ನುವ ಆಶಯದೊಂದಿಗೆ ಸಾಂಪ್ರದಾಯಿಕ ಆಚರಣೆಯನ್ನು ತಲೆಮಾರುಗಳಿಂದ ಆಚರಣೆ ಮಾಡಿಕೊಂಡು ಬಂದಿರುತ್ತೇವೆ ಎಂದರು.

click me!