ಒಂಭತ್ತು ಗ್ರಹಗಳಲ್ಲಿ ಕೆಲವು ಗ್ರಹಗಳು ಶುಭ ಗ್ರಹಗಳಾದರೆ ಮತ್ತೆ ಕೆಲವನ್ನು ಕ್ರೂರ ಮತ್ತು ಪಾಪಿ ಗ್ರಹಗಳೆಂದು ವಿಂಗಡಿಸಿದ್ದಾರೆ. ಈ ಗ್ರಹಗಳ ಪ್ರಭಾವವು ವ್ಯಕ್ತಿಯ ಜೀವನದ ಮೇಲೆ ನೇರ ಪರಿಣಾಮವನ್ನು ನೀಡುತ್ತದೆ. ಅದರಲ್ಲಿ ಪಾಪಿಗ್ರಹಗಳು ಯಾವುವು? ಕ್ರೂರ ಗ್ರಹಗಳು ಯಾವುವು ಎಂಬುದನ್ನು ತಿಳಿಯೋಣ..
ವ್ಯಕ್ತಿಯ ಜೀವನದಲ್ಲಿ ನಕ್ಷತ್ರ, ರಾಶಿ ಮತ್ತು ಗ್ರಹಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಕ್ಷತ್ರ ಮತ್ತು ರಾಶಿಗಳಂತೆಯೇ ಗ್ರಹಗಳ ಸ್ಥಿತಿಗತಿಗಳು ನೇರವಾಗಿ ಪರಿಣಾಮ ಬೀರುತ್ತವೆ. ಗ್ರಹಗಳಲ್ಲೂ (Planet) ಶುಭ ಫಲ ನೀಡುವ ಗ್ರಹ, ಅಶುಭ ಫಲ ನೀಡುವ ಗ್ರಹ ಹಾಗೂ ಕಷ್ಟವನ್ನು ನೀಡುವ ಗ್ರಹ ಅಥವಾ ಕ್ರೂರಗ್ರಹವೆಂದು ವಿವಿಧ ರೀತಿಗಳಿವೆ. ಜಾತಕದಲ್ಲಿ (Horoscope) ಅವುಗಳ ಪಾತ್ರ ಮಹತ್ವದ್ದಾಗಿದೆ. ಜಾತಕದಲ್ಲಿ ಕ್ರೂರ ಮತ್ತು ಪಾಪಿ ಗ್ರಹಗಳ ಸ್ಥಿತಿಯು ಯಾವ್ಯಾವ ರೀತಿಯ ಪರಿಣಾಮ (Effects) ಬೀರುತ್ತದೆ ಎಂಬುದನ್ನು ತಿಳಿಯೋಣ... ಅಷ್ಟೇ ಅಲ್ಲದೇ ಅದಕ್ಕೆ ಮಾಡಬೇಕಾದ ಪರಿಹಾರಗಳ ಬಗ್ಗೆ ಸಹ ತಿಳಿದುಕೊಳ್ಳೋಣ...
ಶುಭ ಮತ್ತು ಬಲ ಹೊಂದಿರುವ ಗ್ರಹಗಳಾದ ಗುರು (Jupiter) ಗ್ರಹ ಮತ್ತು ಶುಕ್ರ (Venus) ಗ್ರಹಗಳ ಪ್ರಭಾವ ಹೆಚ್ಚಿನ ಸಮಯ ಒಳಿತನ್ನೇ ಮಾಡುತ್ತದೆ. ಅದೇ ಚಂದ್ರ (Moon) ಗ್ರಹವನ್ನು ಸಂಪೂರ್ಣ ರೂಪದಲ್ಲಿ ಶುಭಗ್ರಹವೆಂದೇ ಕರೆಯುತ್ತಾರೆ. ಕ್ರೂರ ಗ್ರಹವಾದ ಸೂರ್ಯ ಮತ್ತು ಮಂಗಳ ಗ್ರಹವು ಎಲ್ಲಾ ರೀತಿಯ ಪ್ರಭಾವವನ್ನೂ ನೀಡುತ್ತದೆ, ಈ ಗ್ರಹಗಳ ಪ್ರಭಾವ ಜಾತಕದಲ್ಲಿ ಅದರ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಶನಿ ಮತ್ತು ರಾಹು-ಕೇತು ಪಾಪಿ ಗ್ರಹಗಳು. ಈ ಗ್ರಹಗಳ ಸ್ಥಾನ ಮತ್ತು ಸ್ಥಿತಿಯು ವ್ಯಕ್ತಿಗೆ ಶುಭ-ಅಶುಭ ಪರಿಣಾಮವನ್ನು ನೀಡುತ್ತವೆ.
ಕ್ರೂರ ಗ್ರಹ – ಸೂರ್ಯ (Sun)
ಗ್ರಹಗಳಿಗೆಲ್ಲಾ ರಾಜನೆಂದು ಸೂರ್ಯದೇವನನ್ನು ಕರೆಯುತ್ತಾರೆ. ಪಿತಾ, ಆತ್ಮ, ಮತ್ತು ಉಚ್ಛ ಅಧಿಕಾರಿ, ಉನ್ನತ ಪದವಿ ಇವುಗಳಿಗೆ ಕಾರಕ ಗ್ರಹ ಸೂರ್ಯನಾಗಿದ್ದಾನೆ. ಆದರೆ ಜಾತಕದಲ್ಲಿ ಸೂರ್ಯ ಗ್ರಹವು ಬಲ ಹೊಂದಿದ್ದರೆ ಉತ್ತಮ ಪ್ರಭಾವವನ್ನು ನೀಡುತ್ತದೆ. ಈ ಗ್ರಹವು ಉಚ್ಛವಾಗಿರದಿದ್ದರೆ ಮಾನಸಿಕ (Mental) ಮತ್ತು ಶಾರೀರಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೇತ್ರ ರೋಗ, ಸುಳ್ಳು ಆರೋಪಗಳು ಮತ್ತು ಹೃದಯಕ್ಕೆ ಸಂಬಂಧಿಸಿ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯೆತೆಗಳು ಸೂರ್ಯ ಗ್ರಹದ ಅಶುಭ ಪ್ರಭಾವದಿಂದ ಉಂಟಾಗುತ್ತದೆ. ರವಿವಾರದಂದು ಸೂರ್ಯನಿಗೆ ಜಲವನ್ನು ಅರ್ಪಿಸುವುದು ಇದಕ್ಕೆ ಪರಿಹಾರವಾಗಿದೆ. ಅಷ್ಟೇ ಅಲ್ಲದೇ ನಿರ್ಗತಿಕರಿಗೆ ದಾನವನ್ನು ನೀಡುವುದರಿಂದ ಶುಭ ಪರಿಣಾಮ ಉಂಟಾಗುತ್ತದೆ.
ಇದನ್ನು ಓದಿ: ಗಾಯತ್ರಿ ಮಂತ್ರ ಪಠಿಸಿ ಈ ಐದು ಪ್ರಯೋಜನ ಪಡೆಯಿರಿ
ಮಂಗಳ (ಕುಜ) – ಕ್ರೂರ ಗ್ರಹ (Mars)
ಕ್ರೋಧ ಮತ್ತು ಶಕ್ತಿಯ ಕಾರಕ ಮಂಗಳಗ್ರಹವಾಗಿದೆ. ಅಷ್ಟೇ ಅಲ್ಲದೆ ಭೂಮಿ, ಆಟ, ರತ್ನ, ಸೇನೆ, ಪೋಲಿಸ್, ಕೆಂಪು ಬಣ್ಣಗಳಿಗೂ ಕಾರಕನಾಗಿದ್ದಾನೆ. ಮಂಗಳ ಗ್ರಹದಿಂದಲೇ ಕುಜ ದೋಷ ಉಂಟಾಗುತ್ತದೆ. ಸಾಲಬಾಧೆ, ಹೃದಯ ಸಮಸ್ಯೆ, ಭೂಮಿ ಮತ್ತು ಆಸ್ತಿ ಸಂಬಂಧಿತ ವಿವಾದಗಳು ಉತ್ಪನ್ನವಾಗುವುದು ಮಂಗಳ ಗ್ರಹದ ಅಶುಭ ಪ್ರಭಾವದ ಸಂಕೇತವಾಗಿದೆ. ಕೆಂಪು ವಸ್ತ್ರ ದಾನ ಮಾಡವುದರಿಂದ ಈ ಸಮಸ್ಯೆಗಳಿಗೆ ತಕ್ಕ ಮಟ್ಟಿನ ಪರಿಹಾರ ಸಿಗುತ್ತದೆ.
ಶನಿ – ಪಾಪಿ ಗ್ರಹ (Saturn)
ಶನಿಗ್ರಹವು ಪಾಪಿಗ್ರಹಗಳ ಪಟ್ಟಿಯಲ್ಲಿ ಮೊದಲನೆಯದ್ದಾಗಿದೆ. ಕರ್ಮಕ್ಕೆ ತಕ್ಕ ಫಲವನ್ನು ನೀಡುವ ಶನಿ ಗ್ರಹವು, ಶಿಸ್ತು, ಸತ್ಯ ನಡೆ ಎಲ್ಲಿ ಕಾಣುವುದಿಲ್ಲವೋ ಅಲ್ಲಿ ನ್ಯಾಯವನ್ನು ನೀಡುವಂಥ ಗ್ರಹವಾಗಿದ್ದಾನೆ. ಆರ್ಥಿಕ ನಷ್ಟ, ಕಣ್ಣಿನ ಸಮಸ್ಯೆ, ತಂದೆಯೊಂದಿಗೆ ಮನಸ್ತಾಪಗಳಂತಹ ತೊಂದರೆಗಳು ಜಾತಕದಲ್ಲಿ ಶನಿ ಗ್ರಹ ನೀಚ ಸ್ಥಾನದಲ್ಲಿದ್ದರೆ ಕಾಡುವ ಸಮಸ್ಯೆಗಳಾಗಿದೆ. ಶನಿಗ್ರಹದ ತೊಂದರೆಯಿಂದ ಪಾರಾಗಲು ಕಪ್ಪು ವಸ್ತ್ರ, ಸಾಸಿವೆ ಎಣ್ಣೆ, ಕಪ್ಪು ಎಳ್ಳು ಮುಂತಾದ ವಸ್ತುಗಳನ್ನು ದಾನ ನೀಡುವುದು ಇದಕ್ಕೆ ಪರಿಹಾರವಾಗಿದೆ.
ಇದನ್ನು ಓದಿ : ಏನು ಮಾಡಿದರೂ ಕೈಯಲ್ಲಿ ದುಡ್ಡು ನಿಲ್ತಾ ಇಲ್ವಾ? ಈ ಗಿಡ ನೆಟ್ಟು ನೋಡಿ
ರಾಹು-ಕೇತು – ಪಾಪಿ ಗ್ರಹಗಳು (Rahu - ketu)
ಪಾಪಿಗ್ರಹಗಳ ಪಟ್ಟಿಯಲ್ಲಿ ರಾಹು-ಕೇತುಗಳು ಸೇರಿವೆ. ಜಾತಕದಲ್ಲಿ ಕಾಡುವ ದೊಡ್ಡ ಸಮಸ್ಯೆಯಾದ ಕಾಳಸರ್ಪ ದೋಷವು ಈ ಗ್ರಹಗಳಿಂದಲೇ ಉಂಟಾಗುತ್ತವೆ. ಶಾರೀರಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ರಾಹು ಗ್ರಹದ ಅಶುಭ ಪ್ರಭಾವವೇ ಕಾರಣವಾಗಿರುತ್ತದೆ. ಕೇತು ಗ್ರಹವು ಅಶುಭವಾಗಿದ್ದರೆ ವಿಶ್ವಾಸಘಾತ ಸ್ಥಿತಿಯಿಂದ ಒದ್ದಾಡಬೇಕಾಗುತ್ತದೆ. ರಾಹು ಮತ್ತು ಕೇತುಗ್ರಹಗಳ ಶಾಂತಿಗಾಗಿ ತೆಂಗಿನಕಾಯಿ (Coconut), ಉದ್ದಿನ ಬೇಳೆ (Urad dal) ಮತ್ತು ಬಟ್ಟೆಯನ್ನು ದಾನ ಮಾಡವುದು ಇದಕ್ಕೆ ಪರಿಹಾರವಾಗಿದೆ.
ಕೆಲವು ವಿಶೇಷ ಸಮಯಗಳಲ್ಲಿ ಪಾಪಿಗ್ರಹಗಳು ಕೂಡಾ ಶುಭಫಲವನ್ನು ನೀಡುತ್ತವೆ. ಆದರೆ ಈ ಪಾಪಿಗ್ರಹಗಳು ಸ್ವಾಮಿಸ್ಥಾನದಲ್ಲಿ ಇದ್ದರೆ ಶುಭಫಲವು ನಿಮ್ಮದಾಗುತ್ತದೆ. 6, 8 ಅಥವಾ 12ನೇ ಮನೆಯ ಸ್ವಾಮಿ ಆಗಿದ್ದು ಪುನಃ ಅದೇ ಮನೆಗೆ ಬಂದು ಸ್ಥಿತನಾಗಿದ್ದು, ಆ ಗ್ರಹವನ್ನು ಬೇರೆ ಪಾಪಿಗ್ರಹವು ನೋಡುತ್ತಿದ್ದರೆ ಅಂತಹ ಸಮಯದಲ್ಲಿ ಶುಭ (Good) ಫಲ (Effect) ಪ್ರಾಪ್ತವಾಗುತ್ತದೆ. ಇಂಥ ಸ್ಥಿತಿಯಲ್ಲಿ ವಿಪರೀತವಾದ ಅಂದರೆ ಶುಭವಾದ ರಾಜಯೋಗವನ್ನುಂಟು ಮಾಡುವ ಸಾಧ್ಯತೆ ಸಹ ಇರುತ್ತದೆ.