ಮೂರು ಜಗತ್ತುಗಳನ್ನೂ ಭಸ್ಮ ಮಾಡಿ ಬಿಡಬಲ್ಲ ಸಾಮರ್ಥ್ಯ ಹೊಂದಿರುವ ಪಾಶುಪತಾಸ್ತ್ರವನ್ನು ಹೊಂದಿದ್ದರೂ ಅರ್ಜುನ ಅದನ್ನು ಎಂದೂ ಪ್ರಯೋಗಿಸಲೇ ಇಲ್ಲವೇ?
ಪಾಂಡವರು (Pandavas) ವನವಾಸದಲ್ಲಿ ಇರುವಾಗ ಧರ್ಮರಾಯ (Yudhishtira) ಚಿಂತೆ ಮಾಡುತ್ತಾ ಇರುತ್ತಾನೆ. ನಾವು ಬಡವರಾಗಿದ್ದೇವೆ. ಕಾಡುಪಾಲಾಗಿದ್ದೇವೆ. ಮುಂದೆ ದುರ್ಯೋಧನನ ಜೊತೆಗೆ ಯುದ್ಧ ಮಾಡಬೇಕಾಗಿ ಬಂದರೆ ಹೇಗೆ- ಎಂಬ ಚಿಂತೆ ಅದು.
ಆಗ ಅಲ್ಲಿಗೆ ವೇದವ್ಯಾಸರು (Vedavysa) ಬರುತ್ತಾರೆ. ಅರ್ಜುನ (Arjuna) ಗಂಧಮಾದನ ಪರ್ವತಕ್ಕೆ ಹೋಗಿ ಪರಶಿವನನ್ನು ಒಲಿಸಿಕೊಂಡು ಮಹಾಸ್ತ್ರಗಳನ್ನು ಪಡೆದು ಬರಲಿ. ಆಗ ಅವನನ್ನು ಯಾರೂ ಗೆಲ್ಲುವುದಕ್ಕಾಗುವುದಿಲ್ಲ ಎಂದು ಆಶೀರ್ವದಿಸುತ್ತಾರೆ. ಹಾಗೆಯೇ ಅರ್ಜುನ ಗಂಧಮಾದನ ಪರ್ವತಕ್ಕೆ ಹೋಗಿ, ಅಲ್ಲಿ ಸುದೀರ್ಘ ಕಾಲ ತಪಸ್ಸು ಮಾಡಿ, ಪರಶಿವನನ್ನು ಒಲಿಸಿಕೊಳ್ಳುತ್ತಾನೆ. ಮೊದಲು ಕಿರಾತ ವೇಷದಲ್ಲಿ ಬಂದು, ಅರ್ಜುನನ ಅಂತಸ್ಸತ್ವವನ್ನು ಪರೀಕ್ಷಿಸಿದ ಶಿವ, ನಂತರ ಅವನಿಗೆ ಒಲಿದು ವರಗಳನ್ನು ನೀಡುತ್ತಾನೆ. ಅದರಲ್ಲಿ ಪಾಶುಪತಾಸ್ತ್ರವೂ ಒಂದು.
undefined
ಆ ಪಾಶುಪತಾಸ್ತ್ರವನ್ನು (Pashupathasthra) ಕೊಡುವಾಗ ಅರ್ಜುನನಿಗೆ ಹೇಳುತ್ತಾನೆ- 'ದಿವ್ಯಾಸ್ತ್ರವಾದ ಇದನ್ನು ಬ್ರಹ್ಮಶಿರ ಎಂದೂ ಕರೆಯುತ್ತಾರೆ. ಅದು ಘೋರ, ರೌದ್ರ, ಭೀಮಪರಾಕ್ರಮ, ದಾರುಣ ಯುಗಾಂತವು ಪ್ರಾಪ್ತವಾದಾಗ ಜಗತ್ತನ್ನು ಪೂರ್ತಿ ಸಂಹರಿಸುವ ಪಾಶುಪತ. ಅದನ್ನು ಅನುಮಂತ್ರಿಸಿದಾಗ ಅದರಿಂದ ಸಹಸ್ರಾರು ಶೂಲಗಳು ಮತ್ತು ಉಗ್ರವಾಗಿ ಕಾಣುವ ಗದೆಗಳು, ವಿಷಕಾರುವ ಬಾಣಗಳು ಹುಟ್ಟುತ್ತವೆ. ಆ ಮಹಾ ಪಾಶುಪತ ಅಸ್ತ್ರವನ್ನು ನಿನಗೆ ಕೊಡುತ್ತೇನೆ. ಪಾಂಡವ ಅದನ್ನು ಧಾರಣ ಮಾಡಬಲ್ಲೆ, ಪ್ರಯೋಗ ಮಾಡಬಲ್ಲೆ ಮತ್ತು ಅದರಿಂದ ಸಂಹಾರ ಮಾಡಬಲ್ಲೆ. ಇದನ್ನು ಮಹೇಂದ್ರನೂ, ಯಮನೂ, ಯಕ್ಷರಾಜನೂ, ವರುಣನೂ ಅಥವಾ ವಾಯುವೂ ತಿಳಿದಿಲ್ಲ. ಇನ್ನು ಮನುಷ್ಯರಲ್ಲಿ ಯಾರಿಗೆ ತಿಳಿದಿರಬೇಕು?'
Best Preachings: ಭೀಷ್ಮ ಪಿತಾಮಹ ಹೇಳಿದ ಜೀವನ ಪಾಠಗಳು
ಇದನ್ನು ಕೇಳಿದ ಅರ್ಜುನ ಹೇಳುತ್ತಾನೆ, 'ದೇವ, ಅದನ್ನು ನನಗೆ ಅನುಗ್ರಹಿಸು. ಇದರಿಂದ ರಣದಲ್ಲಿ ಭೀಷ್ಮ, ದ್ರೋಣ, ಕೃಪ, ಯಾವಾಗಲೂ ಕಟುವಾಗಿ ಮಾತನಾಡುವ ಸೂತಪುತ್ರ ಕರ್ಣನೊಡನೆ ನಾನು ಯುದ್ಧ ಮಾಡಬಲ್ಲೆ.'
ಇದನ್ನು ಕೇಳಿದ ಶಿವ ಹೇಳುತ್ತಾನೆ- 'ಅರ್ಜುನ, ಈ ಮಹಾಸ್ತ್ರದಿಂದ ಸಂಗ್ರಾಮದಲ್ಲಿ ದಾನವರನ್ನೂ ರಾಕ್ಷಸರನ್ನೂ ಭೂತ, ಪಿಶಾಚಿ, ಗಂಧರ್ವ ಮತ್ತು ಪನ್ನಗರನ್ನೂ ದಹಿಸಬಹುದು. ಮೂರೂ ಲೋಕಗಳಲ್ಲಿಯೂ ಇದಕ್ಕೆ ಅವಧ್ಯ ಎನ್ನುವವರು ಯಾವ ಚರಾಚರರೂ ಇಲ್ಲ. ಮತ್ತು ಇದನ್ನು ಮನಸ್ಸಿನಿಂದ, ನೋಟದಿಂದ, ಮಾತಿನಿಂದ ಅಥವಾ ಧನುಸ್ಸಿನಿಂದ ಪ್ರಯೋಗಿಸಬಹುದು. ಆದರೆ, ಪಾರ್ಥ! ನೀನು ಇದನ್ನು ಯಾವಾಗಲೂ ಅತಿಸಾಹಸದಿಂದ ಮನುಷ್ಯನ ಮೇಲೆ ಪ್ರಯೋಗಿಸಬಾರದು. ಏಕೆಂದರೆ ಅಲ್ಪತೇಜಸ್ಸಿನವನ ಮೇಲೆ ಇದನ್ನು ಪ್ರಯೋಗಿಸಿದರೆ ಇದು ಇಡೀ ಜಗತ್ತನ್ನೇ ಸುಟ್ಟು ಹಾಕಿಬಿಡುತ್ತದೆ. ಅನರ್ಥವಾಗುತ್ತದೆ.'
ನಂತರ ಪರಶಿವನು ಅರ್ಜುನನಿಗೆ ಈ ಮಂತ್ರಾಸ್ತ್ರವನ್ನು ನೀಡುತ್ತಾನೆ. ನಂತರ ಅರ್ಜುನ ದೇವಲೋಕಕ್ಕೂ ಹೋಗಿ, ಅಲ್ಲಿ ದೇವೇಂದ್ರ ಸೇರಿದಂತೆ ಅನೇಕ ದೇವತೆಗಳಿಂದ ಮಹಾ ಮಂತ್ರಾಸ್ತ್ರಗಳನ್ನು ಕಲಿಯುತ್ತಾನೆ. ಮರಳಿ ಬರುತ್ತಾನೆ. ಎಲ್ಲರಿಗೂ ಸಂತೋಷವಾಗುತ್ತದೆ.
Mythology: ಶ್ರೀಕೃಷ್ಣನಿಗೆ ಎಷ್ಟು ಶಾಪಗಳಿದ್ದವು ನಿಮಗೆ ಗೊತ್ತೆ?
ಮುಂದೆ ಪಾಂಡವರು- ಕೌರವರ ನಡುವೆ ಘನಘೋರವಾದ ಕುರುಕ್ಷೇತ್ರ ಕಾಳಗ ನಡೆಯುತ್ತದೆ. ಅರ್ಜುನ ತಾನು ದೇವತೆಗಳಿಂದ ಪಡೆದ ಹಲವಾರು ಅಸ್ತ್ರಗಳನ್ನು ಅಲ್ಲಿ ಪ್ರಯೋಗಿಸುತ್ತಾನೆ. ಕೆಲವರು, ಜಯದ್ರಥನ ಮೇಲೆ ಪಾಶುಪತವನ್ನು ಅರ್ಜುನ ಪ್ರಯೋಗಿಸಿದ ಎನ್ನುತ್ತಾರೆ. ಇದು ನಿಜವಲ್ಲ. ಇಂದ್ರನಿಂದ ಪಡೆದ ವಜ್ರ ಎಂಬ ಅಸ್ತ್ರವನ್ನು ಜಯದ್ರಥನ ಮೇಲೆ ಪ್ರಯೋಗಿಸಿ, ಅವನ ತಲೆ ಕುರುಕ್ಷೇತ್ರದಿಂದ ದೂರದಲ್ಲಿ ಜಯದ್ರಥನ ತಂದೆ ವೃದ್ಧಕ್ಷತ್ರ ತಪಸ್ಸು ಮಾಡುತ್ತಿದ್ದಲ್ಲಿಗೆ ಹೋಗಿ ಅವನ ತೊಡೆಯ ಮೇಲೆ ಬೀಳುವಂತೆ ಮಾಡುತ್ತಾನೆ. ದಿಗಿಲುಗೊಂಡು ಎದ್ದ ವೃದ್ಧಕ್ಷತ್ರನ ತಲೆ, ಜಯದ್ರಥನಿಗೆ ಶಿವ ನೀಡಿದ ವಚನದಂತೆ ಸಾವಿರ ಹೋಳಾಗುತ್ತದೆ.
ಇನ್ನು ಕೆಲವರು, ಕರ್ಣನ ಮೇಲೆ ಪಾಶುಪತವನ್ನು ಪಾರ್ಥ ಪ್ರಯೋಗಿಸಿದ ಎನ್ನುತ್ತಾರೆ. ಇದೂ ನಿಜವಲ್ಲ. ರುದ್ರಾಸ್ತ್ರ ಎಂಬ, ಶಿವನಿಂದ ಪಡೆದ ಒಂದು ಮಹಾಸ್ತ್ರವನ್ನು ಕರ್ಣನ ಮೇಲೆ ಪ್ರಯೋಗಿಸಲು ಅರ್ಜುನ ಮನಸ್ಸು ಮಾಡುತ್ತಾನೆ. ಆದರೆ ಅದೇ ಹೊತ್ತಿಗೆ ಕರ್ಣನ ರಥ ಕೆಸರಿನಲ್ಲಿ ಸಿಲುಕಿಕೊಳ್ಳುತ್ತದೆ. ಆಗ ಅರ್ಜುನ ರುದ್ರಾಸ್ತ್ರವನ್ನು ಉಪಸಂಹರಿಸುತ್ತಾನೆ. ನಂತರ ಶ್ರೀಕೃಷ್ಣನ ಉಪದೇಶದಂತೆ, ಅಂಜಲಿಕಾಸ್ತ್ರವನ್ನು ಕರ್ಣನ ಮೇಲೆ ಪ್ರಯೋಗಿಸಿ ಅವನನ್ನು ಸಂಹರಿಸುತ್ತಾನೆ.
ಮುಂದೆ ಕುರುಕ್ಷೇತ್ರ ಯುದ್ಧವೆಲ್ಲ ಮುಗಿದ ಬಳಿಕ, ಉಪಪಾಂಡವರನ್ನು ಕೊಂದ ಅಶ್ವತ್ಥಾಮನ ಮೇಲೆ ಸೇಡು ತೀರಿಸಿಕೊಳ್ಳಲೆಂದು ಬೆನ್ನು ಹತ್ತಿ ಹೋದಾಗ, ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ಪ್ರತಿಯಾಗಿ ಅರ್ಜುನನೂ ಬ್ರಹ್ಮಾಸ್ತ್ರವನ್ನು ಬಿಡುತ್ತಾನೆ. ಎರಡೂ ಘೋರವಾದ ಪ್ರಳಯ ಸನ್ನಿವೇಶವನ್ನುಉಂಟು ಮಾಡಿದಾಗ, ಶ್ರೀಕೃಷ್ಣ, ವೇದವ್ಯಾಸರು ಹಾಗೂ ನಾರದರು ಬಂದು ಅಸ್ತ್ರಗಳನ್ನು ಹಿಂದೆಗೆಯುವಂತೆ ಹೇಳುತ್ತಾರೆ. ಅರ್ಜುನ ಹಿಂದೆಗೆದುಕೊಳ್ಳುತ್ತಾನೆ. ಅಶ್ವತ್ಥಾಮನಿಗೆ ಅದು ಗೊತ್ತಿರುವುದಿಲ್ಲ. ಕಡೆಗೆ ಅದನ್ನು ಉತ್ತರೆಯ ಗರ್ಭದಲ್ಲಿರುವ ಮಗುವಿನ ಕಡೆಗೆ ತಿರುಗಿಸಲಾಗುತ್ತದೆ.
ಹಾಗಾದರೆ ಪಾಶುಪತಾಸ್ತ್ರವನ್ನು ಅರ್ಜುನ ಎಲ್ಲಿ ಪ್ರಯೋಗಿಸುತ್ತಾನೆ? ಎಲ್ಲೂ ಪ್ರಯೋಗಿಸುವುದಿಲ್ಲ. ಅದಕ್ಕೆ ಕಾರಣ ಮಹಾಶಿವನ ಮಾತೇ ಆಗಿದೆ. ಅಲ್ಪಬಲರಾದ ಮಾನವರ ಮೇಲೆ ಈ ಅಸ್ತ್ರವನ್ನು ಪ್ರಯೋಗಿಸಬಾರದು, ಪ್ರಯೋಗಿಸಿದರೆ ಅದು ಜಗತ್ತನ್ನೇ ಸುಟ್ಟುಬಿಡುತ್ತದೆ ಎಂಬ ಶಿವನ ಕಿವಿಮಾತೇ ಅದಕ್ಕೆ ಕಾರಣ. ಹೀಗಾಗಿ ಎಂಥ ಪರಿಸ್ಥಿತಿ ಬಂದರೂ ಅರ್ಜುನ ಪಾಶುಪತವನ್ನು ಪ್ರಯೋಗಿಸದೆ ಸಂಯಮ ತಾಳುತ್ತಾನೆ. ಹೀಗಾಗಿಯೇ ಅವನು ಮಹಾವೀರ.