Diwali 2022: ಉಡುಪಿ ಕೃಷ್ಣಮಠದಲ್ಲಿ ಸಂಭ್ರಮದ ಬಲೀಂದ್ರ ಪೂಜೆ

Published : Oct 25, 2022, 11:02 AM IST
Diwali 2022: ಉಡುಪಿ ಕೃಷ್ಣಮಠದಲ್ಲಿ ಸಂಭ್ರಮದ ಬಲೀಂದ್ರ ಪೂಜೆ

ಸಾರಾಂಶ

ಉಡುಪಿಯಲ್ಲಿ ಅತ್ಯಂತ ವೈಭವದಿಂದ ದೀಪಾವಳಿ ಆಚರಣೆ ಕೃಷಿ ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡಿರುವ ಬಲೀಂದ್ರ ಪೂಜೆ ಕರಾವಳಿಯ ಗದ್ದೆಗಳಲ್ಲಿ ಮುಳ್ಳಮುಟ್ಟೆ ಎಂಬ ಸ್ಚಚ್ಛತಾ ಆರಾಧನೆ

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ದೇವಾಲಯಗಳ ನಗರ ಉಡುಪಿಯಲ್ಲಿ ಅತ್ಯಂತ ವೈಭವದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಬಾರಿ ಗ್ರಹಣ ಬಂದಿರುವುದರಿಂದ ಆಚರಣೆಗಳಲ್ಲಿ ಬಹಳಷ್ಟು ವ್ಯತ್ಯಾಸವಾಗಿದೆ. ಬಹುತೇಕ ಎಲ್ಲರೂ ನರಕ ಚತುರ್ದಶಿಯ ದಿನವೇ ಬಲೀಂದ್ರ ಪೂಜೆ ಹಾಗೂ ತುಳಸಿ ಪೂಜೆಯನ್ನು ಮಾಡಿ ಮುಗಿಸಿದ್ದಾರೆ. ಉಡುಪಿಯ ಕೃಷ್ಣ ಮಠದಲ್ಲೂ ಸೋಮವಾರ ರಾತ್ರಿ ಬಲಿಂದ್ರ ಪೂಜೆ ನಡೆಸಲಾಗಿದೆ.

ತುಳುನಾಡಿನಲ್ಲಿ ಬಲೀಂದ್ರ ಪೂಜೆಗೆ ವಿಶೇಷ ಮಹತ್ವ ಇದೆ. ಈ ಭಾಗವನ್ನು ಆಳಿದ ಅರಸ ಬಲೀಂದ್ರನಿಗೆ ದೀಪಾವಳಿಯ ವೇಳೆ ಸ್ವಾಗತ ಕೋರಿ ಆತಿಥ್ಯ ನಡೆಸುವುದು ಇಲ್ಲಿನ ಪದ್ಧತಿ. ವರ್ಷಕ್ಕೊಮ್ಮೆ ಅರಸನನ್ನು ಬರ ಮಾಡಿಕೊಂಡು ಗೌರವಿಸುವುದು ಸಂಪ್ರದಾಯ. ಈ ಆಚರಣೆಯನ್ನು ಬಲೀಂದ್ರ ಪೂಜೆ ಎಂದು ಕರೆಯುತ್ತಾರೆ.

ಜನಪದರು ತಮ್ಮ ಭತ್ತದ ಗದ್ದೆಗಳಲ್ಲಿ ದೀಪವಿಟ್ಟು ಬಲೀಂದ್ರನನ್ನು ಕೂಗಿ ‌ಕರೆಯುತ್ತಾರೆ. ಕೃಷಿ ಸಂಸ್ಕೃತಿಯೊಂದಿಗೆ ಬಲೀಂದ್ರ ಪೂಜೆ ತಳಕು ಹಾಕಿಕೊಂಡಿರುವುದರಿಂದ ಇವತ್ತಿಗೂ ಈ ಪದ್ಧತಿ ಜೀವಂತವಾಗಿದೆ.

ಉಡುಪಿಯ ಶ್ರೀ ಕೃಷ್ಣ ಮಠದಲ್ಲೂ ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಬಲೀಂದ್ರ ಪೂಜೆ ನಡೆಯಿತು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಬಲೀಂದ್ರ ಪೂಜೆಯ ವೇಳೆ ಹಾಜರಿದ್ದರು.

ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು ಬಲೀಂದ್ರ ಪೂಜೆಯನ್ನು ನಡೆಸಿದರು. ಬಳಿಕ ಪಂಚದೀಪ ಪ್ರಜ್ವಲನೆಯೊಂದಿಗೆ ವಾದ್ಯ ಮೇಳ ಸಹಿತ ಕೃಷ್ಣಮಠದ ಎಲ್ಲಾ ಭಾಗಗಳಿಗೂ ದೀಪ ಹಚ್ಚಿ ಪೂಜಿಸಲಾಯಿತು. ಈ ಸಾಂಪ್ರದಾಯಿಕ ಆಚರಣೆಗೆ ನೂರಾರು ಭಕ್ತರು ಸಾಕ್ಷಿಯಾದರು.

ಸ್ವಚ್ಚತೆಯ ಹಬ್ಬ ಮುಳ್ಳ ಮುಟ್ಟೆ
ಸರ್ಕಾರದ ಜನಪ್ರಿಯ ಕಾರ್ಯಕ್ರಮ ಸ್ವಚ್ಛ ಭಾರತ ತುಳು ಜನಪದದಲ್ಲಿ ಎಂದಿನಿಂದಲೋ ಚಾಲ್ತಿಯಲ್ಲಿದೆ ಗೊತ್ತಾ? ಹೌದು ದೀಪಾವಳಿ ಬಂದ್ರೆ ಹಳೇ ಸಂಪ್ರದಾಯಗಳಿಗೆ ಮತ್ತೆ ಜೀವ ಬರುತ್ತೆ. ಅಂತಾದ್ದೇ ಒಂದು ಆಚರಣೆ ಮುಳ್ಳಮುಟ್ಟೆ. ಕೃಷಿಯೇ ಬದುಕು ಅಂತ ನಂಬಿದವರು ಕರಾವಳಿಯ ಜನ, ಕೃಷಿಕರು ಮಣ್ಣಿನ ಮಕ್ಕಳು, ಹಿಂದೆಲ್ಲಾ ಯಾರೂ ಚಪ್ಪಲಿ ಧರಿಸುತ್ತಿರಲಿಲ್ಲ. ಹಾಗಾಗಿ ಕೃಷಿ ಅಂತ ಗದ್ದೆಗಳಲ್ಲಿ ಓಡಾಡೋವಾಗ ಮುಳ್ಳು ಚುಚ್ಚಿ ಘಾಸಿಯಾಗುತ್ತಿತ್ತು. ಅದನ್ನು ತಪ್ಪಿಸಲೆಂದೇ ಒಂದು ಸುಂದರ ಆಚರಣೆ ಚಾಲ್ತಿಗೆ ತಂದರು.

ಕಾಲಿಗೆ ಘಾಸಿಯಾಬಲ್ಲ ಮುಳ್ಳನ್ನೆಲ್ಲಾ ಹೆಕ್ಕಿ ಒಂದೆಡೆ ರಾಶಿ ಹಾಕಿ, ಗುಡ್ಡೆ ಮಾಡಿ ಬೆಂಕಿ ಕೊಡೋದು ಸಂಪ್ರದಾಯ. ಅದನ್ನೇ ಮುಳ್ಳಮುಟ್ಟೆ ಅಂತ ಕರೀತಾರೆ. ಉಡುಪಿಯಲ್ಲಿ ಇಂದಿಗೂ ಈ ಆಚರಣೆ ಚಾಲ್ತಿಯಲ್ಲಿದೆ. ಕಸವೆಂಬ ನರಕವನ್ನು ರಾಶಿ ಹಾಕಿ ಸುಟ್ಟ ನಂತರ ತುಳು ಜನಪದ ನೃತ್ಯ ಮಾಡಿ ಹಬ್ಬವನ್ನು ಸಂಭ್ರಮಿಸಲಾಗುತ್ತೆ.

PREV
Read more Articles on
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?