ಅಮವಾಸ್ಯೆಯಂದು ಈ ವಸ್ತುಗಳನ್ನು ಮನೆಗೆ ತರುವುದು ಅಶುಭ..!

Suvarna News   | Asianet News
Published : Aug 27, 2020, 01:36 PM IST
ಅಮವಾಸ್ಯೆಯಂದು ಈ ವಸ್ತುಗಳನ್ನು ಮನೆಗೆ ತರುವುದು ಅಶುಭ..!

ಸಾರಾಂಶ

ಹಿಂದೂ ಸಂಪ್ರದಾಯದ ಪ್ರಕಾರ ಅಮಾವಾಸ್ಯೆಗೆ ವಿಶೇಷ ಪ್ರಾಮುಖ್ಯತೆ ಇದೆ. ಪಿತೃಕಾರ್ಯಗಳಿಗೆ ಪ್ರಶಸ್ತವಾದ ದಿನ ಇದಾಗಿದ್ದು, ದಾನ, ಧರ್ಮ, ಪಿತೃ ತರ್ಪಣ ಮುಂತಾದ ಕಾರ್ಯಗಳಿಗೆ ಉತ್ತಮ ದಿನವಾಗಿದೆ. ಹಾಗಾಗಿ ಅಮಾವಾಸ್ಯೆಯಂದು ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಅಥವಾ ಹೊಸ ಕೆಲಸಗಳನ್ನು ಆರಂಭಿಸುವುದಿಲ್ಲ. ಕೆಲವು ವಸ್ತುಗಳನ್ನು ಸಹ ಖರೀದಿಸುವುದು ಅಶುಭವೆಂದು ಹೇಳಲಾಗುತ್ತದೆ. ಹಾಗಾದರೆ ಅಮಾವಾಸ್ಯೆಯಂದು ಮನೆಗೆ ತರಬಾರದ ವಸ್ತುಗಳು ಯಾವುವೆಂದು ತಿಳಿಯೋಣ..

ಸನಾತನ ಸಂಸ್ಕೃತಿಯಲ್ಲಿ ಅನೇಕ ಬಗೆಯ ಆಚರಣೆಗಳಿವೆ. ಆಯಾ ಆಚರಣೆಗೆ ಅದರದ್ದೇ ಆದ ಮಹತ್ವವಿದೆ. ಪಂಚಾಂಗದಲ್ಲಿ ನಮೂದಿಸಿದ  ತಿಥಿ, ಮೂಹೂರ್ತಗಳಿಗನುಗುಣವಾಗಿ ಕೆಲವೊಂದು ದಿನಗಳು ಕೆಲವು ಕೆಲಸಗಳಿಗೆ ನಿಷಿದ್ಧವಾಗಿರುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟಿದ ವಾರ ಕ್ಷೌರ ಮಾಡಿಸಿಕೊಳ್ಳುವುದು, ಉಗುರು ಕತ್ತರಿಸುವುದು ಮಾಡಬಾರದು ಎಂಬ ನಿಯಮವಿದೆ. ಹಾಗೆಯೇ ತಿಥಿಯ ಪ್ರಕಾರ ಏಕಾದಶಿಯಂದು ಕೆಲವರು ಉಪವಾಸ ಮಾಡುತ್ತಾರೆ. ಇಲ್ಲವೇ ಒಂದು ಹೊತ್ತು ಮಾತ್ರ ಭೋಜನ ಮಾಡುತ್ತಾರೆ. ಹಲವು ಸಂಪ್ರದಾಯದಗಳನ್ನು ಆಚರಿಸುವವರು ಕೆಲವರೇ ಆದರೂ ಅದರ ಮಹತ್ವ ತಿಳಿದು ಪಾಲಿಸಿದರೆ ಎಲ್ಲರಿಗೂ ಅನುಕೂಲ.

ಅಮವಾಸ್ಯೆ ತಿಥಿಯು ಪಿತೃಗಳಿಗೆ ಅರ್ಪಿತವಾದ ದಿನ. ಹಾಗಾಗಿ ಆ ದಿನ ರಾತ್ರಿ ಹೊರಗಡೆ ಯಾರೂ ಹೆಚ್ಚು ಓಡಾಡುತ್ತಿರಲಿಲ್ಲ. ಅಮಾವಾಸ್ಯೆ ಎಂದರೆ ಉತ್ತಮ ಕಾರ್ಯಗಳನ್ನು ಮಾಡಲು ಒಳ್ಳೆಯ ದಿನವಲ್ಲ ಎಂಬ ನಂಬಿಕೆ. ಹಾಗಾಗಿ ಆ ದಿನ ಕೆಲವು ವಸ್ತುಗಳನ್ನು ಮನೆಗೆ ತರುವುದು ಶ್ರೇಯಸ್ಸಲ್ಲ ಎಂಬ ಮಾತಿದೆ, ಹಾಗಿದ್ದರೆ ಆ ವಸ್ತುಗಳ ಬಗ್ಗೆ ತಿಳಿಯೋಣ..

ಇದನ್ನು ಓದಿ:  ಆರ್ಥಿಕ ಸ್ಥಿತಿ ಸುಧಾರಿಸಬೇಕೆಂದರೆ ರಾಧಾಷ್ಟಮಿಯಂದು ಹೀಗೆ ಮಾಡಿ…!

ಪೊರಕೆ
ಅಮಾವಾಸ್ಯೆಯು ಪಿತೃಗಳ ದಿನವೆಂದು ಹೇಳಲಾಗುತ್ತದೆ. ಆ ದಿನ ಶನಿದೇವರ ದಿನವೂ ಆಗಿದೆ. ಲಕ್ಷ್ಮೀದೇವಿಗೂ ಪೊರಕೆಗೂ ಸಂಬಂಧವಿರುವ ಕಾರಣ, ಅಮಾವಾಸ್ಯೆಯಂದು ಪೊರಕೆಯನ್ನು ಮನೆಗೆ ತಂದರೆ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚುವುದರಿಂದ ಅನಗತ್ಯ ವಸ್ತುಗಳ ಮೇಲೆ, ಅನಾರೋಗ್ಯಗಳಿಗೆ ಹಣ ಖರ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಭಿವೃದ್ಧಿ ಹೊಂದುವುದು ಕಷ್ಟಕರವಾಗುತ್ತದೆ. ಹಾಗಾಗಿ ಅಮಾವಾಸ್ಯೆಯಂದು ಪೊರಕೆಯನ್ನು ಮನೆಗೆ ತರುವುದು ಶುಭವಲ್ಲ.



ಗೋಧಿ ಹಿಟ್ಟು
ಗೋಧಿ ಅಥವಾ ಗೋಧಿ ಹಿಟ್ಟು ಯಾವುದನ್ನೂ ಅಮಾವಾಸ್ಯೆಯಂದು ಮನೆಗೆ ತರುವುದು ಶುಭವಲ್ಲ ಎಂಬ ನಂಬಿಕೆ ಇದೆ. ಅದರಲ್ಲೂ ವಿಶೇಷವಾಗಿ ಭಾದ್ರಪದ ಮಾಸದ ಅಮಾವಾಸ್ಯೆಯಂದು ಇದನ್ನು ಪಾಲಿಸಲೇಬೇಕೆಂದು ಶಾಸ್ತ್ರ ಹೇಳುತ್ತದೆ. ಈ ದಿನ ಗೋಧಿ ಅಥವಾ ಹಿಟ್ಟನ್ನು ಕೊಳ್ಳುವುದು ಪಿತೃಗಳಿಗೆ ಮಾತ್ರ ಎಂಬ ನಂಬಿಕೆ ಇದೆ. ಹಾಗಾಗಿ ಅಮಾವಾಸ್ಯೆಯ ದಿನ ಗೋಧಿಹಿಟ್ಟನ್ನು ಕೊಳ್ಳುವುದು ಅಶುಭವಾಗಿದೆ.

ಇದನ್ನು ಓದಿ: ಇದು ಮಹಿಳೆಯರಿಗೆ ಮಾತ್ರ, ಪ್ರಣಯಕ್ಕೆ ಇಲ್ಲಿವೆ ಜ್ಯೋತಿಷ್ಯ ಟಿಪ್ಸ್! 

ತಲೆಗೆ ಎಣ್ಣೆ ಹಚ್ಚಬಾರದು
ಅಮಾವಾಸ್ಯೆಯಂದು ತಲೆಗೆ ಎಣ್ಣೆ ಹಚ್ಚುವುದು ಉತ್ತಮವಲ್ಲ, ಹಾಗೆಯೇ ಸಂಕ್ರಾಂತಿಯಂದು ಸಹ ಎಣ್ಣೆ ಹಚ್ಚುವುದು ಅಶುಭವೆಂದು ಹೇಳಲಾಗುತ್ತದೆ. ಅಮಾವಾಸ್ಯೆಯಂದು ಎಣ್ಣೆಯನ್ನು ದಾನ ಮಾಡುವುದರಿಂದ ಶನಿಯ ಉತ್ತಮ ಪ್ರಭಾವ ಹೆಚ್ಚಾಗುವುದಲ್ಲದೆ ಶನಿ ದೋಷ ನಿವಾರಣೆಯಾಗುತ್ತದೆ. ಪಿತೃಗಳ ನಿಮಿತ್ತ ಇರುವ ಅಮಾವಾಸ್ಯೆಯಂದು ಸಾತ್ವಿಕ ಸ್ಥಿತಿಯನ್ನು ಕಾಯ್ದುಕೊಳ್ಳುವ ಸಲುವಾಗಿ ಸಿಂಗರಿಸಿಕೊಳ್ಳುವುದು ಮತ್ತು ತಲೆಗೆ ಎಣ್ಣೆ ಹಚ್ಚುವುದು ನಿಷಿದ್ಧವೆಂದು ಹೇಳಲಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಮಾವಾಸ್ಯೆಯಂದು ಚಂದ್ರನ ಪಕ್ಷ ಪರಿವರ್ತನೆಯಾಗುತ್ತದೆ, ಹಾಗೆಯೇ ಸಂಕ್ರಾಂತಿಯಂದು ಸೂರ್ಯನ ಸ್ಥಿತಿ ಬದಲಾವಣೆಯಾಗುತ್ತದೆ. ಹಾಗಾಗಿ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಆ ದಿನ ತಲೆಗೆ ಎಣ್ಣೆ ಹಚ್ಚದೇ ಸಾತ್ವಿಕ ಭಾವವನ್ನು ಹೊಂದುವುದು ಶುಭವೆಂದು ಹೇಳಲಾಗುತ್ತದೆ.

ಶುಭಕಾರ್ಯಕ್ಕಾಗಿ ವಸ್ತುಕೊಳ್ಳುವುದು
ಪಿತೃಕರ್ಮಗಳಿಗೆ ಮತ್ತು ಪಿತೃಗಳ ಸಲುವಾಗಿ ದಾನ ನೀಡಲು ಶ್ರೇಷ್ಠವಾದದ್ದು ಅಮಾವಾಸ್ಯೆಯ ದಿನ. ಹಾಗಾಗಿ ಆ ದಿನ ಶುಭ ಕಾರ್ಯಗಳ ನಿಮಿತ್ತ ಯಾವುದೇ ವಸ್ತುಗಳನ್ನು ಕೊಳ್ಳುವುದು ಅಶುಭವೆಂದು ಹೇಳಲಾಗುತ್ತದೆ.

ಇದನ್ನು ಓದಿ: ಗಣೇಶ ಚತುರ್ಥಿಯಲ್ಲಿ ಈ ರಾಶಿಯವರಿಗೆ ಇದೆ ಲಾಭ..!

ಮಾಂಸ ಮತ್ತು ಮದ್ಯ
ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಪಿತೃ ಹಾಗೂ ದೇವ ಕಾರ್ಯಗಳಿಗೆ ಮೀಸಲಾದ ದಿನ. ಹಾಗಾಗಿ ಅಂದು ಮಾಂಸ ಮತ್ತು ಮದ್ಯ ಸೇವಿಸುವುದು ಅಥವಾ ಕೊಂಡು ತಂದಿಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ಮಾಂಸ ಮತ್ತು ಮದ್ಯ ಸೇವನೆ ಶನಿಯ ಅಶುಭ ಪ್ರಭಾವವನ್ನು ಹೆಚ್ಚು ಮಾಡುತ್ತದೆ. ಶನಿಯ ದೃಷ್ಟಿಯಿಂದ ಪಾರಾಗಲು ಅಮಾವಾಸ್ಯೆಯಂದು ಸಾತ್ವಿಕ ಭಾವದಿಂದ ಇರುವುದು ಶ್ರೇಯಸ್ಕರವಾಗಿದೆ.

PREV
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ