
ನಾರದ(Narada) ಮುನಿ ಎಂದರೆ ಇಬ್ಬರ ನಡುವೆ ತಂದಿಟ್ಟು ಮಜಾ ನೋಡುವವ ಎಂಬ ಅಪಖ್ಯಾತಿ ಇದೆ. ಆದರೆ, ನಿಜವಾಗಿ ನಾರದರ ಉದ್ದೇಶ ಅದಲ್ಲ. ಅವರೊಂದು ರೀತಿಯಲ್ಲಿ ಪುರಾಣ ಕಾಲದ ಪ್ರಥಮ ಪತ್ರಕರ್ತರು(First journalist). ಏಕೆಂದರೆ ಸದಾ ಲೋಕಸಂಚಾರದಲ್ಲಿರುವ ನಾರದರು, ಸ್ವರ್ಗದಲ್ಲಿರುವ ದೇವರು, ದೇವಲೋಕದಲ್ಲಿರುವ ದೇವತೆಗಳು, ಭೂಮಿಯಲ್ಲಿರುವ ಸಾಮಾನ್ಯ ಜನರು ಮತ್ತು ಪಾತಾಳದಲ್ಲಿರುವ ಅಸುರರ ನಡುವೆ ಸಂವಹನವನ್ನು ಸಾಧ್ಯವಾಗಿಸುತ್ತಾರೆ. ಒಂದು ಲೋಕದಲ್ಲಿನ ಸುದ್ದಿಯನ್ನು ಮತ್ತೊಂದು ಕಡೆಗೆ ತಲುಪಿಸುತ್ತಾರೆ.
ಹೀಗೆ ಬ್ರಹ್ಮಚಾರಿಯಾಗಿ ಲೋಕ ಸುತ್ತುವ ದೇವರ್ಷಿ ನಾರದರನ್ನು ಪ್ರೀತಿಯಿಂದ ನಾರದ ಮುನಿ ಎಂದು ಕರೆಯಲಾಗುತ್ತದೆ. ಅವರು ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮ(Lord Brahma) ಮತ್ತು ಜ್ಞಾನದ ದೇವತೆಯಾದ ಸರಸ್ವತಿ ದೇವಿ(Ma Saraswati)ಯ ಪುತ್ರ. ಅಂದರೆ ಅಕ್ಷರಶಃ ಸರಸ್ವತೀ ಪುತ್ರರಾದ ನಾರದರ ಜ್ಞಾನ ಅಗಾಧವಾದುದು.
ನಾರದರು, ಪ್ರತಿಪದ ತಿಥಿ, ವೈಶಾಖ ಮಾಸ, ಕೃಷ್ಣ ಪಕ್ಷದಂದು ಜನಿಸಿದರು. ಅಂದರೆ ಇಂದು ಮೇ 17ರಂದು ನಾರದ ಜಯಂತಿ. ಅವರ ಬಗ್ಗೆ ಒಂದಿಷ್ಟು ಆಸಕ್ತಿಕರ ವಿಷಯಗಳನ್ನು ತಿಳಿಯೋಣ ಬನ್ನಿ.
ವಿಷ್ಣು(Lord Vishnu) ಭಕ್ತ
ದೇವರ್ಷಿ ನಾರದರು ಮಾತು ಆರಂಭಿಸುವ ಮುನ್ನ ಹಾಗೂ ಮಾತು ಮುಗಿದ ಬಳಿಕ 'ನಾರಾಯಣ ನಾರಾಯಣ' ಎಂದು ಜಪಿಸುವುದು ಎಲ್ಲರಿಗೂ ತಿಳಿದಿರುವುದೇ. ಇದಕ್ಕೆ ಕಾರಣ ಅವರಲ್ಲಿರುವ ಅಪಾರ ವಿಷ್ಣುಭಕ್ತಿ. ವಿಷ್ಣುವಿನ ಕಟ್ಟಾ ಭಕ್ತರಾಗಿರುವ ಅವರಿಗೆ ಸಾಕಷ್ಟು ದೈವಿಕ ಶಕ್ತಿಗಳು ಒಲಿದು ಬಂದವು. ನಾರದರ ಬಾಯಲ್ಲಿ ವಿಷ್ಣುವಿನ ಹೆಸರು ಬಹಳ ಸುಲಲಿತವಾಗಿ ಹರಿದು ಬರುತ್ತದೆ. ಗರುಡನ ಮೇಲೆ ವಿಷ್ಣು ಪ್ರಯಾಣಿಸುವಾಗೆಲ್ಲ ಪಕ್ಕದಲ್ಲಿ ನಾರದರು ಕುಳಿತಿರುತ್ತಾರೆಂಬ ಪ್ರತೀತಿ ಇದೆ.
Chanakya Niti : ಇಂಥ ಮಹಿಳೆಯರನ್ನು ಎಂದೂ ನಂಬಬೇಡಿ!
ದೇವಋಷಿ
ಸಪ್ತರ್ಷಿಗಳನ್ನು ಹೊರತುಪಡಿಸಿದರೆ ಆ ವಿಶೇಷ ದೇವಋಷಿ ಪಟ್ಟ ಗಳಿಸಿರುವವರು ನಾರದರು. ಅವರು ಅತ್ಯಂತ ಶ್ರೇಷ್ಠರೆಂದು ಪರಿಗಣಿತರಾಗಿದ್ದಾರೆ. ಕೇಸರಿ ಧೋತಿ ಮತ್ತು ಅಂಗವಸ್ತ್ರವನ್ನು ಧರಿಸಿರುವ ದೇವಋಷಿ ನಾರದ ಮುನಿಯು ವೀಣೆ ಮತ್ತು ಕಾರ್ತಾಳವನ್ನು ಸದಾ ಹಿಡಿದು ಓಡಾಡುತ್ತಾರೆ. ಆಸಕ್ತಿದಾಯಕ ವಿಷಯವೆಂದರೆ, ಅವರ ಮಾತು ಅಥವಾ ಮಾಹಿತಿಯು ಆಗಾಗ್ಗೆ ಪ್ರಚೋದಿಸುವಂತೆ ಧ್ವನಿಸುತ್ತದೆ, ಆದರೆ ಅವರ ಉದ್ದೇಶಗಳು ಆನಂದದಾಯಕ ಫಲಿತಾಂಶಗಳನ್ನೇ ನೀಡಿವೆ.
ಲೋಕಕಲ್ಯಾಣ
ಹೌದು, ನಾರದರು ಮಾತಾಡುವಾಗ ಅವರು ಇಬ್ಬರ ನಡುವೆ ತಂದಿಡುತ್ತಿದ್ದಾರೆ ಎನಿಸಿದರೂ ಅದರಿಂದ ಆದ ಪರಿಣಾಮಗಳು ಜಗತ್ತಿಗೆ ಒಳಿತನ್ನೇ ಉಂಟು ಮಾಡಿದವು. ದೊಡ್ಡ ದರೋಡೆಕೋರ ಅಂಗುಲಿಮಾಲ ಉತ್ತಮ ಋಷಿವರ್ಯ ವಾಲ್ಮೀಕಿಯಾಗಿ ಬದಲಾದದ್ದು ನಾರದರಿಂದ. ಕಂಸನು ಕೃಷ್ಣನ ಒಡಹುಟ್ಟಿದ ಮಕ್ಕಳನ್ನೆಲ್ಲ ಸಾಯಿಸಲು ಕಾರಣವಾಗಿದ್ದು ನಾರದರ ಮಾತುಗಳು. ಆದರೆ, ಅವರ ಎಲ್ಲ ಮಾತು, ಕೃತಿಗಳೂ ಧೀರ್ಘಕಾಲದಲ್ಲಿ ನೋಡಿದಾಗ ಲೋಕಕಲ್ಯಾಣಕ್ಕಾಗಿಯೇ ಆಗಿದ್ದವು ಎಂಬುದು ಅರಿವಾಗುತ್ತದೆ. ನಾರದರು ಮೂರು ಲೋಕಗಳನ್ನು ಏಕಕಾಲದಲ್ಲಿ ಪ್ರಯಾಣಿಸಬಲ್ಲರು.
Vastu Tips: ಟೆರೇಸ್ ಮೇಲೆ ಈ ಗಿಡ ಇಟ್ರೆ ಅಶುಭ ಪರಿಣಾಮ ಗ್ಯಾರಂಟಿ!
ಹಿಂದಿನ ಜನ್ಮ
ನಾರದ ಮುನಿಯ ಹಿಂದಿನ ಜನ್ಮದಲ್ಲಿ, ಪವಿತ್ರ ಪುರುಷರು ವಾಸಿಸುವ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಸೇವಕಿಯ ಮಗನಾಗಿದ್ದರು. ಈ ಬಾಲಕ ಆಶ್ರಮದ ಋಷಿವರ್ಯರು ಭಗವಾನ್ ಮಹಾವಿಷ್ಣುವಿನ ಸ್ತುತಿಯನ್ನು ಹಾಡುವುದನ್ನು ವೀಕ್ಷಿಸಿ ಪ್ರೇರಿತನಾದ. ಪುಣ್ಯಾತ್ಮರ ಮಾತುಗಳು ಆತನನ್ನು ಚಿಕ್ಕ ವಯಸ್ಸಿನಲ್ಲಿಯೇ ಮಾಯೆಯಿಂದ ಮುಕ್ತಗೊಳಿಸಿದವು. ಹಾವು ಕಡಿತದಿಂದ ಅವನ ತಾಯಿ ತೀರಿಕೊಂಡಾಗ, ಈ ಪ್ರಪಂಚದೊಂದಿಗಿನ ಅವನ ಎಲ್ಲ ಬಾಂಧವ್ಯಗಳು ಮತ್ತು ಬಂಧಗಳು ಮುರಿದುಹೋದವು. ನಂತರ ಅವರು ತಪಸ್ವಿಯಾದರು ಮತ್ತು ಅವರ ಭಕ್ತಿಗೆ ಮೆಚ್ಚಿದ ವಿಷ್ಣುವು ಮುಂದಿನ ಜನ್ಮದಲ್ಲಿ ನಾರದ ಮುನಿಯಾಗಿ ಹುಟ್ಟಿ ವಿಷ್ಣುವಿನ ಜೊತೆಯಾಗಿರುವ ವರವನ್ನು ಪಡೆದರು.
ಇಂದು ಅವರ ಜನ್ಮದಿನದಂದು ಎಲ್ಲರಿಗೂ ನಾರದ ಜಯಂತಿಯ ಶುಭಾಶಯಗಳು.