ನಿಮಗೆ ಗೊತ್ತೇ, ಶ್ರೀಕೃಷ್ಣನ ಮೈಬಣ್ಣವೇಕೆ ನೀಲಿ?

By Suvarna NewsFirst Published Jul 18, 2021, 1:31 PM IST
Highlights

ಶ್ರೀಕೃಷ್ಣನನ್ನು ಎಲ್ಲ ಕಡೆಯೂ ನೀಲಿ ಮೈಬಣ್ಣದಿಂದ ಚಿತ್ರಿಸುವುದನ್ನು ನೀವು ಕಂಡಿರಬಹುದು. ಅದ್ಯಾಕೆ ಆತನ ಮೈಬಣ್ಣ ನೀಲಿ?

ಶ್ರೀಕೃಷ್ಣನನ್ನು ಭಾಗವತದಲ್ಲಿ ಮತ್ತಿತರ ಪುರಾಣಗಳಲ್ಲಿ, ನೀಲಮೇಘಶ್ಯಾಮ ಎಂದು ಬಣ್ಣಿಸಿದ್ದಾರೆ. ಅಂದರೆ ನೀಲಮೇಘದ ಬಣ್ಣದ ಹೊಂದಿದವನು ಎಂದು. ಇದು ಪೂರ್ತಿ ನೀಲಿಯಲ್ಲ. ಇತ್ತ ಕಪ್ಪೂ ಅಲ್ಲ. ಕೃಷ್ಣ ಎಂಬುದರ ಅರ್ಥ ಕಪ್ಪು ಎಂದು. ಆದರೆ ಕೃಷ್ಣ ಕಪ್ಪೂ ಅಲ್ಲ. ಕೃಷ್ಣ ಎಂಬ ಹೆಸರಿನ ಆಧಾರದಲ್ಲಿ ಆತ ಕಪ್ಪು ಎನ್ನುವವರಿದ್ದಾರೆ. ಆದರೆ ಆತ ನೀಲ.

ಎಲ್ಲವನ್ನೂ ತನ್ನ ವ್ಯಾಪ್ತಿಯಲ್ಲಿ ತರುವುದೇ ನೀಲಿ. ಈ ಲೋಕದಲ್ಲಿ ಯಾವುದು ಅಗಾಧವೂ ಅಪಾರವೂ, ನಮ್ಮ ತಿಳಿವಳಿಕೆಯ ಶಕ್ತಿಯನ್ನು ಮೀರಿದಂತಹದೂ ಆಗಿರುತ್ತದೆಯೋ ಅದು ಸಾಮಾನ್ಯವಾಗಿ ನೀಲಿ ಬಣ್ಣವಾಗಿರುತ್ತದೆ. ಅದು ಸಮುದ್ರವೂ ಆಗಬಹುದು, ಆಕಾಶವೂ ಆಗಬಹುದು. ಏಕೆಂದರೆ ನೀಲಿ ಬಣ್ಣವು ಸರ್ವವ್ಯಾಪಕತ್ವದ ತಳಹದಿ. ಈ ಕಾರಣದಿಂದಲೇ ಭಾರತದಲ್ಲಿ ಬಹಳಷ್ಟು ದಿವ್ಯವ್ಯಕ್ತಿಗಳನ್ನು ನೀಲಿಬಣ್ಣವೆಂಬಂತೆ ಬಿಂಬಿಸಲಾಗಿದೆ. ಶಿವನ ಮೈಬಣ್ಣ ನೀಲಿ. ಕೃಷ್ಣನ ಮೈಬಣ್ಣ ನೀಲಿ. ರಾಮನ ಮೈಬಣ್ಣವೂ ನೀಲಿ. ಯಾಕೆಂದರೆ, ಅವರು ನಮ್ಮ ವ್ಯಾಪ್ತಿಗೆ ಮೀರಿದ ನೀಲಿ ಬಣ್ಣದ ಪ್ರಭಾವಳಿಯನ್ನು ಹೊಂದಿದ್ದರು.

ಕೌರವನ ಪತ್ನಿ ಭಾನುಮತಿಗೂ ಕರ್ಣನಿಗೂ ಇದ್ದ ಸಂಬಂಧವೇನು?

ಪ್ರಭಾವಳಿ ಎಂದು ಕರೆಯಲಾಗುವ ಆವರಣ ಪ್ರತಿಯೊಂದು ಭೌತಿಕ ವಸ್ತುವಿನ ಸುತ್ತಲೂ ಇರುತ್ತದೆ. ಇಡೀ ಅಸ್ತಿತ್ವವೇ ಶಕ್ತಿಯೆಂಬುದು ವೈಜ್ಞಾನಿಕ ಸಂಗತಿ. ಇದರಲ್ಲಿ ಒಂದು ಭಾಗ ಭೌತಿಕ ರೂಪದಲ್ಲಿ ಅಭಿವ್ಯಕ್ತಿಯನ್ನು ಪಡೆದಿದೆ. ಇನ್ನೊಂದು ಭಾಗವು ಭೌತಿಕ ರೂಪದಲ್ಲಿ ಅಭಿವ್ಯಕ್ತಿಯನ್ನು ಪಡೆಯದಿದ್ದರೂ ಅದಕ್ಕೊಂದು ರೂಪ ಇದೆ. ಯಾವುದು ಭೌತಿಕವಲ್ಲವೋ ಆದರೂ ರೂಪವನ್ನು ಹೊಂದಿದೆಯೋ ಅದು ಪ್ರಭಾವಳಿ.

ಕೃಷ್ಣ ನೀಲಿ ಬಣ್ಣದವನು ಎಂದಾಗ ಅವನ ಮೈಬಣ್ಣವೇ ನೀಲಿ ಆಗಿರಬೇಕಿಲ್ಲ. ಬಹುಶಃ ಅವನು ಕೃಷ್ಣ ಬಣ್ಣದವನಾಗಿದ್ದಿರಬಹುದು. ಹೆಚ್ಚು ಜ್ಞಾನಿಗಳಾಗಿದ್ದ ಜನರು ಅವನ ಪ್ರಭೆಯ ನೀಲಿ ಬಣ್ಣವನ್ನು ಗುರುತಿಸಿದರು. ಮತ್ತು ಅವನನ್ನು ’ನೀಲಮೇಘಶ್ಯಾಮ’ ಎಂದು ವರ್ಣಿಸಿದರು. ಕೃಷ್ಣನೆಂದರೆ ಯಾರು, ಏನು ಎಂಬುದರ ಬಗ್ಗೆ ಅನೇಕ ವಿವಾದಗಳು ಇದ್ದರೂ, ಎಲ್ಲವನ್ನೂ ಒಳಗೊಳ್ಳುವ ಅವನ ಸರ್ವವ್ಯಾಪಕತ್ವವನ್ನು ಮಾತ್ರ ಯಾರಿಂದಲೂ ನಿರಾಕರಿಸಲು ಸಾಧ್ಯವಿಲ್ಲ. ಆದುದರಿಂದ ಅವನ ನೀಲಿ ಬಣ್ಣವು ಹಾಗೇ ಉಳಿಯಿತು.

ಕೃಷ್ಣನ ದಿವ್ಯ ಪ್ರಭೆಯ ಅತ್ಯಂತ ಹೊರಗಿನ ಆವರಣವು ನೀಲಿಯಾಗಿದ್ದುದರಿಂದ ಅವನು ತಡೆಯಲಸಾಧ್ಯವೆಂಬಷ್ಟು ಆಕರ್ಷಣೀಯವಾಗಿದ್ದ. ಅದು ಅವನ ಕಣ್ಣಿನ ಅಥವಾ ಮೂಗಿನ ಆಕಾರದಿಂದೇನೂ ಅಲ್ಲ. ಎಷ್ಟೋ ಜನರ ಮೂಗಿನ ಮಾಟ, ಕಣ್ಣಿನ ನೋಟ, ಅಂಗಸೌಷ್ಠವ ಸುಂದರವೆನಿಸಿದರೂ ಕೃಷ್ಣನಲ್ಲಿರುವ ಆಕರ್ಷಣೆಯ ಮಟ್ಟವನ್ನು ಸಮೀಪಿಸಲಾರರು. ಒಬ್ಬರ ಪ್ರಭಾವಳಿಯಲ್ಲಿನ ನೀಲಿಯೇ ಅವರನ್ನು ತಡೆಯಲಸಾಧ್ಯವೆಂಬಷ್ಟು ಆಕರ್ಷಣೀಯವಾಗಿಸುವುದು.

ರಾಮನ ವಂಶಜರು ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲೂ ಭಾಗವಹಿಸಿದ್ದರು!

ಅವನ ಈ ನೀಲಿ ಪ್ರಭೆ, ಎಲ್ಲವನ್ನೂ ಒಳಗೂಡಿಸಿಕೊಳ್ಳುವಂತಹ ಗುಣ ಎಂತಹುದೆಂದರೆ, ಅವನ ಬದ್ಧವೈರಿಗಳೂ ಸಹ ಅವನೊಂದಿಗೆ ಕೂತು, ಅವರಿಗೇ ಅರಿಯದಂತೆ ತಮ್ಮನ್ನು ಕೃಷ್ಣನಿಗೆ ಅರ್ಪಿಸಿಕೊಳ್ಳುವಂತೆ ಮಾಡಿತು. ಅವನನ್ನು ನಿಂದಿಸಿ ಕೊಲ್ಲಲು ಹವಣಿಸಿದ್ದ ಎಷ್ಟೋ ಜನರನ್ನು ಅವನು ನಿರಾಯಾಸವಾಗಿ ಬದಲಾಗುವಂತೆ ಮಾಡಿದ್ದ. ಅವನಲ್ಲಿ ಹಲವಾರು ಮಹಾತ್ಮೆಗಳಿವೆ, ಆದರೆ ಈ ನೀಲಿ ಬಣ್ಣವು ಅವನ ಎಲ್ಲ ಕಾರ್ಯಗಳಲ್ಲಿ ಅವನಿಗೆ ಸಹಕಾರವನ್ನು ನೀಡಿತು. ರಾಕ್ಷಸಿ ಪೂತನಿ, ಮಗುವಾಗಿದ್ದಾಗಲೇ ಕೃಷ್ಣನನ್ನು ಕೊಲ್ಲಲೆಂದು ಬಂದವಳು. ಅವಳೂ ಕೂಡ ಅವನ ಪ್ರೇಮಪಾಶದಲ್ಲಿ ಬೀಳುವಂತೆ ಮಾಡಿದ್ದು ಇದೇ ದಿವ್ಯಪ್ರಭೆ. ಕೇವಲ ಕಲವೇ ನಿಮಿಷಗಳು ಪೂತನಿ ಕೃಷ್ಣನ ಜೊತೆಗಿದ್ದರೂ ಆಕೆ ಅವನ ನೀಲಿ ಮಾಂತ್ರಿಕತೆಯಲ್ಲಿ ಸಂಪೂರ್ಣವಾಗಿ ಬಿಡಿಸಿಕೊಳ್ಳಲಾರದಷ್ಟು ಸಿಲುಕಿದಳು.

ಒಬ್ಬರ ಆಂತರಿಕ ವಿಕಾಸದ ದೃಷ್ಟಿಯಿಂದ ನೋಡಿದಾಗ, ಆ ವ್ಯಕ್ತಿಯ ದಿವ್ಯಕಾಂತಿಯು ಅನೇಕ ವರ್ಣಗಳನ್ನು ಪಡೆದುಕೊಳ್ಳುತ್ತದೆ. ನಾವು ನಮ್ಮ ಸಾಧನೆಯಲ್ಲಿ ಆಜ್ಞಾ ಚಕ್ರಕ್ಕೆ ಪ್ರಾಮುಖ್ಯತೆ ಕೊಟ್ಟಾಗ ಕಿತ್ತಳೆ ಬಣ್ಣವು ಪ್ರಧಾನವಾಗುತ್ತದೆ. ಕಿತ್ತಳೆ ಬಣ್ಣವು ಸಂನ್ಯಾಸ, ತಪಸ್ಸು, ವೈರಾಗ್ಯ ಇತ್ಯಾದಿಗಳ ಪ್ರತೀಕ. ಯಾರಿಗಾದರೂ ಶ್ವೇತವರ್ಣದ ಪ್ರಭೆಯಿದ್ದರೆ, ಅದರರ್ಥ ಅವರೊಬ್ಬ ಪವಿತ್ರ ವ್ಯಕ್ತಿ. ಅಂತಹ ವ್ಯಕ್ತಿಯ ಸಾನ್ನಿಧ್ಯವು ಅದ್ಭುತವೆನಿಸುತ್ತದೆ. ಆದರೆ ಅವರು ಕರ್ಮದಲ್ಲಿ ಅಷ್ಟೊಂದು ನಿರತರಾಗಿರುವುದಿಲ್ಲ. ಯಾರಾದರೂ ಪ್ರಜ್ಞೆಯ ಉತ್ತುಂಗಕ್ಕೆ ಏರಿದ ನಂತರವೂ ಜಗತ್ತಿನಲ್ಲಿ ಕ್ರಿಯಾಶೀಲರಾಗಿರುವ ಆಯ್ಕೆಯನ್ನು ಮಾಡಿದರೆ, ಆತನ ಪ್ರಭೆಯು ಪ್ರಖರ ನೀಲಿ ವರ್ಣದ್ದಾಗಿರುತ್ತದೆ. ಕ್ರಿಯಾತ್ಮಕ ವ್ಯಕ್ತಿಗಳು ನೀಲಿ ವರ್ಣದ ಪ್ರಭೆಯವರು.

ಊರ್ವಶಿ ಕರೆದರೂ ಅರ್ಜುನ ಆಕೆಯ ಜೊತೆಗೆ ಸರಸವಾಡಲಿಲ್ಲ ಯಾಕೆ?

ಆದರೆ ಚಿತ್ರದಲ್ಲಿ ಕೃಷ್ಣನ ಸುತ್ತಲೂ ನೀಲಿ ಬಣ್ಣವನ್ನು ತುಂಬುವ ಬದಲು ಅವನ ಮೈಬಣ್ಣವೇ ನೀಲಿ ಎಂದರು ಜನ. ಏಕೆಂದರೆ ಪ್ರಜ್ಞಾಪೂರ್ಣರಾದವರು ಅವನನ್ನು ನೋಡಿದಾಗ, ಅವನು ನೀಲಿ ಕಂಡನು. ಅದಷ್ಟೇ ಮುಖ್ಯವಾದ ವಿಚಾರ. ಈ ಅರಿವಿಲ್ಲದವರು ಅವನನ್ನು ನೋಡಿದಾಗ, ಕೇವಲ ಅವನ ಮೈಬಣ್ಣವನ್ನು ಕಂಡರು- ಹೀಗೆನ್ನುತ್ತಾರೆ ಸದ್ಗುರು ವಾಸುದೇವ್.

click me!