ಗುಂಡಿನ ಸೇವೆಗೆ ಪ್ರಸಿದ್ದಿ ಆಗಿರೋ ಲಕ್ಷ್ಮಿ ರಂಗನಾಥಸ್ವಾಮಿಯ ವಿಶೇಷತೆಯ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ: ದೇವರು ನೀಡಿದ ಶಿಕ್ಷೆಯನ್ನೇ ಇಲ್ಲಿ ಉತ್ಸವವನ್ನಾಗಿ ಆಚರಿಸ್ತಾರೆ ಈ ಭಾಗದ ಭಕ್ತರು. ಸುಮಾರು 12 ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯನ್ನು ಸುತ್ತೂರಿನ ಹತ್ತಾರು ಗ್ರಾಮದ ಜನರು ಸೇರಿ ವಿಜೃಂಭಣೆಯಿಂದ ಆಚರಿಸ್ತಾರೆ. ಅನ್ನದ ಕೋಟೆ, ಗುಂಡಿನ ಸೇವೆಗೆ ಪ್ರಸಿದ್ದಿ ಆಗಿರೋ ಲಕ್ಷ್ಮಿ ರಂಗನಾಥಸ್ವಾಮಿಯ ವಿಶೇಷತೆಯ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ದೇವಸ್ಥಾನದ ಮುಂದೆ ಸಾಲು ಗಟ್ಟಿ ಸ್ವಾಮಿಯ ದರ್ಶನಕ್ಕೆ ಸಾಗರೋಪಾದಿಯಲ್ಲಿ ನಿಂತಿರುವ ಭಕ್ತರ ದಂಡು. ಮತ್ತೊಂದೆಡೆ ಬೃಹತ್ ಆಕಾರದಲ್ಲಿ ಅನ್ನದ ಕೋಟೆಯನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸ್ತಿರೋ ದಾಸಯ್ಯ ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹೊರಕೆದೇವಪುರ ಗ್ರಾಮದ ಸುಪ್ರಸಿದ್ದ ಪುಣ್ಯಕ್ಷೇತ್ರ ಲಕ್ಷ್ಮಿ ರಂಗನಾಥಸ್ವಾಮಿ ದೇವಾಲಯದ ಸನ್ನಿಧಿ.
ಈ ಉತ್ಸವಕ್ಕೆ ಒಂದು ಐತಿಹಾಸಿಕ ಹಿನ್ನೆಲೆ ಇದೆ. ಅದೇನಪ್ಪ ಅಂದ್ರೆ, ಹೊರಕೆದೇವಪುರದ ಕೂದಲಳತೆಯ ದೂರದಲ್ಲಿರೋ ನಂದನಹೊಸೂರು ಗ್ರಾಮ ಬೆಂಕಿಯಿಂದ ಭಸ್ಮವಾದಾಗ ಸಾಧು ವೇಷದಲ್ಲಿ ಸ್ವಾಮಿ ಆಗಮಿಸಿ ಅಲ್ಲಿನ ಜನರ ಕಷ್ಟವನ್ನು ಆಲಿಸುವ ವೇಳೆ ತನಗೂ ಹಸಿವಾಗ್ತಿದೆ ಎಂದು ಯುವಕರ ಗುಂಪಿನಲ್ಲಿ ಹೇಳಿಕೊಂಡಾಗ ಅಲ್ಲಿನ ಯುವಕನೋರ್ವ ಬೇರೆಡೆ ಸಿಗಲಿದೆ ಹೋಗು ಎಂದು ಸುಳ್ಳು ಹೇಳಿದನಂತೆ, ಆ ಸಂದರ್ಭದಲ್ಲಿ ಸ್ವಾಮಿಯು ಹಸಿವಿನ ವಿಚಾರಕ್ಕೆ ಯಾರೂ ಸುಳ್ಳು ಹೇಳಬಾರದು. ನಿನ್ನ ಸುಳ್ಳಿಗೆ ಶಿಕ್ಷೆ ಆಗಲೇಬೇಕು ಎಂದು, ಆತನ ಎದೆಯ ಮೇಲೆ ಮೂರು ಗುಂಡುಗಳನ್ನು ಇರಿಸಿ ಚಮಟೆಗಳಿಂದ ಹೊಡೆಸಿ, ನಿನ್ನನ್ನೇ ನನ್ನ ದಾಸಯ್ಯನನ್ನಾಗಿ ಮಾಡಿಕೊಳ್ಳುತ್ತೇನೆ. ಸುತ್ತೂರಿನ ಹತ್ತಾರು ಗ್ರಾಮದ ದೇವರುಗಳ ಸಮ್ಮುಖದಲ್ಲಿ ಅನ್ನದ ಕೋಟೆ ಮಾಡಿಸಿ ಅನ್ನ ಹಾಕಿಸುತ್ತೇನೆ ಎಂದು ಶಪಥ ಮಾಡಿದರಂತೆ. ಆದ್ದರಿಂದ ಬೃಹತ್ ಆದ ಅನ್ನದ ಕೋಟೆ ನಿರ್ಮಿಸಿ ಅದಕ್ಕೆ ತುಪ್ಪ, ಬಾಳೆಹಣ್ಣು, ಮೊಸರು ಹಾಕಿ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಹಂಚಲಾಗುತ್ತದೆ. ಅದರ ಸೇವನೆಯಿಂದ ಭಕ್ತರಲ್ಲಿ ಆರೋಗ್ಯ ವೃದ್ದಿ ಅಗಲಿದೆ ಎಂಬುದು ಭಕ್ತರ ನಂಬಿಕೆ.
ಅಂಬಲಿ ಹಳಸಿತು, ಕಂಬಳಿ ಹಾಸೀತಲೇ ಪರಾಕ್: ಗೊರವಯ್ಯ ಭವಿಷ್ಯವಾಣಿ
ಇನ್ನೂ ಲಕ್ಷ್ಮಿ ರಂಗಪ್ಪನ ಈ ಉತ್ಸವ ನೋಡಲು ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸ್ತಾರೆ. ಅನ್ನದ ಕೋಟೆ ಹಾಗೂ ಗುಂಡಿನ ಸೇವೆ ಉತ್ಸವವು ಪ್ರತೀ ಹನ್ನೆರಡು ವರ್ಷಕ್ಕೆ ಒಂದು ಬಾರಿ ನಡೆಯುತ್ತದೆ. ಇಂತಹ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳುವುದೇ ನಮ್ಮ ಸೌಭಾಗ್ಯ. ಸುತ್ತಮುತ್ತಲಿನ ನೂರೊಂದು ದೇವರುಗಳಿಗೆ ಅನ್ನದ ಪ್ರಸಾದವನ್ನು ಮಾಡಿ ಅನ್ನದ ಕೋಟೆ ನಿರ್ಮಿಸುವುದು ಇದರ ವಿಶೇಷ. ಕರ್ನಾಟಕದಲ್ಲಿ ಈ ಪುಣ್ಯಕ್ಷೇತ್ರ ತುಂಬಾ ಪ್ರಸಿದ್ದಿಯನ್ನು ಪಡೆದಿದೆ. ದೇವರಿಗೆ ನೈವೇದ್ಯ ಮಾಡಿದ ಪ್ರಸಾದವನ್ನು ಭಕ್ತರು ಸೇವನೆ ಮಾಡೋದ್ರಿಂದ ಎಲ್ಲರೂ ಸುಖಃ, ನೆಮ್ಮದಿ, ಸಂತೋಷದಿಂದ ಇರುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿದೆ.
ಒಟ್ಟಾರೆಯಾಗಿ ಒಂದು ದಶಕಗಳಿಗೊಮ್ಮೆ ನಡೆಯುವ ಹೊರಕೆದೇವಪುರದ ಲಕ್ಷ್ಮೀ ರಂಗನಾಥಸ್ವಾಮಿಯ ಅನ್ನದ ಕೋಟೆ, ಗುಂಡಿನ ಸೇವೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದು ಭಕ್ತರು ಕೂಡ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಉತ್ತರ ಕನ್ನಡ: ಮಾರ್ಕೆಪೂನವ್ ಜಾತ್ರೆಯಲ್ಲಿ ಮಕ್ಕಳ ಹೊಕ್ಕಳಿಗೆ ಸೂಚಿ ಚುಚ್ಚುವ ಹರಕೆ!