Asianet Suvarna News Asianet Suvarna News

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವೈಭವದ ಮಕರ ಸಂಕ್ರಾಂತಿ - ಚೂರ್ಣೋತ್ಸವ

ಎಂಟು ಶತಮಾನಗಳ ಹಿಂದೆ ಮಕರ ಸಂಕ್ರಾಂತಿಯ ದಿನವೇ ಆಚಾರ್ಯ ಮಧ್ವರು ಕಡಗೋಲು ಕೃಷ್ಣನನ್ನು ಮಠದಲ್ಲಿ ಪ್ರತಿಷ್ಟಾಪಿಸಿದರು. ಹಾಗಾಗಿ ಸಂಕ್ರಾಂತಿಯಂದು ಉಡುಪಿಯಲ್ಲಿ ಮೂರು ತೇರಿನ ಉತ್ಸವ ನಡೆಯುತ್ತೆ.

Choornotsava in Udupi Sri Krishna Mutt skr
Author
First Published Jan 15, 2023, 3:43 PM IST

ವರದಿ: ಶಶಿಧರ ಮಾಸ್ತಿಬೈಲು

ಉಡುಪಿ: ಅಷ್ಟಮಠಗಳ ರಥಬೀದಿಯಲ್ಲಿ ಕಡಗೋಲು ಕೃಷ್ಣನ ಉತ್ಸವ ಅತ್ಯಂತ ವೈಭವದಿಂದ ನಡೆಯಿತು. ಸಂಕ್ರಾಂತಿಯಂದು ನಡೆಯುವ  ಮೂರು ತೇರಿನ ಉತ್ಸವಕ್ಕೆ ವಿಶೇಷ ಮಹತ್ವ ಇದೆ. 

ಏಕಕಾಲದಲ್ಲಿ ಮೂರು ತೇರುಗಳು ರಥಬೀದಿಯಲ್ಲಿ ಪ್ರದಕ್ಷಿಣೆ ಬರುವ ಈ ವಿಹಂಗಮ ನೋಟ ಕಾಣಲು ಸಾವಿರಾರು ಜನರು ಕೃಷ್ಣಮಠಕ್ಕೆ ಬರುತ್ತಾರೆ. ಎಂಟು ಶತಮಾನಗಳ ಹಿಂದೆ ಮಕರ ಸಂಕ್ರಾಂತಿಯ ದಿನವೇ ಆಚಾರ್ಯ ಮದ್ವರು ಕಡಗೋಲು ಕೃಷ್ಣನನ್ನು ಮಠದಲ್ಲಿ ಪ್ರತಿಷ್ಟಾಪಿಸಿದರು. ಹಾಗಾಗಿ ಸಂಕ್ರಾಂತಿಯಂದು ಮೂರು ತೇರಿನ ಉತ್ಸವ ನಡೆಯುತ್ತೆ. ಬ್ರಹ್ಮರಥದಲ್ಲಿ ಕೃಷ್ಣಮುಖ್ಯಪ್ರಾಣ ದೇವರನ್ನು ಇಟ್ಟು ಮೆರವಣಿಗೆ ಮಾಡಿದರೆ; ಮಹಾಪೂಜಾ ರಥ ಮತ್ತು ಗರುಡ ರಥಗಳಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ಪ್ರದಕ್ಷಿಣೆ ನಡೆಯುತ್ತೆ. ಕೃಷ್ಣಮಠದ ವಾರ್ಷಿಕ ಜಾತ್ರೆಯನ್ನು ಸಪ್ತೋತ್ಸವ ಎನ್ನುತ್ತಾರೆ. ಮಕರಸಂಕ್ರಾಂತಿ ಮತ್ತು ಮರುದಿನ ನಡೆಯುವ ಚೂರ್ಣೋತ್ಸವದಿಂದ ಈ ಮಹೋತ್ಸವ ಸಂಪನ್ನಗೊಳ್ಳುತ್ತೆ.

ಮಧ್ವಸರೋವರದಲ್ಲಿ ನಡೆಯುವ ತೆಪ್ಪೋತ್ಸವ ಈ ಆಚರಣೆಯ ಪ್ರಧಾನ ಆಕರ್ಷಣೆ. ಆಚಾರ್ಯ ಮದ್ವರ ಮಂದಿರದ ಸುತ್ತಲೂ ಪ್ರದಕ್ಷಿಣಾಕಾರವಾಗಿ ತೆಪ್ಪದಲ್ಲಿ ದೇವರನ್ನು ಕುಳ್ಳಿರಿಸಿ ಪೂಜಿಸಲಾಗುತ್ತೆ. ಮೂರು ತೇರಿನ ಉತ್ಸವ ಕಾಣಲು ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜನರು ಬರುತ್ತಾರೆ. ಕೊಂಬು, ಕಹಳೆ ಚಂಡೆಯ ನಾದದ ನಡುವೆ ಅಷ್ಟ ಮಠಾಧೀಶರು ಉತ್ಸವದಲ್ಲಿ ಭಾಗವಹಿಸುತ್ತಾರೆ. ಈ ಬಾರಿಯ ಉತ್ಸವದಲ್ಲಿ, ಪಲಿಮಾರು, ಕೃಷ್ಣಾಪುರ, ಪೇಜಾವರ, ಕಾಣಿಯೂರು, ಸೋದೆ, ಅದಮಾರು ಮಠಾಧೀಶರು  ಭಾಗವಹಿಸಿದ್ದರು. 

ವೈಭವದಿಂದ ನಡೆದ ಸುಡುಮದ್ದು ಪ್ರದರ್ಶನ ನೆರೆದಿದ್ದ ಜನರನ್ನು ಸಂಭ್ರಮದಿಂದ ಕುಣಿಯುವಂತೆ ಮಾಡಿತು. 

ಬುಧಾದಿತ್ಯ ರಾಜಯೋಗ; 3 ರಾಶಿಗಳ ಬದುಕಲ್ಲಿ ಹೆಚ್ಚುವ ಧನ, ಸ್ಥಾನಮಾನ

ಉಡುಪಿ ಕೃಷ್ಣನಿಗೆ ನಿತ್ಯವೂ ರಥೋತ್ಸವ ನಡೆಯುತ್ತೆ. ಆದರೆ ಮಕರ ಸಂಕ್ರಾಂತಿಯ ಸಪ್ತೋತ್ಸವ ಸಾಂಪ್ರದಾಯಿಕ ಆಚರಣೆಗಳ ಮೂಲಕ ವಿಶ್ವಪ್ರಸಿದ್ದಿ ಪಡೆದಿದೆ.

ಹಗಲು ನಡೆಯುವ ಚೂರ್ಣೋತ್ಸವ ವಿಶೇಷ
ಉಡುಪಿಯ ಕಡಗೋಲು ಕೃಷ್ಣ ದೇವರನ್ನು ಆಚಾರ್ಯ ಮದ್ವರು ಪ್ರತಿಷ್ಟಾಪಿಸಿದ ದಿನ ಮಕರಸಂಕ್ರಾಂತಿ. ಈ ಪ್ರಯುಕ್ತ ನಡೆಯುವ ಸಪ್ತೋತ್ಸವ ಇಂದು ಹಗಲು ತೇರಿನ ಮೂಲಕ ಮುಕ್ತಾಯವಾಗಿದೆ. ಕಡಲಿನಲ್ಲಿ ತೇಲಿಬಂದ ಕಡಗೋಲು ಕೃಷ್ಣನ ಮೂರ್ತಿಯನ್ನು ಮಧ್ವಾಚಾರ್ಯರು ಪ್ರತಿಷ್ಟಾಪಿಸಿ ಎಂಟು ಶತಮಾನ ಕಳೆಯಿತು. ಅಂದಿನಿಂದಲೂ ನಡೆದು ಬಂದಿರುವ ಪೂಜಾಪರಂಪರೆಗೆ ಇಂದು ನಡೆದ ಹಗಲು ಉತ್ಸವ ಸಾಕ್ಷಿಯಾಯ್ತು. 

ಚಿನ್ನದ ಪಲ್ಲಕಿಯಲ್ಲಿ ಕೃಷ್ಣ ದೇವರ ಉತ್ಸವ ಮೂರ್ತಿಯನ್ನು ತಂದು ಬ್ರಹ್ಮರಥದಲ್ಲಿ ಇರಿಸಲಾಯ್ತು. ಬಳಿಕ ಪರ್ಯಾಯ ಕೃಷ್ಣಾಪುರ ಸ್ವಾಮೀಜಿ ಸಹಿತ ಅಷ್ಟ ಮಠಾಧೀಶರರು, ಕೃಷ್ಣ ದೇವರ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಕೆಲವು ವಿಶಿಷ್ಟ ಸಂಪ್ರದಾಯಗಳು ನಡೆಯುತ್ತೆ. ರಥದ ಮೇಲೆ ಗರುಡ ಪ್ರದಕ್ಷಿಣೆ ಬಂದ ನಂತರ ಉತ್ಸವ ಆರಂಭವಾಗಬೇಕು ಅನ್ನೋದು ಸಂಪ್ರದಾಯ.ಸದಾ ಪೂಜೆ, ಪ್ರವಚನದಲ್ಲೇ ನಿರತರಾಗಿರುವ ಮಠಾಧೀಶರು ಭಕ್ತರೊಂದಿಗೆ ಬೆರೆಯಲು ಈ ಉತ್ಸವದ ಸಂದರ್ಭವನ್ನು ಬಳಸಿಕೊಳ್ಳುತ್ತಾರೆ. 

ಪೂಜೆಯ ಬಳಿಕ ರಥದಿಂದ ಪ್ರಸಾದ ಹಾಗೂ ಧನಕನಕಗಳನ್ನು ಭಕ್ತರತ್ತ ಎಸೆಯೋದು ಒಂದು ಪದ್ಧತಿ.ಈ ವೇಳೆ ಭಕ್ತರು ಮುಗಿಬಿದ್ದು ಸಂಗ್ರಹಿಸುವ ದೃಶ್ಯ ಗಮನಸೆಳೆಯುತ್ತೆ.ಉಡುಪಿಯಲ್ಲಿ ಸಪ್ತೋತ್ಸವದ ಸಂದರ್ಭ ದಲ್ಲಿ ಮಾತ್ರ ಹಗಲಿಗೆ ಬ್ರಹ್ಮರಥವನ್ನು ಎಳೆಯಲಾಗುತ್ತೆ. ಈ ಉತ್ಸವವನ್ನು ಚೂರ್ಣೋತ್ಸವ ಎಂದು ಕರೆಯುತ್ತಾರೆ. 

ಕೃಷ್ಣನಿಗೆ ಬೆಣ್ಣೆ, ಗಣೇಶನಿಗೆ ಲಡ್ಡು, ಈ ಮುರುಗನಿಗೆ ಮಾತ್ರ ಮಂಚ್ ಮೇಲೆ ಮಹಾಪ್ರೀತಿ!

ಎಲ್ಲಾ ಮಠಾಧೀಶರು ಭಕ್ತರ ಜೊತೆಗೂಡಿ ರಥ ಎಳೆಯೋದು ಅಪರೂಪದ ದೃಶ್ಯ. ರಥಬೀದಿಗೆ ಪ್ರದಕ್ಷಿಣೆ ಬಂದ ನಂತರ ವಸಂತ ಮಂಟಪದಲ್ಲಿ ದೇವರ ಪೂಜೆ ನಡೆಯುತ್ತೆ. ಬಳಿಕ ಮಧ್ವರ ಸರೋವರದಲ್ಲಿ ಅವಭೃತ ಸ್ನಾನ ಜರುಗುತ್ತೆ. ಉತ್ಸವದಲ್ಲಿ ಮೆರೆದಾಡಿದ ಬಾಲಕೃಷ್ಣನನ್ನು ಸರೋವರದ ನೀರಿನಲ್ಲಿ ತೋಯಿಸಲಾಗುತ್ತೆ, ಯತಿಗಳ ತಲೆಗೆ ಕೃಷ್ಣಮೂರ್ತಿಯ ಅಭಿಷೇಕ ನಡೆಯುತ್ತೆ. ಬಳಿಕ ನೆರೆದ ಭಕ್ತರಿಗೆಲ್ಲಾ ಮಧ್ವ ಸರೋವರದ ನೀರನ್ನು ಚಿಮುಕಿಸಿ ತೀರ್ಥ ರೂಪದಲ್ಲಿ ನೀಡಲಾಗುತ್ತೆ.

Follow Us:
Download App:
  • android
  • ios