ಅರ್ಥ ತಿಳಿದು ನವಗ್ರಹ ಮಂತ್ರ ಪಠಿಸಿದರೆ, ಮನೆಯಲ್ಲಿ ಶಾಂತಿ ನೆಮ್ಮದಿ!

By Suvarna News  |  First Published Jun 7, 2022, 1:27 PM IST

ಇಲ್ಲಿವೆ ನವಗ್ರಹ ಮಂತ್ರಗಳು. ಇವುಗಳ ಅರ್ಥ ತಿಳಿದುಕೊಂಡು ಭಕ್ತಿಯಿಂದ ಪ್ರತಿಯೊಂದು ಗ್ರಹವನ್ನೂ ಮನದಲ್ಲಿಟ್ಟುಕೊಂಡು ಪಠನ ಮಾಡಬೇಕು. ಆಗ ನೆಮ್ಮದಿ ನಿಮ್ಮದಾಗುತ್ತದೆ.
 


ಮನುಷ್ಯನ ಗ್ರಹಚಾರಗಳಿಗೆ, ಸುಖದುಃಖಗಳಿಗೆ ಸೌರಮಂಡದಲ್ಲಿರುವ 9 ಗ್ರಹಗಳೇ ಕಾರಣ. ನವಗ್ರಹಗಳ ಸ್ಥಾನಪಲ್ಲಟವಾದಂತೆ ನಮ್ಮ ಜೀವನದ ಪ್ರತಿಯೊಂದು ಹಂತವೂ ಬದಲಾಗುತ್ತದೆ. ಅವುಗಳನ್ನು ಪ್ರಸನ್ನೀಕರಿಸುವುದಕ್ಕಾಗಿಯೇ ಇರುವುದು ನವಗ್ರಹ ಸ್ತೋತ್ರ. ಮಹಾಮುನಿ ವೇದವ್ಯಾಸರು ನವಗ್ರಹ ಸ್ತೋತ್ರದ ದ್ರಷ್ಟಾರರು. ಪ್ರತಿದಿನ ನವಗ್ರಹ ಸ್ತೋತ್ರವನ್ನು ಪಠಿಸುವುದರಿಂದ ನಮ್ಮ ಜೀವನದಲ್ಲಿ ಎದುರಾಗಬಹುದಾದ ತೊಂದರೆಗಳನ್ನು ದೂರಾಗಿಸಿಕೊಳ್ಳಬಹುದು. ಈ 9 ಗ್ರಹಗಳು ವಿವಿಧ ಮಂತ್ರಗಳನ್ನು ಹೊಂದಿದೆ. ಇವುಗಳನ್ನು ಅರ್ಥ ಮಾಡಿಕೊಂಡರೆ ನವಗ್ರಹಗಳ ಮಹಿಮೆಯನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದರ್ಥ. ಆಗ ಗ್ರಹಗಳ ಒಲುಮೆ ಸಾಧಿಸುವುದು ಸುಲಭಸಾಧ್ಯವಾಗುತ್ತದೆ.

ಸೂರ್ಯ ಮಂತ್ರ
ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ |

Tap to resize

Latest Videos

ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ ||

ಅರ್ಥ: ಕೆಂಪು ಬಣ್ಣದ ದಾಸವಾಳ ಹೂವಿನಂತೆ ಕಂಗೊಳಿಸುವ, ಕಶ್ಯಪ ಋಷಿಯ ಮಗನಾದ, ಅತ್ಯಂತ ಪ್ರಕಾಶಮಾನನಾದ, ಕತ್ತಲನ್ನು ನಿವಾರಿಸುವ ಹಾಗೂ ಸರ್ವ ಪಾಪಗಳನ್ನು ನಾಶ ಮಾಡುವ ದಿವಾಕರನಿಗೆ (ಸೂರ್ಯದೇವನಿಗೆ) ನಮಸ್ಕಾರಗಳು.

ಚಂದ್ರ ಗ್ರಹ ಮಂತ್ರ

ದಧಿಶಂಖತುಷಾರಾಭಂ ಕ್ಷೀರೋದಾರ್ಣವಸಂಭವಂ |

ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ ಭೂಷಣಂ ||

ಅರ್ಥ: ಮೊಸರಿನಂತೆ, ಶಂಖದಂತೆ, ಹಿಮದಂತೆ ಹೊಳೆಯುವ, ಕ್ಷೀರಸಮುದ್ರದಿಂದ ಎದ್ದು ಬಂದ ಹಾಗೂ ಶಿವನ ಕಿರೀಟಕ್ಕೆ ಸುಂದರ ಅಲಂಕಾರವಾದ ಚಂದ್ರನಿಗೆ ನಮಸ್ಕಾರಗಳು.

ದಾಂಪತ್ಯದಲ್ಲಿ ಯಾರೂ ಮೇಲಲ್ಲ, ಕೀಳಲ್ಲ, ಅನುಸರಿಸಿಕೊಂಡು ಹೋಗೋಲ್ಲ ಈ ರಾಶಿಯವರು!

ಮಂಗಳ ಗ್ರಹ ಮಂತ್ರ

ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿಸಮಪ್ರಭಂ |

ಕುಮಾರಂ ಶಕ್ತಿಹಸ್ತಂ ತಂ ಮಂಗಲಂ ಪ್ರಣಮಾಮ್ಯಹಂ ||

ಅರ್ಥ: ಭೂಗರ್ಭದಿಂದ ಎದ್ದು ಬಂದ, ಮಿಂಚಿನಂತೆ ಹೊಳಪುಳ್ಳ, ಶಕ್ತಿಯುತವಾದ ಆಯುಧವನ್ನು ಕೈಯಲ್ಲಿ ಹಿಡಿದ, ತರುಣ ಮೂರ್ತಿಯಾದ ಮಂಗಲನಿಗೆ ಪ್ರಣಾಮವನ್ನು ಮಾಡುತ್ತೇನೆ.

 

ಬುಧ ಗ್ರಹ ಮಂತ್ರ

ಪ್ರಿಯಂಗು ಕಲಿಕಾಶ್ಯಾಮಂ ರೂಪೇಣಾಪ್ರತಿಮಂ ಬುಧಂ |

ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಂ ||

ಅರ್ಥ: ಪ್ರಿಯಂಗು ಲತೆಯ ಚಿಗುರಿನಂತೆ ಕಪ್ಪು ಬಣ್ಣವುಳ್ಳ, ಅಪ್ರತಿಮವಾದ ರೂಪವುಳ್ಳ, ಚಂದ್ರನ ಮಗನಾದ ಮತ್ತು ಸೌಮ್ಯ ಗುಣಗಳಿಂದ ಕೂಡಿದ ಬುಧನಿಗೆ ಪ್ರಣಾಮಗಳು.

ಗುರು ಗ್ರಹ ಮಂತ್ರ
ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಂ |

ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ ||

ಅರ್ಥ: ದೇವತೆಗಳ ಹಾಗೂ ಋಷಿಗಳ ಗುರುವಾದ, ಚಿನ್ನದಂತೆ ಹೊಳೆಯುವ, ಬುದ್ಧಿವಂತನಾದ, ತ್ರಿಲೋಕ ಒಡೆಯನಾದ ಬೃಹಸ್ಪತಿಗೆ ನಮಸ್ಕರಿಸುವೆನು.

ಶುಕ್ರ ಗ್ರಹ ಮಂತ್ರ

ಹಿಮಕುಂದಮೃಣಾಲಾಭಂ ದೈತ್ಯಾನಾಂ ಪರಮಂ ಗುರುಂ |

ಸರ್ವಶಾಸ್ತ್ರಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ ||

ಅರ್ಥ: ಹಿಮದ ಹಾಗೆ ಹಾಗೂ ಕುಂದ ಪುಷ್ಪ ಮೃಣಾಲದಂತೆ ಶೋಭಿಸುವ, ದೈತ್ಯರ ಪರಮಗುರುವಾದ, ಎಲ್ಲಾ ಶಾಸ್ತ್ರಗಳನ್ನರಿತು ಪ್ರವಚನ ಮಾಡಬಲ್ಲ ಭೃಗುವಂಶದ ಶುಕ್ರನಿಗೆ ಪ್ರಣಾಮಗಳು.

ಶನಿ ಗ್ರಹ ಮಂತ್ರ

ನೀಲಾಂಜನಸಮಾಭಾಸಂ ರವಿಪುತ್ರಂ ಯಮಾಗ್ರಜಂ |

ಛಾಯಾಮಾರ್ತಾಂಡಸಂಭೂತಂ ತಂ ನಮಾಮಿ ಶನೈಶ್ಚರಂ ||

ಅರ್ಥ: ಕಾಡಿಗೆಯಂತೆ ಕಪ್ಪು ಬಣ್ಣದಿಂದ ಹೊಳೆಯುವ, ಸೂರ್ಯಪುತ್ರನಾದ, ಯಮನ ಅಣ್ಣನೂ ಆದ, ಛಾಯಾದೇವಿ-ಸೂರ್ಯದೇವ ದಂಪತಿಗಳ ಪುತ್ರನಾದ ಶನೇಶ್ವರನಿಗೆ ನಮಿಸುವೆನು.

ಈ ರತ್ನಗಳನ್ನು ತಪ್ಪಿಯೂ ಜೊತೆಯಾಗಿ ಧರಿಸಬೇಡಿ!

ರಾಹು ಗ್ರಹ ಮಂತ್ರ
ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ದನಂ |

ಸಿಂಹಿಕಾಗರ್ಭಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ ||

ಅರ್ಥ: ಅರ್ಧ ಶರೀರ ಹೊ೦ದಿದ, ಶಕ್ತಿಶಾಲಿಯಾದ, ಗ್ರಹಣದ ಮೂಲಕ ಚಂದ್ರ, ಸೂರ್ಯರಿಗೆ ಸಂಕಷ್ಟದಾಯಕನಾದ, ಭೂಮಧ್ಯ ರೇಖೆಯ ಗರ್ಭದಿಂದ ಜನಿಸಿದ ರಾಹುವಿಗೆ ನಮಸ್ಕಾರಗಳು.

ಕೇತು ಗ್ರಹ ಮಂತ್ರ
ಪಲಾಶಪುಷ್ಪಸಂಕಾಶಂ ತಾರಕಾಗ್ರಹಮಸ್ತಕಂ |

ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಂ ||

ಅರ್ಥ: ಪಲಾಶ ಹೂವಿನಂತೆ ಕೆಂಪಾದ, ನಕ್ಷತ್ರ ಹಾಗೂ ಗ್ರಹಗಳ ನೆತ್ತಿಯಲ್ಲಿ ಶೋಭಿಸುವ, ಅತ್ಯಂತ ರೌದ್ರನಾದ ಹಾಗೂ ಘೋರನಾದ ಕೇತುವಿಗೆ ನನ್ನ ಪ್ರಣಾಮಗಳು.

ಸರ್ವ ಗ್ರಹ ಮಂತ್ರ
ನಮಃ ಸೂರ್ಯಾಯ ಸೋಮಾಯ ಮ೦ಗಲಾಯ ಬುಧಾಯ ಚ |

ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||

ನವಗ್ರಹ ಸ್ತೋತ್ರ ಹೇಗೆ ಪಠಿಸಬೇಕು?
ಮುಂಜಾನೆ ಸ್ನಾನ ಮಾಡಿ ಶುಚಿಯಾಗಿ, ನವಗ್ರಹ ಚಿತ್ರಕ್ಕೆ ಅಥವಾ ವಿಗ್ರಹಕ್ಕೆ ಪೂಜೆಯನ್ನು ಸಲ್ಲಿಸಬೇಕು. ಅಥವಾ ನವಗ್ರಹ ದೇವಾಲಯಕ್ಕೆ ಭೇಟಿ ನೀಡಿ ಸ್ತೋತ್ರವನ್ನು ಪಠಿಸಬಹುದು. ದಿನಕ್ಕೆ ಎರಡು ಬಾರಿ, ಕನಿಷ್ಠ ಒಮ್ಮೆ ಪಠಿಸಬೇಕು.

ಮಂತ್ರಪಠನದ ಫಲಗಳು

- ಈ ನವಗ್ರಹ ಸ್ತೋತ್ರವನ್ನು ಹಗಲು ಅಥವಾ ರಾತ್ರಿ ಸಮಯದಲ್ಲಿ ಏಕಾಗ್ರತೆಯಿಂದ ಪಠಿಸುವವರ ಸಕಲ ಸಂಕಷ್ಟವು ನಿವಾರಣೆಯಾಗುವುದು.

- ಸ್ತ್ರೀ ಪುರುಷರಿಗೆ ಮತ್ತು ರಾಜವರ್ಗದವರಿಗೆ ಕೆಟ್ಟ ಕನಸುಗಳು ನಾಶವಾಗಿ, ಅಪಾರ ಐಶ್ವರ್ಯ, ಆರೋಗ್ಯ ಹಾಗೂ ರಕ್ಷಣೆಯನ್ನು ಪಡೆಯುತ್ತಾರೆ.

- ಗ್ರಹ, ನಕ್ಷತ್ರ, ಬೆಂಕಿ, ಕಳ್ಳರಿಂದ ಉಂಟಾಗುವ ಪೀಡೆಗಳೆಲ್ಲಾ ಈ ಸ್ತೋತ್ರ ಪಠಣದಿಂದ ನಿವಾರಣೆ ಹೊಂದುವುದರಲ್ಲಿ ಸಂದೇಹವಿಲ್ಲ.

- ಗುಣಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ, ನಕಾರಾತ್ಮಕ ಶಕ್ತಿಯನ್ನು ದೂರಾಗಿಸುತ್ತದೆ.

- ಮಾನಸಿಕ ಶಾಂತಿಯನ್ನು ಹಾಗೂ ಕಾರ್ಯಗಳನ್ನು ದೃಢವಾಗಿ ಮಾಡಬಲ್ಲ ಸಂಕಲ್ಪಶಕ್ತಿಯನ್ನು ನೀಡುತ್ತದೆ.

ಹಣಕಾಸು ಸಮೃದ್ಧಿಗೆ ಮನೆಯಲ್ಲಿರಲಿ ಈ ಶಂಖ!

 

 


 

click me!