ಪುತ್ರ ಶನಿಯೊಂದಿಗೆ ಸೂರ್ಯ ಮುನಿಸು ಮರೆತ ದಿನವೇ ಸಂಕ್ರಾಂತಿ

By Suvarna NewsFirst Published Jan 12, 2022, 10:25 AM IST
Highlights

ಸಂಕ್ರಾಂತಿ ಈ ಬಾರಿ ಜನವರಿ 15, ಶನಿವಾರ ಬರುತ್ತಿದೆ. ಈ ದಿನ ಸೂರ್ಯನು ಮಕರ ರಾಶಿಗೆ ಪಥ ಬದಲಿಸುತ್ತಿದ್ದಾನೆ. ಈ ದಿನದ ವಿಶೇಷಗಳನ್ನು ನೋಡೋಣ.
 

ಇನ್ನೇನು ಸಂಕ್ರಾಂತಿ ಬಂದೇ ಬಿಡ್ತು. ಸೂರ್ಯ ಮಕರ(Capricorn) ರಾಶಿಗೆ ಚಲಿಸುವ ದಿನವೇ ಮಕರ ಸಂಕ್ರಮಣ. ಇಂದಿನಿಂದ ಹಗಲು ಜಾಸ್ತಿ. ಈ ದಿನದ ಮಹತ್ವಗಳನ್ನು ನೋಡೋಣ.

ಜನವರಿ 14, 15
ಇದೊಂದೇ ಹಿಂದೂ ಹಬ್ಬ ಪ್ರತಿ ವರ್ಷ ಇಂಗ್ಲಿಷ್ ಕ್ಯಾಲೆಂಡರ್‌ಗೆ ಅನುಗುಣವಾಗಿ ಅದೇ ದಿನಾಂಕಕ್ಕೆ ಬರುವುದು. ಪ್ರತಿ 8 ವರ್ಷಕ್ಕೊಮ್ಮೆ ಭೂಮಿಯ ಚಲನೆಯ ಕಾರಣದಿಂದ ತಾರೀಕು ಕೊಂಚ ಹಿಂದು ಮುಂದಾಗಬಹುದು. ಅಂದರೆ ಸಧ್ಯ ಜನವರಿ(January) 14, 15ರಂದು ಪ್ರತಿ ವರ್ಷ ಬರುವ ಮಕರ ಸಂಕ್ರಮಣವು ಸಾವಿರ ವರ್ಷದ ಹಿಂದೆ ಡಿಸೆಂಬರ್ 31ಕ್ಕೆ ಬರುತ್ತಿತ್ತು.

ಹೆಸರಿನ ವೈವಿಧ್ಯತೆ

ಭಾರತದಾದ್ಯಂತ ಎಲ್ಲ ರಾಜ್ಯಗಳಲ್ಲೂ ಈ ಹಬ್ಬವನ್ನು ಆಚರಿಸುತ್ತಾರಾದರೂ ಒಂದೊಂದು ಕಡೆ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಮಕರ ಸಂಕ್ರಮಣವಾದರೆ, ತಮಿಳು ನಾಡು ಹಾಗೂ ಕೇರಳದಲ್ಲಿ ಪೊಂಗಲ್(Pongal) ಎನ್ನಲಾಗುತ್ತದೆ. ಪಂಜಾಬ್‌(Punjab)ನಲ್ಲಿ ಲೊಹ್ರಿ ಎನಿಸಿಕೊಳ್ಳುವ ಈ ಹಬ್ಬ, ಗುಜರಾತ್‌ನಲ್ಲಿ ಉತ್ತರಾಯಣ ಎನಿಸಿಕೊಳ್ಳುತ್ತದೆ. ಅಸ್ಸಾಂನಲ್ಲಿ ಇದೇ ಹಬ್ಬ ಭೋಗಾಲಿ ಬಿಹು ಎನಿಸಿಕೊಂಡರೆ ಬಿಹಾರ(Bihar)ದಲ್ಲಿ ತಿಲ್ ಸಂಕ್ರಾಂತಿ. 

ಗಾಳಿಪಟ

ಸಂಕ್ರಾಂತಿ ಎಂದರೆ ಮನೆಯ ಚಾವಣಿಯಲ್ಲೋ, ಹೊರಾಂಗಣ ಸಮುದ್ರ ದಡದಲ್ಲೋ ಅಥವಾ ಬಯಲಲ್ಲೋ ನಿಂತು ಗಾಳಿಪಟ ಹಾರಿಸುವ(flying kites) ಆಚರಣೆ ಇದೆ. ಅದರಲ್ಲೂ ಗುಜರಾತ್‌ನಲ್ಲಿ ಗಾಳಿಪಟ ಹಾರಿಸುವ ಸಂಭ್ರಮವನ್ನು ಕಣ್ತುಂಬಿಕೊಂಡೇ ಅನುಭವಿಸಬೇಕು. ಈ ಸಂಪ್ರದಾಯವು ಬಹಳ ಹಿಂದಿನಿಂದಲೂ ನಡೆದು ಬಂದಿದ್ದು, ಇದು ಮೋಜಿನ ಜೊತೆಗೆ ಆರೋಗ್ಯಕಾರಿಯೂ ಆಗಿದೆ. ಸೂರ್ಯನು ಕಡೆಗೂ ಚಳಿಯ ವಿರುದ್ಧ ಹೋರಾಡುವ ಶಕ್ತಿ ಗಳಿಸುವ ಈ ದಿನ ಬಿಸಿಲಿಗೆ ಮೈಯೊಡ್ಡಿ ನಿಂತರೆ ದೇಹವು ಇನ್ಫೆಕ್ಷನ್‌ಗಳು, ಕ್ರಿಮಿ ಕೀಟಗಳಿಂದ ಮುಕ್ತವಾಗಿ ಆರೋಗ್ಯಕರವಾಗುತ್ತದೆ ಎಂಬ ವೈಜ್ಞಾನಿಕ ಕಾರಣ ಇದರ ಹಿಂದಿದೆ. 

Vastu tips: ಅಡುಗೆ ಮನೆಯಲ್ಲಿ ಇವು ಚೆಲ್ಲಿದರೆ ದುರದೃಷ್ಟ ಬೆನ್ನು ಹತ್ತಿದೆ ಎಂದೇ ಅರ್ಥ!

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ

ಸಂಕ್ರಾಂತಿ ದಿನ ಅಕ್ಕಪಕ್ಕದವರು, ನೆಂಟರಿಷ್ಟರಿಗೆ ಎಳ್ಳು ಬೆಲ್ಲ ಹಂಚಿ- 'ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ' ಅಂತ ಹೇಳುವ ಸಂಪ್ರದಾಯವಿದೆ. ಇದೇನು ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಭಾರತದಲ್ಲಿಯೂ ಇದನ್ನೇ 'ತಿಲ್ ಗುಲ್ ಖಾ ಗಾಡ್ ಗಾಡ್ ಬೋಲಾ' ಎನ್ನುತ್ತಾರೆ. ಇದಕ್ಕೆ ಕಾರಣ ಏನು ಗೊತ್ತಾ? ಸೂರ್ಯನಿಗೂ ಆತನ ಪುತ್ರ ಶನಿಗೂ ಆಗಿ ಬರುವುದಿಲ್ಲ. ಆದರೆ, ಸಂಕ್ರಾಂತಿಯ ದಿನ ಸೂರ್ಯನು ಶನಿ ಇದ್ದಲ್ಲಿ ತೆರಳಿ ಆತನನ್ನು ಕ್ಷಮಿಸುತ್ತಾನೆ. ಅಂದರೆ, ಇಂದು ಕ್ಷಮಿಸುವ ದಿನವಾಗಿ ನೋಡಲಾಗುತ್ತದೆ. ಆತ್ಮೀಯರೊಂದಿಗೆ ನಮ್ಮ ಮುನಿಸುಗಳು, ಜಗಳಗಳಿಗೆ ತಿಲಾಂಜಲಿ ಇಟ್ಟು ಇನ್ನು ಮುಂದೆ ಒಳ್ಳೆ ಮಾತಾಡಿಕೊಂಡಿರೋಣ ಎಂದು ಹೇಳುವ ಪದ್ಧತಿ ಇದು. ಇದನ್ನು ಅರ್ಥ ಮಾಡಿಕೊಂಡು ಎಲ್ಲರೂ ಆಚರಿಸೋಣ ಅಲ್ಲವೇ?

Donate And Get: ಸಂಕ್ರಾಂತಿ ದಿನ ಇವನ್ನು ದಾನ ಮಾಡಿದ್ರೆ ವರ್ಷವಿಡೀ ದುಡ್ಡಿಗೆ ಎಂದೂ ಬರವಿರೋಲ್ಲ!

ವಸಂತ ಋತು(spring)ವಿನ ಆರಂಭ
ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿರುವುದರ ಸೂಚಕ ಸಂಕ್ರಾಂತಿಯಾಗಿದೆ. ಹಿಂದೂಗಳು ಪವಿತ್ರವೆಂದು ಭಾವಿಸುವ ಸಂಧ್ಯಾಕಾಲದಲ್ಲಿ ಇಂದಿನಿಂದ ಧೀರ್ಘವಾಗಿ ಬೆಳಕಿರುತ್ತದೆ. 

ಭೀಷ್ಮರ ಸಾವು(Bhisma’s death)
ನಮ್ಮ ಆರು ತಿಂಗಳ ದಕ್ಷಿಣಾಯಣ ಕಾಲ ದೇವತೆಗಳಿಗೆ 1 ರಾತ್ರಿಯಾಗಿರುತ್ತದೆ. ಅವರಿಗೆ ಮಕರ ಸಂಕ್ರಮಣದ ದಿನ ಬೆಳಗಾಗುತ್ತದೆ. ಈ ದಿನ ಸಾಯುವವರು ಮೋಕ್ಷ ಗಳಿಸುತ್ತಾರೆ ಎಂಬ ಮಾತಿದೆ. ಹಾಗಾಗಿಯೇ ಮಹಾಭಾರತದಲ್ಲಿ ಭೀಷ್ಮ ಪಿತಾಮಹರು ಬಾಣಗಳ ಹಾಸಿಗೆಯ ಮೇಲೆ ಮಲಗಿ ಸಂಕ್ರಾಂತಿ ಬೆಳಗಿನವರೆಗೆ ಕಾದು ಕಡೆಗೆ ಕೊನೆಯುಸಿರೆಳೆದರು. 
 

click me!