ಮಂಗಳ ಗ್ರಹದ ರಾಶಿ ಪರಿವರ್ತನೆಯಿಂದ ಈ 5 ರಾಶಿಯವರಿಗೆ ಕೆಡುಕು

By Suvarna NewsFirst Published Jun 1, 2021, 12:59 PM IST
Highlights

ಮಂಗಳ ಗ್ರಹದ ರಾಶಿ ಪರಿವರ್ತನೆಯಿಂದ ಕೆಲವು ರಾಶಿಗಳಿಗೆ ಶುಭ ಫಲ ಉಂಟಾದರೆ, ಮತ್ತೆ ಕೆಲವು ರಾಶಿಯವರಿಗೆ ಅಶುಭ ಫಲ ನೀಡಲಿದೆ. ಹಾಗಾಗಿ ಈ ಅವಧಿಯಲ್ಲಿ ಮಂಗಳ ಗ್ರಹವನ್ನು ಆರಾಧಿಸುವುದರಿಂದ ಅಶುಭ ಪ್ರಭಾವ ತಗ್ಗುತ್ತದೆ. ಇದೇ ಜೂನ್ 2ರಂದು ಮಂಗಳ ಗ್ರಹವೂ ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದು, ಜುಲೈ 20ರವರೆಗೆ ಅದೇ ರಾಶಿಯಲ್ಲಿ ಸ್ಥಿತವಾಗಿರಲಿದೆ. ಕರ್ಕಾಟಕ ರಾಶಿಯು ಚಂದ್ರನ ರಾಶಿಯಾಗಿದ್ದು, ಈ ರಾಶಿಯಲ್ಲಿ ಮಂಗಳ ಗ್ರಹವು ನೀಚ ಸ್ಥಿತಿಯಲ್ಲಿರುತ್ತದೆ. ಹಾಗಾಗಿ ಕೆಲವು ರಾಶಿಯವರಿಗೆ ಕೆಟ್ಟ ಪ್ರಭಾವವನ್ನು ಬೀರಲಿದೆ. ಅಶುಭ ಪ್ರಭಾವಕ್ಕೊಳಗಾಗುವ ರಾಶಿಗಳ ಬಗ್ಗೆ ತಿಳಿಯೋಣ..

ಗ್ರಹಗಳ ರಾಶಿ ಪರಿವರ್ತನೆಯು ವ್ಯಕ್ತಿಗಳ ಜೀವನದ ಮೇಲೆ ಉತ್ತಮ ಮತ್ತು ಕೆಟ್ಟ  ಪ್ರಭಾವವನ್ನು ಬೀರುತ್ತವೆ. ಗ್ರಹವು ನೀಚ ರಾಶಿಯಲ್ಲಿ ಸ್ಥಿತವಾಗಿದ್ದರೆ ಅದರ ಪರಿಣಾಮ ಸಾಮಾನ್ಯವಾಗಿ ಕೆಟ್ಟದಾಗಿರುತ್ತದೆ. ಅದೇ ಗ್ರಹವು ಉಚ್ಚ ರಾಶಿಯಲ್ಲಿ ಸ್ಥಿತವಾಗಿದ್ದಾಗ ಉತ್ತಮ ಪರಿಣಾಮವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಈ ಬಾರಿ ಮಂಗಳ ಗ್ರಹವು ಕರ್ಕಾಟಕ ರಾಶಿಗೆ ಪ್ರವೇಶಿಸಲಿದೆ.

ಇದೇ ಜೂನ್ 2ರಂದು ಮಂಗಳ ಗ್ರಹವು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದು, ಜುಲೈ 20ರ ವರೆಗೆ ಅದೇ ರಾಶಿಯಲ್ಲಿ ಸ್ಥಿತವಾಗಿರಲಿದೆ. ಕರ್ಕಾಟಕ ರಾಶಿಯು ಚಂದ್ರನ ರಾಶಿಯಾಗಿದ್ದು, ಈ ರಾಶಿಯಲ್ಲಿ ಮಂಗಳ ಗ್ರಹವು ನೀಚ ಸ್ಥಿತಿಯಲ್ಲಿರುತ್ತದೆ. ಅದೇ ಮಕರ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿರುತ್ತದೆ. ಈಗ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿರುವ ಮಂಗಳ ಗ್ರಹವು ಐದು ರಾಶಿಯವರಿಗೆ ನಕಾರಾತ್ಮಕ ಪ್ರಭಾವವನ್ನು ಬೀರಲಿದ್ದು, ಆ ರಾಶಿಗಳ ಬಗ್ಗೆ ತಿಳಿಯೋಣ..

ಇದನ್ನು ಓದಿ: ಕೆಲಸ – ಕಾರ್ಯಗಳು ಅಡೆತಡೆಯಿಲ್ಲದೆ ಆಗಬೇಕಿದ್ದರೆ ಈ ವಾಸ್ತು ಉಪಾಯ ಪಾಲಿಸಿ... 

ಮಿಥುನ ರಾಶಿ : 
ಈ ರಾಶಿಯವರಿಗೆ ಮಂಗಳ ಗ್ರಹದ ಗೋಚಾರವು ಅಷ್ಟೊಂದು ಉತ್ತಮವಾಗಿರುವುದಿಲ್ಲ. ಕಲಹಗಳಿಂದ, ವಾದ - ವಿವಾದಗಳಿಂದ  ದೂರವಿರುವುದು ಉತ್ತಮ. ಕೋರ್ಟ್ ಕಚೇರಿ ವ್ಯವಹಾರಗಳಿದ್ದಲ್ಲಿ ರಾಜಿ ಮಾರ್ಗದಿಂದ ಸರಿಪಡಿಸಿಕೊಳ್ಳುವುದು ಉತ್ತಮ. ಜಮೀನು ಅಥವಾ ಆಸ್ತಿ ವಿವಾದಗಳು ಮತ್ತಷ್ಟು ಸಮಸ್ಯೆಗಳನ್ನು ಉಂಟು ಮಾಡುವ  ಸಾಧ್ಯತೆಯಿದೆ.   ಈ ರಾಶಿಯವರು ತಮ್ಮ ಹಠ ಮತ್ತು ಆಕ್ರೋಶಗಳನ್ನು ನಿಯಂತ್ರಣ ದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವುದು ಉತ್ತಮ. ಕೌಟುಂಬಿಕ ಕಲಹಗಳಿಂದ ಮನಸ್ಸಿಗೆ ಅಶಾಂತಿಯುಂಟಾಗುತ್ತದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಉತ್ತಮ.  ಬಲಗಣ್ಣಿಗೆ ಸಂಬಂಧಿಸಿದ ಸಮಸ್ಯೆಯುಂಟಾಗುವ ಸಾಧ್ಯತೆಯಿದೆ.


ಸಿಂಹ ರಾಶಿ : 
ಈ ರಾಶಿ ಪರಿವರ್ತನೆಯಿಂದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವವರು ಹೆಚ್ಚಿನ ಪರಿಶ್ರಮವನ್ನು ಪಡಬೇಕಾಗುತ್ತದೆ. ಖರ್ಚು ಹೆಚ್ಚು ಆದ್ದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಸ್ನೇಹಿತರು ಅಥವಾ ಸಂಬಂಧಿಕರಿಂದ ಅಶುಭ ಸುದ್ದಿಯನ್ನು ಕೇಳುವ ಸಂಭವವಿದೆ. ಈ ಅವಧಿಯಲ್ಲಿ ವಿದೇಶ ಯಾತ್ರೆಯ ಸಲುವಾಗಿ ಮಾಡುವ ಪ್ರಯತ್ನಗಳು ಸಫಲಗೊಳ್ಳುತ್ತವೆ.

ಇದನ್ನು ಓದಿ: ಈ ತಾರೀಖಿನಲ್ಲಿ ಹುಟ್ಟಿದವರು ದುಡ್ಡಿನ ವಿಷಯದಲ್ಲಿ ಬಹಳ ಲಕ್ಕಿ..! 

ತುಲಾ ರಾಶಿ
ಮಂಗಳ ಗ್ರಹವು ಕರ್ಕಾಟಕ ರಾಶಿಗೆ ಪ್ರವೇಶಿಸುವುದರಿಂದ ತುಲಾ ರಾಶಿಯವರ ಕಾರ್ಯಕ್ಷೇತ್ರದಲ್ಲಿ ಅನೇಕ ಏರುಪೇರುಗಳನ್ನು ಕಾಣಬೇಕಾಗುತ್ತದೆ.  ಈ ರಾಶಿಯವರಿಗೆ ಮಂಗಳ ಗ್ರಹದ ಅಶುಭ ಪ್ರಭಾವವು ಆರೋಗ್ಯದ ಮೇಲೆ ಸಹ ಆಗುವ ಸಂಭವವಿದ್ದು, ಸ್ವಾಸ್ಥ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆ ಇದೆ. ಉನ್ನತ ಅಧಿಕಾರಿಗಳೊಂದಿಗಿನ ಬಾಂಧವ್ಯ ಕೆಡದಿರುವಂತೆ ಜಾಗ್ರತೆ ವಹಿಸುವುದು ಉತ್ತಮ. ಈ ರಾಶಿಯವರ ಆತ್ಮವಿಶ್ವಾಸ ಮತ್ತು ಬುದ್ಧಿಶಕ್ತಿಯಿಂದ ಸಂಕಷ್ಟದ  ಸಂದರ್ಭಗಳನ್ನು ಸುಲಭವಾಗಿ ಎದುರಿಸುವ ಧೈರ್ಯವನ್ನು ಹೊಂದಿರುತ್ತಾರೆ. ಈ ರಾಶಿಯವರಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು ಕೊಂಚ ತಡವಾಗಬಹುದು, ಆದರೆ ಯಶಸ್ಸು ಸಿಗುವುದು ಖಚಿತವಾಗಿರುತ್ತದೆ.

ಧನು ರಾಶಿ
ಮಂಗಳ ಗ್ರಹದ ಗೋಚಾರದ ಸಮಯವು ಈ ರಾಶಿಯವರಿಗೆ ಅಶಾಂತಿಯ ಮನಃಸ್ಥಿತಿ ಉಂಟಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯಕವಾಗಿರುತ್ತದೆ. ಅಗ್ನಿ, ವಿಷ ಮುಂತಾದವುಗಳಿಂದ ಜಾಗೃತರಾಗಿರುವುದಲ್ಲದೆ, ಔಷಧಿಗಳ ಅಡ್ಡ ಪರಿಣಾಮದ ಬಗ್ಗೆ ಗಮನಹರಿಸುವುದು ಅಗತ್ಯ. ಕಾರ್ಯಕ್ಷೇತ್ರದಲ್ಲಿ ನಡೆಯುವ ಕುತಂತ್ರಗಳಿಗೆ ಬಲಿಯಾಗದಂತೆ ಎಚ್ಚರವಹಿಸಿ. ಕೆಲಸದ ಬಗ್ಗೆ ಮಾತ್ರ ಲಕ್ಷ್ಯವಹಿಸುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಆಸ್ತಿ ಮತ್ತು ಜಮೀನಿಗೆ ಸಂಬಂಧಿಸಿದ ವಿಚಾರಗಳ ತೊಂದರೆ ಪರಿಹಾರವಾಗುತ್ತವೆ.

ಇದನ್ನು ಓದಿ:

ಮಕರ ರಾಶಿ
ಮಂಗಳ ಗ್ರಹ ಗೋಚಾರದಿಂದ ಈ ರಾಶಿಯವರ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಸಂಗಾತಿಯೊಂದಿಗೆ ವಿವಾದಗಳಾಗದಂತೆ ಎಚ್ಚರವಹಿಸುವುದು ಅವಶ್ಯಕ. ರಾಜ್ಯ ಅಥವಾ ಕೇಂದ್ರ ಸರ್ಕಾರದ ಟೆಂಡರ್ ಸಂಬಂಧಿತ ಅವಕಾಶಗಳಿದ್ದರೆ, ಅದನ್ನು ಉಪಯೋಗಿಸಿಕೊಳ್ಳಲು ಇದು ಸುಸಮಯವಾಗಿದೆ. ವಿವಾಹ ಕಾರ್ಯಗಳು ವಿಳಂಬವಾಗುತ್ತವೆ. ವಿದೇಶಿ ಕಂಪನಿಗಳಿಂದ ಉದ್ಯೋಗಾವಕಾಶ ಬರುವ ಸಾಧ್ಯತೆ ಇದೆ. ಈ ರಾಶಿಯವರು ತಮ್ಮ ಯೋಜನೆಗಳನ್ನು ಗೌಪ್ಯವಾಗಿರಿಸಿ, ಮುನ್ನಡೆಯುವುದರಿಂದ ಕಾರ್ಯದಲ್ಲಿ ಸಫಲತೆ ಲಭಿಸಲಿದೆ.

click me!