ಶುಕ್ರವಾರ ನೀವು ಅಪ್ಪಿತಪ್ಪಿಯೂ ಮಾಡಬಾರದಾದ ಕೆಲ ಕೆಲಸಗಳನ್ನು ಇಲ್ಲಿ ನೀಡಲಾಗಿದೆ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನಕ್ಕೂ ಒಂದಿಷ್ಟು ನಿಯಮಗಳಿವೆ. ಏಕೆಂದರೆ ಒಂದೊಂದು ದಿನವೂ ಒಂದೊಂದು ದೇವರಿಗೆ ಮೀಸಲಾಗಿದೆ. ಒಂದೊಂದು ದಿನವೂ ಒಂದು ಗ್ರಹಕ್ಕೆ ಸೇರಿದೆ. ಈ ನಿಯಮಗಳು ನಮ್ಮ ದೈನಂದಿನ ಸಾಮಾನ್ಯ ಕೆಲಸಗಳಿಗೆ ಸಂಬಂಧಿಸಿರುವುದಾಗಿದೆ. ಅಂದರೆ ಗೃಹ ಕೆಲಸಗಳು, ಶಾಪಿಂಗ್, ಪೂಜೆ ಇತ್ಯಾದಿಗೆ ಸೇರಿದಂತೆ ನಿಯಮಗಳನ್ನು ಹೇಳಲಾಗುತ್ತದೆ. ಹಾಗೆಯೇ ಶುಕ್ರವಾರ ಮಹಾಲಕ್ಷ್ಮಿಗೆ ಸೇರಿದ ದಿನ. ಶುಕ್ರ ಗ್ರಹಕ್ಕೆ ಸಂಬಂಧಿಸಿದ ದಿನ. ಈ ದಿನ ಮಹಾಲಕ್ಷ್ಮೀ(Goddess Lakshmi)ಗೆ ಕೋಪ ತರಿಸುವಂತ ಯಾವುದೇ ಕೆಲಸಗಳನ್ನು ಮಾಡಬಾರದು. ಇದರಿಂದ ಲಕ್ಷ್ಮಿಯು ಮನೆಯಲ್ಲಿ ನಿಲ್ಲದೆ ಹೋದಾಳು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾದಾವು.
ಹಾಗಾಗಿ, ಶುಕ್ರವಾರ ನೀವು ಮಾಡಬಾರದ ಆರು ಕೆಲಸಗಳನ್ನು ಇಲ್ಲಿ ಕೊಡಲಾಗಿದೆ.
ಸಾಲ ಕೊಡ್ಬೇಡಿ
ಶುಕ್ರವಾರ ಯಾರಿಗೂ ಸಾಲ ಕೊಡಬೇಡಿ. ಸಾಲ ತೆಗೆದುಕೊಳ್ಳಲೂ ಬೇಡಿ. ಶುಕ್ರವಾರದಂದು ಸಾಲ ವಹಿವಾಟು ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಇದಲ್ಲದೇ ಈ ದಿನ ಕೊಟ್ಟ ಹಣ ವಾಪಸ್ ಬರುವುದಿಲ್ಲ, ಸಾಲ ಮಾಡಿದರೆ ತೀರಿಸಲು ತುಂಬಾ ಕಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಅದೂ ಅಲ್ಲದೆ ಹಣವೆಂದರೆ ಲಕ್ಷ್ಮೀ ಎನ್ನಲಾಗುತ್ತದೆ. ಹೀಗಾಗಿ, ಶುಕ್ರವಾರ ಸಾಲ ಕೊಟ್ಟರೆ ಮನೆಯ ಲಕ್ಷ್ಮೀಯನ್ನು ಸ್ವತಃ ಹೊರ ಕಳಿಸಿದಂತಾಗುತ್ತದೆ.
ಮಹಿಳೆಗೆ ಅವಮಾನ
ಶುಕ್ರವಾರದಂದು ತಪ್ಪಾಗಿಯೂ ಯಾವುದೇ ಮಹಿಳೆಯನ್ನು ಅವಮಾನಿಸಬೇಡಿ. ತೃತೀಯ ಲಿಂಗಿಗಳ ಬಗ್ಗೆ ಹೀನಾಯವಾಗಿ ಮಾತಾಡಬೇಡಿ. ತಾಯಿ, ಪತ್ನಿ, ಸಹೋದರಿ ಯಾರೇ ಇರಲಿ, ಅವರೊಂದಿಗೆ ಜಗಳವಾಡಬೇಡಿ. ಹೀಗೆ ಮಾಡುವುದರಿಂದ ನಿಮಗೆ ದೊಡ್ಡ ಆರ್ಥಿಕ ನಷ್ಟ ಉಂಟಾಗಬಹುದು. ಅಂದ ಹಾಗೆ, ಕೇವಲ ಶುಕ್ರವಾರವಲ್ಲ, ಯಾವುದೇ ದಿನವೂ ಇವರನ್ನು ಅವಮಾನಿಸಬೇಡಿ.
ಸಕ್ಕರೆ ಕೊಡಬೇಡಿ
ಶುಕ್ರವಾರ ಯಾರಿಗೂ ಸಕ್ಕರೆ ಕೊಡಬೇಡಿ. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಚಂದ್ರನು ದುರ್ಬಲನಾಗುತ್ತಾನೆ, ಇದರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ಆತಂಕ, ಕೋಪ, ಅತೃಪ್ತಿ ಹೆಚ್ಚಾಗುತ್ತವೆ. ಇದಲ್ಲದೆ, ಶುಕ್ರ ಗ್ರಹವು ದುರ್ಬಲವಾಗುತ್ತದೆ. ಇದರಿಂದಾಗಿ ಜೀವನದಲ್ಲಿ ಕಷ್ಟಗಳು ಮತ್ತು ದುಃಖಗಳು ಹೆಚ್ಚುತ್ತವೆ.
ಈ 5 ರಾಶಿಯವರ ಉದ್ಯೋಗ, ವ್ಯಾಪಾರಕ್ಕೆ ಈಗ ಶುಕ್ರದೆಸೆ!
ಮಾಂಸ ವರ್ಜ್ಯ
ಶುಕ್ರವಾರದಂದು ಮಾಂಸಾಹಾರ-ಮದ್ಯ ಸೇವನೆ ಬೇಡವೇ ಬೇಡ. ನೀವು ಲಕ್ಷ್ಮಿ ಅಥವಾ ಇತರ ಯಾವುದೇ ದೇವತೆಯನ್ನು ಪೂಜಿಸದಿದ್ದರೂ ಪರವಾಗಿಲ್ಲ, ಶುಕ್ರವಾರದಂದು ಮದ್ಯ, ಮಾಂಸ ಸೇವನೆ ಬೇಡ. ಅಂದಹಾಗೆ, ದೇವತೆಗಳ ಆಶೀರ್ವಾದ ಪಡೆಯಲು ಸದಾ ಸಾತ್ವಿಕ ಆಹಾರವನ್ನು ಸೇವಿಸಬೇಕು ಮತ್ತು ಅಮಲು ಪದಾರ್ಥಗಳಿಂದ ದೂರವಿರಬೇಕು. ಇಲ್ಲವಾದರೆ ಶನಿ, ರಾಹು-ಕೇತುಗಳ ಕೋಪವನ್ನೂ ಎದುರಿಸಬೇಕಾಗುತ್ತದೆ.
ಸ್ವಚ್ಚತೆಗೆ ನಿರ್ಲಕ್ಷ್ಯ ಬೇಡ
ನಿಮ್ಮ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಶುಕ್ರವಾರ ಅಡುಗೆ ಮನೆ, ಪೂಜಾ ಸ್ಥಳ, ಮುಖ್ಯ ದ್ವಾರ ಇತ್ಯಾದಿಗಳನ್ನು ಸ್ವಚ್ಛಗೊಳಿಸಿ. ಮುಖ್ಯ ದ್ವಾರದಲ್ಲಿ ಹಸುವಿನ ತುಪ್ಪದ ದೀಪವನ್ನು ಬೆಳಗಿಸಿ.
Lunar Eclipse 2022: 2022 ರ ಮೊದಲ ಚಂದ್ರಗ್ರಹಣ ಯಾವಾಗ, ಇದರ ಪರಿಣಾಮವೇನು?
ಜಗಳ ಬೇಡ
ವಾರದ ಯಾವುದೇ ದಿನ ಯಾರೊಂದಿಗೆ ಜಗಳವಾಡಿದರೂ ಮನಸ್ಸಿಗೆ ಹಿಂಸೆಯೇ. ಹಾಗಾಗಿ ಯಾವಾಗಲೂ ಜಗಳ, ಕದನಗಳಿಂದ ದೂರ ಉಳಿಯುವುದು ಒಳ್ಳೆಯದು. ಅದರಲ್ಲೂ ಶುಕ್ರವಾರ ಯಾರೊಂದಿಗೂ ಜಗಳವಾಡುವ ಉದ್ಧಟತನ ಬೇಡ. ಇಂದು ನಿಂದಿಸುವ ಮಾತುಗಳನ್ನಾಡಬೇಡಿ. ಏಕೆಂದರೆ, ಅಶಾಂತಿ ಇರುವ ಸ್ಥಳದಲ್ಲಿ ಮಹಾಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.