ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭವ್ಯ ರಾಮಮಂದಿರ ನಿಗದಿತ ಅವಧಿಗೂ 3 ತಿಂಗಳು ಮೊದಲೇ ನಿರ್ಮಾಣವಾಗುವ ಸಾಧ್ಯತೆಗಳಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ.
ಉತ್ತರಪ್ರದೇಶ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭವ್ಯ ರಾಮಮಂದಿರ ನಿಗದಿತ ಅವಧಿಗೂ 3 ತಿಂಗಳು ಮೊದಲೇ ನಿರ್ಮಾಣವಾಗುವ ಸಾಧ್ಯತೆಗಳಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ. ನಾವು ಈ ಮೊದಲು ತೀರ್ಮಾನ ಮಾಡಿದ್ದ ಅವಧಿಗಿಂತ 3 ತಿಂಗಳು ಮೊದಲೇ ರಾಮಮಂದಿರ ನಿರ್ಮಾಣವಾಗುವ ಸಾಧ್ಯತೆಗಳಿವೆ. ಹಾಗಾಗಿ ನಿರ್ಮಾಣ ಪೂರ್ಣವಾಗುವ ದಿನ 2023ರ ಡಿಸೆಂಬರ್‌ನಿಂದ, ಸೆಪ್ಟೆಂಬರ್‌ಗೆ ಇಳಿಕೆಯಾಗಿದೆ. ಸೆಪ್ಟೆಂಬರ್‌ನಲ್ಲೇ ದೇವಸ್ಥಾನದ ಅಂತಿಮ ಘಟ್ಟಪೂರ್ಣವಾಗಲಿದೆ. ದೇವಾಲಯದ ಗರ್ಭಗುಡಿ ಅಷ್ಟಾಭುಜಾಕೃತಿಯಲ್ಲಿರಲಿದ್ದು, ಶೇ.75ರಷ್ಟು ನಿರ್ಮಾಣ ಕಾರ್ಯ ಪೂರ್ಣವಾಗಿದೆ. ಕೇವಲ 167 ಸ್ತಂಭಗಳನ್ನು ಅಳವಡಿಸುವ ಕಾರ್ಯ ಭಾಗಿ ಇದ್ದು, ಮೇಲ್ಛಾವಣಿಯ ನಿರ್ಮಾಣ ಕಾರ್ಯ ಮೇ ಅಥವಾ ಜೂನ್‌ನಲ್ಲಿ ಆರಂಭವಾಗಲಿದೆ ಎಂದು ಟ್ರಸ್ಟ್‌ನ ಮುಖ್ಯಸ್ಥ ಪ್ರಕಾಶ್ ಗುಪ್ತಾ ಹೇಳಿದ್ದಾರೆ.
ಈ ಮೊದಲು ರಾಮಮಂದಿರ (Ram Mandir) ನಿರ್ಮಾಣ 2023ರ ಡಿಸೆಂಬರ್ ಅಂತ್ಯದ ವೇಳೆಗೆ ಮುಕ್ತಾಯವಾಗಲಿದ್ದು, 2024ರ ಜನವರಿ 14 (ಮಕರ ಸಂಕ್ರಾಂತಿ)ರಂದು ದೇವಾಸ್ಥಾನವನ್ನು ಉದ್ಘಾಟನೆ ಮಾಡುವುದಾಗಿ ಹೇಳಲಾಗಿತ್ತು. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಸ್ಥಾಪನೆಯಾಗಲಿರುವ ರಾಮಲಲ್ಲಾನ ಮೂರ್ತಿ ಕೆತ್ತನೆಗೆ ಆಯ್ಕೆ ಮಾಡಲಾದ 2-3 ಶಿಲೆಗಳ ಪೈಕಿ ಉಡುಪಿ (Udupi) ಜಿಲ್ಲೆಯ ಕಾರ್ಕಳದ ಕೃಷ್ಣಶಿಲೆಯನ್ನೂ ಆಯ್ಕೆ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಶಿಲೆಯಿಂದ ರಾಮಲಲ್ಲಾನ ಮೂರ್ತಿ ನಿರ್ಮಾಣವಾಗುವ ಸಾಧ್ಯತೆಯಿದೆ.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಈಗ ಯಾವ ಹಂತದಲ್ಲಿದೆ ಇಲ್ನೋಡಿ..
ಕಾರ್ಕಳದ ತುಂಗಾ ಪೂಜಾರಿ ಮನೆಯಿಂದ ಅಯೋಧ್ಯೆಗೆ ಶಿಲೆ
ಮಾರ್ಚ್ 16 ರಂದು ಗುರುವಾರ ರಾತ್ರಿ ಕಾರ್ಕಳ ತಾಲೂಕಿನ ಈದು ಗ್ರಾಮದ ತುಂಗಾ ಪೂಜಾರಿ ಮನೆಯಿಂದ ನೆಲ್ಲಿಕಾರು ಮಾದರಿಯ ಶಿಲೆಯನ್ನು ಬೃಹತ್ ಲಾರಿ ಮೂಲಕ ಅಯೋಧ್ಯೆಗೆ ಸಾಗಿಸಲಾಯಿತು. ಈಗಾಗಲೇ ನೇಪಾಳ ಸೇರಿ ಎರಡ್ಮೂರು ಕಡೆಗಳಿಂದ ರಾಮಲಲ್ಲಾನ (Ram lalla) ಮೂರ್ತಿ ನಿರ್ಮಾಣಕ್ಕೆ ವಿಶಿಷ್ಟಶಿಲೆಗಳನ್ನು ಅಯೋಧ್ಯೆಗೆ ತರಿಸಲಾಗಿದೆ. ಆ ಪಟ್ಟಿಗೆ ಇದೀಗ ಕಾರ್ಕಳದ ಶಿಲೆಯೂ (Kakala rock) ಸೇರಿದೆ. ಈ ಶಿಲೆಗಳ ಪೈಕಿ ಸೂಕ್ತವಾದುದನ್ನು ಮೂರ್ತಿ ನಿರ್ಮಾಣಕ್ಕೆ ಬಳಸಲಾಗುವುದು ಎಂದು ತಿಳಿದು ಬಂದಿದೆ.
ಕೆಲ ತಿಂಗಳ ಹಿಂದೆ ಖ್ಯಾತ ಶಿಲಾ ತಜ್ಞ ಖಷ್ದೀಪ್ ಬನ್ಸಲ್ (Kashdeep Bansal) ಮುಂತಾದ ತಜ್ಞರ ಜೊತೆಗೂಡಿ ಸ್ಥಳೀಯ ಬಜರಂಗದಳ ಕಾರ್ಯಕರ್ತರು ಈ ನೆಲ್ಲಿಕಾರು ಶಿಲೆಯನ್ನು ಪರೀಕ್ಷಿಸಿದ್ದರು. ಮೂರ್ತಿ ನಿರ್ಮಾಣಕ್ಕೆ ಅತ್ಯುತ್ತಮವಾದುದು ಎಂದು ಮನವರಿಕೆಯಾದ ನಂತರ ಅಯೋಧ್ಯೆಗೆ ಕೊಂಡೊಯ್ಯಲು ಒಪ್ಪಿಗೆ ಸೂಚಿಸಿದರು. ಈಗ ಅಯೋಧ್ಯೆಯತ್ತ ಹೊರಟಿರುವ ಶಿಲೆ 9 ಟನ್ ತೂಕ, 10 ಅಡಿ ಉದ್ದ, 6 ಅಡಿ ಅಗಲ ಮತ್ತು 4 ಅಡಿ ದಪ್ಪವಿದೆ.
ಅಂತಾರಾಷ್ಟ್ರೀಯ ಪ್ರಸಿದ್ಧಿ:
ಕರಿಕಲ್ಲಿನ ನಗರಿ ಎಂದು ಕರೆಯಲ್ಪಡುವ ಕಾರ್ಕಳದ ನೆಲ್ಲಿಕಾರಿನ ಶಿಲೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ರಾಷ್ಟ್ರಪತಿ ಭವನದಲ್ಲಿರುವ ಕಾರ್ಕಳ ಬಾಹುಬಲಿ, ಮಾನಸ್ತಂಭ ಪ್ರತಿಕೃತಿ, ಕವಿ ಮುದ್ದಣ, ಮಿಥುನ ನಾಗ, ಸೋಮನಾಥಪುರದ ದ್ವಾರ, ಗಜಸಿಂಹ, ಗೇಟ್ ವೇ, ಕಲ್ಲಿನ ಕಾರಂಜಿ, ಚೆನ್ನಿಗರಾಯ ದೇವರು ಸೇರಿ ಒಟ್ಟು 10 ವಿಗ್ರಹಗಳನ್ನು ಇದೇ ಕಲ್ಲಿನಿಂದ ತಯಾರಿಸಲಾಗಿದೆ. ದೆಹಲಿಯ ಗುರುಗ್ರಾಮ ರಸ್ತೆಯಲ್ಲಿರುವ 15 ಅಡಿ ಎತ್ತರದ ಮಹಾವೀರ ವಿಗ್ರಹ, ದೆಹಲಿಯ ಮಹಾವೀರನ ಪ್ರತಿಮೆ, ಗುರುವಾಯೂರಲ್ಲಿರುವ ಒಂದು ಶ್ರೀಕೃಷ್ಣ ಪ್ರತಿಮೆ (Lord Shrikrishna Idol), ಕೆನಡಾದ ಟೊರೆಂಟೋದಲ್ಲಿರುವ ದೇವೇಂದ್ರನ ವಿಗ್ರಹ, ಜಪಾನ್‌ನ ಅವಲೋಹಿತೇಶ್ವರ ಪ್ರತಿಮೆ, ಇಂಗ್ಲೆಂಡ್‌ನ ಮ್ಯೂಸಿಯಂನಲ್ಲಿರುವ ಕೃಷ್ಣ ವಿಗ್ರಹ, ಇತ್ತೀಚೆಗೆ ಮಲೇಷ್ಯಾದಲ್ಲಿ (Malaysia) ದುರ್ಗ ವಿಗ್ರಹವನ್ನೂ ಇಲ್ಲಿನ ಶಿಲೆಯಲ್ಲೇ ಕೆತ್ತಲಾಗಿದೆ.
ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಕಾರ್ಕಳ ಕೃಷ್ಣಶಿಲೆ ರವಾನೆ
ಚಿಕ್ಕಬಳ್ಳಾಪುರದಿಂದ ಕಲ್ಲುಗಳ ರವಾನೆ:
ರಾಮಮಂದಿರ ನಿರ್ಮಾಣಕ್ಕೆ ಈಗಾಗಲೇ ರಾಜ್ಯದ ಚಿಕ್ಕಬಳ್ಳಾಪುರದ (Chikkaballapura) ಕಲ್ಲುಗಳನ್ನು ಬಳಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಸಿಗುವ ಶಿಲೆಗಳು ಅತಿ ಹೆಚ್ಚಿನ ಹಾಗೂ ಅತೀ ಕಡಿಮೆ ತಾಪಮಾನ ಎರಡನ್ನೂ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ರಾಮಮಂದಿರದ ಅಡಿಪಾಯಕ್ಕಾಗಿ ಆ ಶಿಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.