ಅಡುಗೆ ಮನೆಯಲ್ಲಿ ಕೆಲ ವಸ್ತುಗಳು, ಪದಾರ್ಥಗಳು ಪದೇ ಪದೆ ಕೈ ಜಾರಿ ಬೀಳುತ್ತಿದ್ದರೆ ಅದು ಎದುರಾಗಲಿರುವ ಕಷ್ಟಗಳ ಸೂಚನೆ ಎನ್ನುತ್ತದೆ ವಾಸ್ತುಶಾಸ್ತ್ರ.
ಅಡುಗೆ ಮನೆ ಎಂದ ಮೇಲೆ ಅಲ್ಲಿ ತರಕಾರಿ, ದಿನಸಿ, ಹಣ್ಣುಗಳು, ಪಾತ್ರೆ ಪಡಗಗಳು ತುಂಬಿ ತುಳುಕುತ್ತಿರುತ್ತದೆ. ಆಗಾಗ ಯಾವುದಕ್ಕೋ ಕೈ ಹಾಕುವಾಗ ಮತ್ತೊಂದು ಕೈ ತಾಕಿ ಬೀಳಬಹುದು. ಮತ್ತೆ ಕೆಲವೊಂದು ಕೈಯಿಂದ ಜಾರಿ ಬೀಳಬಹುದು. ಎಲ್ಲವಕ್ಕೂ ಅರ್ಥ ಕಲ್ಪಿಸಲಾಗುವುದಿಲ್ಲ. ಆದರೆ, ಕೆಲ ಪದಾರ್ಥಗಳು ನೆಲಕ್ಕೆ ಬೀಳುವುದು ಅಶುಭ(inauspicious) ಎನ್ನುತ್ತದೆ ವಾಸ್ತು ಶಾಸ್ತ್ರ. ಏಕೆಂದರೆ ಅವು ಗ್ರಹಗಳೊಂದಿಗೆ ಸಂಬಂಧ ಹೊಂದಿರುತ್ತವೆ. ಹಾಗಾಗಿ, ಕೆಲ ವಸ್ತುಗಳು ಕೆಳ ಬಿದ್ದರೆ ಅವು ಮುಂಬರುವ ಕಷ್ಟಗಳ ಸೂಚನೆಯಾಗಿರಬಹುದು, ಇಲ್ಲದಿದ್ದರೆ, ಅದರಿಂದಲೇ ಕಷ್ಟಗಳು ಎದುರಾಗಬಹುದು. ಯಾವೆಲ್ಲ ವಸ್ತುಗಳು ಕೆಳಗೆ ಚೆಲ್ಲಬಾರದು ಎಂಬ ವಿವರ ಇಲ್ಲಿದೆ ನೋಡಿ.
ಉಪ್ಪು(salt)
ವಾಸ್ತುವಿನ ಪ್ರಕಾರ, ಕೈಯಿಂದ ಉಪ್ಪು ಜಾರಿ ಪದೇ ಪದೆ ನೆಲಕ್ಕೆ ಬೀಳುತ್ತಿದ್ದರೆ, ಅದು ಶುಕ್ರ(Venus) ಗ್ರಹ ಹಾಗೂ ಚಂದ್ರನ ನಕಾರಾತ್ಮಕ ಪರಿಣಾಮಗಳು ನಿಮ್ಮ ಕುಟುಂಬದ ಮೇಲಾಗುತ್ತಿದೆ ಎಂಬ ಸೂಚನೆ. ಇದರಿಂದ ಮನೆಯಲ್ಲಿ ಮಾನಸಿಕ ಒತ್ತಡ(mental stress) ಹೆಚ್ಚುವ ಜೊತೆಗೆ ಹಣ ಕಳೆದುಕೊಳ್ಳುವುದು ನಡೆಯಬಹುದು. ಮನೆಯ ವಾಸ್ತು ದೋಷಗಳ ಸೂಚನೆಯೂ ಇರಬಹುದು. ಇದಲ್ಲದೆ ಉಪ್ಪನ್ನು ಬರಿ ಕೈಲಿ ಮುಟ್ಟುವುದರಿಂದ ಹಣದ ವಿಷಯದಲ್ಲಿ ಸಮಸ್ಯೆಗಳು ಹೆಚ್ಚುತ್ತವೆ. ಕೆಳಗೆ ಬಿದ್ದ ಉಪ್ಪನ್ನು ತುಳಿಯುವುದರಿಂದಲೂ ಕಷ್ಟಗಳು ಹೆಚ್ಚುತ್ತವೆ. ಉಪ್ಪನ್ನು ಉಚಿತವಾಗಿ ಪಡೆಯುವುದು, ಕೊಡುವುದು ಎರಡೂ ಋಣದ ಬಾಧೆ ಹೆಚ್ಚಿಸಲಿವೆ.
ಹಾಲು(milk)
ಗೃಹ ಪ್ರವೇಶದ ದಿನ ಹಾಲುಕ್ಕಿಸುವುದೇನೋ ಶುಭಕ್ಕಾಗಿಯೇ. ಆದರೆ ಆ ನಂತರದಲ್ಲಿ ಹಾಲು ಪದೇ ಪದೇ ಉಕ್ಕುವುದು, ಕೈ ತಪ್ಪಿ ಹಾಲಿನ ಪಾತ್ರೆ, ಲೋಟಗಳು ಕೆಳಗೆ ಬೀಳುವುದು ಕೂಡಾ ದುರದೃಷ್ಟದ ಸೂಚನೆ. ಏಕೆಂದರೆ ಹಾಲು ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಕುಟುಂಬದಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಿದೆ ಎಂಬುದನ್ನು ಇದು ಸೂಚಿಸುತ್ತದೆ.
ಕಾಳುಮೆಣಸು(pepper)
ಪೆಪ್ಪರ್ ಪದೇ ಪದೆ ಬಿದ್ದು ನೆಲದ ತುಂಬಾ ಹರಡುತ್ತಿದೆ ಎಂದರೆ ಅದು ಅಶುಭ. ಇದು ವಿವಾಹಿತರ ಜೀವನದಲ್ಲಿ ಕೆಟ್ಟ ಪರಿಣಾಮಗಳನ್ನು ಬೀರಬಹುದು. ಇದರಿಂದ ಪತಿ ಪತ್ನಿ ನಡುವೆ ಜಗಳಗಳು ಹೆಚ್ಚಲಿವೆ.
Astro Tips : ಕಂಕಣ ಭಾಗ್ಯ ಕೂಡಿ ಬರಲು ಕಾಡಿಗೆಯ ಈ ಉಪಾಯ ಅನುಸರಿಸಿ
ಎಣ್ಣೆ(Oil)
ಎಣ್ಣೆಯು ಶನಿದೇವನಿಗೆ ಸಂಬಂಧಿಸಿದ್ದು. ಅಪರೂಪಕ್ಕೆ ಎಣ್ಣೆ ಚೆಲ್ಲುವುದರಲ್ಲಿ ವಿಶೇಷವಿಲ್ಲ. ಆದರೆ ಇದು ಪದೇ ಪದೆ ಘಟಿಸುತ್ತಿದೆ ಎಂದಾದರೆ ಮಾತ್ರ ನೀವು ಎಚ್ಚರಗೊಳ್ಳಲೇಬೇಕು. ಇದು ನಿಮ್ಮ ಕುಟುಂಬ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಗಲಿದೆ, ಶನಿಯ ಕೆಟ್ಟ ದೃಷ್ಟಿ ನಿಮ್ಮ ಕುಟುಂಬದ ಮೇಲೆ ಬಿದ್ದಿದೆ ಎಂಬುದನ್ನು ತೋರಿಸುತ್ತದೆ.
Spirituality: ಬ್ರಹ್ಮ, ವಿಷ್ಣು, ಶಿವನ ಆವಾಸಸ್ಥಾನ ಅಶ್ವತ್ಥ ಮರ
ಆಹಾರ(food)
ಆಹಾರ, ಅನ್ನ, ಅಕ್ಕಿ ಇತ್ಯಾದಿ ಪದಾರ್ಥಗಳು ಪದೇ ಪದೇ ನೆಲಕ್ಕೆ ಚೆಲ್ಲುತ್ತಿದ್ದರೆ, ತಟ್ಟೆ ಕೈ ತಪ್ಪಿ ಬೀಳುವುದು, ಚೀಲದಿಂದ ಉದುರುವುದ ಮುಂತಾಗಿ ಆಗುತ್ತಿದ್ದರೆ ಅನ್ನಪೂರ್ಣೆಗೆ ನಿಮ್ಮ ಮೇಲೆ ಕೋಪ ಬಂದಿದೆ ಎಂದರ್ಥ. ಆಕೆಯ ಬಳಿ ಕ್ಷಮೆ ಕೇಳಿ, ಆಹಾರ ಬೀಳದಂತೆ ಎಚ್ಚರ ವಹಿಸಿ. ಅಂತೆಯೇ ತಟ್ಟೆಯಲ್ಲಿ ಅರ್ಧ ತಿಂದು ಅರ್ಧ ಚೆಲ್ಲುವ ಅಭ್ಯಾಸವನ್ನೂ ತಪ್ಪಿಸಿ.
ವಾಸ್ತು ಶಾಸ್ತ್ರವು ಮನೆಯನ್ನು ನೀಟಾಗಿ ಜೋಡಿಸಿಟ್ಟುಕೊಳ್ಳುವ ಬಗ್ಗೆ ಹೇಳುತ್ತದೆ. ಹಾಗೆಯೇ ಅಡುಗೆ ಮನೆಯನ್ನು ಚೆನ್ನಾಗಿ ಜೋಡಿಸಿಟ್ಟುಕೊಂಡರೆ ಹೆಚ್ಚಿನ ವಸ್ತುಗಳು ಬೀಳುವುದನ್ನು ತಪ್ಪಿಸಬಹುದು. ಇದರೊಂದಿಗೆ ಗ್ಲಾಸ್‌ಗಳ ಬಳಕೆ ಕಡಿಮೆ ಮಾಡಿ, ಮಾಡುವ ಕೆಲಸದ ಮೇಲೆ ಗಮನವಿಟ್ಟರೆ ಮತ್ತಷ್ಟು ವಸ್ತುಗಳು ಬೀಳುವುದನ್ನು ತಪ್ಪಿಸಬಹುದು.