ಗಂಡ ಹೆಂಡತಿಯ ಬಳಿ, ಹೆಂಡತಿ ಗಂಡನ ಬಳಿ ನಾಚಿಕೆ ಬಿಟ್ಟು ಕೆಲವು ಸಂಗತಿಗಳನ್ನು ಹೇಳಬೇಕು, ಮಾಡಬೇಕು, ಮಾಡಿಸಿಕೊಳ್ಳಬೇಕು. ಇಲ್ಲವಾದರೆ ದಾಂಪತ್ಯದಲ್ಲಿ ಸುಖ ಸಮೃದ್ಧಿಯನ್ನು ಕಾಣಲು ಸಾಧ್ಯವಿಲ್ಲ ಅಂತಾನೆ ಆಚಾರ್ಯ ಚಾಣಕ್ಯ. ಏನು ಆ ಸಂಗತಿಗಳು?
ದಾಂಪತ್ಯ ಸುಖ ಎಂಬುದು ಕೇವಲ ಒಬ್ಬನಿಂದ ಆಗುವಂಥದಲ್ಲ. ಎರಡೂ ಕೈ ಸೇರಿದರೆ ಚಪ್ಪಾಳೆ. ಆದ್ದರಿಂದ ಪತಿಯು ಪತ್ನಿಯ ಬಳಿ ಕೆಲವು ವಿಷಯಗಳನ್ನು ಕೇಳುವಾಗ ನಾಚಿಕೊಳ್ಳಬಾರದು, ಅಂಜಬಾರದು. ಪತ್ನಿಯೂ ಪತಿಯ ಬಳಿ ಕೆಲವನ್ನು ನಾಚಿಕೆಯಿಲ್ಲದೇ ಕೇಳಿ ಪಡೆಯಬೇಕು. ಇದನ್ನು ಅಳವಡಿಸಿಕೊಂಡರೆ ದಾಂಪತ್ಯದಲ್ಲಿ ಸುಖವಾಗಿರಬಹುದು ಅನ್ನುತ್ತಾರೆ ಚಾಣಕ್ಯ. ಸಂತೋಷ ಮತ್ತು ಸಮೃದ್ಧಿಯನ್ನು ಬಯಸುವ ವ್ಯಕ್ತಿಯು ತನ್ನ ಪತ್ನಿಯ ಬಳಿ ಈ ವಿಷಯಗಳನ್ನು ಮಾತನಾಡಲು ಎಂದಿಗೂ ಹಿಂಜರಿಯಬಾರದು ಅಥವಾ ನಾಚಿಕೆ ಪಡಬಾರದು.
ಪ್ರಣಯಸುಖ
ರಾತ್ರಿಯ ಸಮಯದಲ್ಲಿ ನಿದ್ದೆ ಮಾಡುವ ಮುನ್ನ ಹೆಂಡತಿಯಲ್ಲಿ ಕಾಮವನ್ನು ಪತಿಯು ನಾಚಿಕೆಯಿಲ್ಲದೇ ಅಪೇಕ್ಷಿಸಬಹುದು. ಈ ವಿಷಯದಲ್ಲಿ ಪತ್ನಿಯೂ ಪತಿಯ ಬಳಿ ನಿರ್ಭಿಢೆಯಾಗಿರಬೇಕು. ಆದರೆ ಪತ್ನಿಯರು ಯಾವಾಗಲೂ ನಾಚಿಕೆ ಸ್ವಭಾವದವರಾಗಿರುವುದರಿಂದ, ತಾವಾಗಿಯೇ ಮಿಲನಸುಖವನ್ನು ಬಯಸಿ ಹತ್ತಿರ ಬರುವುದಿಲ್ಲ. ಆದರೆ ಕೆಲವು ಸೂಕ್ಷ್ಮವಾದ ಸೂಚನೆಗಳ ಮೂಲಕ ತಮ್ಮ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ಇದನ್ನು ಗಂಡ ಅರ್ಥ ಮಾಡಿಕೊಳ್ಳಬೇಕು. ಹೆಂಡತಿ ಸೆಕ್ಸ್ ಬೇಕು ಎಂದು ಎಂದಿಗೂ ಕೇಳುವುದಿಲ್ಲ, ಗಂಡನೇ ಹತ್ತಿರ ಬರಲಿ ಎಂದು ಅವಳು ಬಯಸುತ್ತಾಳೆ. ಅದಕ್ಕಾಗಿಯೇ ಹೆಂಡತಿಯ ಬಳಿ ಕಾಮವನ್ನು ತೋರಿಸಲು ನಾಚಿಕೊಳ್ಳಬಾರದು.
ಪ್ರೇಮಭಾವನೆ
ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಲು ನಾಚಿಕೊಳ್ಳಬಾರದು. ಇದನ್ನು ಮಾಡುವುದರಿಂದ ನಿಮ್ಮ ಹೆಂಡತಿ ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾಳೆ. ಈ ಕಾರಣದಿಂದಾಗಿ ನಿಮ್ಮ ಮನೆಯಲ್ಲಿ ಸಂತೋಷ ತುಂಬಿರುತ್ತದೆ. ನಿಮ್ಮ ಮನೆಯಲ್ಲಿ ಸ್ವರ್ಗೀಯ ಸೌಂದರ್ಯ ಇರುತ್ತದೆ. ಮಹಿಳೆ ಎಲ್ಲಿ ಸಂತೋಷವಾಗಿರುತ್ತಾಳೋ ಅಲ್ಲಿ ಸಂಪತ್ತು ತುಂಬಿರುತ್ತದೆ. ಮಹಿಳೆಯು ಸಂತೋಷದಿಂದಿರುವ ಮನೆಗಳಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ.
ಸಲಹೆ
ಹೆಂಡತಿಯಿಂದ ಸಲಹೆ, ಬುದ್ಧಿಮಾತು ಪಡೆಯಲು ಪತಿ ಎಂದಿಗೂ ನಾಚಿಕೆಪಡಬಾರದು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾನೆ. ಶಿಕ್ಷಕರೊಂದಿಗೆ ವ್ಯವಹರಿಸಲು ಹಿಂಜರಿಯುವ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ. ನಾಚಿಕೆ ಜ್ಞಾನದ ಸಾಧನೆಗೆ ಅಡ್ಡಿಯಾಗುತ್ತದೆ. ಪ್ರಶ್ನೆಯನ್ನು ಕೇಳಿ ಉತ್ತರ ಪಡೆಯುವವರು ಯಾವಾಗಲೂ ಉತ್ತಮ ಜ್ಞಾನವನ್ನು ಹೊಂದಿರುತ್ತಾರೆ. ಆದ್ದರಿಂದ ಜ್ಞಾನವನ್ನು ಪಡೆಯಲು, ವಿವೇಕವನ್ನು ಗಳಿಸಲು ಹೆಂಡತಿಯ ಮಾತನ್ನು ಕೇಳಬೇಕು.
ಹಸಿದಾಗ ಊಟ
ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ಮನೆಯಲ್ಲಿ ಪತ್ನಿಯ ಕೈಯಡುಗೆಯ ಊಟವನ್ನು ಕೇಳಲು ಎಂದಿಗೂ ನಾಚಿಕೆಪಡಬಾರದು. ಪತ್ನಿಯು ಗಂಡನ ಹೊಟ್ಟೆಯ ಅಳತೆಯನ್ನು, ನಾಲಿಗೆಯ ರುಚಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾಳೆ. ಆತ ಪತ್ನಿಯ ಅಡುಗೆ ಹೊರತುಪಡಿಸಿ ಬೇರೆ ಕಡೆಯ ಊಟಕ್ಕೆ ಮನಸೋತರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಪತ್ನಿಯಿಂದ ತನಗೆ ಬೇಕಾದಂಥ, ಬೇಕಾದಷ್ಟು ಆಹಾರವನ್ನು ಕೇಳಿ ಪಡೆದು ಸೇವಿಸಲು ನಾಚಿಕೆ ಪಡಬಾರದು.
Chanakya Niti: ಇದೆಲ್ಲ ಹಣದಿಂದ ಸಿಗೋಲ್ಲ, ಆದರೂ ತುಂಬಾ ಇಂಪಾರ್ಟೆಂಟು ಅಂತಾನೆ ಚಾಣಕ್ಯ
ಹಣಕಾಸು
ಅನೇಕ ಜನರು ಹಣಕಾಸನ್ನು ಹೆಂಡತಿಯ ಬಳಿ ಕೊಡುತ್ತಾರೆ. ನಂತರ ಬೇಕಾದಾಗ ಕೇಳಿ ಪಡೆಯುತ್ತಾರೆ. ಹೆಂಡತಿ ಯಾವಾಗಲೂ ಲೆಕ್ಕ ಮಾಡಿ ಗೃಹಕೃತ್ಯದ ಹಣವನ್ನು ಕೊಡುವವಳು. ಆದ್ದರಿಂದ ನೀವು ಕೇಳದೇ ಆಕೆ ಎಂದೂ ಹಣವನ್ನು ಕೊಡಲಾರಳು. ಹಾಗೆಯೇ ನಿಮಗೆ ಕಷ್ಟ ಬಂದಾಗ ಅಡವಿಡಲು ಚಿನ್ನದ ಆಭರಣ ಕೊಡುವವಳೂ ಅವಳೇ. ಗಂಟು ಕೂಡಿಸಿಟ್ಟ ಹಣವನ್ನು ಕೊಡುವವಳೂ ಅವಳೇ. ಅದಕ್ಕಾಗಿಯೇ ಹಣವನ್ನು ಕೇಳುವಲ್ಲಿ ಎಂದಿಗೂ ನಾಚಿಕೆಪಡಬಾರದು.
ಮದುವೆಗೆ ಒಪ್ಪಿಗೆ
ಆಚಾರ್ಯ ಚಾಣಕ್ಯನ ಪ್ರಕಾರ, ಮದುವೆಯ ಆಧಾರ ಯಾವಾಗಲೂ ಪರಸ್ಪರ ಒಪ್ಪಿಗೆಯಾಗಿರಬೇಕು. ನಿಮ್ಮನ್ನು ಇಷ್ಟಪಡುವ ಮತ್ತು ನಿಮ್ಮನ್ನು ಶುದ್ಧ ಮನಸ್ಸಿನಿಂದ ಮದುವೆಯಾಗಲು ಸಿದ್ಧರಿರುವ ಮಹಿಳೆಯೊಂದಿಗೆ ಮಾತ್ರ ಮದುವೆ ಮಾಡಿಕೊಳ್ಳಬೇಕು. ಅದಕ್ಕಾಗಿ ಆಕೆಯಲ್ಲಿ ಮುಕ್ತವಾಗಿ, ನಾಚಿಕೆ ಬಿಟ್ಟು ಕೇಳಿ ಒಪ್ಪಿಗೆ ಪಡೆಯಬೆಕು. ಆಗ ವೈವಾಹಿಕ ಜೀವನ ಯಶಸ್ಸಿನ ಹಾದಿಯನ್ನು ಹಿಡಿಯುತ್ತದೆ.
ಈ ಬಾರಿಯ ಗಣೇಶ ಚತುರ್ಥಿ ದಿನ ಗಣಪತಿ ಕೃಪೆಗೆ ಪಾತ್ರರಾಗಲು ಇಲ್ಲಿದೆ 7 ಸುಲಭ ಮಾರ್ಗ!