Makar Sankranti 2023: ಕೂಡಲಸಂಗಮ, ಮಹಾಕೂಟ, ಬಾದಾಮಿಯಲ್ಲಿ ಭಕ್ತರ ಪುಣ್ಯಸ್ನಾನ..

By Suvarna NewsFirst Published Jan 15, 2023, 4:16 PM IST
Highlights

ಕೃಷ್ಣಾ, ಮಲಪ್ರಭಾ & ಘಟಪ್ರಭಾ ನದಿಗಳ ಸಂಗಮ ತಾಣದ ನದಿಯಲ್ಲಿ ಮಿಂದೆದ್ದ ಜನ..
ನದಿ ತಟದಲ್ಲಿ ಲಿಂಗಪೂಜೆ ಸಹಿತ ವಿಶೇಷ ಆಚರಣೆ..
ಸಂಗಮನಾಥನ ದರ್ಶನ ಪಡೆದ ಭಕ್ತರು..
ಕೊರೋನಾದಿಂದ ಕಳೆಗುಂದಿದ್ದ ಸಂಕ್ರಾಂತಿ ಈ ಬಾರಿ ಬಲು ಜೋರು

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.

ಒಂದೆಡೆ ನದಿಯಲ್ಲಿ ಮಿಂದೇಳುತ್ತಿದ್ದ ಜನರು, ಮತ್ತೊಂದೆಡೆ ನದಿಯ ತಟದಲ್ಲಿ ಸ್ನಾನ ಮುಗಿಸಿ ಲಿಂಗಪೂಜೆಯಲ್ಲಿ ತೊಡಗಿರುವ ಶರಣರು, ಇವುಗಳ ಮಧ್ಯೆ ಸಾಲು ಸಾಲಾಗಿ ನಿಂತು ದೇವರ ದರ್ಶನ ಪಡೆಯುತ್ತಿದ್ದ ಭಕ್ತರು.. ಅಂದ ಹಾಗೆ ಇಂಥದೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬಸವಣ್ಣನವರ ಐಕ್ಯತಾಣ ಕೂಡಲಸಂಗಮದಲ್ಲಿ. 

ಹೌದು, ಪ್ರತಿವರ್ಷ ಮಕರ ಸಂಕ್ರಮಣ ಬಂದಾಗ ಕೂಡಲಸಂಗಮಕ್ಕೆ ಜನರ ದಂಡೇ ಹರಿದು ಬರುತ್ತೆ. ಹೀಗಾಗಿ ಜ.14ರ ಮಧ್ಯಾಹ್ನದಿಂದಲೇ ಜನರು ಕೂಡಲಸಂಗಮಕ್ಕೆ ಬರುತ್ತಿದ್ದು, 15ರ ಬೆಳಿಗ್ಗೆಯಿಂದ ಹೆಚ್ಚೆಚ್ಚು ಜನರು ಕೃಷ್ಣಾ, ಮಲಪ್ರಭಾ ಮತ್ತು ಘಟಪ್ರಭಾ ನದಿಗಳ ಸಂಗಮ ತಾಣದಲ್ಲಿ ಸ್ನಾನ ಮಾಡುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ನದಿಯಲ್ಲಿ ಸ್ನಾನ ಮುಗಿಸಿ ಕೆಲವರು ಲಿಂಗಪೂಜೆ ಸಹಿತ ವಿಶೇಷ ಪೂಜೆ ಕೈಗೊಂಡು ಬಳಿಕ ಸಂಗಮನಾಥ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ್ರು. ಇದಾದ ಬಳಿಕ ಬಸವಣ್ಣನವರ ಐಕ್ಯಮಂಟಪದ ದರ್ಶನ ಪಡೆಯುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು. 
                                     
ಐತಿಹಾಸಿಕ ಬಾದಾಮಿ, ಮಹಾಕೂಟ, ಶಿವಯೋಗಿ ಮಂದಿರಕ್ಕೆ ಭಕ್ತರ ದಂಡು..
ಇತ್ತ ಮಕರ ಸಂಕ್ರಮಣ ನಿಮಿತ್ಯ ಜಿಲ್ಲೆಯ ಐತಿಹಾಸಿಕ ತಾಣಗಳಾದ ಬಾದಾಮಿ, ಬನಶಂಕರಿ ಸುಕ್ಷೇತ್ರ, ಮಹಾಕೂಟ, ಶಿವಯೋಗಿ ಮಂದಿರಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಕುಟುಂಬ ಸಮೇತರಾಗಿ ಬಂದ ಜನರೆಲ್ಲಾ ಬಾದಾಮಿಯ ಪುಷ್ಕರಣಿ, ಮಹಾಕೂಟದ ನೀರಿನ ಹೊಂಡ, ಶಿವಯೋಗಿ ಮಂದಿರ ಬಳಿ ಮಲಪ್ರಭಾ ನದಿ ಹೀಗೆ ವಿವಿದೆಡೆ ಜನರು ಸಂಕ್ರಾಂತಿಯ ಪುಣ್ಯಸ್ನಾನದಲ್ಲಿ ಮಿಂದೆದ್ದರು. 

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವೈಭವದ ಮಕರ ಸಂಕ್ರಾಂತಿ - ಚೂರ್ಣೋತ್ಸವ

ಕೊರೋನಾದಿಂದ ಮಂಕಾಗಿದ್ದ ಸಂಕ್ರಾಂತಿ ಈ ಬಾರಿ ಬಲು ಜೋರು..
ಇನ್ನು ಕಳೆದ ಎರಡ್ಮೂರು ವರ್ಷ ನಿರಂತರವಾಗಿ ಕೊರೋನಾ ಹಾವಳಿಯಿಂದ ಯಾವುದೇ ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ನಿರ್ಭಿಡೆಯಿಂದ ಮಾಡಲಾಗಿರಲಿಲ್ಲ. ಆದ್ರೆ ಈ ಬಾರಿ ದೇವರ ದಯೆಯಿಂದ ಕೊರೋನಾ ತೊಲಗಿದ್ದರಿಂದ ಜನರೆಲ್ಲಾ ಹೆಚ್ಚು ಹೆಚ್ಚಾಗಿ ಕೂಡಲಸಂಗಮಕ್ಕೆ ಬಂದು ಸ್ನಾನ ಮಾಡುತ್ತಿದ್ದರು. ಈ ಮಧ್ಯೆ ಸಂಕ್ರಾಂತಿ ಜೊತೆಗೆ ಶರಣಮೇಳವೂ ಸಹ ಇದ್ದುದ್ದರಿಂದ ಕರ್ನಾಟಕದ ರಾಜ್ಯದ ವಿವಿಧ ಜಿಲ್ಲೆಗಳಲ್ಲದೆ, ಆಂದ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದಲೂ ಸಹ ಭಕ್ತರು ಆಗಮಿಸಿದ್ರು. ಬಂದ ಭಕ್ತರು ಕುಟುಂಬಸಮೇತರಾಗಿ ಸ್ನಾನ, ಪೂಜಾ ಕೈಂಕರ್ಯ ಮುಗಿಸಿ ಬಸವಣ್ಣನವರ ಐಕ್ಯಮಂಟಪದ ದರ್ಶನ ಪಡೆದು, ಬಳಿಕ ಊಟೋಪಚಾರ ಮುಗಿಸಿ ತೆರಳುತ್ತಿದ್ದರು. 

ಹಂಪಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ: ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು

ಒಟ್ಟಿನಲ್ಲಿ ತ್ರಿವೇಣಿ ಸಂಗಮದ ನಾಡು ಕೂಡಲಸಂಗಮ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ಧಾರ್ಮಿಕ ತಾಣಗಳಿಗೆ  ಇಂದು ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಭಕ್ತರ ದಂಡೇ ಹರಿದು ಬಂದಿದ್ದು, ಕಳೆದ ಎರಡು ವರ್ಷದಿಂದ ಕೊರೋನಾದಿಂದ ಆತಂಕದಲ್ಲಿದ್ದ ಜನ್ರು ಈ ಬಾರಿ ವಿಶೇಷ ಸಂಕ್ರಾಂತಿ ಹಬ್ಬ ಆಚರಿಸುವ ಮೂಲಕ ಸಂಭ್ರಮಿಸಿದ್ದು ಕಂಡು ಬಂತು.

click me!