Shivamogga : ವಿಜಯ ದಶಮಿಗೆ ಹೂವು, ಹಣ್ಣು ದುಬಾರಿ

By Kannadaprabha News  |  First Published Oct 4, 2022, 7:46 AM IST
  • ವಿಜಯ ದಶಮಿಗೆ ಹೂವು, ಹಣ್ಣು ದುಬಾರಿ
  • ಬೆಲೆ ಏರಿಕೆಯ ನಡುವೆಯೂ ಜನರಿಂದ ಸಂಭ್ರಮದ ದಸರಾ
  • ಕೊರೋನಾ ನಂತರ ಹಬ್ಬಕ್ಕೆ ಕಳೆ

ಶಿವಮೊಗ್ಗ (ಅ.4) : ಮಲೆನಾಡು ಶಿವಮೊಗ್ಗದಲ್ಲಿ ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ಕಳೆಗುಂದಿದ್ದ ದಸರಾ ಈ ಬಾರಿ ಸಂಭ್ರಮ ಮನೆ ಮಾಡಿದೆ. ವಿಜಯದಶಮಿ ಮುನ್ನಾ ದಿನದಂದು ಆಚರಿಸುವ ಆಯುಧಪೂಜೆಗಾಗಿ ನಗರದೆಲ್ಲೆಡೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಆಯುಧಪೂಜೆ ಹಿನ್ನೆಲೆ ಸೋಮವಾರ ನಗರದೆಲ್ಲೆಡೆ ಭರ್ಜರಿ ವ್ಯಾಪಾರ-ವಹಿವಾಟು ನಡೆಯಿತು.

ವಿಜಯ ದಶಮಿಯಂದು ಈ ಕಾರ್ಯ ಮಾಡಿದರೆ ಎಲ್ಲದರಲ್ಲೂ ವಿಜಯ ನಿಮ್ಮದೇ!

Tap to resize

Latest Videos

ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ನಗರದ ಮಾರುಕಟ್ಟೆಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿತ್ತು. ಸಂಜೆ ವೇಳೆ ಉಂಟಾಗುವ ಜನದಟ್ಟಣೆ ಕಾರಣಕ್ಕೆ ಮುಂಜಾನೆಯೇ ಮಾರುಕಟ್ಟೆಗೆ ತೆರಳಿದ ಸಾರ್ವಜನಿಕರು ಹಬ್ಬಕ್ಕೆ ಅಗತ್ಯವಿರುವ ಹೂವು-ಹಣ್ಣು ಬೂದಗುಂಬಳಕಾಯಿ, ಸಿಹಿ ತಿನಿಸು ಸೇರಿದಂತೆ ಇನ್ನಿತರ ಪೂಜಾ ಸಾಮಾಗ್ರಿ ಖರೀದಿಸಿದರು.

ಹಬ್ಬ ಬಂತೆಂದರೆ ಸಾಕು ಹೂವು, ಹಣ್ಣು, ತರಕಾರಿಗಳ ಬೆಲೆ ಗನಕ್ಕೇರುತ್ತವೆ. ಈ ಬಾರಿ ದಸರಾ ಹಬ್ಬಕ್ಕೆ ಹೂವಿನ ದರ ತುಸು ಏರಿಕೆಯಾಗಿದೆ. ಹಣ್ಣು ಮತ್ತು ತರಕಾರಿ ದರ ಯಥಾಸ್ಥಿತಿಯಲ್ಲಿರುವುದು ತುಸು ಸಮಾಧಾನ ನೀಡಿದೆ. ಒಂದೆಡೆ ನವರಾತ್ರಿಯ ಆಚರಣೆಯ ಸಂಭ್ರಮವಾದರೆ, ಇನ್ನೊಂದೆಡೆ ಮಂಗಳವಾರ ಆಯುಧ ಪೂಜೆಗೆ ಕೈಗಾರಿಕಾ ಸ್ಥಾವರಗಳು, ಗ್ಯಾರೇಜ್‌, ವರ್ಕ್ ಶಾಪ್‌, ಪತ್ರಿಕಾ ಕಚೇರಿಗಳು, ಮುದ್ರಣಾಲಯ, ವಾಹನ ಮಾಲೀಕರು ಪೂಜೆಗೆ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ.

ಆಯುಧ ಪೂಜೆ ಹಿನ್ನೆಲೆ ಸೋಮವಾರ ನಗರದ ಗಾಂಧಿಬಜಾರ್‌, ನೆಹರು ರಸ್ತೆ, ಶಿವಮೊಗ್ಗ ನಾಯಕ ಮಾರುಕಟ್ಟೆರಸ್ತೆ, ವಿನೋಬ ನಗರ ರಸ್ತೆ, ಬಿ.ಎಸ್‌.ರಸ್ತೆ, ಸಾಗರ ರಸ್ತೆ, ಸವಳಂಗ ರಸ್ತೆ ಸೇರಿದಂತೆ ಮುಂತಾದ ಕಡೆಗಳಲ್ಲಿ ಹೂವಿನ, ಹಣ್ಣಿನ ವ್ಯಾಪಾರ ಜೋರಾಗಿತ್ತು. ಮಾರುಕಟ್ಟೆಗಳಲ್ಲಿ ಎತ್ತ ಕಣ್ಣಾಡಿಸಿದರೂ ಚೆಂಡಿ ಹೂವು, ಬೂದುಕುಂಬಳಕಾಯಿ, ಬಾಳೆ ಕಂದುಗಳು ರಾರಾಜಿಸುತ್ತಿವೆ.

ಶತಕ ದಾಟಿದ ಬೂದುಗುಂಬಳದ ಬೆಲೆ:

ಬೂದುಗುಂಬಳದ ದರ ಈ ಬಾರಿ ಗಗನಕ್ಕೇರಿದೆ. ಕುಂಬಳಕಾಯಿ ದರ ಕೂಡ 100 ರು. ದಾಟಿದೆ. ಗಾತ್ರದ ಮೇಲೆ ಬೆಲೆ ನಿಗದಿಯಾಗಿದ್ದು, ಕನಿಷ್ಠ 25 ರು. ನಿಂದ 100 ರು. ವರೆಗೆ ಕುಂಬಳ ಮಾರಾಟವಾಗುತ್ತಿದೆ. ಲಿಂಬೆಹಣ್ಣಿಗೂ ಕೂಡ ಬೇಡಿಕೆ ಹೆಚಾಗಿದೆ. ಪ್ರತಿ ಹಣ್ಣಿಗೆ 10 ರು. ಗೆ 2 ಅಥವಾ 3 ಲಿಂಬುಗಳು ಮಾರಾಟವಾಗುತ್ತಿದೆ. ಇವುಗಳೊಂದಿಗೆ ಮಾವಿನ ಸೊಪ್ಪು ಮತ್ತು ಬಾಳೆ ಕಂದು ಮಾರುಕಟ್ಟೆಗೆ ಬಂದಿದೆ.

ಹೂವು ದುಬಾರಿ:

ಈ ಬಾರಿ ಸೇವಂತಿಗೆಗಿಂತಲೂ ಚೆಂಡು ಹೂವು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿವೆ. ಹಿಡಿ ಗಾತ್ರದ ಚೆಂಡು ಹೂವು ಮಾರುಕಟ್ಟೆಗೆ ಬಂದಿದ್ದು, ನಗರದ ಪ್ರವಾಸಿ ಮಂದಿರ, ಕುವೆಂಪು ರಸ್ತೆ, ಗೋಪಿ ಸರ್ಕಲ…, ಗಾಂಧಿ ಬಜಾರ್‌, ವಿನೋಬನಗರ ಹೀಗೆ ಹಲವು ಕಡೆಗಳಲ್ಲಿ ಹೂವಿನ ಮಾರಾಟ ಭರದಿಂದ ನಡೆದಿದೆ. ಒಂದು ಮಾರು ಚೆಂಡು ಹೂವಿಗೆ 80 ರಿಂದ 100 ರು. ಇದ್ದರೆ, ಒಂದು ಹಾರಕ್ಕೆ 150 ರಿಂದ 300ವರೆಗೆ ಇದೆ. ಒಂದು ಗುಚ್ಚ( 4ರಿಂದ 5ಹಾರ) ಚೆಂಡು ಹೂವು ದರ 250ರಿಂದ 500ವರೆಗೆ ಇದೆ. ಸೇವಂತಿಗೆ ಹೂವು ಕೂಡ 100 ರಿಂದ 120 ರು., ಗುಲಾಬಿ, ಸುಗಂಧರಾಜ, ಮಲ್ಲಿಗೆ, ಕಾಕಡ, ಕನಕಾಂಬರ ಸೇರಿದಂತೆ ಇತರೆ ಹೂವುಗಳ ಧಾರಣೆ ಕೂಡ ಗಗನಕ್ಕೇರಿವೆ.

ಹಣ್ಣುಗಳಿಗೂ ಹೆಚ್ಚಿದ ಧಾರಣೆ

ಸೇಬು, ಮೂಸಂಬೆ, ಕಿತ್ತಲೆ, ಬಾಳೆ ಹಣ್ಣು ಹೀಗೆ ವಿವಿಧ ಹಣ್ಣುಗಳ ಬೆಲೆಯೂ ಹೆಚ್ಚಳವಾಗಿದೆ. ಸೇಬು 100 ರು. ನಿಂದ 160 ರು., ಮೂಸಂಬೆ 50 ರು.ನಿಂದ 70 ರು., ಕಿತ್ತಲೆ 40 ರು. ನಿಂದ 60 ರು., ಬಾಳೆ ಹಣ್ಣು 40 ರಿಂದ 60 ರು., ವರೆಗೆ ಪ್ರತಿ ಕೆಜಿಗೆ ಮಾರಾಟವಾಗುತ್ತಿವೆ.ಹಬ್ಬದ ಹಿನ್ನೆಲೆಯಲ್ಲಿ ಹೊರ ಊರುಗಳಲ್ಲಿ ಉದ್ಯೋಗದಲ್ಲಿರುವವರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗುತ್ತಿರುವುದರಿಂದ ರೈಲು, ಬಸುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ.

ಹಬ್ಬದ ಎಫೆಕ್ಟ್: ಗಬ್ಬೆದ್ದು ನಾರುತ್ತಿರುವ ಬೆಂಗ್ಳೂರು..!

ಸಂಭ್ರಮದ ದಸರಾ:

4 ರಂದು ಆಯುಧ ಪೂಜೆ ಹಾಗೂ 5 ರಂದು ದುರ್ಗಾಪೂಜೆಯೊಂದಿಗೆ ನಾಡ ಹಬ್ಬ ದಸರಾ ಸಮಾಪ್ತಿಗೊಳ್ಳಲಿದೆ. ನವರಾತ್ರಿ ದಿನದಿಂದ ನಗರದ ಬಹುತೇಕ ದೇವಸ್ಥಾನಗಳಲ್ಲಿ ವಿವಿಧ ಅಲಂಕಾರದಲ್ಲಿ ದುರ್ಗೆಯನ್ನು ಪ್ರತಿಷ್ಠಾಪಿಸಿ ಪೂಜೆ ನಡೆಸಲಾಗುತ್ತಿದೆ. ನಗರ ಪಾಲಿಕೆಯಿಂದ ಕಳೆದ ಒಂದು ವಾರದಿಂದಲೂ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಬೇರೆ ಬೇರೆ ರೀತಿಯಲ್ಲಿ ವಿಶಿಷ್ಟವಾಗಿ ದಸರಾ ಕಾರ್ಯಕ್ರಮ ನಡೆಸಲಾಗಿದೆ.

click me!